ಪದ್ಯ ೨೦: ಶಲ್ಯನೇ ಯುದ್ಧದ ಮುಂಚೂಣಿಗೇಕೆ ಬಂದನು?

ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ (ಶಲ್ಯ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕುರುಸೇನೆಯು ಅಶ್ವತ್ಥಾಮನನ್ನು ಹಿಂದಿಟ್ಟು ಪಾಂಡವ ಬಲವನ್ನು ಇದಿರಿಸಲು, ಶಲ್ಯನು ಆ ಸೇನೆಯನ್ನು ನೋಡಿ, ಯುದ್ಧ ಮಾಡಲು ನಾನಿರಲಾಗಿ, ಕಾರಣವಿಲ್ಲದೆ ಸೇನೆಯನ್ನು ಕೊಲ್ಲಿಸಿದರೆ ಭೀಷ್ಮ ದ್ರೋಣಾದಿಗಳು ನನ್ನನ್ನು ಕಂಡು ನಗದಿರುವರೇ ಎಂದುಕೊಂಡು ತಾನೇ ಯುದ್ಧಕ್ಕೆ ಬಂದನು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸುತ: ಮಕ್ಕಳು; ಹಿಂದಿರಿಸು: ಹಿಂದಕ್ಕೆ ತಳ್ಳು; ಪರಬಲ: ವೈರಿ ಸೈನ್ಯ; ಅಭಿಮುಖ: ಎದುರು; ಮೋಹರ: ಯುದ್ಧ; ನಿಂದು: ನಿಲ್ಲು; ಕಂಡು: ನೋಡು; ಬಲ: ಶಕ್ತಿ, ಸೈನ್ಯ; ಧುರ: ಯುದ್ಧ, ಕಾಳಗ; ಸಂಹರ: ನಾಶ; ನಗೆ: ನಗು, ಸಂತಸ; ತೆಗೆ: ಹೊರತರು; ನಡೆ: ಚಲಿಸು;

ಪದವಿಂಗಡಣೆ:
ಉರವಣಿಸಿತಿದು+ ಗುರುಸುತನ +ಹಿಂ
ದಿರಿಸಿ +ಪರಬಲದ್+ಅಭಿಮುಖಕೆ +ಮೋ
ಹರಿಸಿ +ನಿಂದುದು +ಕಂಡನಿತ್ತಲು +ಶಲ್ಯನಾ +ಬಲವ
ಧುರಕೆ +ನಾವಿರೆ +ಸೇನೆ+ಉಪಸಂ
ಹರಿಸಬಹುದೇ +ದ್ರೋಣ +ಭೀಷ್ಮಾ
ದ್ಯರಿಗೆ +ನಗೆಗೆಡೆ+ ನಾವಹೆವೆ+ ತೆಗೆ+ಎನುತ +ನಡೆತಂದ

ಅಚ್ಚರಿ:
(೧) ಹಿಂದಿರಿಸಿ, ಮೋಹರಿಸಿ, ಉರವಣಿಸಿ – ಪ್ರಾಸ ಪದಗಳು

ಪದ್ಯ ೪೮: ಕೌರವ ಸೈನ್ಯದ ಗಲಭೆಯನ್ನು ಯಾರು ನಿಲ್ಲಿಸಿದರು?

ಹರಿದು ಬೇಹಿನ ಚರರು ಪಾಂಡವ
ರರಮನೆಯ ಹೊಕ್ಕರಿದು ಮರಳಿದು
ಬರುತ ಕಟಕದ ಗಜಬಜವನಲ್ಲಲ್ಲಿ ಮಾಣಿಸುತ
ನೆರವಿ ನಗೆಗೆಡೆಯಾಗೆ ಮುಸುಕಿನ
ಮುರುವಿನಲಿ ಪಾಳಯವ ಹೊಕ್ಕರು
ಗರುವ ಮನ್ನೆಯ ಮಂಡಳೀಕರು ಕೇಳ್ದರೀ ಹದನ (ದ್ರೋಣ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಗೂಢಚಾರರು ಪಾಂಡವರ ಅರಮನೆಗೆ ಹೋಗಿ ವಿಷಯವನ್ನು ತಿಳಿದು, ಹಿಂದಿರುಗುತ್ತಾ ದಾರಿಯಲ್ಲಿ ಕೌರವ ಸೈನ್ಯದ ಗಲಭೆಯನ್ನು ನಿಲ್ಲಿಸಿದರು. ನೋಡಿದವರು ಅಪಹಾಸ್ಯ ಮಾಡಿ ನಗಲು, ಸೈನಿಕರು ತಮ್ಮ ಬೀಡುಗಳಿಗೆ ಹಿಂದಿರುಗಿದರು. ಸಾಮಂತರಾಜರು ಮನ್ನೆಯರೂ ಈ ಸಂಗತಿಯನ್ನು ಕೇಳಿದರು.

