ಪದ್ಯ ೧೩: ಸೈರಂಧ್ರಿಯು ಕೀಚಕನನ್ನು ಹೇಗೆ ಜರೆದಳು?

ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೀಚಕ
ರಾಯನಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡಿಕಿದನು ಸತಿಯ (ವಿರಾಟ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ವ್ಯರ್ಥವಾದ, ಇಲ್ಲಸಲ್ಲದ ಮಾತನ್ನಾಡಿದರೆ ನಿನ್ನ ಬಾಯಿಗೆ ಹುಳು ಬಿದ್ದೀತು, ನಿನ್ನ ಜೊಲ್ಲುಸುರಿಸುವ ನಾಯಿ ಬುದ್ಧಿಯನ್ನು ಬಿಡು, ಸುದೇಷ್ಣೆಯು ನನ್ನನ್ನು ಜೇನು ತರಲು ಕಳಿಸಿರುವುದರಿಂದ ನಾನಿಲ್ಲಿಗೆ ಬಂದಿದ್ದೇನೆ, ನೀನು ಸಾಯಬೇಕೆನ್ನಿಸಿದರೆ ಶೂಲಕ್ಕೆ ಹಾಯ್ದು ಪ್ರಾಣವನ್ನು ಬಿಡು ಎಂದು ಹೇಳಲು, ನಿನ್ನ ಮಾತುಗಳಿಂದ ನನಗಾವ ನೋವು ಇಲ್ಲ ಎನ್ನುತ್ತಾ ಆಕೆಯ ಕೈಯನ್ನು ಹಿಡಿದನು.

ಅರ್ಥ:
ಹುಳು: ಕ್ರಿಮಿ; ಬಯಲು: ವ್ಯರ್ಥವಾದುದು; ನುಡಿ: ಮಾತು; ನಾಯಿ: ಶ್ವಾನ; ಬೇಡ: ನಿಲ್ಲಿಸು; ರಾಯ: ರಾಜ; ರಾಯನಂಗನೆ: ರಾಣಿ; ಕಳುಹು: ಕಳಿಸು; ಬಂದೆ: ಆಗಮನ; ಮಧು: ಜೇನುತುಪ್ಪ; ತರಲು: ತೆಗೆದುಕೊಂಡು; ಸಾವು: ಮರಣ; ಹಸಿ: ಅತಿಯಾಗಿ ಬಯಸು, ತಾಜಾ; ಶೂಲ: ಈಟಿ; ಹಾಯಿ: ಮೇಲೆಬೀಳು, ಚಾಚು; ಹೋಗು: ತೆರಳು; ಬೈಗಳು: ಜರೆದ ಮಾತು; ನೋಯಿಸು: ತೊಂದರೆ ನೀಡು; ತುಡುಕು: ಹೋರಾಡು, ಸೆಣಸು; ಸತಿ: ಹೆಣ್ಣು;

ಪದವಿಂಗಡಣೆ:
ಬಾಯಿ +ಹುಳುವುದು +ಬಯಲ +ನುಡಿದೊಡೆ
ನಾಯಿತನ+ ಬೇಡ್+ಎಲವೊ +ಕೀಚಕ
ರಾಯನಂಗನೆ+ ಕಳುಹೆ +ಬಂದೆನು +ಮಧುವ +ತರಲೆಂದು
ಸಾಯಬೇಕೇ +ಹಸಿದ+ ಶೂಲವ
ಹಾಯಿ+ ಹೋಗ್+ಎನೆ +ನಿನ್ನ +ಬೈಗಳು
ನೋಯಿಸುವವೇ+ ತನ್ನನ್+ಎನುತವೆ+ ತುಡಿಕಿದನು +ಸತಿಯ

ಅಚ್ಚರಿ:
(೧) ಬಾಯಿಗೆ ಹುಳು ಬೀಳಲಿ ಎಂದು ಹೇಳುವ ಪರಿ – ಬಾಯಿ ಹುಳುವುದು ಬಯಲ ನುಡಿದೊಡೆ

ಪದ್ಯ ೧೩: ದೇವತೆಗಳ ಅಳಲುವೇನು?

ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾದಿ ವಿ
ಕಾರಿಗಳು ಬ್ರಹಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರ ನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವೆವೆಂದು ಸುಯ್ದರು ಬಯ್ದು ಕಮಲಜನ (ಕರ್ಣ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೇವತೆಗಳೆಲ್ಲಾ ಸೇರಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ, ಈ ಹಿಂದೆ ತಾರಕನ ಮಕ್ಕಳು ಯಾರೊಡನೆಯೂ ಹೋರಾಡಿ ಗೆದ್ದಿಲ್ಲ, ಈ ದುಷ್ಟರು ಬ್ರಹ್ಮನನ್ನು ಆರಾಧಿಸಿ ತಪವ ಮಾಡಿ ಅವನನ್ನು ಒಲಿಸಿ ಅವನ ಕೈ ಕಟ್ಟಿದರು. ಬ್ರಹ್ಮನಾದರೋ ಮುಂದೇನಾಗುವುದೆಂಬ ಆಲೋಚನೆಯಿಲ್ಲದೆ, ಲೋಕಕ್ಕೆ ಕೊಡಲಿಯಾಗಿರುವೆ ಈ ನಾಯಿಗಳನ್ನು ಹೆಚ್ಚಿಸಿಬಿಟ್ಟ. ಈಗ ನಾವು ಯಾರ ಬಳಿ ದೂರನ್ನು ಒಯ್ಯೋಣ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅರ್ಥ:
ಮಕ್ಕಳು: ಸುತರು; ಹಿಂದೆ: ಪರೋಕ್ಷ; ಗೆಲಿದರು: ಗೆದ್ದರು; ತಪ: ತಪಸ್ಸು, ಧ್ಯಾನ; ವಿಕಾರಿ: ಕುರೂಪ, ದುಷ್ಟ; ಬ್ರಹ್ಮ: ಅಜ; ಬಂದಿ: ಬಂಧನ; ಬಳಿಕ: ನಂತರ; ವಾರಿಜೋದ್ಭವ: ಕಮಲದಲ್ಲಿ ಜನಿಸಿದ (ಬ್ರಹ್ಮ); ಮೇಲೆ: ಮುಂದಿನದು, ಮುಂದಕ್ಕೆ; ಅರಿ: ತಿಳಿ; ಕುಠಾರ: ಒರಟು ವ್ಯಕ್ತಿ, ಕ್ರೂರಿ; ನಾಯಿ: ಶ್ವಾನ; ಹೆಚ್ಚಿಸು: ಅಧಿಕಮಾಡು; ಅರುಪು: ತಿಳಿಸು; ಸುಯ್ದರು: ನಿಟ್ಟುಸಿರುಬಿಟ್ಟು; ಬಯ್ದು: ಜರಿದು; ಕಮಲಜ: ಬ್ರಹ್ಮ;

ಪದವಿಂಗಡಣೆ:
ತಾರಕನ +ಮಕ್ಕಳುಗಳೇ +ಹಿಂ
ದಾರ +ಗೆಲಿದರು +ತಪವ +ಮಾಡಿ+ ವಿ
ಕಾರಿಗಳು +ಬ್ರಹ್ಮಂಗೆ+ ಬಂದಿಯನಿಕ್ಕಿದರು +ಬಳಿಕ
ವಾರಿಜೋದ್ಭವ +ಮೇಲನ್+ಅರಿಯ +ಕು
ಠಾರ +ನಾಯ್ಗಳ +ಹೆಚ್ಚಿಸಿದನ್+ಇದನ್
ಆರಿಗ್+ಅರುಪುವೆವ್+ಎಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಬ್ರಹ್ಮ, ಕಮಲಜ, ವಾರಿಜೋದ್ಭವ – ಬ್ರಹ್ಮನನ್ನು ಕರೆದಿರುವ ರೀತಿ
(೨) ವಿಕಾರಿ, ಕುಠಾರ, ನಾಯಿ – ತಾಕರನ ಮಕ್ಕಳನ್ನು ಬಯ್ದಿರುವ ಬಗೆ

ಪದ್ಯ ೧೪: ವಿದುರ ಯಾವ ಉಪಮಾನವನ್ನು ನೀಡಿ ಧೃತರಾಷ್ಟ್ರನಿಗೆ ಬುದ್ಧಿ ಹೇಳಿದ?

