ಪದ್ಯ ೨೬: ಪುರದ ಸ್ತ್ರೀಯರು ಎತ್ತಕಡೆ ನಡೆದರು?

ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತು ಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ (ಗದಾ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಯರು ದ್ವಾರಕಿಯತ್ತಹೋದರು. ಇತ್ತ ಹಸ್ತಿನಾ ಪುರವನ್ನು ಬಿಟ್ಟು ಬಂದ ಸ್ತ್ರೀ ಸಮುದಾಯವು ಕಲ್ಲು ಮುಳ್ಳುಗಳೊತ್ತುತ್ತಿದ್ದ ದೂರದಾರಿಯನ್ನು ಬಿಸಿಲ ಝಳದಲ್ಲಿ ನಡೆಯುತ್ತಾ ಬರುತ್ತಿತ್ತು. ಅವರ ಹೊಟ್ಟೆಗಳಲ್ಲಿ ಉರಿ ಬಿದ್ದಿತ್ತು. ಎರಡು ಕೆನ್ನೆಗಳೂ ಹರಿದುಹೋದಂತೆ ಕಪ್ಪಾಗಿದ್ದವು. ಅವೈರಳ ಅಶ್ರುಧಾರೆಗಳನ್ನು ಸುರಿಸುತ್ತಾ ಅವರು ರಣರಂಗದತ್ತ ನಡೆದರು.

ಅರ್ಥ:
ತಿರುಗು: ಮರಳು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕಾಂತ: ಹೆಣ್ಣು; ಕೋಟಿ: ಅಸಂಖ್ಯಾತ; ಬಂದು: ಆಗಮಿಸು; ಹರಳು: ಕಲ್ಲಿನ ಚೂರು, ನೊರಜು; ಮುಳ್ಳು: ಮೊನಚಾದುದು; ಗಾಲಿ: ಚಕ್ರ; ದೂರ: ಅಂತರ; ಪಥ: ದಾರಿ; ಉರಿ: ಬೆಂಕಿ; ಜಠರ: ಹೊಟ್ಟೆ; ಬಿಸಿಲು: ಸೂರ್ಯನ ತಾಪ; ಝಳ: ತಾಪ; ಹುರಿ: ಕಾಯಿಸು; ಕದಪು: ಕೆನ್ನೆ; ಸುರಿ: ಹರಿಸು; ನಯನಾಂಬು: ಕಣ್ಣೀರು; ರಾಜನಿತಂಬಿನಿ: ರಾಣಿ; ನಿತಂಬಿನಿ: ಹೆಣ್ಣು; ನಿಕರ: ಗುಂಪು; ನಿತಂಬ: ಸೊಂಟದ ಕೆಳಗಿನ ಹಿಂಭಾಗ, ಕಟಿ ಪ್ರದೇಶ;

ಪದವಿಂಗಡಣೆ:
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರದ +ಕಾಂತಾಕೋಟಿ +ಬಂದುದು
ಹರಳು+ಮುಳ್ಳುಗಳ್+ಒತ್ತು+ ಗಾಲಿನ +ದೂರತರ+ಪಥರ
ಉರಿಯ +ಜಠರದ +ಬಿಸಿಲ +ಝಳದಲಿ
ಹುರಿದ +ಕದಪುಗಳೆರಡು+ ಕಡೆಯಲಿ
ಸುರಿವ +ನಯನಾಂಬುಗಳ +ರಾಜನಿತಂಬೀನೀ+ನಿಕರ

ಅಚ್ಚರಿ:
(೧) ರಾಣಿಯರು ಎಂದು ಹೇಳಲು – ರಾಜನಿತಂಬೀನೀ ಪದ ಬಳಕೆ
(೨) ರಾಣಿಯರ ದುಃಖದ ಸ್ಥಿತಿ – ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ

ಪದ್ಯ ೧೫: ಭಾನುಮತಿಯನ್ನು ಯಾರು ಹಿಂಬಾಲಿಸಿದರು?

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ (ಗದಾ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಅವರನ್ನು ಹಿಂಬಾಲಿಸಿದರು.

