ಪದ್ಯ ೧೦: ಪಾಂಡವರೇಕೆ ಹಾ ಎಂದು ಉದ್ಗರಿಸಿದರು?

ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿರ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ (ಗದಾ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಬಾಯಲ್ಲಿ ರಕ್ತ ಬಂದಿತು. ಕಣ್ಣುಗುಡ್ಡೆ ಬೆಳ್ಳಗಾದವು. ತಲೆತಿರುಗಿ ಅವನು ಕೆಳಕ್ಕೆ ಬಿದ್ದನು. ಪಾಂಡವರು ಭಯದಿಂದ ಹಾ ಎಂದು ಬಾಯಿ ಬಿಡುತ್ತಿರಲು, ಯಾವ ಅಪಾಯವೂ ಆಗದೆ ಭೀಮನು ಎಚ್ಚತ್ತು ಸುತ್ತಲೂ ನೋಡಿದನು.

ಅರ್ಥ:
ಹೊಕ್ಕು: ಸೇರು; ರುಧಿರ: ರಕ್ತ, ನೆತ್ತರು; ಕಂಗಳು: ನಯನ, ಕಣ್ಣು; ಆಯ: ಪ್ರಮಾಣ; ತಪ್ಪಿತು: ಸರಿಯಿಲ್ಲದಾಗು; ಡೆಂಢಣಿಸು: ಕಂಪಿಸು, ಕೊರಗು; ಕಲಿ: ಶೂರ; ವಾಯುಸುತ: ಭೀಮ; ಅಪ್ಪಳಿಸು: ತಟ್ಟು, ತಾಗು; ಬಿದ್ದು: ಎರಗು; ಕಯ್ಯ: ಹಸ್ತ; ಗದೆ: ಮುದ್ಗರ; ಕಳಚು: ಬೇರ್ಪಡಿಸು, ಬೇರೆಮಾಡು; ತನ್ನವರು: ಸಂಬಂಧಿಕರು; ಭಯ: ದಿಗಿಲು; ಬಿಡೆ: ತೊರೆ; ನಿಮಿಷಾರ್ಧ: ಕೂಡಲೆ; ನಿರಪಾಯ: ಅಪಾಯವಿಲ್ಲದೆ; ನೋಡು: ವೀಕ್ಷಿಸು; ಚೇತರಿಸು: ಎಚ್ಚರಗೊಳ್ಳು; ಕೆಲಬಲ: ಅಕ್ಕಪಕ್ಕ;

ಪದವಿಂಗಡಣೆ:
ಬಾಯೊಳ್+ಒಕ್ಕುದು +ರುಧಿರ +ಕಂಗಳದ್
ಆಯ +ತಪ್ಪಿತು +ಡೆಂಢಣಿಸಿ +ಕಲಿ
ವಾಯುಸುತನ್+ಅಪ್ಪಳಿಸಿ+ ಬಿದ್ದನು+ ಕಯ್ಯ +ಗದೆ +ಕಳಚಿ
ಹಾ+ಎನುತ +ತನ್ನವರು +ಭಯದಲಿ
ಬಾಯ +ಬಿಡೆ +ನಿಮಿಷಾರ್ಧದಲಿ +ನಿರ
ಪಾಯನ್+ಎದ್ದನು+ ನೋಡಿದನು +ಚೇತರಿಸಿ +ಕೆಲಬಲನ

ಅಚ್ಚರಿ:
(೧) ಭೀಮನ ಸ್ಥಿತಿ – ಬಾಯೊಳೊಕ್ಕುದು ರುಧಿರ ಕಂಗಳದಾಯ ತಪ್ಪಿತು ಡೆಂಢಣಿಸಿ ಕಲಿ ವಾಯುಸುತನಪ್ಪಳಿಸಿ ಬಿದ್ದನು

ಪದ್ಯ ೩೨: ಶಕುನಿಯ ಸೈನ್ಯವನ್ನು ಯಾರು ಕೊಂದರು?

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಗದಾ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಕುನಿಯ ಸೇನೆಯು ವಡಬಾಗ್ನಿಯನ್ನು ಕವಿಯುವ ದುಂಬಿಗಳಂತೆ ಸಹದೇವನನ್ನು ಸುತ್ತುವರಿದಿತು. ಸಹದೇವನು ನಿಮಿಷಾರ್ಧದಲ್ಲಿ ಅವರೆಲ್ಲರನ್ನೂ ತಡೆದು ಶಕುನಿಯ ಸೇನೆಯನ್ನು ಕೊಂದನು.

