ಪದ್ಯ ೧೯: ಕರ್ಣನ ಮೇಲೆ ಆಕ್ರಮಣ ಮಾಡಲು ಅಶ್ವತ್ಥಾಮನು ಹೇಗೆ ಸಿದ್ಧನಾದನು?

ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತ
ನ್ನೋಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ (ವಿರಾಟ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ನಿನ್ನ ಗಂಟಲಿನವರೆಗೆ ಇರಿದು ನಿನ್ನ ನಾಲಿಗೆಯನ್ನು ಕೀಳುತ್ತೇನೆ, ಔರವನು ನಿನ್ನನ್ನೇ ಮನ್ನಿಸಿ ನನ್ನನ್ನು ಓಲಗದಿಂದ ದೂರಮಾಡಲಿ, ಅತ್ಯಂತ ಮಾನ್ಯರನ್ನು ಅಲ್ಲಗಳೆಯುತ್ತಾ ನಗುವ ನಿನ್ನನ್ನು ಕೊಲ್ಲುತ್ತೇನೆ ಎಂದು ಮಹಾಸುಭಟನಾದ ಅಶ್ವತ್ಥಾಮನು ತನ್ನ ಕತ್ತಿಯನ್ನು ಸೆಳೆದನು.

ಅರ್ಥ:
ತೆಗೆ: ಹೊರತರು; ತಾಳಿಗೆ: ಗಂಟಲು; ಅಡಿ: ಕೆಳಭಾಗ; ನಾಲಗೆ: ಜಿಹ್ವೆ; ಕೀಳು: ಕತ್ತರಿಸು; ಮುನಿ: ಕೋಪಗೊಳ್ಳು; ಓಲಗ: ದರ್ಬಾರು; ಒಲಿ: ಪ್ರೀತಿಸು; ಪತಿಕರಿಸು: ಅನುಗ್ರಹಿಸು; ಅಗಣಿತ: ಅಸಂಖ್ಯಾತ; ಗರುವರು: ಶ್ರೇಷ್ಠರು; ನಿಂದಿಸು: ಅಪಮಾನಗೊಳಿಸು; ನಗು: ಹರ್ಷಿಸು; ಕೊಲು: ಸಾಯಿಸು; ಆಳು: ಸೈನಿಕರ; ದೇವ: ಒಡೆಯ; ಸೆಳೆ: ಜಗ್ಗು, ಎಳೆ; ಖಂಡೆಯ: ಕತ್ತಿ;

ಪದವಿಂಗಡಣೆ:
ತೆಗೆದು +ತಾಳಿಗೆಗ್+ಅಡಿತನಕ +ನಾ
ಲಗೆಯ +ಕೀಳ್ವೆನು +ಮುನಿದು +ತನ್
ಓಲಗವ +ತೆಗೆಸಲಿ +ಕೌರವನು +ನಿನಗೊಲಿದು +ಪತಿಕರಿಸಿ
ಅಗಣಿತದ +ಗರುವರನು +ನಿಂದಿಸಿ
ನಗುವೆ +ನಿನ್ನನು +ಕೊಲುವೆನೆಂದ್
ಆಳುಗಳ +ದೇವನು +ಸೆಳೆದನ್+ಅಶ್ವತ್ಥಾಮ +ಖಂಡೆಯವ

ಅಚ್ಚರಿ:
(೧) ಅಶ್ವತ್ಥಾಮನ ಕೋಪ – ತೆಗೆದು ತಾಳಿಗೆಗಡಿತನಕ ನಾಲಗೆಯ ಕೀಳ್ವೆನು
(೨) ಅಶ್ವತ್ಥಾಮನನು ಬಣ್ಣಿಸಿದ ಪರಿ – ಆಳುಗಳ ದೇವನು