ಪದ್ಯ ೮೯: ಅರ್ಜುನನು ಕೃಷ್ಣನನ್ನು ಏನು ಬೇಡಿದನು?

ವೀರ ದೈತ್ಯಕುಠಾರ ಗಳಿತವಿ
ಕಾರ ಗೋಪೀಜಾರ ಲಲಿತವಿ
ಹಾರ ನಿಗಮವಿದೂರ ಸುಖಸಾಕಾರ ಗತಪಾರ
ಧೀರ ಜಗದಾಧಾರ ಲಸದಾ
ಚಾರ ಕಮಲಾಗಾರ ಭುವನಾ
ಧಾರ ನಿರ್ಜಿತಮಾರ ಮುರಹರ ಸಲಹಬೇಕೆಂದ (ಭೀಷ್ಮ ಪರ್ವ, ೩ ಸಂಧಿ, ೮೯ ಪದ್ಯ)

ತಾತ್ಪರ್ಯ:
ವೀರನೇ, ರಾಕ್ಷಸರನ್ನು ಕಡಿಯುವ ಕೊಡಲಿಯೇ, ವಿಕಾರವಿಲ್ಲದವನೇ, ಗೋಪೀಜಾರನೇ, ಸುಂದರಲೀಲಾ ವಿನೋದಿಯೇ, ಸುಖವು ಮೂರ್ತಿಗೊಂಡು ಬಂದಂತಿರುವವನೇ, ವೇದಗಳಿಗೆ ಅಗಮ್ಯನಾದವನೇ, ವಿಶ್ವಾಅಚೆಗಿರುವವನೇ, ಜಗತ್ತಿಗೆ ಆಧಾರನಾದವನೇ, ಸದಾಚಾರನೇ, ಲಕ್ಷ್ಮೀನಿವಾಸನೇ, ಮನ್ಮಥನಿಗಿಂತಲೂ ಹೆಚ್ಚು ಸುಂದರನಾದವನೇ, ಮುರಾರಿಯೇ ನನ್ನನ್ನು ಸಲಹು ಎಂದು ಕೃಷ್ಣನನ್ನು ಬೇಡಿದನು.

ಅರ್ಥ:
ವೀರ: ಶೂರ, ಪರಾಕ್ರಮ; ದೈತ್ಯ: ರಾಕ್ಷಸ, ಅಸುರ; ಕುಠಾರ: ಕೊಡಲಿ, ಗುದ್ದಲಿ; ಗಳಿತ: ಬಿದ್ದ; ವಿಕಾರ: ಬದಲಾವಣೆ, ಮಾರ್ಪಾಟು; ಜಾರ: ಪರಸ್ತ್ರೀ ಸಂಗ ಮಾಡುವವ; ಗೋಪಿ: ಗೊಲ್ಲ ಜಾತಿಯ ಹೆಂಗಸು, ಗೊಲ್ಲಿತಿ; ಲಲಿತ: ಚೆಲುವಾದ; ವಿಹಾರ: ಕಾಲ ಕಳೆಯುವುದು, ಅಲೆದಾಟ, ತಿರುಗಾಡುವುದು; ನಿಗಮ: ವೇದ, ಶೃತಿ; ವಿದೂರ: ಅತಿದೂರ, ಪಡೆಯಲಸಾಧ್ಯವಾದ; ಸುಖ: ಸಂತೋಷ; ಸಾಕಾರ: ಆಕಾರವನ್ನು ಹೊಂದಿರುವಿಕೆ; ಗತ: ಹಿಂದೆ ಆದುದು; ಪಾರ: ದಡ, ತೀರ; ಧೀರ: ಶೂರ; ಜಗ: ಪ್ರಪಂಚ; ಆಧಾರ: ಆಶ್ರಯ; ಲಸತ್: ಕಾಂತಿಯಿಂದ ಕೂಡಿದ; ಆಚಾರ: ಒಳ್ಳೆಯ ನಡತೆ; ಕಮಲ: ತಾವರೆ; ಆಗಾರ: ಮನೆ; ಭುವನ: ಜಗತ್ತು, ಪ್ರಪಂಚ; ಆಧಾರ: ಆಶ್ರಯ; ನಿರ್ಜಿತ:ಅಜೇಯ, ಗೆದ್ದ; ಮಾರ: ಮನ್ಮಥ; ಮುರಹರ: ಕೃಷ್ಣ; ಸಲಹು: ಕಾಪಾಡು, ರಕ್ಷಿಸು;

ಪದವಿಂಗಡಣೆ:
ವೀರ +ದೈತ್ಯಕುಠಾರ+ ಗಳಿತ+ವಿ
ಕಾರ +ಗೋಪೀಜಾರ+ ಲಲಿತ+ವಿ
ಹಾರ +ನಿಗಮವಿದೂರ +ಸುಖಸಾಕಾರ+ ಗತಪಾರ
ಧೀರ+ ಜಗದಾಧಾರ+ ಲಸತ್
ಆಚಾರ+ ಕಮಲ+ಆಗಾರ+ ಭುವನ
ಆಧಾರ +ನಿರ್ಜಿತ+ಮಾರ +ಮುರಹರ+ ಸಲಹ+ಬೇಕೆಂದ

