ಪದ್ಯ ೩೦: ಸಭಾಭವನವು ಹೇಗೆ ಕಂಗೊಳಿಸುತ್ತಿತ್ತು?

ಸೂಸಕದ ಮುತ್ತುಗಳು ತಾರಾ
ರಾಶಿಗಳ ಹಬ್ಬುಗೆಯ ನೀಲದ
ಹಾಸರೆಗಳೇ ಹೋಲುತಿದ್ದವು ಗಗನಮಂಡಲವ
ಸೂಸಕಂಗಳ ಮುರಿದ ಮುತ್ತಿನ
ದೇಶಿಕಾರಿಯರಾನನೇಂದುಗ
ಳಾ ಸುಧಾಕರನೆನಲು ಗೆಲಿದುದು ಸಭೆ ನಭಸ್ಥಳವ (ಸಭಾ ಪರ್ವ, ೧೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಭಾಭವನದ ಛಾವಣಿಗೆ ಕಟ್ಟಿದ್ದ ಕುಚ್ಚುಗಳಲ್ಲಿದ್ದ ಮುತ್ತುಗಳು ಆಗಸದ ನಕ್ಷತ್ರದ ರಾಶಿಗಳಂತೆ ತೋರುತ್ತಿದ್ದವು. ನೆಲಕ್ಕೆ ಹಾಸಿದ್ದ ನೀಲದ ಹಾಸು ಗಗನವನ್ನು ಹೋಲುತ್ತಿತ್ತು. ಈ ಸಭಾಭವನದಲ್ಲಿ ಹೊಳೆಯುವ ಕಣ್ಣುಗಳಿಂದ, ಮುತ್ತಿನ ಕುಚ್ಚುಗಳಿಂದ ವಿವಿಧ ರೀತಿಯಲ್ಲಿ ಅಲಂಕರಿಸಿಕೊಂಡಿದ್ದ ಸುಂದರಿಯರ ಮುಖಗಳೇ ಚಂದನಂತೆ ತೋರುತ್ತಿದ್ದವು. ಹೀಗೆ ಆ ಸಭಾಭವನವು ಆಕಾಶವನ್ನು ಸೋಲಿಸುತ್ತಿತ್ತು.

ಅರ್ಥ:
ಸೂಸು: ಎರಚುವಿಕೆ, ಚಲ್ಲುವಿಕೆ; ಮುತ್ತು: ಬೆಲೆಬಾಳುವ ರತ್ನ; ತಾರ: ನಕ್ಷತ್ರ; ರಾಶಿ: ಗುಂಪು; ಹಬ್ಬುಗೆ: ವಿಸ್ತಾರ; ನೀಲ: ನೀಲಿ ಬಣ್ಣ; ನೀಳ: ಉದ್ದ; ಹಾಸರೆ: ಬೆಲೆ; ಹೋಲು: ತೋರು; ಗಗನ: ಆಗಸ; ಮಂಡಲ: ವರ್ತುಲಾಕಾರ; ಕಂಗಳು: ಕಣ್ಣು, ನಯನ; ಮುರಿ: ಸೀಳು; ಮುತ್ತು: ರತ್ನ; ದೇಶಿ: ಅಲಂಕಾರ; ಆನನ: ಮುಖ; ಇಂದು; ಚಂದ್ರ; ಸುಧಾಕರ: ಚಂದ್ರ; ಗೆಲಿದು: ಜಯ; ನಭ: ಆಗಸ; ಸ್ಥಳ: ಜಾಗ;

ಪದವಿಂಗಡಣೆ:
ಸೂಸಕದ +ಮುತ್ತುಗಳು +ತಾರಾ
ರಾಶಿಗಳ +ಹಬ್ಬುಗೆಯ +ನೀಲದ
ಹಾಸರೆಗಳೇ +ಹೋಲುತಿದ್ದವು +ಗಗನಮಂಡಲವ
ಸೂಸಕಂಗಳ+ ಮುರಿದ+ ಮುತ್ತಿನ
ದೇಶಿಕಾರಿಯರ್+ಆನನ+ಇಂದುಗಳ್
ಆ+ ಸುಧಾಕರನ್+ಎನಲು +ಗೆಲಿದುದು +ಸಭೆ +ನಭಸ್ಥಳವ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸೂಸಕದ ಮುತ್ತುಗಳು ತಾರಾರಾಶಿಗಳ, ನೀಲದ
ಹಾಸರೆಗಳೇ ಹೋಲುತಿದ್ದವು ಗಗನಮಂಡಲವ; ಸೂಸಕಂಗಳ ಮುರಿದ ಮುತ್ತಿನ
ದೇಶಿಕಾರಿಯರಾನನೇಂದುಗಳಾ ಸುಧಾಕರನೆನಲು

ಪದ್ಯ ೭೭: ಶಿಶುಪಾಲನ ಅಂತ್ಯ ಹೇಗಾಯಿತು?

