ಪದ್ಯ ೬೮: ಕುರುಸೇನೆಯು ಯಾರನ್ನು ಸಂಹರಿಸಿದರು?

ಅರಸ ಕೇಳೈ ಕೌರವೇಂದ್ರನ
ನರಸುತರ್ಜುನಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಯೇಷ ಕೌರವನೃಪಚತುರ್ಬಲವ (ಗದಾ ಪರ್ವ, ೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದುರ್ಯೋಧನನನ್ನು ಹುಡುಕುತ್ತಾ ಭೀಮ, ಅರ್ಜುನ, ಸಾತ್ಯಕಿ, ಧರ್ಮಜ ಸಹದೇವ ನಕುಲರು ರಣರಂಗದ ಎಲ್ಲೆಡೆಯಲ್ಲೂ ತಿರುಗಾಡಿದರು. ಇತ್ತ ಒಟ್ಟಾದ ಕುರುಸೇನೆಯನ್ನು ಧೃಷ್ಟಧ್ಯುಮ್ನ, ಸೃಂಜಯರು ನಿಶ್ಯೇಷವಾಗಿ ಸಂಹರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅರಸು: ಹುಡುಕು; ಧರಣಿಪತಿ: ರಾಜ; ಕಳ: ರಣರಂಗ; ತಿರುಗು: ಸುತ್ತಾಡು; ಬಳಿಕ: ನಂತರ; ಮೋಹರ: ಯುದ್ಧ; ಒರಸು: ನಾಶಮಾಡು; ನಿಶ್ಯೇಷ: ಕೊನೆಯಿಲ್ಲದ; ನೃಪ: ರಾಜ; ಚತುರ್ಬಲ: ಚದುರಂಗ ಸೈನ್ಯ;

ಪದವಿಂಗಡಣೆ:
ಅರಸ +ಕೇಳೈ +ಕೌರವೇಂದ್ರನನ್
ಅರಸುತ್+ಅರ್ಜುನ+ಭೀಮ +ಸಾತ್ಯಕಿ
ಧರಣಿಪತಿ +ಸಹದೇವ +ನಕುಲರು +ಕೂಡೆ +ಕಳನೊಳಗೆ
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರವ +ಧೃಷ್ಟದ್ಯುಮ್ನ +ಸೃಂಜಯರ್
ಒರಸಿದರು +ನಿಶ್ಯೇಷ +ಕೌರವ+ನೃಪ+ಚತುರ್ಬಲವ

ಅಚ್ಚರಿ:
(೧) ಅರಸ, ಧರಣಿಪತಿ – ಸಮಾನಾರ್ಥಕ ಪದ

ಪದ್ಯ ೩೩: ಯಾವ ಶಕುನಗಳನ್ನು ನೋಡುತ್ತಾ ಅರ್ಜುನನು ನಡೆದನು?

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತವಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜ ನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ (ಅರಣ್ಯ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ನೀರು ಹಕ್ಕಿಯ, ಹಸುಬಗಳ ಎಡದಲ್ಲಿ ಸುಹಕುನದ ಸದ್ದು ಮಾಡಿದವು. ಜಿಂಕೆ, ಭಾರದ್ವಾಜ ಪಕ್ಷಿಗಳು ದಾರಿಕೊಟ್ಟವು. ಮುಂಗುಸಿ, ಓತಿಕೇತಗಳು ದಾರಿಯನ್ನು ತಿದ್ದಿಕೊಟ್ಟವು. ನಾಯಿಯು ಅನುಕೂಲ ಶಕುನವನ್ನು ತೋರಿತು. ಸೂರ್ಯೋದಯ ಸಮಯದಲ್ಲಿ ಶುಭಶಕುನಗಳನ್ನು ನೋಡುತ್ತಾ ಅರ್ಜುನನು ಇಂದ್ರಕೀಲ ಪರ್ವತದತ್ತ ಪ್ರಯಾಣ ಬೆಳಸಿದನು.

