ಪದ್ಯ ೫೯:ಎಲೆಯನ್ನು ಯಾವ ರೀತಿ ತಿನ್ನುವುದರಿಂದ ಲಕ್ಷ್ಮಿ ನಮ್ಮ ಬಳಿ ಇರುತ್ತಾಳೆ?

ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣ ಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಸಾಮಾನ್ಯ ಜನರೂ ಸಹ ಎಲೆಯಡಿಕೆಯನ್ನು ಕ್ರಮಬದ್ಧವಾಗಿ ತಿನ್ನಬೇಕೆಂದು ವಿದುರ ನೀತಿ ಇಲ್ಲಿ ತಿಳಿಸುತ್ತದೆ. ವೀಳೆಯದಲೆಯ ತೊಟ್ಟು ತುದಿಗಳನ್ನು ತೆಗೆದು ಹಾಕದೆ, ಸುಣ್ಣವಿಟ್ಟ ಎಲೆಯನ್ನು ಬಿಡದೆ ಕೇವಲ ಎಲೆಯನ್ನು ಹಾಕಿಕೊಂಡು ಸವಿದರೆ, ಹಾಗೆ ಮಾಡುವವನು ಇಂದ್ರನಾಗಲಿ, ಶಿವನಾಗಲಿ ಭಾಗ್ಯಲಕ್ಷ್ಮಿಯು ಅವನನ್ನು ಬಿಟ್ಟುಹೋಗುತ್ತಾಳೆ.

ಅರ್ಥ:
ನಾಗವಲ್ಲಿ: ವೀಳ್ಯದೆಲೆ; ಹಿಂದು: ಹಿಂಬದಿ; ಮುಂದನು: ಮುಂಭಾಗ; ನೀಗಿ:ಬಿಡು, ತೊರೆ, ತ್ಯಜಿಸು; ಕಳೆ: ಕೀಳು; ಚೂರ್ಣ: ಸುಣ್ಣ; ಪರ್ಣ: ಎಲೆ; ತ್ಯಾಗ: ತ್ಯಜಿಸು; ದಂತ: ಹಲ್ಲು; ಸವಿ:ರುಚಿ, ಸ್ವಾದ; ಭೋಗಿಸು:ಸುಖವನ್ನು ಅನುಭವಿಸುವುದು; ಅಮರೇಂದ್ರ: ಇಂದ್ರ; ನಾಗಭೂಷಣ: ಶಿವ; ನಾಗ: ಉರಗ; ಭಾಗ್ಯ:ಸಿರಿ, ಐಶ್ವರ್ಯ; ಭೂಪಾಲ: ರಾಜ; ಚೂರ್ಣಪರ್ಣ: ಸುಣ್ಣದ ವೀಳೆದೆಲೆ;

ಪದವಿಂಗಡಣೆ:
ನಾಗವಲ್ಲಿಯ +ಹಿಂದು +ಮುಂದನು
ನೀಗಿ +ಕಳೆಯದೆ +ಚೂರ್ಣ +ಪರ್ಣ
ತ್ಯಾಗವಿಲ್ಲದೆ +ದಂತಧಾವನ+ ಪರ್ಣವನು +ಸವಿದು
ಭೋಗಿಸುವೊಡ್+ಅಮರೇಂದ್ರನಾಗಲಿ
ನಾಗಭೂಷಣನಾದೊಡ್+ಅವನನು
ನೀಗಿ +ಕಳೆವಳು+ ಭಾಗ್ಯವಧು +ಭೂಪಾಲ+ ಕೇಳೆಂದ

ಅ‍‍ಚ್ಚರಿ:
(೧) ಇಂದ್ರ, ಶಿವನನ್ನು – ಅಮರೇಂದ್ರ, ನಾಗಭೂಷಣ ಎಂದು ಕರೆದಿರುವುದು
(೨) ನೀಗಿ ಕಳೆ – ೨, ೬ ಸಾಲಿನ ಮೊದಲ ಪದಗಳು
(೩) ಹಿಂದು ಮುಂದು – ವಿರುದ್ಧ ಪದಗಳು

ಪದ್ಯ ೨೪:ಕುಮಾರವ್ಯಾಸರು ಯಾರನ್ನು ಧ್ಯಾನಿಸುತ್ತಾ ಭಾರತಕಥೆಯನ್ನು ಬರೆಯಲು ಪ್ರಾರಂಭಿಸುತ್ತಾರೆ?