ಅರ್ಥ:
ಹರಿ: ಸೀಳೂ; ಬೇಹು: ಗೂಢಾಚಾರ; ಅರಮನೆ: ರಾಜರ ಆಲಯ; ಹೊಕ್ಕು: ಸೇರು; ಮರಳು: ಹಿಂದಿರುಗು; ಬರುತ: ಆಗಮಿಸು; ಕಟಕ: ಸೈನ್ಯ; ಗಜಬಜ: ಗೊಂದಲ; ಮಾಣಿಸು: ನಿಲ್ಲುವಂತೆ ಮಾಡು; ನೆರವಿ: ಗುಂಪು, ಸಮೂಹ; ನಗೆ: ಹಾಸ್ಯ; ಮುಸುಕು: ಆವರಿಸು; ಮುರುವು: ತಿರುವು, ಬಾಗಿರುವಿಕೆ; ಪಾಳಯ: ಬಿಡಾರ; ಹೊಕ್ಕು: ಸೇರು; ಗರುವ: ಹಿರಿಯ, ಶ್ರೇಷ್ಠ; ಮನ್ನೆಯ: ಮೆಚ್ಚಿನ, ಗೌರವಕ್ಕೆ ಪಾತ್ರನಾದ; ಮಂಡಳೀಕ: ಸಾಮಂತ ರಾಜ; ಕೇಳು: ಆಲಿಸು; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ಹರಿದು+ ಬೇಹಿನ +ಚರರು +ಪಾಂಡವರ್
ಅರಮನೆಯ +ಹೊಕ್ಕರಿದು +ಮರಳಿದು
ಬರುತ+ ಕಟಕದ +ಗಜಬಜವನ್+ಅಲ್ಲಲ್ಲಿ +ಮಾಣಿಸುತ
ನೆರವಿ +ನಗೆಗೆಡೆಯಾಗೆ +ಮುಸುಕಿನ
ಮುರುವಿನಲಿ+ಪಾಳಯವ +ಹೊಕ್ಕರು
ಗರುವ +ಮನ್ನೆಯ +ಮಂಡಳೀಕರು +ಕೇಳ್ದರೀ +ಹದನ

ಅಚ್ಚರಿ:
(೧) ಕೌರವ ಸೈನ್ಯರು ಬಿಡಾರಕ್ಕೆ ಹೋದ ಪರಿ – ನೆರವಿ ನಗೆಗೆಡೆಯಾಗೆ ಮುಸುಕಿನ ಮುರುವಿನಲಿ ಪಾಳಯವ ಹೊಕ್ಕರು

ಪದ್ಯ ೧೪: ಕಾಮನ ಪ್ರಭಾವ ಕೀಚಕನ ಮೇಲೆ ಹೇಗಾಯಿತು?

ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಭೀಜ
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯೆನಾತನ ತನುವಿನಂತಸ್ತಾಪದೇಳ್ಗೆಯನು (ವಿರಾಟ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅವನ ತಿಳುವಳಿಕೆ ತಲೆಕೆಳಗಾಯಿತು. ಧೈರ್ಯದ ಹಿಡಿತ ನಗೆಪಾಟಲಾಯಿತು. ಲಜ್ಜೆಯು ಬತ್ತಿದ ಹಳ್ಲವಾಯಿತು. ಭಯದ ಬೀಜವು ಸುಟ್ಟು ಕಉಕಾಯಿತು. ನೆನಪಿನ ಶಕ್ತಿಯು ಹೆಪ್ಪುಗಟ್ಟಿತು, ಕಾಮನ ಕಾಟ ಹೆಚ್ಚಿತು, ಅವನ ದೇಹ ಮನಸ್ಸುಗಳ ತಾಪವು ಹೆಚ್ಚಾಯಿತು ಅದನ್ನು ನಾನೇಗೆ ತಿಳಿಯಲಿ.

ಅರ್ಥ:
ಅರಿ: ತಿಳಿ; ತಲೆಕೆಳಗೆ: ಏರು ಪೇರು; ಧೈರ್ಯ: ದಿಟ್ಟತನ; ನಿರಿ: ವ್ಯವಸ್ಥೆ, ಚುಚ್ಚು; ನಗೆಗೆಡೆ: ಹಾಸ್ಯಪಾಡು; ಲಜ್ಜೆ: ನಾಚಿಕೆ; ಹೊರಿಗೆ: ಹೊಣೆ; ಬರಿದು: ಬತ್ತುಹೋಗು; ಕರಿಮೊಳೆಯೋಯ್ತು: ಮೊಳಕೆಯಲ್ಲಿ ಸೀದುಹೋಗು; ಭಯ: ಹೆದರಿಕೆ; ಬೀಜ: ಧಾನ್ಯದ ಕಾಳು, ಮೂಲ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಗರಿಗಟ್ಟಿತು: ಹೆಪ್ಪುಗಟ್ಟು; ಮನೋಭವ:ಮನಸ್ಸಿನಿಂದ ಹುಟ್ಟಿದ, ಕಾಮ; ನಿರಿ: ಚುಚ್ಚು; ಕೆಲಸ: ಕಾರ್ಯ; ಬಲುಹು: ಹೆಚ್ಚು; ಹೊಗಳು: ಪ್ರಶಂಶಿಸು; ತನು: ದೇಹ; ತಾಪ: ಬಿಸಿ, ಸೆಕೆ; ಏಳ್ಗೆ: ಹೆಚ್ಚಾಗು; ಅಂತಃಸ್ತಾಪ: ಒಳಗಿನ ತಾಪ;

ಪದವಿಂಗಡಣೆ:
ಅರಿವು +ತಲೆಕೆಳಗಾಯ್ತು +ಧೈರ್ಯದ
ನಿರಿಗೆ +ನಗೆಗೆಡೆಯಾಯ್ತು +ಲಜ್ಜೆಯ
ಹೊರಿಗೆ+ ಬರಿದ್+ಒರೆಯಾಯ್ತು +ಕರಿಮೊಳೆಯೋಯ್ತು +ಭಯಭೀಜ
ಮರವೆ+ ಗರಿಗಟ್ಟಿತು+ ಮನೋಭವ
ನಿರಿಗೆಲಸ +ಬಲುಹಾಯ್ತು +ಹೊಗಳುವಡ್
ಅರಿಯೆನ್+ಆತನ +ತನುವಿನ್+ಅಂತಸ್ತಾಪದ್+ಏಳ್ಗೆಯನು

ಅಚ್ಚರಿ:
(೧) ಕೀಚಕನ ಸ್ಥಿತಿಯನ್ನು ವರ್ಣಿಸುವ ಪರಿ – ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಭೀಜ