ಪದ್ಯ ೮: ಯುಧಿಷ್ಠಿರನು ಎಷ್ಟು ಪಣವನ್ನು ಇಟ್ಟನು?

ಬರಹಕಿಮ್ಮಡಿ ನೂರುಮಡಿ ಸಾ
ವಿರದಮಡಿ ಪರಿಯಂತವಿಕ್ಕಿತು
ಹರುಷ ನನೆಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು
ವಾಸಿ ಪಾಡಿನ
ದುರುಳತನವುಬ್ಬೆದ್ದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ (ಸಭಾ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಹೇಳಿದ್ದಕ್ಕೆರಡರಷ್ಟು, ನೂರರಷ್ಟು, ಸಾವಿರದಷ್ಟು ಹಣವನ್ನೊಡ್ಡಿದನು. ಸಂತಸದ ಮೊಗ್ಗು ಕೊನೆಯಾಯಿತು, ಕಲಿಯ ದೋಷವು ಹೆಚ್ಚಿತು. ಮನಸ್ಸಿನ ಸಮತೆಯನ್ನು ಕಳೆದುಕೊಂಡು ಛಲದ ದುಷ್ಟತನವು ಮನಸ್ಸಿನಲ್ಲಿ ಹೆಚ್ಚಿತು. ಒಡ್ಡದ ಮೇಲೆ ಒಡ್ಡವನ್ನು ಇಟ್ಟನು.

ಅರ್ಥ:
ಬರಹ:ಬರವಣಿಗೆ, ಚಿತ್ರಣ; ಇಮ್ಮಡಿ: ಎರಡರಷ್ಟು, ದುಪ್ಪಟ; ಸಾವಿರ ಸಹಸ್ರ; ಮಡಿ: ಪಟ್ಟು; ಪರಿಯಂತ: ವರೆಗೆ, ತನಕ; ಹರುಷ: ಸಂತಸ; ನನೆ: ಮೊಗ್ಗು, ಮುಗುಳು; ಕೊನೆ: ಅಂತ್ಯ; ಹೆಚ್ಚು: ಅಧಿಕ; ಕಲಿ: ವೀರ; ಕಲಿಮಲಾವೇಶ: ಕಲಿಗಾಲದ ಮಲದಿಂದ ಆವೇಶಗೊಂಡವ; ಆವೇಶ: ರೋಷ; ಸ್ಥಿರ: ನಿತ್ಯವಾದುದು, ಶಾಶ್ವತವಾದುದು; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ, ಕಡಮೆಯಾಗು; ವಾಸಿ: ಛಲ, ಹಠ; ಪಾಡಿನ: ರೀತಿ, ಬಗೆ; ದುರುಳ: ದುಷ್ಟ; ಉಬ್ಬೆದ್ದು: ಹೆಚ್ಚಾಗು; ಅಡಿಗಡಿಗೆ: ಪುನಃ ಪುನಃ; ಅರಸ: ರಾಜ; ಒಡ್ಡು: ನೀಡು, ಜೂಜಿನ ಪಣ; ಮೇಲೆ ಮೇಲೆ: ಮತ್ತೆ ಮತ್ತೆ; ವಿರಚಿಸು: ನಿರ್ಮಿಸು, ರಚಿಸು;

ಪದವಿಂಗಡಣೆ:
ಬರಹಕ್+ಇಮ್ಮಡಿ +ನೂರು+ಮಡಿ ಸಾ
ವಿರದ+ಮಡಿ ಪರಿಯಂತ+ಇಕ್ಕಿತು
ಹರುಷ +ನನೆಕೊನೆಯಾಯ್ತು +ಹೆಚ್ಚಿತು +ಕಲಿಮಲ+ಆವೇಶ
ಸ್ಥಿರವೆ+ ಹಿಂಗಿತು+ವಾಸಿ +ಪಾಡಿನ
ದುರುಳತನವ್+ಉಬ್ಬೆದ್ದುದ್+ಅಡಿಗಡಿಗ್
ಅರಸನ್+ಒಡ್ಡಿದ +ಮೇಲೆ +ಮೇಲ್+ಒಡ್ಡವನು +ವಿರಚಿಸಿದ

ಅಚ್ಚರಿ:
(೧) ಮಡಿ ಪದದ ಬಳಕೆ – ಇಮ್ಮಡಿ, ನೂರ್ಮಡಿ, ಸಾವಿರಮಡಿ
(೨) ದುರ್ಯೋಧನನ ಸ್ಥಿತಿಯನ್ನು ಹೇಳುವ ಪರಿ – ಹರುಷ ನನೆಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ; ಸ್ಥಿರವೆ ಹಿಂಗ್ತು ವಾಸಿ ಪಾಡಿನ ದುರುಳತನವುಬ್ಬೆದ್ದುದಡಿಗಡಿಗೆ

ಪದ್ಯ ೧೭: ಭೀಮನು ಹೇಗೆ ಶೋಭಿಸಿದನು?

