ಪದ್ಯ ೪೪: ಸುದೇಷ್ಣೆಯು ಏಕೆ ಚಿಂತಿಸಿದಳು?

ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ (ವಿರಾಟ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕೀರ್ತಿಲತೆಯ ಚಿಗುರು ಬಾಡಿತು, ಮನ್ಮಥನ ಕಾಟದಿಂದ ಆರ್ತನಾಗಿರುವೆ, ವಂಶಕ್ಕೆ ಯಮನಾದೆ, ನಿನ್ನ ವಂಶವನ್ನು ಕೊಂದೆ, ಅರಿವು ತಪ್ಪಿದಎ ಮನುಷ್ಯರಿಗೆ ರಾವಣನಿಗೆ ಬಂದ ಗತಿಯೇ ಬರುತ್ತದೆ, ನಿನ್ನ ಈ ಧೂರ್ತತನಕ್ಕೆ ನಾನು ಹೆದರುತ್ತೇನೆ ಎಂದು ಸುದೇಷ್ಣೆಯು ಹೇಳಿದಳು.

ಅರ್ಥ:
ಕೀರ್ತಿ: ಯಶಸ್ಸು; ಲತೆ: ಬಳ್ಳಿ; ಕುಡಿ: ಚಿಗುರು; ಒಣಗು: ಬಾದು; ಮದನ: ಕಾಮ; ಆರ್ತ: ಕಷ್ಟ, ಸಂಕಟ; ಕುಲ: ವಂಶ; ಕಾಲ: ಯಮ; ಮೂರ್ತಿ: ರೂಪ; ಅವತರಿಸು: ಹುಟ್ಟು; ಸಂಹರಿಸು: ಸಾಯಿಸು; ಕುಲ: ವಂಶ; ಸ್ಫೂರ್ತಿ: ಪ್ರೇರಣೆ; ಮನುಜ: ಮಾನವ; ಆರ್ತಿ: ವ್ಯಥೆ, ಚಿಂತೆ; ಅರಿ: ತಿಳಿ; ಕಡು: ಬಹಳ; ಧೂರ್ತ: ದುಷ್ಟ; ಅಂಜು: ಹೆದರು; ನಡುಗು: ಕಂಪನ; ನಳಿನಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ಕೀರ್ತಿಲತೆ +ಕುಡಿ+ಒಣಗಿತೈ +ಮದನ
ಆರ್ತನಾದೈ+ ಕುಲಕೆ+ ಕಾಲನ
ಮೂರ್ತಿ +ನೀನ್+ಅವತರಿಸಿದೈ +ಸಂಹರಿಸಿದೈ+ ಕುಲವ
ಸ್ಫೂರ್ತಿಗ್+ಎಡೆ +ಮನುಜರಿಗೆ +ರಾವಣನ್
ಆರ್ತಿ+ಅಪ್ಪುದು +ಅರಿಯಲಾ +ಕಡು
ಧೂರ್ತತನಕ್+ಅಂಜುವೆನೆನುತ+ ನಡುಗಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೀರ್ತಿಲತೆ ಕುಡಿಯೊಣಗಿತೈ, ಕುಲಕೆ ಕಾಲನಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ

ಪದ್ಯ ೧೧: ದ್ರೌಪದಿಯು ದೂತರಿಗೆ ಏನು ಹೇಳಿದಳು?

ಎಸೆವಳೇ ದುಸ್ಸಳೆ ಜಯದ್ರಥ
ಕುಶಲನೇ ಪಾವುಡವ ನೀವೊ
ಪ್ಪಿಸುವುದೊಡೆಯರ ಮುಂದೆ ಬಿಜಯಂಗೈವರೀಕ್ಷಣಕೆ
ಶಿಶುಗಳಾವೆಮಗೀ ಸ್ವತಂತ್ರದ
ಯೆಸಕವೆಲ್ಲಿಯದಕಟ ವಸ್ತು
ಪ್ರಸರವೆಮಗೇಕೆನುತ ನುಡಿದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೨೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ದೂತರೇ, ದುಶ್ಶಳೆ ಕುಶಲಳೇ? ಜಯದ್ರಥನು ಕುಶಲನೇ? ಈ ಪಾವುಡಗಳನ್ನು ನನ್ನ ಯಜಮಾನರ ಮೂಮ್ದೆ ನನಗೆ ಕೊಡಿ, ಅವರು ಈಗ ಬಂದು ಬಿಡುತ್ತಾರೆ. ನಾನು ಮಕ್ಕಳಿದ್ದಂತೆ, ನನಗೆ ಸ್ವಾತಂತ್ರ್ಯವಿಲ್ಲ. ಇವನ್ನೆಲ್ಲಾ ತೆಗೆದುಕೊಂಡು ಏನು ಮಾಡಲಿ ಎಂದು ದ್ರೌಪದಿಯು ದೂತರಿಗೆ ಹೇಳಿದಳು.

ಅರ್ಥ:
ಎಸೆ: ಶೋಭಿಸು; ಕುಶಲ: ಕ್ಷೇಮ; ಪಾವುಡ: ಬಟ್ಟೆ, ವಸ್ತ್ರ; ಒಪ್ಪಿಸು: ನೀಡು; ಒಡೆಯ: ರಾಜ; ಮುಂದೆ: ಎದುರು; ಬಿಜಯಂಗೈ: ದಯಮಾಡಿ; ಕ್ಷಣ: ಸಮಯ; ಶಿಶು: ಮಕ್ಕಳು; ಸ್ವತಂತ್ರ: ಅನಿರ್ಬಂಧತೆ; ಎಸಕ: ಸೊಬಗು, ಶೋಭೆ, ಕೆಲಸ; ಅಕಟ: ಅಯ್ಯೋ; ವಸ್ತು: ಸಾಮಗ್ರಿ; ಪ್ರಸರ: ಗುಂಪು; ನುಡಿ: ಮಾತಾಡು; ನಗು: ಸಂತಸ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಎಸೆವಳೇ +ದುಸ್ಸಳೆ+ ಜಯದ್ರಥ
ಕುಶಲನೇ +ಪಾವುಡವ +ನೀವ್
ಒಪ್ಪಿಸುವುದ್+ ಒಡೆಯರ +ಮುಂದೆ +ಬಿಜಯಂಗೈವರ್+ಈ+ಕ್ಷಣಕೆ
ಶಿಶುಗಳ್+ಆವ್+ಎಮಗೀ +ಸ್ವತಂತ್ರದ
ಯೆಸಕವೆಲ್ಲಿಯದ್+ಅಕಟ+ ವಸ್ತು
ಪ್ರಸರವ್+ಎಮಗೇಕ್+ಎನುತ+ ನುಡಿದಳು+ ನಗುತ +ನಳಿನಾಕ್ಷಿ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನುಡಿದಳು ನಗುತ ನಳಿನಾಕ್ಷಿ
(೨) ದ್ರೌಪದಿಯ ಜಾಣತನದ ನುಡಿ – ಶಿಶುಗಳಾವೆಮಗೀ ಸ್ವತಂತ್ರದ ಯೆಸಕವೆಲ್ಲಿಯದಕಟ

ಪದ್ಯ ೨೫: ದ್ರೌಪದಿಯು ಸತ್ಯಭಾಮೆಗೆ ಏನೆಂದಳು?

