ಪದ್ಯ ೨೫: ರಾಕ್ಷಸರ ಸೈನ್ಯವು ಹೇಗೆ ಕಳಚಿಬಿತ್ತು?

ಕೆಟ್ಟುದಹಿತರ ಚೂಣಿ ರಿಪುಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು
ಬಿಟ್ಟ ಮಂಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣಸಾ
ಲಿಟ್ಟು ತೊರೆಯೆನಲರುಣಜಲ ನಗರೋಪಕಂಠದಲಿ (ಅರಣ್ಯ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಿವಾತಕವಚರ ಸೈನ್ಯವು ನನ್ನ ಹೊಡೆತಕ್ಕೆ ಕೆಟ್ಟಿತು, ರಾಕ್ಷಸರಲ್ಲಿ ಮಹಾವೀರರೆನಿಸಿಕೊಂಡವರು ಪುಡಿಯಾದರು. ದೇವತೆಗಳ ಸೈನ್ಯದ ಉತ್ಸಾಹವು ಹೆಚ್ಚಿತು, ಅವರು ಭೇರಿ ನಗಾರಿಗಳನ್ನು ಬಡಿಯಲಾರಂಭಿಸಿದರು. ಅಸುರವೀರರು ತಮ್ಮ ಕೆದರಿದ ತಲೆಯಲ್ಲಿ ಸತ್ತೆವೋ ಕೆಟ್ಟೆವೋ ಎನ್ನುತ್ತಾ ಓಡಿದರು. ಹೆಣಗಳು ಸಾಲುಸಾಲಾಗಿ ಉರುಳಿದವು. ರಕ್ತವು ಹಳ್ಳವಾಗಿ ಹಿರಣ್ಯಪುರದ ಬಳಿ ಹರಿಯಿತು.

ಅರ್ಥ:
ಕೆಡು: ಹಾಳಾಗು; ಅಹಿತ: ಶತ್ರು; ಚೂಣಿ: ಮುಂಭಾಗ; ರಿಪು: ವೈರಿ; ಜಗಜಟ್ಟಿ: ಶೂರ; ನುಗ್ಗು: ಚೂರು, ನುಚ್ಚು; ದಿವಿಜ: ಸುರರು; ಥಟ್ಟು: ಗುಂಪು; ಬೊಬ್ಬಾಟ: ಕೂಗಾಟ, ಚೀರಾಟ; ಗಭೀರ: ಆಳವಾದುದು, ಗಹನವಾದುದು; ಭೇರಿ: ನಗಾರಿ, ದುಂದುಭಿ; ಬಿಟ್ಟ: ತೊರೆದ; ಮಂಡೆ: ಶಿರ; ಅಸುರ: ರಾಕ್ಷಸ; ಸುಭಟ: ಸೈನಿಕ; ಹಾಯ್ದು: ಓಡು; ಕೂಡೆ: ಜೊತೆ; ಹೆಣ: ಸತ್ತ ಶರೀರ; ಸಾಲು: ಗುಂಪು; ತೊರೆ: ಬಿಡು; ಅರುಣಜಲ: ಕೆಂಪು ನೀರು, ರಕ್ತ; ನಗರ: ಊರು; ಉಪಕಂಠ: ಹತ್ತಿರ;

ಪದವಿಂಗಡಣೆ:
ಕೆಟ್ಟುದ್+ಅಹಿತರ +ಚೂಣಿ +ರಿಪು+ಜಗ
ಜಟ್ಟಿಗಳು +ನುಗ್ಗಾಯ್ತು +ದಿವಿಜರ
ಥಟ್ಟಿನಲಿ +ಬೊಬ್ಬಾಟವಾಯ್ತು +ಗಭೀರ +ಭೇರಿಗಳು
ಬಿಟ್ಟ +ಮಂಡೆಯಲ್+ಅಸುರ +ಸುಭಟರು
ಕೆಟ್ಟು +ಹಾಯ್ದರು +ಕೂಡೆ +ಹೆಣ+ಸಾ
ಲಿಟ್ಟು +ತೊರೆಯೆನಲ್+ಅರುಣಜಲ +ನಗರೋಪಕಂಠದಲಿ

