ಪದ್ಯ ೩೭: ಯುದ್ಧವನ್ನು ಮಳೆಗಾಳಕ್ಕೆ ಹೇಗೆ ಹೋಲಿಸಬಹುದು?

ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ (ಭೀಷ್ಮ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕತ್ತಿಗಳ ಹೊಳಪೇ ಮಿಂಚು, ಕತ್ತಿಗಳ ತಾಕಲಾಟ ಸಿಡಿಲು, ರಕ್ತದ ಮಳೆಯಿಂದ ಬಂದ ಪ್ರವಾಹ, ತೋಳು ಆಚಿ ಕುಣಿಯುವ ಮುಂಡಗಳೇ ಗರಿಗೆದರಿದ ನವಿಲುಗಳು, ಮಿದುಗ್ಳುಗಳ ತೆಕ್ಕೆಗಳೇ ಹಂಸಗಳು, ಹೆಣಗಳ ಕಾಡು ಚಿಗುರಿದಂತಿರಲು ಯುದ್ಧವೆಂಬ ಮಳೆಗಾಲ ಶೋಭಿಸಿತು.

ಅರ್ಥ:
ಕಡಿತಲೆ: ಖಡ್ಗ; ಮಿಂಚು: ಹೊಳಪು, ಕಾಂತಿ; ಹೊಯ್ಲು: ಹೊಡೆತ; ಸಿಡಿಲು: ಅಶನಿ; ರಕ್ತ: ನೆತ್ತರು; ಪ್ರವಾಹ: ರಭಸ; ಕಡುವಳೆ: ಜೋರಾದ ಮಲೆ; ನೃತ್ಯ: ನಾಟ್ಯ; ಕಬಂಧ: ತಲೆಯಿಲ್ಲದ ದೇಹ, ಮುಂಡ; ಸೋಗು: ನಟನೆ, ವೇಷ; ನವಿಲು: ಮಯೂರ; ಬಿಡು: ತೊರೆ; ಮಿದುಳು: ತಲೆ; ಹೊರಳಿ: ತಿರುವು, ಬಾಗು; ಹಂಸ: ಮರಾಲ; ನವ: ನವೀನ, ಹೊಸ; ಖಂಡ: ಚೂತು, ತುಂಡು; ಹೆಣ: ಜೀವವಿಲ್ಲದ ಶರೀರ; ಅಡವಿ: ಕಾಡು; ತಳಿತ: ಚಿಗುರಿದ; ಮೆರೆ: ಶೋಭಿಸು; ಸಂಗ್ರಾಮ: ಯುದ್ಧ; ಕಾರ್ಗಾಲ: ಮಳೆಗಾಲ;

ಪದವಿಂಗಡಣೆ:
ಕಡಿತಲೆಯ +ಮಿಂಚುಗಳ +ಹೊಯ್ಲಿನ
ಸಿಡಿಲುಗಳ +ರಕ್ತ+ಪ್ರವಾಹದ
ಕಡುವಳೆಯ +ನೃತ್ಯತ್+ಕಬಂಧದ +ಸೋಗೆ+ನವಿಲುಗಳ
ಬಿಡುಮಿದುಳ +ಹೊರಳಿಗಳ +ಹಂಸೆಯ
ನಡಹುಗಳ+ ನವಖಂಡದೊಳು +ಹೆಣನ್
ಅಡವಿ +ತಳಿತಿರೆ+ ಮೆರೆದುದೈ +ಸಂಗ್ರಾಮ+ ಕಾರ್ಗಾಲ

ಅಚ್ಚರಿ:
(೧) ಯುದ್ಧವನ್ನು ಮಳೆಗಾಲಕ್ಕೆ ಹೋಲಿಸುವ ಕವಿಯ ಕಲ್ಪನೆ – ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ

ಪದ್ಯ ೪೧: ಭೂಮಂಡಲ ಮಧ್ಯದಲ್ಲಿ ಯಾವ ಖಂಡವಿದೆ?

ಧಾರಿಣಿಯ ನಡುಬಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ
ಮೇರೆಯಾಗಿಹ ಗಿರಿಕುಲಂಗಳ
ತೋರದಗಲವನುನ್ನತಂಗಳ
ಸಾರ ಹೃದಯರು ಬಲ್ಲರೈ ಕಲಿಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭೂಮಂಡಲ ಮಧ್ಯದಲ್ಲಿರುವ ಮೇರುಪರ್ವತದ ಸುತ್ತಲೂ ಜಂಬೂದ್ವೀಪದ ನವಖಂಡಗಳು ವೃತ್ತಾಕಾರವಾಗಿವೆ. ಈ ಗಿರಿಗಳ ಎತ್ತರ ಹರಹುಗಳನ್ನು ಬಲ್ಲ ಪುಣ್ಯಾತ್ಮರು ಇದ್ದಾರೆ.

ಅರ್ಥ:
ಧಾರಿಣಿ: ಭೂಮಿ; ನಡು: ಮಧ್ಯ; ಬಳಸು: ಆವರಿಸುವಿಕೆ; ಬೆಳೆ: ಬೆಳೆದುದು; ಗಿರಿ: ಬೆಟ್ಟ; ವೃತ್ತ: ಬಳಸಿದ, ಸುತ್ತುವರಿದ; ಎಸೆ: ತೋರು; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ನವ: ಹೊಸ; ಖಂಡ: ತುಂಡು, ಚೂರು; ಮೇರೆ: ಎಲ್ಲೆ, ಗಡಿ; ಗಿರಿ: ಬೆಟ್ಟ; ತೋರು: ಗೋಚರಿಸು; ಅಗಲ: ವಿಸ್ತಾರ; ಉನ್ನತ: ಹಿರಿಯ, ಉತ್ತಮ; ಸಾರ: ರಸ; ಹೃದಯ: ವಕ್ಷಸ್ಥಳ; ಬಲ್ಲರು: ತಿಳಿದವರು; ಕಲಿ: ಶೂರ;

ಪದವಿಂಗಡಣೆ:
ಧಾರಿಣಿಯ +ನಡುಬಳಸಿ +ಬೆಳೆದಿಹ
ಮೇರು +ಗಿರಿಯನು +ಬಳಸಿ +ವೃತ್ತಾ
ಕಾರವಾಗ್+ಎಸೆದಿಹುದು +ಜಂಬೂದ್ವೀಪ +ನವಖಂಡ
ಮೇರೆಯಾಗಿಹ +ಗಿರಿಕುಲಂಗಳ
ತೋರದಗಲವನ್+ಉನ್ನತಂಗಳ
ಸಾರ +ಹೃದಯರು +ಬಲ್ಲರೈ+ ಕಲಿಪಾರ್ಥ+ ಕೇಳೆಂದ

ಅಚ್ಚರಿ:
(೧) ಜಂಬೂದ್ವೀಪ – ಮೇರು ಗಿರಿಯನು ಬಳಸಿ ವೃತ್ತಾಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