ಪದ್ಯ ೩೮: ಕುಂತಿಯು ಯಾವುದರ ಭಾರದಿಂದ ಕುಗ್ಗಿದಳು?

ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವಪೂರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದು ಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ (ಆದಿ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಕುಂತಿಯು ಗರ್ಭವತಿಯಾದಳು. ಹರ್ಷದ ಭಾರದಿಂದ ತಗ್ಗಿದಳು, ಒಂಬತ್ತು ತಿಂಗಳುಗಳು ತುಂಬಲು, ಶುಭಕರವಾದ ದಿನ, ವಾರ, ನಕ್ಷತ್ರಗಳಲ್ಲಿ ಶುಭಲಗ್ನದಲ್ಲಿ ಚಂದ್ರವಂಶವನ್ನು ವಿಸ್ತರಿಸುವ ಸುಕುಮಾರನು ಜನಿಸಿದನು.

ಅರ್ಥ:
ಧಾರುಣೀಪತಿ: ರಾಜ; ಕೇಳು: ಆಲಿಸು; ನಾರಿ: ಸ್ತ್ರೀ; ಗರ್ಭ: ಹೊಟ್ಟೆ; ಹರುಷ: ಸಂತಸ; ಭಾರ: ಹೊರೆ; ಸತಿ: ಹೆಂಡತಿ; ತಗ್ಗು: ಕುಸಿ, ಕಡಿಮೆಯಾಗು; ನವ: ಒಂಬತ್ತು; ಪೂರ್ಣ: ಭರ್ತಿ; ಮಾಸ: ತಿಂಗಳು; ಚಾರು: ಸುಂದರ; ನಕ್ಷತ್ರ: ತಾರೆ; ಶುಭ: ಮಂಗಳ; ದಿನ: ವಾರ; ಲಗ್ನ: ಒಳ್ಳೆಯ ಸಮಯ; ಇಂದು: ಚಂದ್ರ; ಕುಲ: ವಂಶ; ವಿಸ್ತಾರಕ: ವ್ಯಾಪಿಸುವ, ಹರಡುವ; ಸುಕುಮಾರ: ಮೊದಲನೆಯ/ಒಳ್ಳೆಯ ಮಗ; ಅವತರಿಸು: ಹುಟ್ಟು; ಧರಣಿ: ಭೂಮಿ;

ಪದವಿಂಗಡಣೆ:
ಧಾರುಣೀಪತಿ +ಕೇಳು +ಕುಂತೀ
ನಾರಿಗ್+ಆದುದು +ಗರ್ಭ+ ಹರುಷದ
ಭಾರದಲಿ +ಸತಿ +ತಗ್ಗಿದಳು +ನವ+ಪೂರ್ಣ+ಮಾಸದಲಿ
ಚಾರುತರ +ನಕ್ಷತ್ರ +ಶುಭ+ದಿನ
ವಾರ +ಲಗ್ನದೊಳ್+ಇಂದು +ಕುಲ +ವಿ
ಸ್ತಾರಕನು +ಸುಕುಮಾರನ್+ಅವತರಿಸಿದನು +ಧರಣಿಯಲಿ

ಅಚ್ಚರಿ:
(೧) ಧಾರುಣಿ, ಧರಣಿ – ಪದ್ಯದ ಮೊದಲ ಮತ್ತು ಕೊನೆಯ ಪದ
(೨) ರೂಪಕದ ಪ್ರಯೋಗ – ಹರುಷದ ಭಾರದಲಿ ಸತಿ ತಗ್ಗಿದಳು

ಪದ್ಯ ೧೨: ಬಲರಾಮನೆಂದು ತೀರ್ಥಯಾತ್ರೆಗೆ ಹೊರಟನು?

ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವನನಕ್ಷತ್ರದಲಿ ಕಂಡನು ಕೃಷ್ಣ ಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ (ಗದಾ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಲರಾಮನು ಪುಷ್ಯನಕ್ಷತ್ರದಲ್ಲಿ ತೀರ್ಥಯಾತ್ರೆಗೆ ಹೊರಟನು. ಅವನು ಕೃಷ್ಣನನ್ನು ಪಾಂಡವರನ್ನು ನೋಡಿದ ದಿನ ಶ್ರವಣ ನಕ್ಷತ್ರವಿತ್ತು. ರಣರಮ್ಗದಲ್ಲಿದ್ದ ಎಲ್ಲರೂ ನೋಟಕರಾದರು. ಭೀಮ ದುರ್ಯೋಧನರು ತೋಳುತಟ್ಟಿ ತಮ್ಮ ಗದೆಗಲನ್ನು ಹಿಡಿದು ರಣರಂಗವನ್ನು ಪ್ರವೇಶಿಸಿದರು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಸಂಭವಿಸು: ಹುಟ್ಟು; ನಿರ್ಗಮನ: ಹೊರಗೆ ಹೊಗು; ಬಳಿಕ: ನಂತರ; ನಕ್ಷತ್ರ: ತಾರೆ; ಕಂಡು: ನೋಡು; ನೋಟಕ: ನೋಡುವವ; ವೃಕೋದರ: ಭೀಮ; ಮಸೆ: ಹರಿತವಾದುದು; ಉತ್ಸವ: ಸಂಭ್ರಮ; ಕಳ: ರಣರಂಗ; ಹಾಯಿಕು: ಹಾಕು; ಹಿಡಿ: ಗ್ರಹಿಸು; ಗದೆ: ಮುದ್ಗರ;