ಅರ್ಥ:
ಹರಡೆ: ನೀರುಹಕ್ಕಿಯ ಜಾತಿ, ಪ್ರಸರಿಸು; ವಾಮ: ಎಡಭಾಗ; ಉಲಿ:ಧ್ವನಿ, ಕೂಗು; ಮಧುರ: ಇಂಪು; ಸ್ವರ: ನಾದ; ಅಪಸವ್ಯ: ಬಲಗಡೆ; ಹಸುಬ: ಹಕ್ಕಿಯ ಜಾತಿ; ಸರ: ಉಲಿ, ಧ್ವನಿ; ಸಮಾಹಿತ: ಜೊತೆ; ಸೂರ್ಯ: ಭಾನು; ಉದಯ: ಹುಟ್ಟು; ಸಮಯ: ಕಾಲ; ಹರಿಣ: ಜಿಂಕೆ; ಭಾರದ್ವಾಜ: ಪಕ್ಷಿಯ ಜಾತಿ; ನುಡಿ: ಮಾತು; ಸರಟ: ಓತಿಕೇತ, ಊಸರವಳ್ಳಿ; ನಕುಲ: ಮುಂಗುಲಿ, ಮುಂಗಸಿ; ತಿದ್ದು: ಸರಿಪಡಿಸು; ಕುಕ್ಕುರ: ನಾಯಿ, ಶ್ವಾನ; ತಾಳು: ಹೊಂದಿಕೆಯಾಗು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಕೈಕೊಳುತ: ನಿರ್ವಹಿಸು; ನಡೆ: ಚಲಿಸು;

ಪದವಿಂಗಡಣೆ:
ಹರಡೆ +ವಾಮದೊಳ್+ಉಲಿಯೆ +ಮಧುರ
ಸ್ವರದಲ್+ಅಪಸವ್ಯದಲಿ +ಹಸುಬನ
ಸರ +ಸಮಾಹಿತವಾಗೆ +ಸೂರ್ಯೋದಯದ +ಸಮಯದಲಿ
ಹರಿಣ +ಭಾರದ್ವಾಜ +ನುಡಿಕೆಯ
ಸರಟ+ ನಕುಲನ +ತಿದ್ದುಗಳ+ ಕು
ಕ್ಕುರನ +ತಾಳಿನ+ ಶಕುನವನು +ಕೈಕೊಳುತ +ನಡೆತಂದ

ಅಚ್ಚರಿ:
(೧) ಹರಡೆ, ಹಸುಬ, ಭಾರದ್ವಾಜ – ಪಕ್ಷಿಗಳ ಬಗೆ
(೨) ಉಲಿ, ಸ್ವರ, ಸರ – ಸಾಮ್ಯಾರ್ಥ ಪದಗಳು

ಪದ್ಯ ೨೯: ಕರ್ಣನು ತನ್ನನ್ನು ಯಾರಿಗೆ ಹೋಲಿಸಿದನು?

