ಪದ್ಯ ೧೫: ಭೀಮನನ್ನು ಯಾರು ಬೈದರು?

ಉಚಿತವೆಂದರು ಕೆಲವು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ (ಗದಾ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಮಾಡಿದುದು ಸರಿ ಎಂದು ಕೆಲವರು ಹೊಗಳಿದರು, ಇದು ಅನುಚಿತವೆಂದು ಕೆಲವರು ಹೇಳಿದರು. ಪೂರ್ವಜನ್ಮದ ಸಂಚಿತ ಪಾಪವಲ್ಲವೇ ಶಿವ ಶಿವಾ ಎಂದು ಕೆಲರು ಉದ್ಗರಿಸಿದರು. ದೇವತೆಗಳು, ಕಿನ್ನರರು, ಯಕ್ಷರು, ಭೀಮನನ್ನು ಬೈದು ಕೌರವನನ್ನು ಹೊಗಳುತ್ತಾ ತಮ್ಮ ನಿವಾಸಗಳಿಗೆ ಹೋದರು.

ಅರ್ಥ:
ಉಚಿತ: ಸರಿಯಾದುದು; ಕೆಲವು: ಸ್ವಲ್ಪ; ಅನುಚಿತ: ಸರಿಯಲ್ಲದ್ದು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ದುಷ್ಕೃತ: ಪಾಪ; ಐಸಲೇ: ಅಲ್ಲವೇ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ನಿರ್ಜರ: ದೇವತೆ; ನಿಚಯ: ಗುಂಪು; ಬೈದು: ಜರೆದು; ಅಚಲ: ಸ್ಥಿರವಾದ; ಬಲ: ಶಕ್ತಿ; ಬಣ್ಣಿಸು: ವರ್ಣಿಸು, ಹೊಗಳು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಉಚಿತವ್+ಎಂದರು +ಕೆಲವು +ಕೆಲರ್+ಇದ್
ಅನುಚಿತವೆಂದರು +ಪೂರ್ವಜನ್ಮೋ
ಪಚಿತ+ ದುಷ್ಕೃತವ್+ಐಸಲೇ +ಶಿವ +ಎಂದು +ಕೆಲಕೆಲರು
ಖಚರ +ಕಿನ್ನರ+ ಯಕ್ಷ+ ನಿರ್ಜರ
ನಿಚಯ +ಭೀಮನ +ಬೈದು +ಕುರುಪತಿ
ಅಚಳ +ಬಲವನು +ಬಣ್ಣಿಸುತ +ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಉಚಿತ, ಅನುಚಿತ – ವಿರುದ್ಧ ಪದಗಳು
(೨) ದೇವತೆಗಳ ಗುಂಪುಗಳು – ಖಚರ ಕಿನ್ನರ ಯಕ್ಷ

ಪದ್ಯ ೪೨: ಕೌರವರು ಯಾವ ಭಾವದಿಂದ ತೆರಳಿದರು?

ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲು ಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ (ಭೀಷ್ಮ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೌರವ ಪಾಂಡವರಿಬ್ಬರೂ ಪಾಳೆಯಗಳಿಗೆ ಮರಳಿದರು. ಇತ್ತ ಸೂರ್ಯನು ಪಶ್ಚಿಮಾದ್ರಿ ಸ್ತಂಭದ ದೀಪದಂತೆ ಕಾಣಿಸಿದನು. ಮುಖಕ್ಕೆ ಮುಸುಕು ಹಾಕಿ ದುಃಖಸಮುದ್ರದ ಕಾಲುವೆಗಳು ಹರಿಯುತ್ತಿವೆಯೋ ಎಂಬಂತೆ ಚಿತ್ತದಲ್ಲಿ ದುಃಖವನ್ನು ಹಿಡಿದು ಕೌರವರು ತಮ್ಮ ಮನೆಗಳನ್ನು ಹೊಕ್ಕರು.

ಅರ್ಥ:
ಬೀಳುಕೊಳು: ತೆರಳು; ರಾಯ: ರಾಜ; ಪಾಳಯ: ಸೀಂಎ; ಪಡುವಣ: ಪಶ್ಚಿಮ; ಶೈಲ: ಬೆಟ್ಟ; ವಿಪುಲ: ಹೆಚ್ಚು, ಜಾಸ್ತಿ; ಸ್ತಂಭ: ಕಂಬ; ದೀಪಿಕೆ: ದೀಪ; ರವಿ: ಸೂರ್ಯ; ಮೆರೆ: ಪ್ರಕಾಶಿಸು, ಹೊಳೆ; ಮೇಲು: ಮೇಲ್ಭಾಗ; ಮುಸುಕು: ಹೊದಿಕೆ; ಮುಖ: ಆನನ; ಚಿತ್ತ: ಮನಸ್ಸು; ಕಾಳಿಕೆ: ಕೊಳಕು; ದುಮ್ಮಾನ: ದುಃಖ; ಜಲಧಿ: ಸಾಗರ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಬೀಳುಕೊಂಡರು+ ರಾಯರಿಬ್ಬರು
ಪಾಳಯಂಗಳಿಗ್+ಇತ್ತ +ಪಡುವಣ
ಶೈಲ +ವಿಪುಲ +ಸ್ತಂಭ+ದೀಪಿಕೆಯಂತೆ +ರವಿ +ಮೆರೆದ
ಮೇಲು +ಮುಸುಕಿನ +ಮುಖದ +ಚಿತ್ತದ
ಕಾಳಿಕೆಯ +ದುಮ್ಮಾನ+ಜಲಧಿಯ
ಕಾಲುವೆಗಳೆನೆ +ಕೌರವರು+ ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಕೌರವರ ಮನದ ಸ್ಥಿತಿ – ಮೇಲು ಮುಸುಕಿನ ಮುಖದ ಚಿತ್ತದಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ

ಪದ್ಯ ೩: ಸುದೇಷ್ಣೆಯು ಸೈರಂಧ್ರಿಯನ್ನು ಹೇಗೆ ಆಜ್ಞಾಪಿಸಿದಳು?

ಎನಲು ಭುಗಿಲೆಂದಳು ಸುಡೇತಕೆ
ಮನದ ಗರ್ವವ ನುಡಿವೆ ನಿನ್ನಿಂ
ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು
ಅನುಜನಾರೆಂದರಿಯೆ ಸಾಕಾ
ತನ ಸಮೀಪಕೆ ಹೋಗಿ ಬಾ ನಡೆ
ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ (ವಿರಾಟ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ಸುದೇಷ್ಣೆಯು ಅತೀವ ಕೋಪಗೊಂಡು, ಏತಕ್ಕೆ ಗರ್ವದ ಮಾತಾಡುತ್ತಿರುವೆ? ನಿನ್ನಿಂದ ನನಗಾಗಲಿ ನನ್ನ ಬಂಧುಗಳಿಗಾಗಲಿ ಯಾವ ಹಾನಿಯಾಗಲು ಸಾಧ್ಯ? ನನ್ನ ತಮ್ಮನ ಶಕ್ತಿ ನಿನಗೆ ಗೊತ್ತಿಲ್ಲ. ಅವನ ಮನೆಗೆ ಹೋಗಿ ಬಾ ಎನ್ನಲು, ಸೈರಂಧ್ರಿಯು ಒಲ್ಲದ ಮನಸ್ಸಿನಿಂದ ಆಜ್ಞೆಯನ್ನು ಒಪ್ಪಿಕೊಂಡು ಹೋದಳು.

ಅರ್ಥ:
ಭುಗಿಲ್: ಕೋಪವನ್ನು ಸೂಚಿಸುವ ಶಬ್ದ; ಸುಡು: ದಹಿಸು; ಮನ; ಮನಸ್ಸು; ಗರ್ವ: ಸೊಕ್ಕು; ನುಡಿ: ಮಾತು; ಮೇಣ್: ಅಥವ, ಮತ್ತು; ಹಾನಿ: ತೊಂದರೆ; ಹರಿಬ: ಕೆಲಸ, ಕಾರ್ಯ; ಅನುಜ: ತಮ್ಮ; ಅರಿ: ತಿಳಿ;ಸಾಕು: ನಿಲ್ಲಿಸು, ತಡೆ; ಸಮೀಪ: ಹತ್ತಿರ; ನಡೆ: ಚಲಿಸು; ಕೈಕೊಂಡು: ಧರಿಸು, ಕೈಗೊಳ್ಳು; ಅಬಲೆ: ಹೆಣ್ಣು; ಹೊರವಂಟು: ತೆರಳು; ಆಲಯ: ಮನೆ;