ಅಚ್ಚರಿ:
(೧) ರಕ್ತಹರಿಯಿತು ಎಂದು ಹೇಳುವ ಪರಿ – ಹೆಣಸಾಲಿಟ್ಟು ತೊರೆಯೆನಲರುಣಜಲ ನಗರೋಪಕಂಠದಲಿ
(೨) ಅಹಿತ, ರಿಪು – ಸಮನಾರ್ಥಕ ಪದ

ಪದ್ಯ ೧೫: ದೂತರು ರಾಕ್ಷಸ ರಾಜನಿಗೆ ಏನು ಹೇಳಿದರು?

ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿವೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯಕೇಳುತ ಮೃಗವದಾವುದೆನುತ್ತ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜೀಯ ಬೇಟೆಗೆ ರಾಜಮೃಗಗಳು ಬಂದು ನಗರದ ಸಮೀಪದಲ್ಲಿವೆ. ನೀನು ತಪ್ಪದೆ ಬಲೆಗಳನ್ನು ತೆಗೆಸು, ಬೇಟೆಗೆ ಹೊರಡು. ಅಸುರರು ಆ ಮೃಗಗಳನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಸಿಸುವ ಕಷ್ಟವೇ ತಪ್ಪಿತು ಎಚ್ಚರಿಕೆ ಎಂದು ಹೇಳಲು, ರಾಕ್ಷಸ ರಾಜನು ಯಾವ ಮೃಗ ಬಂದಿದೆ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಬಲೆ: ಜಾಲ, ಬಂಧನ; ತೆಗೆ: ಹೊರತರು; ನಡೆ; ಚಲಿಸು; ನಿರ್ದಾಯದ: ಅಖಂಡ; ನಿಮ್ಮಡಿ: ನಿಮ್ಮ ಪಾದ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವ ಕ್ರೀಡೆ; ರಾಯ: ರಾಜ; ಮೃಗ: ಪ್ರಾಣಿ; ಐತರು: ಬಂದು ಸೇರು; ನಗರ: ಊರು; ಉಪಕಂಠ: ಹತ್ತಿರ; ಹೋಯಿತು:ಕಳೆದುಕೊಳ್ಳು; ಅಸುರ: ರಾಕ್ಷಸ; ಕೈಯ: ಹಸ್ತ; ಹೊಸೆ: ಮಥಿಸು; ಉಪಾಯ: ಯುಕ್ತಿ; ಪಾಯವಧಾರು: ಎಚ್ಚರಿಕೆ; ಖಳರಾಯ: ದುಷ್ಟರಾಜ; ಕೇಳು: ಆಲಿಸು;ಬ ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ಬಲೆಗಳ+ ತೆಗೆಸು+ ನಡೆ +ನಿ
ರ್ದಾಯದಲಿ +ನಿಮ್ಮಡಿಯ +ಬೇಟೆಗೆ
ರಾಯ +ಮೃಗವ್+ಐತಂದವ್+ಇವೆ +ನಗರೋಪಕಂಠದಲಿ
ಹೋಯಿತ್+ಅಸುರರ+ ಕೈಯ +ಹೊಸದಿರ್
ಉಪಾಯ +ಪಾಯವಧಾರೆನಲು +ಖಳ
ರಾಯ+ಕೇಳುತ +ಮೃಗವದ್+ಆವುದೆನುತ್ತ+ ಬೆಸಗೊಂಡ

ಅಚ್ಚರಿ:
(೧) ಜೀಯ, ರಾಯ – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಡೆ ನಿರ್ದಾಯದಲಿ ನಿಮ್ಮಡಿಯ