ನೀವು ನುಡಿದುದು ಹುಸಿಯೆ ಕೂಳಿಯ
ತೀವಿ ತೀವೆವು ಕೊಳಚೆಗಳ ಬಾ
ಣಾವಳಿಯ ತಡಿಕೆಯಲಿ ಹೊಯ್ವೆವು ನಕುಲ ಜಾತಿಯನು
ನಾವು ನಿಮ್ಮಯ ಹೃದಯಸರಸಿಯ
ಜೀವಮತ್ಸ್ಯಕೆ ಗಾಣವಿಕ್ಕುವ
ಧೀವರರು ನೋಡೆನುತ ಪಾರ್ಥನನೆಚ್ಚನಾ ಕರ್ಣ (ಕರ್ಣ ಪರ್ವ, ೨೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಉತ್ತರಿಸುತ್ತಾ ಕರ್ಣನು, ಅರ್ಜುನ ನೀವು ಹೇಳಿದುದೇನೂ ಸುಳ್ಳಲ್ಲ. ಕೂಳಿಗಳನ್ನು ತುಂಬಿಸಿ ಕೊಳಚೆಯನ್ನೇ ಹೊರತೆಗೆಯುತ್ತೇವೆ. ಬಾಣಗಳ ತಡಿಕೆ ಬಲೆಯಲ್ಲಿ ಮೀನನ್ನು ಹಿಡಿದು ಹೊಯ್ಯುತ್ತೇವೆ. ನಿಮ್ಮ ಹೃದಯ ಸರೋವರದಲ್ಲಿರುವ ಜೀವವೆಂಬ ಮೀನಿಗೆ ಗಾಣವಿಡುವ ಬೆಸ್ತರು ನಾವು ತಿಳೀದುಕೋ ಎಂದು ಹೇಳಿ ಕರ್ಣನು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ನುಡಿ: ಮಾತು, ವಾಕ; ಹುಸಿ: ಸುಳ್ಳು; ಕೂಳಿ: ಗುಣಿ, ತಗ್ಗು; ತೀವು: ತುಂಬು; ಕೊಳಚೆ: ಕಸ, ಕೆಟ್ಟದ್ದು; ಬಾಣ: ಅಂಬು, ಶರ; ಆವಳಿ: ಗುಂಪು; ತಡಿಕೆ: ಬಿದಿರಿನ ತಟ್ಟಿ; ಹೊಯ್ವು: ಹೊಡೆ; ನಕುಲ: ಒಂದು ಬಗೆಯ ಮೀನು; ಜಾತಿ: ವಂಶ; ಹೃದಯ: ಎದೆ; ಸರಸಿ: ಸರೋವರ; ಜೀವ: ಪ್ರಾಣ; ಮತ್ಸ್ಯ: ಮೀನು; ಗಾಣ: ಗಾಳ, ಬಲೆಯ ಕೊಕ್ಕು; ಧೀವರ: ಮೀನುಗಾರ, ಬೆಸ್ತ; ನೋಡು: ವೀಕ್ಷಿಸು; ಎಚ್ಚು: ಬಾಣಬಿಡು;

ಪದವಿಂಗಡಣೆ:
ನೀವು +ನುಡಿದುದು +ಹುಸಿಯೆ +ಕೂಳಿಯ
ತೀವಿ +ತೀವೆವು +ಕೊಳಚೆಗಳ+ ಬಾ
ಣಾವಳಿಯ+ ತಡಿಕೆಯಲಿ +ಹೊಯ್ವೆವು +ನಕುಲ +ಜಾತಿಯನು
ನಾವು +ನಿಮ್ಮಯ +ಹೃದಯ+ಸರಸಿಯ
ಜೀವ+ಮತ್ಸ್ಯಕೆ +ಗಾಣವಿಕ್ಕುವ
ಧೀವರರು+ ನೋಡೆನುತ+ ಪಾರ್ಥನನ್+ಎಚ್ಚನಾ +ಕರ್ಣ

ಅಚ್ಚರಿ:
(೧) ನಕುಲ ಪದದ ಬಳಕೆ – ಇಲ್ಲಿ ಮೀನಿನ ಒಂದು ಜಾತಿಯನ್ನು ವರ್ಣಿಸುತ್ತದೆ
(೨) ಕರ್ಣನು ತನ್ನನ್ನು ಹೋಲಿಸುವ ಬಗೆ – ನಾವು ನಿಮ್ಮಯ ಹೃದಯಸರಸಿಯ ಜೀವಮತ್ಸ್ಯಕೆ ಗಾಣವಿಕ್ಕುವ ಧೀವರರು

ಪದ್ಯ ೩೧: ಕರ್ಣನನ್ನು ಮತ್ತೆ ಯಾರು ಮುತ್ತಿದರು?