ಶ್ರೀಗಿರಿಜೆಯರಸನನು ವಿಮಲಗು
ಣಾಗಮೋತ್ತಮವರ್ಣನನು ವರ
ಯೋಗಾಭಿವಂದ್ಯನನಖಿಳ ಶೃತಿ ಪೌರಾಣದಾಯಕನ
ನಾಗಭೂಷಣನಮರವಂದಿತ
ಯೋಗಿಜನ ಹೃದಯನನು ಕರುಣಾ
ಸಾಗರನ ಬಲಗೊಂಡು ಭಾರತಕಥೆಯ ವಿರಚಿಸುವೆ (ಆದಿ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾರ್ವತೀಪತಿಯೂ, ಆಗಮಗಳಿಂದ ಉತ್ತಮ ಗುಣವುಳ್ಳವನೆಂದು ವರ್ಣೀತನಾದವನೂ, ಶ್ರೇಷ್ಠಜ್ಞಾನಿಗಯೆಂದು ವಂದಿತನೂ, ವೇದಪುರಾಣಗಳನ್ನು ನೀಡಿದವನೂ, ಯೋಗಿಗಳ ಹೃದಯದಲ್ಲಿ ವಾಸಿಸುವವನೂ, ಕರುಣಾಸಾಗರನೂ, ನಾಗಭೂಷಣನೂ ಆದ ಶಿವನನ್ನು ಪ್ರದಕ್ಷಿಣೆ ಮಾಡಿ ಮಹಾಭಾರತದ ಕಥೆಯನ್ನು ರಚಿಸಲು ಪ್ರಾರಂಭಿಸುತ್ತೇನೆ.

ಅರ್ಥ:
ಗಿರಿಜೆ: ಪಾರ್ವತಿ; ಅರಸು: ರಾಜ; ವಿಮಲ: ನಿರ್ಮಲ; ಗುಣ: ನಡತೆ, ಸ್ವಭಾವ; ಆಗಮ: ಶಾಸ್ತ್ರ ಗ್ರಂಥ, ಜ್ಞಾನ; ವರ್ಣ:ಹೊಳಪು,ರೂಪ; ವರ: ಶ್ರೇಷ್ಠ; ಯೋಗಾಭಿ: ಶ್ರೇಷ್ಠರಾದ; ಅಭಿವಂದ್ಯ: ನಮಸ್ಕರಿಸಲ್ಪಟ್ಟ; ಶೃತಿ: ವೇದ; ಪೌರಾಣ; ಗ್ರಂಥ; ದಾಯಕ: ನೀಡಿದ; ನಾಗ: ಹಾವು; ಭೂಷಣ: ಅಲಂಕಾರ; ಅಮರ: ದೇವತೆ; ವಂದಿತ: ಆರಾಧಿಸಲ್ಪಡುವ; ಯೋಗಿಜನ: ಋಷಿ ಮುನಿಗಳು; ಹೃದಯ: ಎದೆ, ವಕ್ಷಸ್ಥಳ; ಕರುಣೆ: ದಯೆ; ಸಾಗರ: ಸಮುದ್ರ; ಬಲ: ದಕ್ಷಿಣ ಪಾರ್ಶ್ವ; ಬಲಗೊಂಡು: ಪ್ರದಕ್ಷಿಣೆ; ವಿರಚಿಸು: ರಚಿಸು;

ಪದವಿಂಗಡಣೆ:
ಶ್ರೀಗಿರಿಜೆ+ಅರಸನನು +ವಿಮಲ+ಗುಣ
ಆಗಮೋತ್ತಮ+ವರ್ಣನನು +ವರ
ಯೋಗ+ ಅಭಿವಂದ್ಯನನ್+ಅಖಿಳ +ಶೃತಿ +ಪೌರಾಣ+ದಾಯಕನ
ನಾಗಭೂಷಣನ್+ಅಮರ+ವಂದಿತ
ಯೋಗಿಜನ+ ಹೃದಯನನು +ಕರುಣಾ
ಸಾಗರನ +ಬಲಗೊಂಡು +ಭಾರತಕಥೆಯ+ ವಿರಚಿಸುವೆ

ಅಚ್ಚರಿ:
(೧) ಶಿವನ ಗುಣವಾಚಕಗಳು: ಗಿರಿಜೆಯ ಅರಸ, ವಿಮಲಗುಣ, ಆಗಮೋತ್ತಮ, ಯೋಗಾಭಿವಂದ್ಯ, ಶೃತಿ ಪೌರಾಣದಾಯಕ, ನಾಗಭೂಷಣ, ಅಮರವಂದಿತ, ಯೋಗಿಜನ ಹೃದಯ, ಕರುಣಾಸಾಗರ