ಅರ್ಥ:
ಕವಿ: ಆವರಿಸು; ಪರಿವಾರ: ಪರಿಜನ, ಬಂಧುಜನ; ವಡಬ: ಸಮುದ್ರದೊಳಗಿರುವ ಬೆಂಕಿ; ತಿವಿ: ಚುಚ್ಚು; ತುಂಬಿ: ದುಂಬಿ, ಭ್ರಮರ; ಬವರ: ಕಾಳಗ, ಯುದ್ಧ; ಮಂಡಳಿಸು: ಸುತ್ತುವರಿ; ರಥ: ಬಂಡಿ; ಅಗ್ರ: ಮುಂಭಾಗ; ತೆವರು: ಹಿಮ್ಮೆಟ್ಟು, ಅಟ್ಟು, ಓಡಿಸು; ಅನಿಬರ: ಅಷ್ಟುಜನ; ನಿಮಿಷ: ಕ್ಷಣ; ಸಂತವಿಸು: ಸಮಾಧಾನಗೊಳಿಸು; ಕೊಂದು: ಕೊಲ್ಲು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಕವಿದುದಾ+ ಪರಿವಾರ +ವಡಬನ
ತಿವಿವ+ ತುಂಬಿಗಳಂತೆ +ಶಕುನಿಯ
ಬವರಿಗರು +ಮಂಡಳಿಸೆ +ಸಹದೇವನ +ರಥಾಗ್ರದಲಿ
ತೆವರಿಸಿದನ್+ಅನಿಬರ +ಚತುರ್ಬಲ
ನಿವಹವನು +ನಿಮಿಷಾರ್ಧದಲಿ +ಸಂ
ತವಿಸಿದನು +ಸಹದೇವ +ಕೊಂದನು +ಸೌಬಲನ +ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದುದಾ ಪರಿವಾರ ವಡಬನತಿವಿವ ತುಂಬಿಗಳಂತೆ

ಪದ್ಯ ೨೧: ದ್ರೋಣನ ಪ್ರಚಂಡತನವು ಹೇಗಿತ್ತು?

ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಲುಹಿದನು ರಿಪುಚಾತುರಂಗದಲಿ (ದ್ರೋಣ ಪರ್ವ, ೧೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪಾಂಚಾಲ ಸೇನೆಯು ದ್ರೋಣನನ್ನು ಮತ್ತೆ ಮುತ್ತಿತು. ಮಂಜಿನಲ್ಲಿ ಮರೆಯಾದ ಸೂರ್ಯನಂತೆ ದ್ರೋನನು ಕಾಣಿಸಲೇ ಇಲ್ಲ. ನಿಮಿಷಾರ್ಧದಲ್ಲಿ ಹತ್ತು ಕೋಟಿ ಸೈನ್ಯವನ್ನು ಕೊಂದು ದ್ರೋನನು ಪ್ರಚಂಡತನವನ್ನು ತೋರಿಸಿದನು.

ಅರ್ಥ:
ಕವಿ: ಆವರಿಸು; ಹೆಣ: ಜೀವವಿಲ್ಲದ ಶರೀರ; ತುಳಿ: ಮೆಟ್ಟು; ಒತ್ತು: ಒತ್ತಡ; ರಿಪು: ವೈರಿ; ಸೇನೆ: ಸೈನ್ಯ; ಮಂಜು: ಇಬ್ಬನಿ, ಹಿಮ; ಮುತ್ತಿಗೆ: ಆವರಿಸುವಿಕೆ; ರವಿ: ಭಾನು; ಕಾಣು: ತೋರು; ಕಳಶ: ಕುಂಭ; ಸಂಭವ: ಹುಟ್ಟು; ಮತ್ತೆ: ಪುನಃ; ನಿಮಿಷ: ಕ್ಷಣ; ಕಾಲ: ಸಮಯ; ತುತ್ತು: ನಾಶಮಾಡು; ಜೋಡಿಸು: ಕೂಡಿಸು; ಹತ್ತು: ದಶ; ಕೋಟಿ: ಅಸಂಖ್ಯಾತ; ಇಳುಹು: ಇಳಿಸು, ಕತ್ತರಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;

ಪದವಿಂಗಡಣೆ:
ಮತ್ತೆ +ಕವಿದುದು +ಹೆಣನ +ತುಳಿದ್
ಒತ್ತೊತ್ತೆಯಲಿ +ರಿಪುಸೇನೆ +ಮಂಜಿನ
ಮುತ್ತಿಗೆಯ +ರವಿಯಂತೆ +ಕಾಣೆನು+ ಕಳಶಸಂಭವನ
ಮತ್ತೆ +ನಿಮಿಷಾರ್ಧದಲಿ +ಕಾಲನ
ತುತ್ತು +ಜೋಡಿಸಿತ್+ಏನನೆಂಬೆನು
ಹತ್ತು +ಕೋಟಿಯನ್+ ಇಳುಹಿದನು +ರಿಪು+ಚಾತುರಂಗದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳಿದೊತ್ತೊತ್ತೆಯಲಿ ರಿಪುಸೇನೆ ಮಂಜಿನ ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ

ಪದ್ಯ ೪೨: ರಣರಂಗದಲ್ಲಿ ಕೆಂಧೂಳಿ ಹೇಗೆ ಕವಿದಿತ್ತು?

