ಪದ್ಯ ೪೨: ದುರ್ಯೋಧನನು ರಣರಂಗದಲ್ಲಿ ಯಾರನ್ನು ಎದುರಿಸಿದನು?

ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ (ಗದಾ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಡಬಲದ ಸೈನ್ಯಗಳು ಮುರಿದುಬೀಳಲು, ನಿನ್ನ ಮಗನಾದ ದುರ್ಯೋಧನನು ಸೈರಿಸಿಕೊಂಡು ಓಡುತ್ತಿದ್ದ ಕುದುರೆಗಳನ್ನು ನಿಲ್ಲಿಸಿ, ಕಾಲಾಳುಗಳಿಗೆ ಧೈರ್ಯವನ್ನು ತುಂಬಿದನು. ಬಹುವಿಧದ ರಣ ವಾದ್ಯಗಳು ಮೊಳಗಲು, ಕೌರವನು ಅರ್ಜುನನ್ನೆದುರಿಸದುದು ಮಾರಿಯ ಸೆರಗನ್ನು ಹಿಡಿದಂತಾಯಿತು.

ಅರ್ಥ:
ಮುರಿ: ಸೀಳು; ಎಡಬಲ: ಅಕ್ಕಪಕ್ಕ; ಅಂಕ: ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ತರುಬು: ತಡೆ, ನಿಲ್ಲಿಸು; ನಿನ್ನಾತ: ನಿನ್ನ ಮಗ; ಸೈರಿಸು: ತಾಳು, ಸಹಿಸು; ಹರಿ: ಸೀಳು; ದಳ: ಸೈನ್ಯ; ಕೂಡು: ಜೋಡಿಸು; ಕಲಿ: ಶೂರ; ಕಾಲಾಳು: ಸೈನಿಕ; ಒರಲು: ಕೂಗು; ವಿಧ: ರೀತಿ; ವಾದ್ಯ: ಸಂಗೀತದ ಸಾಧನ; ಬಿರುದನಿ: ಒರಟಾದ ಶಬ್ದ; ಉಬ್ಬೆದ್ದು: ಹೆಚ್ಚಾಗು; ಮಾರಿ: ಕ್ಷುದ್ರ ದೇವತೆ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ; ಹಿಡಿ: ಗ್ರಹಿಸು; ಕೆಣಕು: ರೇಗಿಸು;

ಪದವಿಂಗಡಣೆ:
ಮುರಿದುದ್+ಎಡಬಲವಂಕ+ ಪಾರ್ಥನ
ತರುಬಿದನು +ನಿನ್ನಾತ +ಸೈರಿಸಿ
ಹರಿ+ದಳವ +ಕೂಡಿದನು +ಕಲಿ+ಮಾಡಿದನು +ಕಾಲಾಳ
ಒರಲಿದವು +ಬಹುವಿಧದ +ವಾದ್ಯದ
ಬಿರುದನಿಗಳ್+ಉಬ್ಬೆದ್ದು +ಮಾರಿಯ
ಸೆರಗ +ಹಿಡಿದನು +ಕೌರವೇಶ್ವರನ್+ಅರ್ಜುನನ +ಕೆಣಕಿ

ಅಚ್ಚರಿ:
(೧) ರೂಪಕದ ಪ್ರಯೋಗ -ಮಾರಿಯ ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