ಇಳಿದು ರಥವನು ಗದೆಯ ಕೊಂಡ
ಪ್ಪಳಿಸಿದನು ಹೊರಕೈಯಲರೆದಿ
ಟ್ಟಳಿಸಿದರನೆಡಗಾಲಲೊದೆದನು ಹೊಯ್ದು ಮುಡುಹಿನಲಿ
ಕಲಕಿದನು ಕೌರವ ಮಹಾಬಲ
ಜಲಧಿಯನು ಸರ್ವಾಂಗ ಶೋಣಿತ
ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ (ಕರ್ಣ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕರ್ಣನ ಸೈನಿಕರು ಮುಂದೆ ಬಂದು ಆಕ್ರಮಣ ಮಾಡಲು, ಭೀಮನು ರಥದಿಂದಿಳಿದು ಕೈಯಲ್ಲಿ ಗದೆಯನ್ನು ಹಿಡಿದು ಗದೆಯಿಂದ ವೈರಿಸೈನಿಕರನ್ನು ಅಪ್ಪಳಿಸಿದನು. ತನ್ನ ಮೇಲೆ ಆಕ್ರಮಣ ಮಾಡಿದರವನ್ನು ಎಡಗಾಲಿನಿಂದ ಝಾಡಿಸಿ, ಭುಜಗಳ ಮೇಲೆ ಹೊಯ್ದು, ಕೌರವರ ಮಹಾಸೇನೆಯನ್ನು ಕಲಕಿದನು. ಮೈಗೆಲ್ಲಾ ರಕ್ತವು ಅಂಟಿರಲು ಮಳೆ ಬಂದಾಗ ಜಾಜಿಹೂವಿನ ಬೆಟ್ಟದಂತೆ ಭೀಮನು ಶೋಭಿಸಿದನು.

ಅರ್ಥ:
ಇಳಿ: ಕೆಳಕ್ಕೆ ಬಂದು; ರಥ: ಬಂಡಿ, ತೇರು; ಗದೆ: ಮುದ್ಗರ; ಕೊಂಡು: ತೆಗೆದು; ಅಪ್ಪಳಿಸು: ಹೊಡೆ; ಹೊರಕೈ: ಕೈಯ ಮೇಲ್ಭಾಗ; ಅರೆ: ನುಣ್ಣಗೆಮಾಡು; ಇಟ್ಟಳಿಸು: ಹೊಡೆ; ಎಡ: ವಾಮಭಾಗ; ಕಾಲು: ಪಾದ; ಒದೆ: ಹೊಡೆತ, ಮೆಟ್ಟು; ಹೊಯ್ದು: ಹೊಡೆದು; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಕಲಕು: ಅಲ್ಲಾಡಿಸು; ಮಹಾಬಲ: ಮಹಾಸೈನ್ಯ; ಜಲಧಿ: ಸಮುದ್ರ; ಸರ್ವಾಂಗ: ಎಲ್ಲಾ ಬಗೆಯ; ಶೋಣಿತ: ನೆತ್ತರು, ರಕ್ತ; ಜಲ: ನೀರು; ಎಸೆ: ತೋರು; ನನೆ: ಹೂವು, ತೊಯು, ಒದ್ದೆಯಾಗು; ಜಾಜಿ: ಮಾಲತೀ ಪುಷ್ಪ; ಕೆಂಪುಬಣ್ಣ; ಗಿರಿ: ಬೆಟ್ಟ;

ಪದವಿಂಗಡಣೆ:
ಇಳಿದು +ರಥವನು +ಗದೆಯ +ಕೊಂಡ್
ಅಪ್ಪಳಿಸಿದನು +ಹೊರಕೈಯಲ್+ಅರೆದ್
ಇಟ್ಟಳಿಸಿದರನ್+ಎಡಗಾಲಲ್+ಒದೆದನು +ಹೊಯ್ದು +ಮುಡುಹಿನಲಿ
ಕಲಕಿದನು +ಕೌರವ+ ಮಹಾಬಲ
ಜಲಧಿಯನು +ಸರ್ವಾಂಗ +ಶೋಣಿತ
ಜಲದಲ್+ಎಸೆದನು +ನನೆದ +ಜಾಜಿನ +ಗಿರಿಯವೊಲು +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸರ್ವಾಂಗ ಶೋಣಿತ ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