ನೀವು ಮುಗ್ಧೆಯರತಿ ವಿದಗ್ಧನು
ದೇವಕೀಸುತನೆನ್ನವರು ಧ
ರ್ಮಾವಲಂಬರು ದಿಟ್ಟರಲ್ಲ ಮನೋಜ ಕೇಳಿಯಲಿ
ನೀವು ಸೊಬಗಿನ ನಿಧಿಗಳೈಶತ
ಸಾವಿರದ ಸತಿಯರಲಿ ಕೃಷ್ಣನ
ಜೀವ ವಿಶ್ರಮ ಸತಿಯರೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೧೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ನೀವು ಮುಗ್ಧೆಯರು. ಶ್ರೀಕೃಷ್ಣನು ಬಹು ತಿಳಿದವನು. ನನ್ನ ಪತಿಗಳು ಧರ್ಮಪರಾಯಣರು, ಕಾಮಕೇಳಿಯಲ್ಲಿ ದಿಟ್ಟತನವನ್ನು ತೋರಿಸುವವರಲ್ಲ ಸತ್ಯಭಾಮೆ, ನೀನು ಸೊಬಗಿನ ನಿಧಿ ಅಸಂಖ್ಯ ಪತ್ನಿಯರಿದ್ದರೂ ಶ್ರೀಕೃಷ್ಣನು ನಿನ್ನಲ್ಲಿ ವಿಶ್ರಾಂತಿಯನ್ನು ಕಾಣುತ್ತಾನೆೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮುಗ್ಧೆ: ಕಪಟವನ್ನು ತಿಳಿಯದವಳು; ವಿದಗ್ಧ: ಪಂಡಿತ, ವಿದ್ವಾಂಸ; ಸುತ: ಮಗ; ಧರ್ಮ: ಧಾರಣೆ ಮಾಡಿದುದು; ಅವಲಂಬ: ಆಶ್ರಯ; ದಿಟ್ಟ: ಧೈರ್ಯಶಾಲಿ, ಸಾಹಸಿ; ಮನೋಜ: ಮನ್ಮಥ; ಕೇಳಿ: ಕ್ರೀಡೆ, ವಿನೋದ; ಸೊಬಗು: ಅಂದ, ಚೆಲುವು; ನಿಧಿ: ಸಂಪತ್ತು, ಐಶ್ವರ್ಯ; ಶತ: ನೂರು; ಸಾವಿರ: ಸಹಸ್ರ; ಸತಿ: ಹೆಂಡತಿ, ಸ್ತ್ರೀ; ಜೀವ: ಪ್ರಾಣ; ವಿಶ್ರಮ: ಶ್ರಮ, ಪರಿಹಾರ; ನಳಿನಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ನೀವು +ಮುಗ್ಧೆಯರ್+ಅತಿ +ವಿದಗ್ಧನು
ದೇವಕೀಸುತನ್+ಎನ್ನವರು +ಧ
ರ್ಮಾವಲಂಬರು +ದಿಟ್ಟರಲ್ಲ +ಮನೋಜ +ಕೇಳಿಯಲಿ
ನೀವು +ಸೊಬಗಿನ+ ನಿಧಿಗಳೈ+ಶತ
ಸಾವಿರದ +ಸತಿಯರಲಿ +ಕೃಷ್ಣನ
ಜೀವ +ವಿಶ್ರಮ +ಸತಿಯರೆಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಸತ್ಯಭಾಮೆಯನ್ನು ಹೊಗಳುವ ಪರಿ – ನೀವು ಸೊಬಗಿನ ನಿಧಿಗಳೈಶತ
ಸಾವಿರದ ಸತಿಯರಲಿ ಕೃಷ್ಣನಜೀವ ವಿಶ್ರಮ ಸತಿಯರೆಂದಳು ನಗುತ ನಳಿನಾಕ್ಷಿ

ಪದ್ಯ ೧೨೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೮?

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೯ ಪದ್ಯ)

ತಾತ್ಪರ್ಯ:
ಋಷಿಮುನಿಗಳು ತರ್ಕದಲ್ಲಿ ಪಾಂಡಿತ್ಯಹೊಂದಿದವರು, ಕರ್ಮದಲ್ಲಿ ನಿರತರಾದವರು ಪಂಡಿತರು,
ಮೂಢರಾದ ಮಿಕ್ಕ ಜನರು ವಿಷಯಗಳೆಂಬ ಎರೆಹುಳುಗಳು ಚುಚ್ಚಿದ ಗಾಳಕ್ಕೆ ಬೀಳುವ ಮೀನಿನಂತಿರುವವರು. ನನ್ನವರೆಂಬ ಮೋಹದಿಂದಾದರೂ ನಮ್ಮನ್ನು ರಕ್ಷಿಸಲು ಮುಗಿಬೀಳುವಂತಹ ಕೃಪೆಯನ್ನೇಕೆ ತೋರಿಸುತ್ತಿಲ್ಲ ಕೃಷ್ಣ ಎಂದು ದ್ರೌಪದಿ ಮೊರೆಯಿಟ್ಟಳು.