ಮುರಿದು ಮತ್ತೆ ಮಹಾರಥರು ಸಂ
ವರಿಸಿಕೊಂಡು ಶಿಖಂಡಿ ಸಾತ್ಯಕಿ
ವರನಕುಲ ಸಹದೇವ ಧೃಷ್ಟಧ್ಯುಮ್ನ ಸೃಂಜಯರು
ಸರಳ ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರು
ಬ್ಬರಿಸಿ ಕವಿದರು ಕರ್ಣನಾವೆಡೆ ತೋರು ತೋರೆನುತ (ಕರ್ಣ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನ ಪರಾಕ್ರಮಕ್ಕೆ ಹಿಮ್ಮೆಟ್ಟಿದ್ದ ಮಹಾರಥರಾದ ಶಿಖಂಡಿ, ಸಾತ್ಯಕಿ, ನಕುಲ, ಸಹದೇವ, ಧೃಷ್ಟದ್ಯುಮ್ನ, ಸೃಂಜಯರು ಮತ್ತೆ ಗುಂಪುಗೂಡಿದರು. ಬಾಣಗಳನ್ನು ಬಿಲ್ಲಿನಲ್ಲಿ ಹೂಡಿ, ಬಾಯಲ್ಲಿ ಕರ್ಣನನ್ನು ಜರಿಯುತ್ತಾ, ತಮ್ಮ ಬಿರುದಿನ ಕಹಳೆಯನ್ನು ಸೊಕ್ಕಿನಿಂದ ಊದುತ್ತಾ ಕರ್ಣನೆಲ್ಲಿ ತೋರಿಸಿ ಎಂದು ಅಬ್ಬರಿಸುತ್ತಾ ಮುನ್ನಡೆದರು.

ಅರ್ಥ:
ಮುರಿ: ಸೀಳು; ಮತ್ತೆ: ಪುನಃ; ಮಹಾರಥ: ಶೂರ, ಪರಾಕ್ರಮಿ; ಸಂವರಿಸು: ಗುಂಪುಗೂಡು, ಸಜ್ಜುಮಾಡು; ಸರಳ: ಬಾಣ; ಬಿರುಬು: ಆವೇಶ; ಬೈಗುಳ: ಜರಿಯಿವಿಕೆ, ತೆಗಳುವಿಕೆ; ಬಿರುದು: ಸ್ಪರ್ಧೆಗೆ ನೀಡುವ ಆಹ್ವಾನ; ಕಹಳೆ:ಉದ್ದವಾಗಿ ಬಾಗಿರುವ ತುತ್ತೂರಿ; ಬಿಂಕ:ಸೊಕ್ಕು; ಉಬ್ಬರಿಸು:ಅತಿಶಯ, ಉದ್ವೇಗ; ಕವಿ: ಆವರಿಸು; ತೋರು: ಗೋಚರ;

ಪದವಿಂಗಡಣೆ:
ಮುರಿದು +ಮತ್ತೆ +ಮಹಾರಥರು +ಸಂ
ವರಿಸಿಕೊಂಡು +ಶಿಖಂಡಿ +ಸಾತ್ಯಕಿ
ವರ+ನಕುಲ +ಸಹದೇವ+ ಧೃಷ್ಟಧ್ಯುಮ್ನ +ಸೃಂಜಯರು
ಸರಳ+ ಬಿರುಬಿನ +ಬಾಯ +ಬೈಗುಳ
ಬಿರುದುಗಹಳೆಯ +ಬಿಂಕದವರ್
ಉಬ್ಬರಿಸಿ +ಕವಿದರು +ಕರ್ಣನ್+ಆವೆಡೆ+ ತೋರು +ತೋರೆನುತ

ಅಚ್ಚರಿ:
(೧) ಸಾಲು ಪದಗಳ ಬಳಕೆ: ಮುರಿದು ಮತ್ತೆ ಮಹಾರಥರು; ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರುಬ್ಬರಿಸಿ

ಪದ್ಯ ೫: ಸಾತ್ಯಕಿಯ ಸಹಾಯಕ್ಕೆ ಯಾರು ಬಂದರು?