ಅರ್ಥ:
ಧರಣಿಪತಿ: ರಾಜ; ಹೊರವಂಟ: ನಡೆ, ತೆರಳು; ಅಂತಃಪುರ: ರಾಣಿವಾಸದ ಅರಮನೆ; ಬಿಸುಟು: ಹೊರಹಾಕು; ಸಹಿತ: ಜೊತೆ; ಅರಸಿ: ರಾಣಿ; ಏಕ: ಒಂದೇ; ಅಂಬರ:ಬಟ್ಟೆ; ಬಿಡು: ತೆರೆದ; ಮುಡಿ: ಶಿರ, ಕೂದಲು; ಕರ: ಹಸ್ತ; ಬಸುರು: ಹೊಟ್ಟೆ; ಹೊಯ್ಲು: ಹೊಡೆತ; ಕಜ್ಜಳ: ಕಾಡಿಗೆ; ಲುಳಿ: ಸೊಗಸು, ಕಾಂತಿ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಕಾತರ: ಕಳವಳ, ಉತ್ಸುಕತೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳ (ಹೆಣ್ಣು); ನೆರೆ: ಗುಂಪು; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಧರಣಿಪತಿ+ ಹೊರವಂಟನ್+ಅಂತಃ
ಪುರವ +ಬಿಸುಟರು +ಭಾನುಮತಿ +ಸಹಿತ್
ಅರಸಿಯರು +ಹೊರವಂಟರ್+ಏಕ+ಅಂಬರದ +ಬಿಡು+ಮುಡಿಯ
ಕರದ+ಬಸುರಿನ +ಹೊಯ್ಲ+ ಕಜ್ಜಳ
ಪರಿಲುಳಿತ +ನಯನಾಂಬುಗಳ +ಕಾ
ತರಿಪ+ ಕಮಲಾಕ್ಷಿಯರು +ನೆರೆದುದು +ಲಕ್ಕ +ಸಂಖ್ಯೆಯಲಿ

ಅಚ್ಚರಿ:
(೧) ನೋವನ್ನು ಚಿತ್ರಿಸುವ ಪರಿ – ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು

ಪದ್ಯ ೧೪: ಅರ್ಜುನನ ಕೋಪವು ಹೇಗೆ ಕಂಡಿತು?

ಧರಣಿಪನ ನಿರಿಗೆಯಲಿ ಕಂದನ
ಮರಣವನು ನಿಶ್ಚಯಿಸಿ ಪ್ರಳಯದ
ಹರನ ಕೋಪವ ಕೇಣಿಗೊಂಡನು ತನ್ನ ಚಿತ್ತದಲಿ
ಸುರಿವ ನಯನಾಂಬುಗಳ ಜಲನಿಧಿ
ಗುರವಣಿಸಿದನೊ ವಡಬನೆನೆ ಮುರ
ಹರನ ಮೈದುನನೊಯ್ಯನೈದಿದನವನಿಪಾಲಕನ (ದ್ರೋಣ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನಿರುವ ರೀತಿಯನ್ನು ನೋಡಿ, ಅಭಿಮನ್ಯುವು ಮರಣ ಹೊಂದಿರುವುದನ್ನು ನಿರ್ಧರಿಸಿ, ಪ್ರಳಯಕಾಲದ ಶಿವನಂತೆ ಕೋಪಗೊಂಡನು. ಕಣ್ಣೀರಿನ ಸಮುದ್ರಕ್ಕೆ ವಡಬಾಗ್ನಿಯು ಹೋಗುತ್ತಿದೆಯೆಂಬಂತೆ, ದೊರೆಯ ಹತ್ತಿರಕ್ಕೆ ಹೋದನು.

ಅರ್ಥ:
ಧರಣಿಪ: ರಾಜ; ನಿರಿಗೆ: ಸೀರೆ, ಧೋತ್ರ; ಕಂದ: ಮಗ; ಮರಣ: ಸಾವು; ನಿಶ್ಚಯಿಸು: ನಿರ್ಧರಿಸು; ಪ್ರಳಯ: ಅಂತ್ಯ; ಹರ: ಈಶ್ವರ; ಕೋಪ: ಸಿಟ್ಟು; ಕೇಣಿ: ಗುತ್ತಿಗೆ, ಗೇಣಿ; ಚಿತ್ತ: ಮನಸ್ಸು; ಸುರಿ: ವರ್ಷಿಸು; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಜಲನಿಧಿ: ಸಾಗರ; ಉರವಣಿಸು: ಆತುರಿಸು; ವಡಬ: ಸಮುದ್ರದೊಳಗಿನ ಬೆಂಕಿ; ಮುರಹರ: ಕೃಷ್ಣ; ಮೈದುನ: ತಂಗಿಯ ಗಂಡ; ಒಯ್ಯು: ತೆರಳು; ಐದು: ಬಂದು ಸೇರು; ಅವನಿಪಾಲಕ: ರಾಜ;

ಪದವಿಂಗಡಣೆ:
ಧರಣಿಪನ +ನಿರಿಗೆಯಲಿ +ಕಂದನ
ಮರಣವನು +ನಿಶ್ಚಯಿಸಿ +ಪ್ರಳಯದ
ಹರನ +ಕೋಪವ +ಕೇಣಿಗೊಂಡನು +ತನ್ನ +ಚಿತ್ತದಲಿ
ಸುರಿವ +ನಯನಾಂಬುಗಳ+ ಜಲನಿಧಿ
ಗುರವಣಿಸಿದನೊ +ವಡಬನೆನೆ +ಮುರ
ಹರನ +ಮೈದುನನ್+ಒಯ್ಯನ್+ಐದಿದನ್+ಅವನಿಪಾಲಕನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರಿವ ನಯನಾಂಬುಗಳ ಜಲನಿಧಿಗುರವಣಿಸಿದನೊ ವಡಬನೆನೆ
(೨) ಧರಣಿಪ, ಅವನಿಪಾಲಕ – ಸಮಾನಾರ್ಥಕ ಪದಗಳು – ಪದ್ಯದ ಮೊದಲ ಮತ್ತು ಕೊನೆಯ ಪದ

ಪದ್ಯ ೧೪: ಹಿರಣ್ಯಪುರದ ದೊರೆ ಏಕೆ ಆಶ್ಚರ್ಯಗೊಂಡನು?

ಅರಿಯದಾ ಪಟ್ಟಣವಿದೇನೋ
ಹೊರಗೆ ಗಜಬಜದೆನೆ ಸುಪರ್ವರ
ಕುರುಹುಗಳನರಿದಮರರಿಪುಗಳು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದರಸ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಿರಣ್ಯನಗರಿಯ ಜನಗಳಿಗೆ ಈ ಗದ್ದಲ ಏಕೆ ಎಂದು ತಿಳಿಯಲಿಲ್ಲ. ರಾಕ್ಷಸ ಭಟರು ಊರ ಹೊರಗೆ ಬಂದು ಇದು ದೇವತೆಗಳ ದಾಳಿಯೆಂದರಿತು ಅರಮನೆಗೆ ಹೋದರು. ಅವರೆಲ್ಲರೂ ಜೋರಾಗಿ ನಗುತ್ತಾ ಆಸ್ಥಾನಕ್ಕೆ ಹೋಗಿ, ಸದ್ದನ್ನು ಕಡಿಮೆ ಮಾಡಿಕೊಂಡು ಕಣ್ಣುಗಳಲ್ಲಿ ನೀರು ತುಂಬಿರಲು, ರಾಜನಿಗೆ ನಮಸ್ಕರಿಸಿದರು. ರಾಜನು ಅವರ ಸ್ಥಿತಿಯನ್ನು ನೋಡಿ ಇದೇಕೆ ಈ ರೀತಿಯಾದ ಸಂತಸ ಎಂದು ಕೇಳಿದನು.

ಅರ್ಥ:
ಅರಿ: ತಿಳಿ; ಪಟ್ಟಣ: ಊರು; ಹೊರಗೆ: ಆಚೆ; ಗಜಬಜ: ಗೊಂದಲ; ಪರ್ವ: ಸಂಧಿ ಕಾಲ, ಸಂಭ್ರಮ; ಕುರುಹು: ಚಿಹ್ನೆ, ಗುರುತು; ಅಮರ: ದೇವತೆ; ರಿಪು: ವೈರಿ; ಅಮರರಿಪು: ದಾನವ; ಹರಿ: ಧಾವಿಸು, ಓಡು; ಅರಮನೆ: ರಾಜರ ಆಲಯ; ಬಿರುನಗೆ: ಜೋರಾದ ನಗು; ಸುಮ್ಮಾನ: ಸಂತೋಷ, ಹಿಗ್ಗು; ಉಬ್ಬು: ಹೆಚ್ಚಳ, ಅಧಿಕ; ನೆರೆನಗೆ:ಜೊತೆಯಲ್ಲಿ ನಗು; ನಯನಾಂಬು: ಕಣ್ಣೀರು; ಖಳ: ದುಷ್ಟ; ಎರಗು: ಬಾಗು; ಅರಸ: ರಾಜ; ಬೆಸ: ಅಪ್ಪಣೆ, ಆದೇಶ, ಕೇಳು;

ಪದವಿಂಗಡಣೆ:
ಅರಿಯದಾ +ಪಟ್ಟಣವ್+ಇದೇನೋ
ಹೊರಗೆ+ ಗಜಬಜದ್+ಎನೆ +ಸುಪರ್ವರ
ಕುರುಹುಗಳನ್+ಅರಿದ್+ಅಮರ+ರಿಪುಗಳು +ಹರಿದರ್+ಅರಮನೆಗೆ
ಬಿರುನಗೆಯ+ ಸುಮ್ಮಾನದ್+ಉಬ್ಬಿನ
ನೆರೆನಗೆಯ +ನಯನಾಂಬುಗಳ+ ಖಳನ್
ಎರಗಲ್+ಅತಿ +ಸುಮ್ಮಾನವ್+ಏನೆಂದ್+ಅರಸ +ಬೆಸಗೊಂಡ