ಅರ್ಥ:
ಋಷಿ: ಮುನಿ; ತಾರ್ಕಿಕ: ತರ್ಕದಲ್ಲಿ ಪಾಂಡಿತ್ಯಪಡೆದವ; ಕರ್ಮ: ಕಾರ್ಯ; ವ್ಯಸನಿ: ಗೀಳುಳ್ಳವ, ಚಟ; ಕೋವಿದ: ಪಂಡಿತ; ಮಿಕ್ಕ: ಉಳಿದ; ವಿಷಯ: ವಿಚಾರ, ಸಂಗತಿ; ಎರೆ: ಮೀನು, ಹಕ್ಕಿ ಗಳಿಗೆ ಹಾಕುವ ಆಹಾರ; ಮೀನು: ಮತ್ಸ್ಯ; ಮೂಢ: ತಿಳಿವಳಿಕೆಯಿಲ್ಲದ, ಮೂರ್ಖ; ಮನುಷ್ಯ: ನರ; ಒಸೆ: ಪ್ರೀತಿಸು, ಮೆಚ್ಚು; ಬಗೆ: ಆಲೋಚನೆ, ಯೋಚನೆ; ಬಸಿ: ಸರು, ಸ್ರವಿಸು, ಜಿನುಗು; ಬೀಳು: ಎರಗು; ಕೃಪೆ: ದಯೆ; ತೋರು: ಕಾಣು, ದೃಷ್ಟಿಗೆ ಬೀಳು; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ಋಷಿಗಳ್+ಅತಿ +ತಾರ್ಕಿಕರು+ ಕರ್ಮ
ವ್ಯಸನಿಗಳು +ಕೋವಿದರು+ ಮಿಕ್ಕಿನ
ವಿಷಯದ್+ಎರೆ +ಮೀನುಗಳು +ಮೂಢ +ಮನುಷ್ಯರೆಂಬುವರು
ಒಸೆದು +ನಿನ್ನವರೆಂದು +ಬಗೆವರೆ
ಬಸಿದು +ಬೀಳುವ +ಕೃಪೆಯ+ ನೀ+ ತೋ
ರಿಸೆ+ಇದೇನೈ +ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಕ್ಕಿನ ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
(೨) ಕೃಷ್ಣನನ್ನು ಮೊರೆಯಿಡುವ ಪರಿ – ಒಸೆದು ನಿನ್ನವರೆಂದು ಬಗೆವರೆ ಬಸಿದು ಬೀಳುವ ಕೃಪೆಯ ನೀ ತೋರಿಸೆ

ಪದ್ಯ ೧೨೮: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೭?

ಮರೆದೆನಭ್ಯುದಯದಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷವ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೮ ಪದ್ಯ)

ತಾತ್ಪರ್ಯ:
ಏಳಿಗೆಯ ಕಾಲದಲ್ಲಿ ನಿನ್ನನ್ನು ಮರೆಯುತ್ತೇನೆ, ಆಪತ್ತು, ಕಷ್ಟ ಬಂದಾಗ ನೀನೇ ಗತಿಯೆಂಬ ಅರಿವು ಬರುತ್ತದೆ . ಏಳಿಗೆಯ ಕಾಲದಲ್ಲಿ ಮದದಿಂದ ಸೋಕ್ಕುತ್ತೇನೆ, ಆಪತ್ತು, ಕಷ್ಟ ಬಂದಾಗ ಕಳವಳಿಸುತ್ತೇನೆ. ಅಜ್ಞಾನಿಗಳಾದ ನಮ್ಮಂತಹವರಲ್ಲಿ ಗುಣ ದೋಷಗಳನ್ನು ಪ್ರಭವಾದ ನೀನು ಹುಡುಕಬಹುದೇ? ನಿನ್ನ ಕೃಪೆಯನ್ನು ತೋರಿಸಬಾರದೇ, ಕೃಷ್ಣಾ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಅಭ್ಯುದಯ: ಏಳಿಗೆ; ಅರಿ: ತಿಳಿ; ಆಪತ್ತು: ಸಂಕಟ; ಮದ: ಅಹಂಕಾರ; ಮುರುಕಿಸು: ಅಹಂಕಾರಮಾಡು; ಉಬ್ಬು: ಹಿಗ್ಗು, ಗರ್ವಿಸು; ಕಳವಳ: ಗೊಂದಲ, ಚಿಂತೆ; ಖೋಡಿ: ದುರುಳತನ, ನೀಚತನ; ಅಜ್ಞರ: ತಿಳಿದವರಲ್ಲದ; ಗುಣ: ನಡತೆ, ಸ್ವಭಾವ; ದೋಷ: ತಪ್ಪು; ಅರಸು: ಹುಡುಕು; ಅಡಿ: ಪಾದ; ಕೃಪೆ: ಕರುಣೆ, ದಯೆ; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಹೆಣ್ಣು),

ಪದವಿಂಗಡಣೆ:
ಮರೆದೆನ್+ಅಭ್ಯುದಯದಲಿ+ ನೀನೆಂದ್
ಅರಿವೆನ್+ಆಪತ್ತಿನಲಿ +ಮದದಲಿ
ಮುರುಕಿಸುವೆನ್+ಉಬ್ಬಿನಲಿ +ಕಳವಳಿಸುವೆನು +ಖೋಡಿಯಲಿ
ಅರಿಯದ್+ಅಜ್ಞರ +ಗುಣವ +ದೋಷವನ್
ಅರಸುವರೆ +ನಿನ್ನಡಿಯ +ಕೃಪೆಯನು
ಮೆರೆಯಲಾಗದೆ+ ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಮರೆ – ೧, ೬ ಸಾಲಿನ ಮೊದಲ ಪದ
(೨) ಅರಿ – ೨, ೪ ಸಾಲಿನ ಮೊದಲ ಪದ

ಪದ್ಯ ೭೫: ಮೌನದಲಿ ಕುಳಿತ ಗಾಂಧಾರಿಗೆ ಕುಂತಿ ಏನು ಹೇಳಿದಳು?