ಪದವಿಂಗಡಣೆ:
ಅವನಿಪತಿ+ ಕೇಳ್ +ಪುಷ್ಯದಲಿ +ಸಂ
ಭವಿಸಿದುದು +ನಿರ್ಗಮನ +ಬಳಿಕಾ
ಶ್ರವಣ+ ನಕ್ಷತ್ರದಲಿ +ಕಂಡನು +ಕೃಷ್ಣ+ ಪಾಂಡವರ
ಅವರು +ನೋಟಕರಾದರ್+ಈ+ ಕೌ
ರವ +ವೃಕೋದರರ್+ಅಂಕ +ಮಸೆದ್
ಉತ್ಸವದಿ +ಕಳನೇರಿದರು +ಹಾಯಿಕಿ +ಹಿಡಿದು +ನಿಜಗದೆಯ

ಅಚ್ಚರಿ:
(೧) ನಕ್ಷತ್ರಗಳ ಹೆಸರು – ಪುಷ್ಯ, ಶ್ರವಣ;

ಪದ್ಯ ೬೭: ಭೂಮಿಯು ಉಳಿದ ಗ್ರಹಗಳಿಂದ ಎಷ್ಟು ದೂರವಿದೆ?

ಲಕ್ಕ ಊರ್ವಿಗೆ ರವಿಯ ರಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಮಿಕ್ಕಿಹವು ನಕ್ಷತ್ರ ಬುಧನಿಹನೈದುಲಕ್ಕದಲಿ
ಲಕ್ಕವೇಳಾ ಶುಕ್ರ ಕುಜನವ
ಲಕ್ಕ ಗುರು ಹನ್ನೊಂದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ (ಅರಣ್ಯ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಭೂಮಿಯಿಂದ ಸೂರ್ಯನಿಗೆ ಲಕ್ಷ ಯೋಜನ, ಚಂದ್ರನಿಗೆ ಎರಡು ಲಕ್ಷ, ಮೂರು ಲಕ್ಷ ನಕ್ಷತ್ರಗಳ್, ಬುಧನಿಗೆ ಐದು ಲಕ್ಷ, ಶುಕ್ರನಿಗೆ ಏಳು ಲಕ್ಷ, ಕುಜನಿಗೆ ಒಂಬಾತ್ತು ಲಕ್ಷ, ಗುರುವಿಗೆ ಹನ್ನೊಂದು ಲಕ್ಷ ಶನಿಗೆ ಹದಿಮೂರುವರೆ ಲಕ್ಷ ಯೋಜನ ದೂರವಿದೆ.

ಅರ್ಥ:
ಲಕ್ಕ: ಲಕ್ಷ; ಊರ್ವಿ: ಭೂಮಿ; ರವಿ: ಸೂರ್ಯ; ಪಥ: ದಾರಿ; ಶಶಿ: ಚಂದ್ರ; ಯೋಜಲ: ಅಳತೆಯ ಪ್ರಮಾಣ; ಲೆಕ್ಕಿಸು: ಎಣಿಕೆಮಾಡು, ಲೆಕ್ಕಹಾಕು; ನಕ್ಷತ್ರ: ತಾರೆ; ನವ: ಒಂಬತ್ತು; ಮಿಕ್ಕ: ಉಳಿದ; ವಸುಧ: ಭೂಮಿ; ಮಿಕ್ಕ: ಉಳಿದ;

ಪದವಿಂಗಡಣೆ:
ಲಕ್ಕ+ ಊರ್ವಿಗೆ +ರವಿಯ +ರಥ +ಶಶಿ
ಲಕ್ಕವ್+ಎರಡು+ ತ್ರಿಲಕ್ಕ+ ಯೋಜನ
ಮಿಕ್ಕಿಹವು +ನಕ್ಷತ್ರ+ ಬುಧನಿಹನ್+ಐದು+ಲಕ್ಕದಲಿ
ಲಕ್ಕವ್+ಏಳ್+ಆ+ ಶುಕ್ರ +ಕುಜ+ನವ
ಲಕ್ಕ +ಗುರು +ಹನ್ನೊಂದು +ಲಕ್ಕವು
ಮಿಕ್ಕ +ವಸುಧಾತಳಕೆ +ಶನಿ +ಹದಿಮೂರುವರೆ+ ಲಕ್ಕ