ಅಚ್ಚರಿ:
(೧) ಕೃಷ್ಣನನ್ನು ವರ್ಣಿಸಲು ಬಳಸಿದ ಪದಗಳು, ಎಲ್ಲವೂ ರ ಕಾರದಿಂದ ಅಂತ್ಯಗೊಳ್ಳುತ್ತವೆ – ಗೋಪೀಜಾರ, ಜಗದಾಧಾರ, ಕಮಲಾಗಾರ, ನಿರ್ಜಿತಮಾರ ದೈತ್ಯಕುಠಾರ, ನಿಗಮವಿದೂರ, ಮುರಹರ, ಲಲಿತವಿಹಾರ, ಗಳಿತವಿಕಾರ, ಲಸದಾಚಾರ

ಪದ್ಯ ೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಆರಾಧಿಸಿದಳು?

ಶ್ರೀ ರಮಾವರ ದೈತ್ಯಕುಲ ಸಂ
ಹಾರ ಹರಿ ಭವ ಜನನ ಮರಣಕು
ಠಾರ ನಿಗಮವಿದೂರ ಸಚರಾಚರ ಜಗನ್ನಾಥ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಲಕ್ಷ್ಮೀ ದೇವಿಯ ಪತಿಯೇ, ರಾಕ್ಷಸ ಕುಲ ಸಂಹಾರಕನೇ, ಹುಟ್ತು ಸಾವಿನ ಚಕ್ರರೂಪವಾದ ಸಂಸಾರ ವೃಕ್ಷಕ್ಕೆ ಕೊಡಲಿಯಾದವನೇ, ವೇದಗಳಿಗೆ ನಿಲುಕದವನೇ, ಸಮಸ್ತ ಜೀವಿಸುವ ಮತ್ತು ನಿರ್ಜೀವ ವಸ್ತುಗಳ ಜಗತ್ತಿನ ಈಶ್ವರನೇ, ಕಲ್ಯಾಣ ಗುಣಗುಂಭೀರನೇ, ಕರುಣೆಯೇ ಮೂರ್ತಿಯಾದಂತಿರುವವನೇ, ಸಕ್ರಮ ವಿಚಾರದ ಎಲ್ಲೆಯಲ್ಲಿ ದೊರಕುವವನೇ, ಶ್ರೀಕೃಷ್ಣನು ಪ್ರತ್ಯಕ್ಷನಾಗು ಎಂದು ದ್ರೌಪದಿ ಬೇಡಿದಳು.

ಅರ್ಥ:
ರಮಾವರ: ಲಕ್ಷಿಯ ಪಿತ; ದೈತ್ಯ: ರಾಕ್ಷಸ; ಕುಲ: ವಂಶ; ಸಂಹಾರ: ನಾಶ; ಭವ: ಇರುವಿಕೆ, ಅಸ್ತಿತ್ವ; ಜನನ: ಹುಟ್ಟು; ಮರಣ: ಸಾವು; ಕುಠಾರ: ಕೊಡಲಿ; ನಿಗಮ: ಶೃತಿ, ವೇದ; ವಿದೂರ: ನಿಲುಕದವ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಜಗನ್ನಾಥ: ಜಗತ್ತಿನ ಒಡೆಯ; ಚಾರು: ಸುಂದರ; ಗುಣ: ಸ್ವಭಾವ; ಗಂಭೀರ: ಆಳವಾದ, ಗಹನವಾದ; ಕರುಣ: ದಯೆ; ವಿಹಿತ: ಯೋಗ್ಯ; ವಿಚಾರ: ವಿಷಯ, ಸಂಗತಿ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಮೈದೋರು: ಕಾಣಿಸಿಕೋ, ಪ್ರತ್ಯಕ್ಷನಾಗು; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು, ಸುಂದರಿ (ದ್ರೌಪದಿ)

ಪದವಿಂಗಡಣೆ:
ಶ್ರೀ+ ರಮಾವರ +ದೈತ್ಯಕುಲ +ಸಂ
ಹಾರ +ಹರಿ +ಭವ +ಜನನ +ಮರಣ+ಕು
ಠಾರ +ನಿಗಮವಿದೂರ +ಸಚರಾಚರ +ಜಗನ್ನಾಥ
ಚಾರುಗುಣ+ ಗಂಭೀರ +ಕರುಣಾ
ಕಾರ +ವಿಹಿತ +ವಿಚಾರ +ಪಾರಾ
ವಾರ +ಹರಿ +ಮೈದೋರೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸಂಹಾರ, ಕುಠಾರ, ಪಾರಾವಾರ – ಪ್ರಾಸಪದ
(೨) ಕೃಷ್ಣನ ಗುಣಗಾನ – ದೈತ್ಯಕುಲ ಸಂಹಾರ, ನಿಗಮವಿದೂರ, ಚಾರುಗುಣ, ಗಂಭೀರ, ವಿಹಿತ ವಿಚಾರ, ಪಾರಾವಾರ