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ (ಕರ್ಣ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಎರಡು ರಥಗಳು ಒಂದಕ್ಕೊಂದು ಬಡಿದು ಯುದ್ಧವು ತೀಕ್ಷ್ಣವಾಯಿತು. ಕೌರವನ ಸೇನೆಯ ಹತ್ತು ಸಾವಿರ ರಥಿಕರು ದುಶ್ಯಾಸನನಿಗೆ ಬೆಂಬಲವಾಗಿ ಬರಲು ಸಿದ್ಧರಾದರು. ಸಾತ್ಯಕಿಯನ್ನು ಒಳಕ್ಕೆ ಕರೆದುಕೊಂಡು, ಸುತ್ತುವರಿದು ಸಿಕ್ಕಿಸಿಕೊಳ್ಳುವ ಸಿದ್ಧತೆಯನ್ನು ಕಂಡು ನಕುಲ ಸಹದೇವರು ದುಶ್ಯಾಸನನ್ನು ಕೆಣಕಿದರು.

ಅರ್ಥ:
ಹಳಚು: ತಾಗು, ಬಡಿ; ರಥ: ಬಂಡಿ; ಬಲ: ನೆರವು, ಸಹಾಯ; ಬಲುಗೈ: ಜೊತೆಯಾಗಿ ನಿಲ್ಲು, ಕೈಜೋಡಿಸು; ಬಲಿದುದು: ಹೆಚ್ಚು; ಬವರ: ಕಾಳಗ, ಯುದ್ಧ; ಬಲ: ಸೈನ್ಯ; ಭಟರು: ಸೈನಿಕರು; ರಥಿಕ: ರಥದ ಮೇಲೆ ಯುದ್ಧ ಮಾಡುವವ; ಅನುವು: ಅನುಕೂಲ, ಆಸ್ಪದ; ಒಳಹೊಗಿಸು: ಒಳಕ್ಕೆ ಕರೆದೊಯ್ದು; ಸಿಕ್ಕಿಸು: ಬಂಧನಕ್ಕೊಳಗಾಗು, ಸೆರೆಯಾಗು; ಗೆಲುವು: ವಿಜಯ; ತವಕ: ಬಯಕೆ, ಆತುರ; ಕಂಡು: ನೋಡಿ; ಕೆಣಕು:ರೇಗಿಸು, ಪ್ರಚೋದಿಸು; ಅಳವಿ: ಶಕ್ತಿ, ಯುದ್ಧ; ಅನುಜ: ತಮ್ಮ;

ಪದವಿಂಗಡಣೆ:
ಹಳಚಿದವು +ರಥವೆರಡು+ ಬಲುಗೈ
ಗಳಿಗೆ +ಬಲಿದುದು +ಬವರ +ಕೌರವ
ಬಲದ+ ಭಟರಲಿ+ ಹತ್ತು +ಸಾವಿರ +ರಥಿಕರ್+ಅನುವಾಯ್ತು
ಒಳಹೊಗಿಸಿ +ಸಾತ್ಯಕಿಯ+ ಸಿಕ್ಕಿಸಿ
ಗೆಲುವ+ ತವಕವ+ ಕಂಡು +ಕೆಣಕಿದರ್
ಅಳವಿಯಲಿ +ಸಹದೇವ +ನಕುಳರು +ಕೌರವ್+ಅನುಜನ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಲುಗೈಗಳಿಗೆ ಬಲಿದುದು ಬವರ
(೨) ಸಾತ್ಯಕಿ, ನಕುಲ, ಸಹದೇವ, ದುಶ್ಯಾಸನ – ಈ ಪದ್ಯದಲ್ಲಿ ಬರುವ ಹೆಸರುಗಳು

ಪದ್ಯ ೬: ಕೃಷ್ಣನು ಕರ್ಣನಿಗೆ ಯಾವ ರಹಸ್ಯವನ್ನು ಹೇಳಿದನು?