ಅಚ್ಚರಿ:
(೧) ಬಿರುನಗೆ, ನೆರೆನಗೆ – ನಗುವನ್ನು ವಿವರಿಸುವ ಪರಿ

ಪದ್ಯ ೧೩: ಭೀಮನ ಆಶ್ಚರ್ಯಕ್ಕೆ ಕಾರಣವೇನು?

ಎಂದನೀ ಪವಮಾನಸುತನು ಮು
ಕುಂದನನು ಬೆಸನೇನು ಮುನಿ ಕ್ಷಣ
ವೆಂದೆನಲು ಶೋಕಿಸಿದ ಕಾರಣವೇನು ಧರ್ಮಜಗೆ
ಬಂದ ವಿವರವ ವಿಸ್ತರಿಸೆ ನೆರೆ
ಸಂದ ಕಣ್ಣೀರ್ಸುರಿದುದಿಮ್ಮಡಿ
ಬಂದಪುವಿದೇನು ನಯನಾಂಬುಗಳು ಹದನೆಂದ (ಅರಣ್ಯ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೀಗೆ ಆಶ್ಚರ್ಯಪಟ್ಟ ಭೀಮನು ಕೃಷ್ಣನನ್ನು ಕೇಳಲು ಮುಂದಾದನು, ಹೇ ಕೃಷ್ಣ ಆಮಂತ್ರಣವನ್ನು ಸ್ವೀಕರಿಸು ಎಂದು ಹೇಳಲು ಮುನಿವರ್ಯರೇಕೆ ಅತ್ತರು? ಆ ವಿವರವನ್ನು ಕೇಳಿ ನಿಮ್ಮ ಹಾಗು ಧರ್ಮಜನ ಕಣ್ಣಗಳಲ್ಲಿ ನೀರು ತುಂಬಲು ಕಾರಣವೇನು ಎಂದು ಕೇಳಿದನು.

ಅರ್ಥ:
ಪವಮಾನ: ವಾಯು; ಸುತ: ಪುತ್ರ; ಬೆಸ: ಅಪ್ಪಣೆ, ಆದೇಶ; ಮುನಿ: ಋಷಿ; ಕ್ಷಣ: ಆಮಂತ್ರಣ, ಸಮಯ; ಶೋಕ: ದುಃಖ; ಕಾರಣ: ನಿಮಿತ್ತ, ಹೇತು; ಬಂದ: ಆಗಮಿಸು; ವಿವರ: ವಿಸ್ತಾರ, ಸಂದು; ವಿಸ್ತರಿಸು: ಹಬ್ಬುಗೆ; ನೆರೆ: ಜೊತೆಗೂಡು; ಸಂದ: ಕಳೆದ, ಹಿಂದಿನ; ಕಣ್ಣೀರು: ದೃಗಜಲ; ಇಮ್ಮಡಿ: ಎರಡು ಪಟ್ಟು; ನಯನಾಂಬು: ಕಣ್ಣಿರು; ಹದ: ರೀತಿ;

ಪದವಿಂಗಡಣೆ:
ಎಂದನೀ +ಪವಮಾನಸುತನು +ಮು
ಕುಂದನನು +ಬೆಸನ್+ಏನು +ಮುನಿ +ಕ್ಷಣವ್
ಎಂದೆನಲು +ಶೋಕಿಸಿದ+ ಕಾರಣವೇನು +ಧರ್ಮಜಗೆ
ಬಂದ +ವಿವರವ +ವಿಸ್ತರಿಸೆ +ನೆರೆ
ಸಂದ +ಕಣ್ಣೀರ್+ಸುರಿದುದ್+ಇಮ್ಮಡಿ
ಬಂದಪುವ್+ಇದೇನು +ನಯನಾಂಬುಗಳು +ಹದನೆಂದ

ಅಚ್ಚರಿ:
(೧) ಕಣ್ಣೀರು, ನಯನಾಂಬು – ಸಮನಾರ್ಥಕ ಪದ

ಪದ್ಯ ೫: ಭೀಷ್ಮಾದಿಗಳ ಪರಿಸ್ಥಿತಿ ಹೇಗಿತ್ತು?

