ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೧೪: ಭೀಮನು ಆನೆಗಳ ಸೈನ್ಯಕ್ಕೆ ಹೇಗೆ ಮುಂದುವರೆದನು?

ಕರಿಘಟೆಯಲಾ ನಮ್ಮ ಪುಣ್ಯದ
ಪರಿಣತೆಯಲಾ ನಮ್ಮ ರಥಿಕರು
ಸರಳ ತೊಡದಿರಿ ಸೈರಿಸುವುದರೆಗಳಿಗೆ ಮಾತ್ರದಲಿ
ಅರಿ ಹಿರಣ್ಯಕ ಬಲಕೆ ನರಕೇ
ಸರಿಯ ಪಾಡೆನಿಸುವೆನು ಕಣ್ಣೆವೆ
ಮರೆಗೆ ಮುಂಚುವೆನೆನುತ ಹೊಕ್ಕನು ಭೀಮ ಗಜಬಲವ (ಕರ್ಣ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಆನೆಗಳ ಮೂವತ್ತು ಸಾವಿರ ಪಡೆಯನ್ನು ನೋಡಿದ ಭೀಮನು, ಓಹೋ ಆನೆಗಳ ಸೇನೆಯಲ್ಲವೇ? ನಮ್ಮ ಪುಣ್ಯ ಫಲಿಸಿತು. ರಥದಲ್ಲಿರುವ ಶೂರರಾರು ಬಾಣವನ್ನು ತೊಡಬೇಡಿರಿ. ರೆಪ್ಪೆ ಹೊಡೆಯುವುದಕ್ಕೆ ಮೊದಲೇ ಹಿರಣ್ಯಕಶಿಪುವಿನ ಬಲಕ್ಕೆ ನರಸಿಂಹನು ನುಗ್ಗಿ ನಾಶಮಾಡಿದಂತೆ ನಾನು ಮುಂದುವರಿಯುತ್ತೇನೆ ಎಂದು ಆನೆಗಳ ಸೈನ್ಯಕ್ಕೆ ನುಗ್ಗಿದನು.

ಅರ್ಥ:
ಕರಿಘಟೆ: ಆನೆಗಳ ಗುಂಪು; ಪುಣ್ಯ:ಸದಾಚಾರ; ಪರಿಣತೆ:ಚಾತುರ್ಯ, ನಿಪುಣತೆ; ರಥಿಕ: ರಥದಲ್ಲಿರುವವ, ರಥಿ; ಸರಳ: ಬಾಣ; ತೊಡು: ಹೂಡಿ; ಸೈರಿಸು: ತಾಳು, ಸಹಿಸು; ಅರೆ: ಸ್ವಲ್ಪ; ಗಳಿಗೆ: ಸಮಯ; ಅರಿ: ವೈರಿ; ಬಲ: ಶಕ್ತಿ; ನರ: ಮನುಷ್ಯ; ಕೇಸರಿ: ಸಿಂಹ; ಪಾಡು: ಸ್ಥಿತಿ, ಅವಸ್ಥೆ; ಮುಂಚು: ಮುಂದೆ; ಹೊಕ್ಕು: ನುಗ್ಗು; ಗಜ: ಆನೆ; ಗಜಬಲ: ಆನೆಸೈನ್ಯ; ಕಣ್ಣೆವೆ: ಕಣ್ಣಿನ ರೆಪ್ಪೆ;

ಪದವಿಂಗಡಣೆ:
ಕರಿಘಟೆಯಲಾ +ನಮ್ಮ +ಪುಣ್ಯದ
ಪರಿಣತೆಯಲಾ +ನಮ್ಮ +ರಥಿಕರು
ಸರಳ +ತೊಡದಿರಿ +ಸೈರಿಸುವುದ್+ಅರೆಗಳಿಗೆ +ಮಾತ್ರದಲಿ
ಅರಿ +ಹಿರಣ್ಯಕ +ಬಲಕೆ+ ನರಕೇ
ಸರಿಯ +ಪಾಡೆನಿಸುವೆನು +ಕಣ್ಣೆವೆ
ಮರೆಗೆ =ಮುಂಚುವೆನೆನುತ +ಹೊಕ್ಕನು +ಭೀಮ +ಗಜಬಲವ

ಅಚ್ಚರಿ:
(೧) ಕರಿಘಟೆ, ಗಜಬಲ: ಆನೆಗಳ ಸೈನ್ಯ
(೨) ಉಪಮಾನದ ಪ್ರಯೋಗ – ಅರಿ ಹಿರಣ್ಯಕ ಬಲಕೆ ನರಕೇಸರಿಯ ಪಾಡೆನಿಸುವೆನು