ಲಲನೆ ತಾಂ ಪಡೆದೈದು ಮಂತ್ರಂ
ಗಳೊಳು ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರ ದೇವ ಮೂರನೆಯಾತ ಕಲಿ ಭೀಮ
ಫಲುಗುಣನು ನಾಲನೆಯಲೈದನೆ
ಯೊಳು ನಕುಲ ಸಹದೇವರಾದರು
ಬಳಿಕ ಮಾದ್ರಿಯೊಳೊಂದು ಮಂತ್ರದೊಳಿಬ್ಬರುದಿಸಿದರು (ಉದ್ಯೋಗ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಹಿಂದೆ ಕುಂತೀದೇವಿಯು ದುರ್ವಾಸರಿಂದ ಐದು ಮಂತ್ರಗಳನ್ನು ಪಡೆದಳು, ಅದರಲ್ಲಿ ಮೊದಲನೆಯ ಮಂತ್ರದಿಂದ ಸೂರ್ಯದೇವನಿಂದ ನಿನ್ನನ್ನು ಪಡೆದಳು, ನಿನ್ನ ಬಳಿಕ ಯುಧಿಷ್ಠಿರ ನಂತರ ಭೀಮ, ನಾಲ್ಕನೆಯವನಾಗಿ ಅರ್ಜುನನು ಹಾಗು ಮಾದ್ರೀದೇವಿಯಲ್ಲಿ ಐದನೇ ಮಂತ್ರದಿಂದ ನಕುಲ ಸಹದೇವರು ಜನಿಸಿದರು ಎಂದು ಆತನ ಹುಟ್ಟಿನ ರಹಸ್ಯವನ್ನು ಬಿಚ್ಚಿಟ್ಟನು.

ಅರ್ಥ:
ಲಲನೆ: ಹೆಂಗಸು; ಪಡೆದು: ದೊರಕು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಮೊದಲು: ಆದಿ; ಬಳಿ: ನಂತರ; ಕಲಿ:ಶೂರ; ಉದಿಸು: ಹುಟ್ಟು;

ಪದವಿಂಗಡಣೆ:
ಲಲನೆ +ತಾಂ +ಪಡೆದ್+ಐದು +ಮಂತ್ರಂ
ಗಳೊಳು+ ಮೊದಲಿಗ+ ನೀನು +ನಿನ್ನಯ
ಬಳಿ +ಯುಧಿಷ್ಠಿರ +ದೇವ +ಮೂರನೆಯಾತ +ಕಲಿ +
ಫಲುಗುಣನು+ ನಾಲನೆಯಲ್+ಐದನೆ
ಯೊಳು+ ನಕುಲ +ಸಹದೇವರಾದರು
ಬಳಿಕ +ಮಾದ್ರಿಯೊಳೊಂದು+ ಮಂತ್ರದೊಳ್+ಇಬ್ಬರ್+ಉದಿಸಿದರು

ಅಚ್ಚರಿ:
(೧) ಪಾಂಡವರ ಜನನದ ವಿವರವನ್ನು ತಿಳಿಸುವ ಪದ್ಯ
(೨) ಕುಂತಿಯನ್ನು ಲಲನೆ ಎಂದು ಕರೆದಿರುವುದು

ಪದ್ಯ ೧೦: ಯಾವುದನ್ನು ದುರ್ಯೋಧನನು ನೆನಪಿನಲ್ಲಿಟ್ಟುಕೊಳ್ಳಲೆಂದು ಅರ್ಜುನನು ಹೇಳಿದ?