ಕೇಳಿದೆನು ರಭಸವನು ಬಲು ಕೆಂ
ಧೂಳಿಯನು ಕಂಡೆನು ವಿರೋಧಿಗ
ಳಾಳ ಕಂಡೆನು ಕಾಣೆನಿತ್ತಲು ಕಳಶಸಂಭವನ
ಕೇಳಿದೀ ನಿಮಿಷಾರ್ಧದಲಿ ಕೆಂ
ಧೂಳ ಕಾಣೆನು ಕಾಣೆನರಿ ಭೂ
ಪಾಲರನು ಕೇಳರಸ ಕಂಡೆನು ಚಾಪಧೂರ್ಜಟಿಯ (ದ್ರೋಣ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಪಾಂಡವ ಸೇನೆಯ ರಭಸದ ಸದ್ದನ್ನು ಕೇಳಿದೆನು. ಅವರ ಕಾಲ್ತುಳಿತದ ಕೆಂಧೂಳಿಯನ್ನು ನೋಡಿದೆನು. ಶತ್ರು ಸೈನಿಕರನ್ನು ಕಂಡೆನು. ಇತ್ತ ದ್ರೋಣನೇ ಕಾಣಿಸಲಿಲ್ಲ. ಆ ಸದ್ದನ್ನು ಕೇಳಿದ ನಿಮಿಷಾರ್ಧದಲ್ಲಿ ಕೆಂಧೂಳು ಕಾಣಿಸಲಿಲ್ಲ. ಶತ್ರು ರಾಜರು ಕಾಣಿಸಲಿಲ್ಲ. ಎಲೈ ರಾಜ ಧೃತರಾಷ್ಟ್ರ ಬಿಲ್ಲಿನವಿದ್ಯೆಯಲ್ಲಿ ಶಿವನಾದ ದ್ರೋಣನನ್ನು ಕಂಡೆ ಎಂದು ಸಂಜಯನು ವಿವರಿಸಿದನು.

ಅರ್ಥ:
ಕೇಳು: ಆಲ್ಸಿಉ; ರಭಸ: ವೇಗ; ಬಲು: ಬಹಳ; ಕೆಂಧೂಳಿ: ಕೆಂಪಾದ ಧೂಳು; ವಿರೋಧಿ: ವೈರಿ; ಆಳು: ಸೇವಕ, ಸೈನಿಕ; ಕಾಣು: ತೋರು; ಕಳಶಸಂಭವ: ಕುಂಭದಿಂದ ಜನಿಸಿದ (ದ್ರೋಣ); ನಿಮಿಷ: ಕ್ಷಣ;ರಿ: ವೈರಿ; ಭೂಪಾಲ: ರಾಜ; ಅರಸ: ರಾಜ; ಧೂರ್ಜಟಿ: ಶಿವ; ಚಾಪ: ಬಿಲ್ಲು;

ಪದವಿಂಗಡಣೆ:
ಕೇಳಿದೆನು +ರಭಸವನು +ಬಲು +ಕೆಂ
ಧೂಳಿಯನು +ಕಂಡೆನು +ವಿರೋಧಿಗಳ್
ಆಳ +ಕಂಡೆನು +ಕಾಣೆನಿತ್ತಲು +ಕಳಶಸಂಭವನ
ಕೇಳಿದ್+ಈ +ನಿಮಿಷಾರ್ಧದಲಿ +ಕೆಂ
ಧೂಳ +ಕಾಣೆನು +ಕಾಣೆನ್+ಅರಿ+ ಭೂ
ಪಾಲರನು +ಕೇಳ್+ಅರಸ +ಕಂಡೆನು +ಚಾಪಧೂರ್ಜಟಿಯ

ಅಚ್ಚರಿ:
(೧) ದ್ರೋಣರನ್ನು ಚಾಪಧೂರ್ಜಟಿ ಎಂದು ಕರೆದಿರುವುದು
(೨) ಭೂಪಾಲ, ಅರಸ – ಸಮಾನಾರ್ಥಕ ಪದಗಳು
(೩) ಕಂಡೆನು (೩) , ಕಾಣೆ (೨) ಬಾರಿ ಪ್ರಯೋಗ