ಪದ್ಯ ೩೩: ಕೌರವನೇಕೆ ಸಂತಸಗೊಂಡ?

ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೆ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
ಮಾನನಿಧಿ ಭೀಷ್ಮಂಗೆ ಸಮರ ಸ
ಮಾನ ಭಟನಿನ್ನಾವನೆಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ (ಭೀಷ್ಮ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕೌರವನು ಬಹಳ ಸಂತಸಪಟ್ಟು ಅತಿರೇಕದಿಂದ, ಭೀಷ್ಮನ ಬಲವಿರುವ ನಮ್ಮ ಸೈನ್ಯವು ಶಿವನಿಗೂ ಬೆದರುವುದಿಲ್ಲ. ಪಾಂಡವರು ಅರಣ್ಯ ಜಪದಲ್ಲೇ ಇರಬೇಕು, ಅವರಿಗೆ ರಾಜ್ಯವೇಕೆ ಭೀಷ್ಮನಿಗೆ ಸರಿಸಮಾನರಾದ ವೀರರು ಇನ್ನಾರು ಎಂದು ಹೊಗಳಿದನು.

ಅರ್ಥ:
ನದೀನಂದನ: ಭೀಷ್ಮ; ನಂದನ: ಮಗ; ಬಲ: ಸಾಮರ್ಥ್ಯ; ಸೇನೆ: ಸೈನ್ಯ; ಶಿವ: ಶಂಕರ; ಅಂಜು: ಹೆದರು; ಸೂನು: ಮಕ್ಕಳು; ಅರಣ್ಯ: ಕಾನನ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಇಳೆ: ಭೂಮಿ; ಮಾನನಿಧಿ: ಮರ್ಯಾದೆಯನ್ನೇ ಐಶ್ವರ್ಯವನ್ನಾಗಿಸಿದವ (ದುರ್ಯೋಧನ); ಸಮರ: ಯುದ್ಧ; ಸಮಾನ: ಸದೃಶ; ಭಟ: ವೀರ; ಮನ: ಮನಸ್ಸು; ಅನುರಾಗ: ಪ್ರೀತಿ; ಬಣ್ಣಿಸು: ಹೊಗಳು, ವರ್ಣಿಸು;

ಪದವಿಂಗಡಣೆ:
ಈ +ನದೀನಂದನನ +ಬಲದಲಿ
ಸೇನೆ +ಶಿವಗ್+ಅಂಜುವುದೆ +ಕುಂತೀ
ಸೂನುಗಳಿಗ್+ಅರಣ್ಯ+ಜಪವ್+ಇನ್ನವರಿಗ್+ಇಳೆ+ಏಕೆ
ಮಾನನಿಧಿ +ಭೀಷ್ಮಂಗೆ +ಸಮರ +ಸ
ಮಾನ +ಭಟನ್+ಇನ್ನಾವನೆಂದು +ಮ
ನೋನುರಾಗದ+ ಮೇಲೆ +ಕೌರವರಾಯ+ ಬಣ್ಣಿಸಿದ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿತವಾದುದು – ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
(೨) ಮಾನ, ಸಮಾನ – ಪ್ರಾಸ ಪದಗಳು
(೩) ಮಾನನಿಧಿ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೫: ಕರ್ಣಪರ್ವದಲ್ಲಿ ಎಷ್ಟು ಸೇನೆ ಸಿದ್ಧವಾಯಿತು?

ಆ ನದೀನಂದನನ ಸಮರದಿ
ಸೇನೆ ಸವೆದುದನಂತ ಬಳಿಕಿನ
ಸೇನೆ ನುಗ್ಗಾದುದನು ಕಂಡೆನು ದ್ರೋಣ ಪರ್ವದಲಿ
ಏನನೆಂಬೆನು ಜೀಯ ಮತ್ತೀ
ಭಾನುತನಯನ ಕದನಕೊದಗಿದ
ಸೇನೆ ಸಂಖ್ಯಾತೀತವೆಂದನು ಸಂಜಯನು ನೃಪಗೆ (ಕರ್ಣ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ನೀಡುತ್ತಾ, ಭೀಷ್ಮ ಪರ್ವದಲ್ಲಿ ಸೇನೆ ಬಹಳಷ್ಟು ಪರಿ ಶಕ್ತಿಗುಂದಿತು (ಬಹಳಷ್ಟು ಮಂದಿ ಸತ್ತರು), ಇನ್ನು ದ್ರೋಣ ಪರ್ವದಲ್ಲಿ ಸೇನೆಯು ಮತ್ತಷ್ಟು ನುಚ್ಚುನೂರಾಯಿತು, ಈಗ ಕರ್ಣಪರ್ವದಲ್ಲಿ ಎಣಿಸಲಾಗದಷ್ಟು ಸೇನೆಯು ಸಿದ್ಧವಾಯಿತು ಎಂದು ಅಚ್ಚರಿ ವ್ಯಕ್ತಪಡಿಸಿದನು.

ಅರ್ಥ:
ನದೀನಂದನ: ಗಂಗೆಯ ಮಗ (ಭೀಷ್ಮ); ನಂದನ: ಮಗ; ಸಮರ: ಯುದ್ಧ; ಸೇನೆ: ಸೈನ್ಯ; ಸವೆದು: ಶಕ್ತಿಗುಂದು; ಅನಂತ: ಬಹಳ; ಬಳಿಕ: ನಂತರ; ನುಗ್ಗು: ಚೂರು, ನುಚ್ಚು, ಪುಡಿ; ಪರ್ವ: ಅಧ್ಯಾಯ; ಏನನೆಂಬೆನು: ಏನು ಹೇಳಲಿ: ಜೀಯ: ಒಡೆಯ; ಭಾನುತನಯ: ಸೂರ್ಯಪುತ್ರ (ಕರ್ಣ); ಭಾನು: ಸೂರ್ಯ; ತನಯ: ಪುತ್ರ; ಕದನ: ಯುದ್ಧ; ಒದಗು: ಲಭ್ಯ, ದೊರೆತುದು; ಸಂಖ್ಯ: ಎಣಿಕೆ; ಅತೀತ: ಎಲ್ಲೆಯನ್ನು ಮೀರಿದ; ನೃಪ: ರಾಜ;

ಪದವಿಂಗಡಣೆ:
ಆ +ನದೀ+ನಂದನನ +ಸಮರದಿ
ಸೇನೆ +ಸವೆದುದ್+ಅನಂತ +ಬಳಿಕಿನ
ಸೇನೆ+ ನುಗ್ಗಾದುದನು+ ಕಂಡೆನು+ ದ್ರೋಣ +ಪರ್ವದಲಿ
ಏನನೆಂಬೆನು +ಜೀಯ +ಮತ್ತೀ
ಭಾನುತನಯನ+ ಕದನಕ್+ಒದಗಿದ
ಸೇನೆ +ಸಂಖ್ಯಾತೀತವ್+ಎಂದನು +ಸಂಜಯನು +ನೃಪಗೆ

ಅಚ್ಚರಿ:
(೧) ನಂದನ, ಸುತ, ಸವೆ, ನುಗ್ಗು; ಸಮರ, ಕದನ – ಸಮನಾರ್ಥಕ ಪದ
(೨) ಸೇನೆ – ೨,೩ ೬ ಸಾಲಿನ ಮೊದಲ ಪದ