ಧೀರ ಭೀಮನ ಗದೆಯ ಹೊಯ್ಲಿನ
ಭಾರಣೆಯ ನಮ್ಮತುಳ ಚಾಪದ
ಸಾರ ಶಸ್ತ್ರಾವಳಿಯ ಮಳೆಗಾಲದ ಮಹಾದ್ಭುತವ
ವೀರ ನಕುಲನ ಸಾತ್ಯಕಿಯ ಬಲು
ಕೂರಸಿಯ ಸಹದೇವ ಮತ್ಸ್ಯರು
ದಾರತೆಯ ನಿಮ್ಮರಸ ನೆನೆದಿಹುದೆಂದನಾ ಪಾರ್ಥ (ಉದ್ಯೋಗ ಪರ್ವ, ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧೀರನಾದ ಭೀಮನ ಗದೆಯ ಪೆಟ್ಟು, ನಮ್ಮ ಗಾಂಡಿವದ ಶಸ್ತ್ರಗಳ ಮೆಳೆಗಾಲದ ಅದ್ಭುತ ವರ್ಷ, ವೀರರಾದ ನಕುಲ ಸಾತ್ಯಕಿಗಳ ಕತ್ತಿಯ ಚಮತ್ಕಾರ, ನಿಮ್ಮನ್ನು ಇನ್ನೂ ಬದುಕಲು ಉಳಿಸಿರುವ ಸಹದೇವ ವಿರಾಟರ ಔದಾರ್ಯಗಳನ್ನು ನಿಮ್ಮ ದೊರೆ ನೆನೆಪಿನಲ್ಲಿಟ್ಟುಕೊಳ್ಳಲೆಂದು ತಿಳಿಸು ಎಂದು ಸಂಜಯನಿಗೆ ಅರ್ಜುನನು ಹೇಳಿದ.

ಅರ್ಥ:
ಧೀರ: ಧೈರ್ಯಶಾಲಿ; ಗದೆ: ಮುದ್ಗರ; ಹೊಯ್ಲು: ಏಟು, ಹೊಡೆತ; ಭಾರಣೆ: ಮಹಿಮೆ, ಗೌರವ; ಅತುಳ: ಬಹಳ; ಚಾಪ: ಬಿಲ್ಲು; ಸಾರ:ಸತ್ವ, ತಿರುಳು; ಶಸ್ತ್ರ: ಆಯುಧ; ಆವಳಿ: ಗುಂಪು; ಮಳೆಗಾಲ: ವರ್ಷಋತು; ಮಹಾ: ವಿಶೇಷ; ಅದ್ಭುತ: ಆಶ್ಚರ್ಯ; ವೀರ: ಧೀರ; ಕೂರಸಿ: ಕತ್ತಿ, ಖಡ್ಗ; ಉದಾರತೆ: ಔದಾರ್ಯ; ಅರಸ: ರಾಜ; ನೆನೆ: ಜ್ಞಾಪಿಸು;

ಪದವಿಂಗಡಣೆ:
ಧೀರ +ಭೀಮನ +ಗದೆಯ +ಹೊಯ್ಲಿನ
ಭಾರಣೆಯ +ನಮ್ಮ್+ಅತುಳ +ಚಾಪದ
ಸಾರ +ಶಸ್ತ್ರಾವಳಿಯ +ಮಳೆಗಾಲದ +ಮಹಾದ್ಭುತವ
ವೀರ+ ನಕುಲನ +ಸಾತ್ಯಕಿಯ +ಬಲು
ಕೂರಸಿಯ +ಸಹದೇವ +ಮತ್ಸ್ಯರ್
ಉದಾರತೆಯ +ನಿಮ್ಮರಸ +ನೆನೆದಿಹುದ್+ಎಂದನಾ +ಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಮ್ಮತುಳ ಚಾಪದಸಾರ ಶಸ್ತ್ರಾವಳಿಯ ಮಳೆಗಾಲದ ಮಹಾದ್ಭುತವ
(೨) ವೀರ, ಧೀರ; ಅತುಳ, ಬಲು – ಸಮನಾರ್ಥಕ ಪದ
(೩) ಗದೆ, ಚಾಪ, ಕೂರಸಿ – ಆಯುಧಗಳ ಹೆಸರು

ಪದ್ಯ ೨೧: ದುರ್ಯೋಧನನು ಯಾವ ಕಾರ್ಯವನ್ನು ವಹಿಸಿಕೊಂಡನು?

