ಪದ್ಯ ೧೭: ಭೂತವು ಹೇಗೆ ಕಂಡಿತು?

ನಿಟಿಲನಯನದ ಜಡಿವ ಜೂಟದ
ಜಟೆಯ ಪೂತ್ಕೃತಿಯುರಿಯ ನಾಸಾ
ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ
ಚಟುಳ ಚಪಳಪ್ರಭೆಯ ಘನಸಂ
ಘಟಿತವೆನೆ ಗರ್ಗರದ ಘೋರ
ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ (ಗದಾ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಉರಿಗಣ್ಣು, ಜಡೆ, ಫೂತ್ಕಾರಮಾಡುತ್ತಾ ಉರಿಯುಗುಳುವ ಮೂಗು, ಸರ್ಪಭೂಷಣ, ಥಳಥಳಿಸುವ ಪ್ರಭೆಗಳಿಂದ ಕೂಡಿ ಅತಿ ಉಚ್ಚವಾದ ಶಬ್ದಮಾಡುತ್ತಾ ಆ ಭಯಂಕರ ಭೂತವು ಇದಿರಿನಲ್ಲಿ ನಿಂತಿತು.

ಅರ್ಥ:
ನಿಟಿಲ: ಹಣೆ, ಫಾಲ; ನಯನ: ಕಣ್ಣು; ಜಡಿ: ಬೆದರಿಕೆ, ಹೆದರಿಕೆ; ಜೂಟ: ಜಡೆ, ಜಡೆಗಟ್ಟಿದ ಕೂದಲು; ಜಟೆ: ಜಡೆ, ಕೂದಲು; ಪೂತ್ಕೃತಿ: ಗರ್ಜಿಸು; ಉರಿ: ಬೆಂಕಿ; ನಾಸಾಪುಟ: ಮೂಗು; ಕಕ್ಷ: ಕಂಕಳು; ವಿಷ: ಗರಲ; ವಿಷಧರ: ವಿಷವನ್ನು ಧರಿಸಿದವ (ನಾಗ); ಪತಿ: ಒಡೆಯ; ವಾಸುಕಿ: ಅನಂತ, ವಾಸುಕಿ, ತಕ್ಷಕ, ಕರ್ಕೋಟಕ, ಪದ್ಮ, ಮಹಾಪದ್ಮ, ಶಂಖ ಹಾಗೂ ಕುಲಿಕ ಎಂಬ ಅಷ್ಟಕುಲ ನಾಗಗಳಲ್ಲಿ ಎರಡನೆಯವ; ಚಟುಲ: ವೇಗ, ತ್ವರಿತ; ಚಪಲ: ಚಂಚಲ ಸ್ವಭಾವದವನು; ಪ್ರಭೆ: ಕಾಂತಿ; ಘನ: ಶ್ರೇಷ್ಠ; ಸಂಘಟಿತ: ಕೂಡಿದ; ಗರ್ಗರ: ಸಣ್ಣಸಣ್ಣ ಗೆಜ್ಜೆ ಗಳಿಂದ ಕೂಡಿದ ಕಾಲಿನ ಕಡಗ; ಘೋರ: ಉಗ್ರವಾದುದು; ಸ್ಫುಟ: ಅರಳಿದುದು, ವಿಕಸಿತವಾದುದು; ರವ: ಶಬ್ದ; ರೌದ್ರ: ಭಯಂಕರ; ರಂಜಿಸು: ಹೊಳೆ, ಪ್ರಕಾಶಿಸು; ಭೂತ: ದೆವ್ವ, ಪಿಶಾಚಿ;

ಪದವಿಂಗಡಣೆ:
ನಿಟಿಲನಯನದ+ ಜಡಿವ +ಜೂಟದ
ಜಟೆಯ +ಪೂತ್ಕೃತಿ+ಉರಿಯ +ನಾಸಾ
ಪುಟದ +ವೈಕಕ್ಷಕದ +ವಿಷಧರಪತಿಯ +ವಾಸುಗಿಯ
ಚಟುಳ +ಚಪಳ+ಪ್ರಭೆಯ +ಘನ+ಸಂ
ಘಟಿತವ್+ಎನೆ +ಗರ್ಗರದ +ಘೋರ
ಸ್ಫುಟ+ರವದ +ರೌದ್ರಾಭಿರತಿಯಲಿ +ರಂಜಿಸಿತು+ ಭೂತ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜಡಿವ ಜೂಟದ ಜಟೆಯ
(೨) ವ ಕಾರದ ತ್ರಿವಳಿ ಪದ – ವೈಕಕ್ಷಕದ ವಿಷಧರಪತಿಯ ವಾಸುಗಿಯ

ಪದ್ಯ ೧೧: ಅಶ್ವತ್ಥಾಮನ ಪರಾಕ್ರಮ ಹೇಗೆ ಹೆಚ್ಚಿತು?