ಪದವಿಂಗಡಣೆ:
ಎನಲು +ಭುಗಿಲೆಂದಳು +ಸುಡೇತಕೆ
ಮನದ+ ಗರ್ವವ +ನುಡಿವೆ +ನಿನ್ನಿಂ
ದೆನಗೆ+ ಮೇಣ್+ಎನ್ನವರಿಗುಂಟೇ +ಹಾನಿ +ಹರಿಬಗಳು
ಅನುಜನ್+ಆರೆಂದ್+ಅರಿಯೆ +ಸಾಕ್
ಆತನ +ಸಮೀಪಕೆ+ ಹೋಗಿ+ ಬಾ +ನಡೆ
ಎನಲು +ಕೈಕೊಂಡ್+ಅಬಲೆ +ಹೊರವಂಟಳು +ನಿಜಾಲಯವ

ಅಚ್ಚರಿ:
(೧) ಸೈರಂಧ್ರಿಯನ್ನು ಬಯ್ಯುವ ಪರಿ – ಭುಗಿಲೆಂದಳು ಸುಡೇತಕೆ ಮನದ ಗರ್ವವ ನುಡಿವೆ

ಪದ್ಯ ೧೨: ಶಲ್ಯನು ದುರ್ಯೋಧನನನ್ನು ಹೇಗೆ ಕಂಡನು?

ಹರಿದರರಸಾಳುಗಳು ರಾಯನ
ಬರವನೀತಂಗರುಹಿದರು ಕಡು
ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ
ಅರಸುಮಕ್ಕಳ ವಜ್ರಮಣಿಯಾ
ಭರಣ ಕಿರಣ ಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ (ಕರ್ಣ ಪರ್ವ, ೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ರಾಜನ ದೂತರು ಮುಂದೆ ಹೋಗಿ, ದೊರೆಯ ಆಗಮನವನ್ನು ಶಲ್ಯನಿಗೆ ತಿಳಿಸಿದರು. ಅವನು ಸಂತೋಷದಿಂದ ತನ್ನ ಮನೆಯನ್ನು ಬಿಟ್ಟು ಹೊರಬಂದನು. ಸುತ್ತುವರಿದಿದ್ದ ರಾಜಕುಮಾರರ ಕಿರೀಟಗಳ ಆಭರಣಗಳ ರತ್ನಮಣಿಯಳ ಬೆಳಕಿನಲ್ಲಿ ಬರುತ್ತಿದ್ದ ಕೌರವವನ್ನು ಕಂಡನು.

ಅರ್ಥ:
ಹರಿ: ಸಾಗು, ಧಾವಿಸು; ಅರಸ: ರಾಜ; ಆಳು: ದೂತ; ರಾಯ: ರಾಜ; ಬರವು: ಆಗಮನ; ಅರುಹಿ: ತಿಳಿಸು; ಕಡು: ತುಂಬ; ಹರುಷ: ಸಂತೋಷ; ಕಲಿ: ಶೂರ; ನಿಜಾಲಯ: ತನ್ನ ಮನೆ; ಮಕ್ಕಳು: ಸುತರ; ವಜ್ರ: ಹೀರ; ಮಣಿ: ರತ್ನ; ಆಭರಣ: ಒಡವೆ; ಕಿರಣ: ಕಾಂತಿ; ಸ್ತೋಮ: ಗುಂಪು; ದೀಪ: ಬೆಳಕು; ಸ್ಫುರಿತ: ಹೊಳೆವ; ಜನ: ಗುಂಪು; ಮಧ್ಯ: ನಡುವೆ; ಕಂಡನು: ನೋಡು;

ಪದವಿಂಗಡಣೆ:
ಹರಿದರ್+ಅರಸಾಳುಗಳು+ ರಾಯನ
ಬರವನ್+ಈತಂಗ್+ಅರುಹಿದರು +ಕಡು
ಹರುಷದಲಿ+ ಕಲಿ+ ಶಲ್ಯ +ಹೊರವಂಟನು +ನಿಜಾಲಯವ
ಅರಸುಮಕ್ಕಳ+ ವಜ್ರಮಣಿಯಾ
ಭರಣ +ಕಿರಣ+ ಸ್ತೋಮ +ದೀಪ
ಸ್ಫುರಿತ +ಜನಮಧ್ಯದಲಿ+ ಕಂಡನು+ ಕೌರವೇಶ್ವರನ

ಅಚ್ಚರಿ:
(೧) ದುರ್ಯೋಧನನು ಕಂಡ ಬಗೆ: ಅರಸುಮಕ್ಕಳ ವಜ್ರಮಣಿಯಾಭರಣ ಕಿರಣ ಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ
(೨) ಅರಸು, ರಾಯ – ಸಮಾನಾರ್ಥಕ ಪದ