ಅಚ್ಚರಿ:
(೧) ಭೂಮಿಯಿಂದ ಬೇರೆ ಗ್ರಹಗಳ ದೂರವನ್ನು ಹೇಳುವ ಪದ್ಯ

ಪದ್ಯ ೧೪: ಯಾವ ಲಗ್ನದಲ್ಲಿ ಪಾಂಡವರು ದಿಗ್ವಿಜಯಕ್ಕೆ ಹೊರಟರು?

ಪರಮಲಗ್ನದೊಳಿಂದು ಕೇಂದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶಸ್ಥಿತಿಯ
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ಧಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ (ಸಭಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಲಗ್ನದಲ್ಲಿ ಚಂದ್ರನು ಕೇಂದ್ರಸ್ಥಾನದಲ್ಲಿರಲು, ಶುಕ್ರಗ್ರಹವು ಲಗ್ನದಲ್ಲಿರಲು, ಶುಭಗ್ರಹದೃಷ್ಟಿಯು ಏಕಾದಶ ಸ್ಥಾನದ ಮೇಲಿರಲು, ಶುಭ ನಕ್ಷತ್ರ, ಶುಭಕರಣ, ಶುಭತಿಥಿಯಂದು ಸಿದ್ಧಿಯೋಗದಲ್ಲಿ ಧರ್ಮರಾಜನ ತಮ್ಮಂದಿರು ದಿಗ್ವಿಜಯಕ್ಕೆ ಸಿದ್ದರಾದರು.

ಅರ್ಥ:
ಪರಮ: ಶ್ರೇಷ್ಠ; ಲಗ್ನ: ಸಮಯ; ಇಂದು: ಚಂದ್ರ; ಕೇಂದ್ರ: ಮುಖ್ಯ ಸ್ಥಾನ; ಗುರು: ಆಚಾರ್ಯ; ಭಾರ್ಗವ: ಶುಕ್ರಾಚಾರ್ಯ; ಅಭಿಮತ:ಅಭಿಪ್ರಾಯ; ಅರಸ: ರಾಜ; ಅನುಜ: ತಮ್ಮ; ದಿಗ್ವಿಜಯ: ಎಲ್ಲಾ ದಿಕ್ಕುಗಳಲ್ಲೂ ಜಯ ಸಾಧಿಸುವ ಯಾತ್ರೆ; ಯೋಗ: ಹೊಂದಿಸುವಿಕೆ; ಉತ್ಕರ: ಸಮೂಹ; ಅನುವಾಗು: ಸಿದ್ಧಿಯಾಗು; ಒಗ್ಗು: ಗುಂಪು, ಸಮೂಹ; ಕರಣ: ಉದ್ದೇಶ

ಪದವಿಂಗಡಣೆ:
ಪರಮ+ಲಗ್ನದೊಳ್+ಇಂದು +ಕೇಂದ್ರದೊಳ್
ಇರಲು +ಗುರು +ಭಾರ್ಗವರು +ಲಗ್ನ+ದೊಳ್
ಇರೆ+ ಶುಭಗ್ರಹದೃಷ್ಟಿ +ಸಕಳ್+ಏಕಾದಶ+ಸ್ಥಿತಿಯ
ಕರಣ+ ತಿಥಿ +ನಕ್ಷತ್ರ +ವಾರೋ
ತ್ಕರದಲ್+ಅಭಿಮತ +ಸಿದ್ಧಿಯೋಗದೊಳ್
ಅರಸನ್+ಅನುಜರು +ದಿಗ್ವಿಜಯಕ್+ಅನುವಾದರ್+ಒಗ್ಗಿನಲಿ

ಅಚ್ಚರಿ:
(೧) ೪ ಸಾಲು – ಕರಣ ತಿಥಿ ನಕ್ಷತ್ರ ವಾರ – ದಾಸರ ಪದವನ್ನು ನೆನಪಿಸುವ ಪದ್ಯ – “ಇಂದಿನ ದಿನವೆ ಶುಭದಿನವು”
(೨) ೧, ೩, ೫ ಸಾಲಿನ ಕೊನೆಪದಗಳು “ದೊಳ್” ಪದದಿಂದ ಅಂತ್ಯವಾಗುವುದು