ಚಟುಳಕೋಪಾಗ್ನಿಯಲಿ ನಾಸಾ
ಪುಟದ ಸುಯ್ಲಲಿ ವಿಸ್ಫುಲಿಂಗೋ
ತ್ಕಟಸಮಾಧಿಗಳಿದ್ದಿಲಲಿ ನಿಗ್ರಹಕಟಾಹದಲಿ
ಪಟುತರದ ಬಾಹುಪ್ರತಾಪದ
ಪುಟವನೆತ್ತದೆ ಮಾಣನೆನಲು
ತ್ಕಟಿಸುತಿರ್ದುದು ರೌದ್ರವೀರಾಭ್ಯುದಯ ಸನ್ನಾಹ (ದ್ರೋಣ ಪರ್ವ, ೧೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೋಪದಿಂದ ಉಂಟಾದ ಬಿಸಿಯುಸಿರಿನ ಗಾಳಿ ಮನಸ್ಸಿನ ಸೈರಣೆಯ ಕಟಾಹದಲ್ಲಿ ಕೋಪಾಗ್ನಿಯ ಕಿಡಿಗಳು ಸುಳಿದು ಸಮಾಧಾನದ ಇದ್ದಿಲನ್ನು ಉರಿಸಿದವು. ಬಾಹುಪ್ರತಾಪವನ್ನು ಅದರಲ್ಲಿ ಕಾಸಿ ಎತ್ತಿ ಭಯಂಕರ ವೀರರಸದ ಅಭ್ಯುದಯದ ಆಯುಧವನ್ನು ಸಿದ್ಧಪಡಿಸಿ ಎತ್ತಿದಂತೆ ಅಶ್ವತ್ಥಾಮನ ಪರಾಕ್ರಮ ಹೆಚ್ಚಿತು.

ಅರ್ಥ:
ಚಟುಳ: ಲವಲವಿಕೆಯುಳ್ಳ; ಕೋಪ: ಕ್ರೋಧ; ಅಗ್ನಿ: ಬೆಂಕಿ; ನಾಸಾ: ನಾಸಿಕ, ಮೂಗು; ನಾಸಾಪುಟ: ಮೂಗಿನ ಹೊಳ್ಳೆ; ಸುಯ್ಲು: ನಿಟ್ಟುಸಿರು; ವಿಸ್ಫುಲಿಂಗ: ಬೆಂಕಿಯ ಕಿಡಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಸಮಾಧಿ: ಏಕಾಗ್ರತೆ, ತನ್ಮಯತೆ; ನಿಗ್ರಹ: ಅಂಕೆ, ಹತೋಟಿ; ಕಟಾಹ: ಕಡಾಯಿ, ಕೊಪ್ಪರಿಗೆ; ಪಟುತರ: ಸಮರ್ಥ, ಬಲಿಷ್ಠವಾದ; ಬಾಹು: ಭುಜ; ಪ್ರತಾಪ: ಪರಾಕ್ರಮ; ಎತ್ತು: ಮೇಲೇರು; ಮಾಣು: ನಿಲ್ಲಿಸು; ರೌದ್ರ: ಸಿಟ್ಟು, ರೋಷ; ವೀರ: ಶೂರ; ಅಭ್ಯುದಯ: ಏಳಿಗೆ; ಸನ್ನಾಹ: ಸನ್ನೆ, ಸುಳಿವು, ಜಾಡು; ಇದ್ದಲು: ಇಜ್ಜಲು

ಪದವಿಂಗಡಣೆ:
ಚಟುಳ+ಕೋಪಾಗ್ನಿಯಲಿ +ನಾಸಾ
ಪುಟದ +ಸುಯ್ಲಲಿ +ವಿಸ್ಫುಲಿಂಗ
ಉತ್ಕಟ+ಸಮಾಧಿಗಳ್+ಇದ್ದಿಲಲಿ +ನಿಗ್ರಹ+ಕಟಾಹದಲಿ
ಪಟುತರದ+ ಬಾಹುಪ್ರತಾಪದ
ಪುಟವನೆತ್ತದೆ+ ಮಾಣನೆನಲ್
ಉತ್ಕಟಿಸುತಿರ್ದುದು +ರೌದ್ರ+ವೀರ+ಅಭ್ಯುದಯ +ಸನ್ನಾಹ