ಸಕಲ ಮಣಿ ಕಾಂಚನ ದುಕೂಲ
ಪ್ರಕರವೀ ದುರಿಯೋಧನನ ವಶ
ನಕುಲನವರವರುಚಿತವೃತ್ತಿಯ ಮಧುರ ವಚನದಲಿ
ಪ್ರಕಟಿಸುವನವನಿವರ ಸೇನಾ
ನಿಕರದಾರೈಕೆಗಳು ಪಾಂಚಾ
ಲಕನಿಗಾದುದು ರಂಜಿಸಿತು ಪರಿಪಾಟಿಯೊಡ್ಡವಣೆ (ಸಭಾ ಪರ್ವ, ೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ರತ್ನ, ಬಂಗಾರ, ವಸ್ತ್ರಗಳ ಈ ಎಲ್ಲಾ ವಸ್ತುಗಳು ದುರ್ಯೋಧನನ ಸುಪರ್ದಿಗೆ ಬಂದವು. ಬಂದವರನ್ನು ನಕುಲನು ಮಧುರವಚನಗಳಿಂದ ಉಚಿತವಾಗಿ ಮಾತನಾಡಿಸುತ್ತಿದ್ದನು. ರಾಜರ ಸೇನೆಗಳ ಆರೈಕೆ ದ್ರುಪನ ಹೆಗಲಮೇಲೆ ಬಂತು.

ಅರ್ಥ:
ಸಕಲ: ಎಲ್ಲಾ; ಮಣಿ: ರತ್ನ; ಕಾಂಚನ: ಬಂಗಾರ; ದುಕೂಲ: ವಸ್ತ್ರ; ಪ್ರಕರ:ಗುಂಪು; ವಶ: ಹಿಡಿತ; ಉಚಿತ: ಸರಿಯಾದ; ವೃತ್ತಿ: ಕೆಲಸ; ಮಧುರ: ಹಿತ; ವಚನ: ಮಾತು; ಪ್ರಕಟ: ತೋರ್ಪಡಿಸು; ಅವನಿವರ: ರಾಜ; ಅವನಿ: ಭೂಮಿ; ವರ: ಶ್ರೇಷ್ಠ; ಸೇನಾ: ಸೈನ್ಯ; ನಿಕರ: ಗುಂಪು; ಆರೈಕೆ: ನೋಡಿಕೊಳ್ಳುವಿಕೆ, ಪೋಷಣೆ; ಪಾಂಚಾಲ: ದ್ರುಪದ; ರಂಜಿಸು: ಶೋಭಿಸು; ಪರಿಪಾಟಿ:ಸರಿಸಾಟಿ, ಸಮಾನತೆ;

ಪದವಿಂಗಡಣೆ:
ಸಕಲ +ಮಣಿ +ಕಾಂಚನ +ದುಕೂಲ
ಪ್ರಕರವೀ +ದುರಿಯೋಧನನ+ ವಶ
ನಕುಲನ್+ಅವರ್+ಅವರ್+ಉಚಿತವೃತ್ತಿಯ+ ಮಧುರ +ವಚನದಲಿ
ಪ್ರಕಟಿಸುವನ್+ಅವನಿವರ+ ಸೇನಾ
ನಿಕರದ್+ಆರೈಕೆಗಳು +ಪಾಂಚಾ
ಲಕನಿಗ್+ಆದುದು +ರಂಜಿಸಿತು+ ಪರಿಪಾಟಿ+ಯೊಡ್ಡವಣೆ

ಅಚ್ಚರಿ:
(೧) ಪ್ರಕರ, ನಿಕರ – ಪ್ರಾಸ ಹಾಗು ಸಮನಾರ್ಥಕ ಪದ, ೨, ೫ ಸಾಲಿನ ಮೊದಲ ಪದ