ಮೌನದಲಿ ಗಾಂಧಾರಿ ಕುಂತೀ
ಮಾನಿನಿಯ ನುಡಿಗೇಳಿ ಕಡು ದು
ಮ್ಮಾನದಲಿ ಮಾತಾಡದಿರೆ ಕಂಡೀಕೆ ವಿನಯದಲಿ
ಏನು ತಡವಿನ್ನಕ್ಕ ಸುರಪತಿ
ಯಾನೆ ಪುರದುದ್ಯಾನದಲಿ ಸು
ಮ್ಮಾನದಿಂದೈತಂದುದೆಂದಳು ನಗುತ ನಳಿನಾಕ್ಷಿ (ಆದಿ ಪರ್ವ, ೨೧ ಸಂಧಿ, ೭೫ ಪದ್ಯ)

ತಾತ್ಪರ್ಯ:
ಕುಂತಿ ಗಾಂಧಾರಿ ಮತ್ತು ಪರಿವಾರದವರೆಲ್ಲರನ್ನು ಕರೆಯಲು, ಗಾಂಧಾರಿಗೆ ಅತೀವ ದುಃಖವಾಯಿತು ಆಕೆ ಸುಮ್ಮನೆ ಮನಸ್ಸಿನ ಕ್ಷೋಭೆಯಿಂದ ಮಾತನಾಡದೆ ಸುಮ್ಮನೆ ಕುಳಿತಳು. ಆಕೆ ಸುಮ್ಮನಿರುವುದನ್ನು ನೋಡಿದ ಕುಂತಿ, ಅಕ್ಕ ಏಕೆ ತಡಮಾಡುವಿರಿ, ಇಂದ್ರನ ಐರಾವತವು ನಗರದ ಉದ್ಯಾನವನಕ್ಕೆ ಸಂತೋಷದಿಂದ ಬಂದಿದೆ ಎಂದು ನಕ್ಕು ಹೇಳಿದಳು.

ಅರ್ಥ:
ಮೌನ: ನಿಶ್ಯಬ್ಧ; ಮಾನಿನಿ: ಸ್ತ್ರೀ; ನುಡಿ: ಮಾತು; ಕೇಳಿ: ಆಲಿಸಿ; ದುಮ್ಮಾನ: ದುಃಖ; ವಿನಯ:ಸೌಜನ್ಯ; ತಡ: ಅಡ್ಡಿ; ಸುರಪತಿ: ಇಂದ್ರ; ಆನೆ: ಕರಿ, ಹಸ್ತಿ; ಪುರ: ಊರು; ಉದ್ಯಾನ: ಉಪವನ; ಸುಮ್ಮಾನ:ವಿನೋದ , ಸಂತೋಷ; ನಗು: ಸಂತೋಷ;ನಳಿನಾಕ್ಷಿ: ಕಮಲದಕಣ್ಣಿನವಳು, ಕುಂತಿ;

ಪದವಿಂಗಡಣೆ:
ಮೌನದಲಿ +ಗಾಂಧಾರಿ +ಕುಂತೀ
ಮಾನಿನಿಯ +ನುಡಿ+ಕೇಳಿ +ಕಡು+ ದು
ಮ್ಮಾನದಲಿ +ಮಾತಾಡದಿರೆ+ ಕಂಡ್+ಈಕೆ+ ವಿನಯದಲಿ
ಏನು +ತಡವಿನ್ +ಅಕ್ಕ+ ಸುರಪತಿ
ಆನೆ+ ಪುರದ+ಉದ್ಯಾನದಲಿ +ಸು
ಮ್ಮಾನದಿಂದೈತಂದುದ್+ಎಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ದುಮ್ಮಾನ, ಸುಮ್ಮಾನ – ವಿರುದ್ಧ ಪದ; ೨, ೫ ಸಾಲಿನ ಕೊನೆ ಪದ
(೨) ಮಾನಿನಿ, ನಳಿನಾಕ್ಷಿ – ಕುಂತಿಗೆ ಬಳಸಿದ ನಾಮ ವಿಶೇಷಗಳು