ಎಲೆ ಮರುಳೆ ಧೃತರಾಷ್ಟ್ರ ನಂಟಿನ
ಬಳಕೆವಾತಿನ ಬಂಧುಕೃತ್ಯದ
ಬಳವಿಗೆಯೊಳೀ ನಿನ್ನ ಮಕ್ಕಳ ಬೇಡಿಕೊಳಲೇಕೆ
ಮುಳಿದು ಬಗುಳುವ ನಾಯ್ಗೆ ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳಿಸುವುದೆ ಕಲಿ ಸಿಂಹವೆಂದನು ಖಾತಿಯೊಳು ವಿದುರ (ಉದ್ಯೋಗ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಎಲೈ ಮೂಢ ಧೃತರಾಷ್ಟ್ರ ನಂಟು, ಸಂಬಂಧ, ಬಂಧುಕೃತ್ಯಗಳ ಬಳಕೆಯ ಮಾತಿನಲ್ಲಿ ನಿನ್ನ ಮಕ್ಕಳನ್ನು ಬೇಡಿಕೊಳ್ಳುವುದರಲ್ಲಿ ಅರ್ಥವಿಲ್ಲ, ಅದು ಹುಚ್ಚುತನದ ಪ್ರಯತ್ನ. ನಾಯಿಯು ಸಿಟ್ಟಿನಿಂದ ಬೊಗಳಿದರೆ ಚಂದ್ರನು ಬೆದರುವನೆ? ನರಿಯು ಕಿರುಚಿಕೊಂಡರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಎಂದು ಕೋಪದಿಂದ ವಿದುರನು ಹೇಳಿದನು.

ಅರ್ಥ:
ಮರುಳು: ಮೂಢ, ಮೂರ್ಖ; ನಂಟು: ಸಂಬಂಧ; ಬಳಕೆ: ಉಪಯೋಗ; ಬಂಧು:ಸಂಬಂಧಿಕ; ಬಳಕೆ: ಗುರುತು, ಕ್ರಮ; ಮಕ್ಕಳು: ಸುತರು; ಬೇಡಿಕೊಳ್ಳು:ಯಾಚಿಸು, ಬಯಸು; ಮುಳಿ: ಸಿಟ್ಟು, ಕೋಪ; ಬಗುಳು: ಅರಚು; ನಾಯಿ: ಶ್ವಾನ; ಚಂದ್ರ: ಇಂದು, ಶಶಿ; ಅಳುಕು: ಹೆದರು; ಒರಲು: ಅರಚು; ಕಳವಳ:ಗೊಂದಲ, ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಖಾತಿ: ಕೋಪ;

ಪದವಿಂಗಡಣೆ:
ಎಲೆ +ಮರುಳೆ +ಧೃತರಾಷ್ಟ್ರ +ನಂಟಿನ
ಬಳಕೆವಾತಿನ+ ಬಂಧು+ಕೃತ್ಯದ
ಬಳವಿಗೆಯೊಳ್+ಈ+ ನಿನ್ನ+ ಮಕ್ಕಳ+ ಬೇಡಿಕೊಳಲ್+ಏಕೆ
ಮುಳಿದು +ಬಗುಳುವ +ನಾಯ್ಗೆ +ಚಂದ್ರಮನ್
ಅಳುಕುವನೆ+ ನರಿ+ಒರಲಿದೊಡೆ +ಕಳ
ವಳಿಸುವುದೆ +ಕಲಿ +ಸಿಂಹವ್+ಎಂದನು +ಖಾತಿಯೊಳು +ವಿದುರ

ಅಚ್ಚರಿ:
(೧) ಉಪಮಾನಗಳ ಬಳಕೆ – ಮುಳಿದು ಬಗುಳುವ ನಾಯ್ಗೆ ಚಂದ್ರಮನಳುಕುವನೆ; ನರಿಯೊರಲಿದೊಡೆ ಕಳವಳಿಸುವುದೆ ಕಲಿ ಸಿಂಹ
(೨) ಬಂಧು, ನೆಂಟ – ಸಾಮ್ಯಾರ್ಥಪದಗಳು