ಬೆಸಸಿದನು ಚಕ್ರವನು ಧಾರಾ
ವಿಸರ ಧುತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
ದೆಸೆ ದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆನಭಸ್ಥಳಕೆ (ಸಭಾ ಪರ್ವ, ೧೧ ಸಂಧಿ, ೭೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಹಿಡಿದು ಅದಕ್ಕೆ ಅಜ್ಞಾಪಿಸಿದನು, ಚಕ್ರವು ಅಲಗಿನ ಧಾರೆಗಳಿಂದ ಹೊಳೆ ಹೊಳೆದು ಬೆಂಕಿಯ ಕಿಡಿಗಳಿಂದ ಸುತ್ತಲ್ಪಟ್ಟು, ನೂರು ಉದಯಿಸುವ ಸೂರ್ಯರ ತೇಜಸ್ಸಿನಿಂದ ದಿಕ್ಕು ದಿಕ್ಕಿಗೆ ಹಬ್ಬುವ ಬೆಳಕಿನಿಂದೊಡಗೂಡಿ ಬಂದ ಸುದರ್ಶನ ಚಕ್ರವು ಶಿಶುಪಾಲನ ಕಂಠವನ್ನು ಅವನ ಶರೀರದಿಂದ ಬೇರ್ಪಡಿಸಲು, ತಲೆಯು ಛಂಗನೆ ಆಗಸದತ್ತ ಹಾರಿತು.

ಅರ್ಥ:
ಬೆಸಸು: ಹೇಳು, ಆಜ್ಞಾಪಿಸು; ಚಕ್ರ: ವೃತ್ತಾಕಾರದಲ್ಲಿ ಚಲಿಸುವ ಯಂತ್ರ; ಧಾರಾ: ಹರಿತವಾದ ಅಂಚು; ವಿಸರ: ವಿಸ್ತಾರ, ವ್ಯಾಪ್ತಿ; ಧೂತ: ನಿರ್ಧೂತ, ನಿವಾರಣೆ; ಪರಿಸ್ಫುಲಿಂಗ: ಕಿಡಿಗಳು; ಪ್ರಸರ: ಹರಡುವುದು; ತೇಜ: ಕಾಂತಿ; ಕಣ: ಸಣ್ಣ ಪದಾರ್ಥ; ಪರಿಷ್ಕೃತ: ಶೋಧಿಸಿದ; ನವ್ಯ: ನೂತನ; ಶತ: ನೂರು; ಭಾನು: ಸೂರ್ಯ; ದೆಸೆ: ದಿಕ್ಕು; ದುವ್ವಾಳಿ: ತೀವ್ರಗತಿ; ಬೆಳಕು: ಪ್ರಕಾಶ; ಎಸೆ: ಹೊರಹಾಕು; ಬಂದು: ಆಗಮಿಸಿ; ಸುನೀತ: ಶಿಶುಪಾಲ; ಕಂಠ: ಕುತ್ತಿಗೆ, ಗಂಟಲು; ಬೆಸುಗೆ: ಒಂದಾಗುವುದು; ಬಿಡಲು: ತೊರೆಯಲು; ಎರಗು: ಬೀಳು; ಹಾಯು: ಹಾರು, ಹೊರಸೂಸು, ಹೊಮ್ಮು; ತಲೆ: ಶಿರ; ನಭ: ಆಗಸ; ಸ್ಥಳ: ಪ್ರದೇಶ;

ಪದವಿಂಗಡಣೆ:
ಬೆಸಸಿದನು+ ಚಕ್ರವನು +ಧಾರಾ
ವಿಸರ +ಧೂತ +ಪರಿಸ್ಫುಲಿಂಗ
ಪ್ರಸರ+ ತೇಜಃಕಣ+ ಪರಿಷ್ಕೃತ +ನವ್ಯ +ಶತಭಾನು
ದೆಸೆ+ ದೆಸೆಗೆ+ ದುವ್ವಾಳಿಸುವ +ಬೆಳ
ಗೆಸೆಯೆ +ಬಂದು +ಸುನೀತ +ಕಂಠದ
ಬೆಸುಗೆ +ಬಿಡಲ್+ಎರಗಿದುದು +ಹಾಯ್ದುದು +ತಲೆನಭಸ್ಥಳಕೆ

ಅಚ್ಚರಿ:
(೧) ಸುದರ್ಶನ ಚಕ್ರದ ಪ್ರಕಾಶದ ವಿವರ – ಧಾರಾ ವಿಸರ ಧುತ ಪರಿಸ್ಫುಲಿಂಗ ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
(೨) ಕತ್ತರಿಸಿತು ಎಂದು ಹೇಳಲು – ಕಂಠದ ಬೆಸುಗೆ ಬಿಡಲು, ಬೆಸುಗೆ ಪದದ ಪ್ರಯೋಗ