ಪದ್ಯ ೮೮: ಸೂರ್ಯನೇಕೆ ಅಂಜಿದನು?

ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ (ಭೀಷ್ಮ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ವಿಂಧ್ಯಾಚಲದೊಡನೆ ಯುದ್ಧಮಾಡಲು ಬಾಣಗಳು ಹೊಕ್ಕಿವೆಯೋ ಏನೋ ಎಂದು ಸೂರ್ಯನು ಭಯಗೊಂಡನು. ಬಾಣಗಳೋ, ಮೇಘವೃಕ್ಷದ ತುದಿಕೊಂಬೆಗಳೋ, ನೆಲಕ್ಕುರುಳುವ ತಲೆಗಳೋ ಆ ಮರದ ಹಣ್ಣುಗಳೋ ಎಂಬಂತೆ ತೋರಿತು.

ಅರ್ಥ:
ಎಲೆಲೆ: ಆಶ್ಚರ್ಯ ಸೂಚಿಸುವ ಪದ; ಅಚಲ: ಬೆಟ್ಟ; ಹರಿಬ: ಕಾಳಗ, ಯುದ್ಧ, ಕಾರ್ಯ; ಕಳ: ರಣರಂಗ; ಹೊಕ್ಕು: ಸೇರು; ಕಣೆ: ಬಾಣ; ನಳಿನಸಖ: ಕಮಲನ ಮಿತ್ರ (ಸೂರ್ಯ); ಅಂಜು: ಹೆದರು; ಕೋಪಾಟೋಪ: ಉಗ್ರವಾದ ಕೋಪ; ಅಭ್ರ: ಆಗಸ; ಅಲಗು: ಕತ್ತಿ, ಖಡ್ಗ; ಕಣೆ: ಬಾಣ; ಮೇಘ: ಮೋಡ; ತರು: ವೃಕ್ಷ; ತಳಿತ: ಚಿಗುರಿದ; ತುದಿ: ಅಗ್ರಭಾಗ; ಕೊಂಬು: ಟೊಂಗೆ, ಕೊಂಬೆ; ಬೀಳು: ಕುಸಿ; ತಲೆ: ಶಿರ; ಫಲ: ಹಣ್ಣು; ಸಮೂಹ: ಗುಂಪು; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ಎಲೆಲೆ +ವಿಂಧ್ಯಾಚಲದ+ ಹರಿಬಕೆ
ಕಳನ +ಹೊಕ್ಕವೊ +ಕಣೆಗಳ್+ಎನುತಾ
ನಳಿನಸಖನ್+ಅಂಜಿದನು +ಕೋಪಾಟೋಪಕ್+ಅಭ್ರದಲಿ
ಅಲಗು+ಕಣೆಗಳೊ+ ಮೇಘ+ತರುವಿನ
ತಳಿತ+ ತುದಿ+ಕೊಂಬುಗಳೊ +ಬೀಳುವ
ತಲೆಗಳೋ +ತತ್ಫಲ+ಸಮೂಹವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ರೂಪದಕ ಪ್ರಯೋಗ – ವಿಂಧ್ಯಾಚಲದ ಹರಿಬಕೆ ಕಳನ ಹೊಕ್ಕವೊ ಕಣೆಗಳೆನುತಾನಳಿನಸಖನಂಜಿದನು

ಪದ್ಯ ೪೯: ಧರ್ಮಜನು ದೂರ್ವಾಸ ಮುನಿಗಳಿಗೆ ಏನು ಹೇಳಿದನು?

ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಖಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನ ಸಖನಪರಾಂಬುರಾಶಿಯ
ನಿಲುಕುತೈದನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆಂದ ಯಮಸೂನು (ಅರಣ್ಯ ಪರ್ವ, ೧೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧರ್ಮಜನು ಮುನಿಗಳ ಮಾತುಗಳನ್ನು ಕೇಳಿ, ಮುನೀಶ್ವರ ನಿಮ್ಮ ಮಾತು ತಪ್ಪದೆ ನಿಲ್ಲುವಂತಹದು, ಈ ಲೋಕ ಪರಲೋಕಗಳ ತಗಿಯ ನಿಮ್ಮ ಭಕ್ತಿ ಕೃಷ್ನನ ಒಲುಮೆಗಳಿರುವಾಗ ನಿಶ್ಚಿತವಾಗಿ ದೊರಕುತ್ತದೆ, ನಿಮಗೆ ಅಸಾಧ್ಯವೆನ್ನುವುದಿಲ್ಲ. ಈಗ ಸೂರ್ಯನು ಇನ್ನೇನು ಮುಳುಗಲಿದ್ದಾನೆ, ಮುನಿವೃಂದವು ಹಸಿದಿದೆ. ದಯೆಯಿಟ್ಟು ಊಟಕ್ಕೆ ದಯಮಾಡಿ ಎಂದು ಧರ್ಮಜನು ಮುನಿವೃಂದವನ್ನು ಆಹ್ವಾನಿಸಿದನು.

ಅರ್ಥ:
ಮುನಿ: ಋಷಿ; ನುಡಿ: ಮಾತು; ಸ್ಖಲಿತ: ತಪ್ಪಾದ; ಇಹಪರ: ಈ ಲೋಕ ಮತ್ತು ಪರಲೋಕ; ಗತಿ: ಇರುವ ಸ್ಥಿತಿ, ಅವಸ್ಥೆ; ಒಲವು: ಸ್ನೇಹ, ಪ್ರೀತಿ; ಕೂರ್ಮೆ: ಪ್ರೀತಿ, ನಲ್ಮೆ; ಅರಿ: ನಾಶಮಾಡು; ನಳಿನ: ಕಮಲ; ಸಖ: ಸ್ನೇಹಿತ; ಅಪರ: ಪಶ್ಚಿಮದಿಕ್ಕು; ಅಂಬುರಾಶಿ: ಸಮುದ್ರ; ಅಂಬು: ನೀರು; ನಿಲುಕು: ಹತ್ತಿರ, ಸನ್ನಿಹಿತ; ಐದು: ಹೋಗಿಸೇರು; ಹಸಿ:ಆಹಾರವನ್ನು ಬಯಸು, ಹಸಿವಾಗು; ಮುನಿ: ಋಷಿ; ಬಳಗ: ಗುಂಪು; ಆರೋಗಣೆ: ಊಟ, ಭೋಜನ; ಚಿತ್ತವಿಸು: ಗಮನಕೊಡು; ಸೂನು: ಮಗ;

ಪದವಿಂಗಡಣೆ:
ಎಲೆ +ಮುನೀಶ್ವರ +ನಿಮ್ಮ +ನುಡಿಯ
ಸ್ಖಲಿತವಿದು +ಇಹಪರದ +ಗತಿ +ನಿನ್
ಒಲವು +ಕೃಷ್ಣನ +ಕೂರ್ಮೆಯಿರಲ್+ಇನ್ನಾವುದ್+ಅರಿದೆಮಗೆ
ನಳಿನ +ಸಖನ್+ಅಪರ+ಅಂಬುರಾಶಿಯ
ನಿಲುಕುತ್+ಐದನೆ +ಹಸಿದುದೀ+ ಮುನಿ
ಬಳಗವ್+ಆರೋಗಣೆಗೆ +ಚಿತ್ತವಿಸೆಂದ +ಯಮಸೂನು

ಅಚ್ಚರಿ:
(೧) ಸಂಜೆಯಾಯಿತು ಎಂದು ಹೇಳಲು – ನಳಿನಸಖನಪರಾಂಬುರಾಶಿಯನಿಲುಕುತೈದನೆ
(೨) ಸಮುದ್ರವನ್ನು ಅಂಬುರಾಶಿ, ಸೂರ್ಯನನ್ನು ನಳಿನಸಖ ಎಂದು ಕರೆದಿರುವುದು