ಪದ್ಯ ೨೧: ಧೌಮ್ಯರು ಯಾವ ಸಲಹೆಯನ್ನು ನೀಡಿದರು?

ನಾಮವನು ನೆರೆನಂಬಿ ಮತ್ತಾ
ನಾಮವನು ನೆನೆದವರು ಪಡೆವರು
ಕಾಮಿತಾರ್ಥವ ನಿಮ್ಮ ನೆಲೆ ನಿಮಗರಿಯಬಾರದಲೆ
ನಾಮ ನಿಮ್ಮಲಿ ಕೃಪೆ ವಿಶೇಷವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭಗವಂತನ ನಾಮವನ್ನು ನಂಬಿ ಅದನ್ನೇ ನೆನೆದವರು ಬಯಸಿದುದನ್ನು ಪಡೆಯುತ್ತಾರೆ. ನಿಮ್ಮ ಶಕ್ತಿ, ನಿಮಗೇ ಗೊತ್ತಿಲ್ಲ. ನಿಮ್ಮ ಮೇಲೆ ಭಗವನ್ನಾಮದ ವಿಶೇಷ ಕೃಪೆಯಿದೆ. ದ್ರೌಪದಿಯ ಮೊರೆಗೆ ಶ್ರೀಕೃಷ್ಣನು ಕರಗಿ ಬಿಡುತ್ತಾನೆ. ಈ ಮಹಿಳೆಯೇ ಶ್ರೀಕೃಷ್ಣನನ್ನು ಬೇಗ ಭಜಿಸಲಿ ಎಂದು ಧೌಮ್ಯರು ಹೇಳಿದರು.

ಅರ್ಥ:
ನಾಮ: ಹೆಸರು; ನೆರೆ: ಜೊತೆಗೂಡು, ಪೂರ್ಣ; ನಂಬು: ವಿಶ್ವಾಸವಿಡು; ನೆನೆ: ಜ್ಞಾಪಿಸು; ಪಡೆ: ಹೊಂದು, ತಾಳು; ಕಾಮಿತಾರ್ಥ: ಇಚ್ಛಿಸಿದ; ನೆಲೆ: ಆಶ್ರಯ, ಆಧಾರ; ಅರಿ: ತಿಳಿ; ಕೃಪೆ: ಕರುಣೆ; ವಿಶೇಷ: ಅತಿಶಯತೆ; ಕಾಮಿನಿ: ಹೆಣ್ಣು; ಕರಗು: ಕನಿಕರ ಪಡು; ಮಹಿಳೆ: ಹೆಣ್ಣು; ಭಜಿಸು: ಪೂಜಿಸು; ಬೇಗ: ಶೀಘ್ರ;

ಪದವಿಂಗಡಣೆ:
ನಾಮವನು+ ನೆರೆನಂಬಿ +ಮತ್ತ್+ಆ
ನಾಮವನು +ನೆನೆದವರು +ಪಡೆವರು
ಕಾಮಿತಾರ್ಥವ +ನಿಮ್ಮ +ನೆಲೆ +ನಿಮಗ್+ಅರಿಯ+ಬಾರದಲೆ
ನಾಮ +ನಿಮ್ಮಲಿ +ಕೃಪೆ +ವಿಶೇಷವು
ಕಾಮಿನಿಗೆ +ಕರಗುವನು +ಕೃಷ್ಣನು
ಯೀ +ಮಹಿಳೆ+ ಭಜಿಸುವುದು +ಬೇಗದಲೆಂದನಾ+ ಧೌಮ್ಯ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಮಿನಿಗೆ ಕರಗುವನು ಕೃಷ್ಣನು
(೨) ದ್ರೌಪದಿಯನ್ನು ಕರೆದ ಪರಿ – ಕಾಮಿನಿ, ಮಹಿಳೆ