ಅಚ್ಚರಿ:
(೧) ರೂಪಕದ ಪ್ರಯೋಗ – ಚಟುಳಕೋಪಾಗ್ನಿಯಲಿ ನಾಸಾಪುಟದ ಸುಯ್ಲಲಿ ವಿಸ್ಫುಲಿಂಗೋ
ತ್ಕಟಸಮಾಧಿಗಳಿದ್ದಿಲಲಿ ನಿಗ್ರಹಕಟಾಹದಲಿ

ಪದ್ಯ ೮: ಆನೆಗಳು ಹೇಗೆ ಮಲಗಿದವು?

ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಫೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ (ದ್ರೋಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಮೈಯನ್ನು ಅತ್ತಿತ್ತ ತೂಗಾಡಿ, ಸೊಂಡಿಲನ್ನು ದಾಡೆಗಳಲ್ಲಿಟ್ಟು, ಮೂಗಿನಿಂದ ಫೂತ್ಕಾರ ಮಾಡುತ್ತಾ, ಕಿವಿಗಳು ಜೋಲು ಬಿದ್ದಿರಲು, ಕಣ್ಣುಗಳಲ್ಲಿ ನಿದ್ರಾರಸವನ್ನು ಸೂಸುತ್ತಾ, ಎರಡು ಗಲ್ಲಗಳಲ್ಲೂ ಮದಜಲಕ್ಕೆ ಮುತ್ತಿದ ದುಂಬಿಗಳ ಝೇಂಕಾರ ತುಂಬಿರಲು ಆನೆಗಳು ಸಾಲು ಸಾಲಾಗಿ ಮಲಗಿದವು.

ಅರ್ಥ:
ಒಲೆ: ತೂಗಾಡು; ಒಡಲು: ದೇಹ; ಮುರಿ: ಸೀಳು; ಬರಿ: ಕೇವಲ; ಕೈ: ಹಸ್ತ; ದಾಡೆ: ದವಡೆ, ಒಸಡು; ಫೂತ್ಕೃತಿ: ಆರ್ಭಟ; ಬಲಿ: ಗಟ್ಟಿಯಾಗು; ನಾಸಾಪುಟ: ಮೂಗು; ಜೋಲು: ಕೆಳಕ್ಕೆ ಬೀಳು, ನೇತಾಡು; ಕರ್ಣ: ಕಿವಿ; ಪಲ್ಲವ: ಚಿಗುರು; ಕರ್ಣಪಲ್ಲವ: ಚಿಗುರಿನಂತೆ ಮೃದುವಾದ ಕಿವಿ; ತಳಿತ: ಚಿಗುರು; ನಿದ್ರೆ: ಶಯನ; ರಸ: ಸಾರ; ಮುಕ್ಕುಳಿಸು: ಬಾಯಿ ತೊಳೆದುಕೋ; ಅಕ್ಷಿ: ಕಣ್ಣು; ಗಲ್ಲ: ಕೆನ್ನ; ಉಲಿವು: ಶಬ್ದ; ತುಂಬಿ: ಭ್ರಮರ; ರವ: ಶಬ್ದ; ದಂತಿ: ಆನೆ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಒಲೆದ+ ಒಡಲನು +ಮುರಿದು +ಬರಿಕೈ
ಗಳನು +ದಾಡೆಯೊಳ್+ಇಟ್ಟು +ಫೂತ್ಕೃತಿ
ಬಲಿದ +ನಾಸಾಪುಟದ+ ಜೋಲಿದ +ಕರ್ಣ+ಪಲ್ಲವದ
ತಳಿತ +ನಿದ್ರಾರಸವನ್+ಅರೆ +ಮು
ಕ್ಕುಳಿಸಿದ್+ಅಕ್ಷಿಯೊಳ್+ಎರಡು+ ಗಲ್ಲದಲ್
ಉಲಿವ +ತುಂಬಿಯ +ರವದ +ದಂತಿಗಳ್+ಎಸೆದವ್+ಒಗ್ಗಿನಲಿ

ಅಚ್ಚರಿ:
(೧) ನಾಸಾಪುಟ, ದಾಡೆ, ಒಡಲು, ಕರ್ಣ, ಅಕ್ಷಿ – ದೇಹದ ಅಂಗಗಳನ್ನು ಬಳಸಿದ ಪರಿ