ಪದ್ಯ ೧೪: ದ್ರೌಪದಿಯು ಪಾಳೆಯದಿಂದ ಹೇಗೆ ಬಂದಳು?

ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ (ಗದಾ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಮಲಗಿದ್ದ ಮಕ್ಕಳನ್ನು, ಪಾಂಚಾಲರನ್ನು ನೋಡೋಣವೆಂದು ಧರ್ಮಜನು ಬರುತ್ತಿರಲು, ಮತ್ತೆ ಮತ್ತೆ ಅಳುತ್ತಾ, ತಮ್ಮ ಕೈಗಳಿಂದ ತೆಳುವಾಗಿದ್ದ ಹೊಟ್ಟೆಗಲನ್ನು ಹೊಡೆದುಕೊಳ್ಳುತ್ತಾ ಹಾಹಾಕಾರ ಮಾಡುತ್ತಿದ್ದ ಸ್ತ್ರೀಯರೊಡನೆ ದ್ರೌಪದಿಯು ಎದುರು ಬಂದಳು.

ಅರ್ಥ:
ಪಾಳೆಯ: ಬಿಡಾರ; ಕುಮಾರ: ಮಕ್ಕಳು; ನೋಡು: ವೀಕ್ಷಿಸು; ಭೂಪಾಲ: ರಾಜ; ನಡೆ: ಚಲಿಸು; ಇದಿರು: ಎದುರು; ವಂದುದು: ಬಂದನು; ಯುವತಿ: ಹೆಣ್ಣು; ನಿಕುರುಂಬ: ಸಮೂಹ; ಸೂಳು: ಆರ್ಭಟ, ಬೊಬ್ಬೆ; ಸೂಳುವೊಯಿಲು: ಸರದಿಯಾಗಿ ಕೊಡುವ ಹೊಡೆತ; ತೆಳುವು: ಸೂಕ್ಷ್ಮ; ಕರತಾಳ: ಅಂಗೈ; ಹಾಹಾವಿರಾವ: ಹಾಹಾಕಾರ; ಮೇಳ: ಗುಂಪು; ಗೀತ: ಹಾಡು; ಬಂದು: ಆಗಮಿಸು;

ಪದವಿಂಗಡಣೆ:
ಪಾಳೆಯದಲಿ +ಕುಮಾರರನು +ಪಾಂ
ಚಾಲರನು +ನೋಡುವೆವೆನುತ +ಭೂ
ಪಾಲ +ನಡೆತರಲ್+ಇದಿರು+ಬಂದುದು +ಯುವತಿ+ನಿಕುರುಂಬ
ಸೂಳುವೊಯ್ಲಿನ +ತೆಳುವಸುರ +ಕರ
ತಾಳದಲಿ +ಹಾಹಾವಿರಾವದ
ಮೇಳವದ +ಗೀತದಲಿ +ಬಂದಳು +ದ್ರೌಪದೀದೇವಿ

ಅಚ್ಚರಿ:
(೧) ಅಳಲನ್ನು ವಿವರಿಸುವ ಪರಿ – ಸೂಳುವೊಯ್ಲಿನ ತೆಳುವಸುರ ಕರತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ

ಪದ್ಯ ೧೫: ಗಣಿಕೆಯರು ಯಾರ ಬಳಿ ಬಂದರು?

ಎನುತ ಕವಿದುದು ಮತ್ತೆ ಕಾಂತಾ
ಜನ ಸುಯೋಧನನರಮನೆಯ ಸೊಂ
ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ
ಮನಸಿಜನ ದಳ ನೂಕಿತೇಳೇ
ಳೆನುತ ಚೆಲ್ಲಿತು ಮುನಿನಿಕರ ನೃಪ
ವನಿತೆಯಿದಿರಲಿ ಸುಳಿದವರಿವರದಿರು ಮಂದಿ ಸಂದಣಿಸಿ (ಅರಣ್ಯ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಹೀಗೆ ಆಶ್ರಮವಾಸಿಗಳೆದುರಿನಲ್ಲಿ ವಾದಿಸಿ, ದುರ್ಯೋಧನನ ಅರಮನೆಯ ರಾಣಿಯರ ಸಖಿಯರ ತಂಡವು ತಪೋವನವನ್ನು ತುಂಬಿತು, ಕಾಮನ ಸೈನ್ಯವು ನುತ್ತಿ ಬರುತ್ತಿದೆ ಏಳಿರಿ ಎಂದು ಮುನಿಗಳು ಓಡಿದರು. ಸಖಿಯರ ಗುಂಪು ದ್ರೌಪದಿಯ ಇದಿರಿನಲ್ಲಿ ಸುಳಿದಿತು.

ಅರ್ಥ:
ಕವಿ: ಆವರಿಸು; ಕಾಂತಾಜನ: ಹೆಣ್ಣು; ಸ್ತ್ರೀಯರ ಗುಂಪು; ಅರಮನೆ: ರಾಜರ ಆಲಯ; ಸೊಂಪು: ಸೊಗಸು, ಚೆಲುವು; ಸಖಿ: ಗೆಳತಿ, ಸ್ನೇಹಿತೆ; ನಿಕುರುಂಬ: ಗುಂಪು, ಸಮೂಹ; ತುಂಬು: ಪೂರ್ಣವಾಗು; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಕಾಡು; ಮನಸಿಜ: ಮದನ, ಕಾಮ; ದಳ: ಸೈನ್ಯ; ನೂಕು: ತಳ್ಳು; ಏಳು: ಮೇಲೇಳು; ಚೆಲ್ಲು: ಹರಡು, ಚದರಿ ಹೋಗು; ಮುನಿ: ಋಷಿ; ನಿಕರ: ಗುಂಪು; ನೃಪ: ರಾಜ; ವನಿತೆ: ಹೆಣ್ಣು; ಸುಳಿ:ಕಾಣಿಸಿಕೊಳ್ಳು; ಮಂದಿ: ಜನ, ಜನಸಮೂಹ; ಸಂದಣಿ: ಗುಂಪು, ಸಮೂಹ; ಇವರದಿರು: ಇವರೆದುರು;

ಪದವಿಂಗಡಣೆ:
ಎನುತ +ಕವಿದುದು +ಮತ್ತೆ +ಕಾಂತಾ
ಜನ +ಸುಯೋಧನನ್+ಅರಮನೆಯ +ಸೊಂ
ಪಿನ+ ಸಖೀ +ನಿಕುರುಂಬ +ತುಂಬಿತು +ವರ+ ತಪೋವನವ
ಮನಸಿಜನ +ದಳ +ನೂಕಿತ್+ಏಳೇಳ್
ಎನುತ +ಚೆಲ್ಲಿತು +ಮುನಿನಿಕರ+ ನೃಪ
ವನಿತೆ+ಇದಿರಲಿ+ ಸುಳಿದವರ್+ಇವರದಿರು+ ಮಂದಿ +ಸಂದಣಿಸಿ

ಅಚ್ಚರಿ:
(೧) ಸಂದಣಿಸಿ, ನಿಕರ, ನಿಕುರುಂಬ – ಸಾಮ್ಯಾರ್ಥ ಪದಗಳು