ಬೆಗಡಿನಲಿ ಮುದ ಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ವಲ ವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮುಹೂರ್ತದಲಿ (ಸಭಾ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಸೀರೆಯನ್ನು ಸೆಳೆಯಲು ಮುಂದಾಗಿ ಅದರಲ್ಲಿ ಆಶ್ಚರ್ಯಕರವಾಗಿ ಆಕೆಯ ಮಾನವುಳಿದ ರೀತಿಯು ಭೀಷ್ಮಾದಿಗಳಲ್ಲಿ ಹಲವಾರು ಭಾವನೆಗಳು ಸೇರಿಕೊಂಡವು. ದ್ರೌಪದಿಯ ಸೀರೆಗೆ ಕೈಹಾಕಿದಾಗ ಆಶ್ಚರ್ಯ ಮತ್ತು ದುಃಖದ ಭಾವನೆ, ಹಾಗೆಯೇ ಆಶ್ಚರ್ಯಕರ ರೀತಿಯಲ್ಲಿ ಅವಳ ಮಾನವುಳಿದುದು ಸಂತಸದ ನಗೆ, ಕಣ್ಣೀರೊಡನೆ ಆನಂದಾಶ್ರುಗಳು ಒಮ್ಮೆಗೆ ಹೊರಬಂದವು. ದುಃಖಿತ ಮನಸ್ಥಿತಿಯಲ್ಲಿದ್ದವರಿಂದ ಉಕ್ಕಿಬಂದ ಸಂತಸದ ನಗೆ, ಉದ್ವೇಗದ ಬೆವರೊಂದು ಕಡೆ, ಅದರಲ್ಲೇ ಇನ್ನೊಂದೆಡೆ ರೋಮಾಂಚನ, ದುಃಖದಲ್ಲಿ ಅತಿಶಯ ಸಂತೋಷ, ಬಾಡಿಹೋಗಿದ್ದ ಮುಖದಲ್ಲಿ ಬೆಳಗಿದ ಬೆಳಕು, ಇವು ಭೀಷ್ಮಾದಿಗಳಲ್ಲಿ ಮೂಡಿಬಂದ ಭಾವನೆಗಳು.

ಅರ್ಥ:
ಬೆಗಡು: ಆಶ್ಚರ್ಯ, ಬೆರಗು; ಮುದ: ಸಂತೋಷ; ಖೇದ: ದುಃಖ, ಉಮ್ಮಳ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಆನಂದ: ಸಂತೋಷ; ಆಶ್ರು: ಕಣ್ಣೀರು; ಶೋಕ: ದುಃಖ; ಬಗೆ: ಆಲೋಚನೆ; ಉಬ್ಬು: ಹಿಗ್ಗು; ನಗೆ: ಸಂತಸ; ಸ್ವೇದ: ಬೆವರು; ರೋಮಾಂಚ: ಮೈಗೂದಲು ನಿಮಿರುವಿಕೆ, ಪುಳಕ; ದುಗುಡ: ದುಃಖ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಕಂದು: ಕಳಾಹೀನ; ಮೊಗ: ಮುಖ; ಉಜ್ವಲ: ಪ್ರಕಾಶ; ಉಜ್ವಲವೃತ್ತಿ: ಜ್ವಾಜಲ್ಯಮಾನ ಪ್ರಕಾಶ; ಆದಿ: ಮುಂತಾದ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಡಿ: ಸಮಾನವಾದುದು, ಎಣೆ; ಮುಹೂರ್ತ: ಒಳ್ಳೆಯ ಸಮಯ;

ಪದವಿಂಗಡಣೆ:
ಬೆಗಡಿನಲಿ +ಮುದ +ಖೇದ +ನಯನಾಂ
ಬುಗಳೊಳ್+ಆನಂದ+ಆಶ್ರು+ ಶೋಕದ
ಬಗೆಯೊಳ್+ಉಬ್ಬಿದ +ನಗೆಯಲಾ +ಸ್ವೇದದಲಿ +ರೋಮಾಂಚ
ದುಗುಡದಲಿ +ಪರಿತೋಷ +ಕಂದಿದ
ಮೊಗದಲ್+ಉಜ್ವಲ +ವೃತ್ತಿ +ಭೀಷ್ಮಾ
ದಿಗಳೊಳಗೆ+ ಪಲ್ಲಟಿಸುತಿರ್ದುದು +ಪಡಿ+ಮುಹೂರ್ತದಲಿ

ಅಚ್ಚರಿ:
(೧) ಮುದ ಖೇದ; ಆನಂದ, ಶೋಕ; ದುಗುಡ, ಪರಿತೋಷ – ವೈರುಧ್ಯ ಭಾವನೆಗಳನ್ನು ವಿವರಿಸುವ ಪರಿ