ಪದ್ಯ ೧೯: ನಾರಾಯಣಾಸ್ತ್ರದ ಪ್ರಭಾವ ಹೇಗಿತ್ತು?

ಮೇಲು ಜಗವೇಳೋಡಿದವು ಧ್ರುವ
ನಾಲಯಕೆ ನೆಲೆದಪ್ಪಿದುದು ಗ್ರಹ
ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು
ಧಾಳಿಡುವ ಸೆಗಳಿಯಲಿ ತಳ ಪಾ
ತಾಳಕದ್ದುದು ಕಮಲಜಾಂಡದ
ಮೇಲಣಾವರಣಾಂಬು ಕುದಿದುದು ಹೇಳಲೇನೆಂದ (ದ್ರೋಣ ಪರ್ವ, ೧೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಪ್ರಭಾವದಿಂದ ಮೇಲಿನ ಏಳುಲೋಕಗಳು ಧ್ರುವ ನಕ್ಷತ್ರಕ್ಕೆ ಹೋದವು. ಗ್ರಹಗಳ ನಕ್ಷತ್ರಗಳ ನೆಲೆಯುತಪ್ಪಿ ಜ್ಯೋತಿಷ್ಯರ ಲೆಕ್ಕಾಚಾರ ಸುಳ್ಳಾಯಿತು. ಝಳದ ದಾಳಿಗೆ ಕೆಳಲೋಕಗಳು ಪಾತಾಳಕ್ಕೆ ಕುಸಿದವು. ಬ್ರಹ್ಮಾಂಡದ ಮೇಲಿನ ಆವರಣದ ನೀರು ಕುದಿಯಿತು.

ಅರ್ಥ:
ಜಗ: ಪ್ರಪಂಚ; ಓಡು: ಧಾವಿಸು; ಆಲಯ: ಮನೆ; ನೆಲೆ: ಭೂಮಿ; ಅಪ್ಪು: ಆಲಂಗಿಸು; ತಾರ: ನಕ್ಷತ್ರ; ಜೋಯಿಸ: ಜೋತಿಷಿ; ಹುಸಿ: ಸುಳ್ಳು; ಧಾಳಿ: ಆಕ್ರಮಣ; ಸೆಗಳಿಕೆ: ಕಾವು; ತಳ: ನೆಲ, ಭೂಮಿ; ಪಾತಾಳ: ಅಧೋಲೋಕ; ಅದ್ದು: ತೋಯು; ಕಮಲಜಾಂಡ: ಬ್ರಹ್ಮಾಂಡ; ಆವರಣ: ಮುಸುಕು, ಹೊದಿಕೆ; ಅಂಬು: ನೀರು; ಕುದಿ: ಶಾಖದಿಂದ ಉಕ್ಕು;

ಪದವಿಂಗಡಣೆ:
ಮೇಲು +ಜಗವೇಳ್+ಓಡಿದವು +ಧ್ರುವನ
ಆಲಯಕೆ +ನೆಲೆ+ತಪ್ಪಿದುದು +ಗ್ರಹ
ಮಾಲೆ +ತಾರಾರಾಸಿ +ಜೋಯಿಸರ್+ಓದು +ಹುಸಿಯಾಯ್ತು
ಧಾಳಿಡುವ +ಸೆಗಳಿಯಲಿ +ತಳ +ಪಾ
ತಾಳಕ್+ಅದ್ದುದು +ಕಮಲಜಾಂಡದ
ಮೇಲಣ+ಆವರಣ+ಅಂಬು +ಕುದಿದುದು +ಹೇಳಲೇನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಗ್ರಹಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು

ಪದ್ಯ ೩೩: ಹಿಂದಿನಿಂದ ಬಂದ ಸತ್ಯವಾವುದು?

ನಿನಗೆ ಬಂದಾಪತ್ತಿನಂತಿರ
ಲನಿತು ಬಂದುದು ಕಂಪನೆಂಬಾ
ತನನು ಸಂತೈಸಲ್ಕೆ ನಾರದನವನಿಗೈತಂದು
ಜನಪತಿಯ ಹಿಡಿದೆತ್ತಿದನು ಕಾ
ಲನನು ಮೀರುವವರಾರು ಪೌರಾ
ತನ ಕೃತ ಧ್ರುವಮೃತ್ಯುವನು ಗೆಲುವಾತನಿಲ್ಲೆಂದ (ದ್ರೋಣ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಿನಗೆ ಬಂದಂತೆ ಕಂಪನನಿಗೂ ಆಪತ್ತು ಬಂದಿರಲು, ನಾರದರು ಅವನನ್ನು ಸಂತೈಸಲು ಭೂಮಿಗಿಳಿದರು. ಕಂಪನನ ಬಳಿಗೆ ತೆರಳಿ, ಎಲೇ ರಾಜನೇ ಕಾಲನನ್ನು ಮೀರುವವರಾರು? ಹಿಂದಿನಿಂದಲೇ ಸಿದ್ಧವಾಗಿ ಬಂದಿರುವ ಕಾಲ ಮೃತ್ಯುವನ್ನು ಗೆಲ್ಲುವವರಾರೂ ಇಲ್ಲ ಎಂದು ತಿಳಿಸಿದರು.

ಅರ್ಥ:
ಆಪತ್ತು: ತೊಂದರೆ; ಅನಿತು: ಅಷ್ಟು; ಬಂದು: ಆಗಮಿಸು; ಸಂತೈಸು: ಸಮಾಧಾನ ಪಡಿಸು; ಅವನಿ: ಭೂಮಿ; ಐತಂದು: ಬಂದು ಸೇರು; ಜನಪತಿ: ರಾಜ; ಹಿಡಿದು: ಗ್ರಹಿಸು; ಎತ್ತು: ಮೇಲೇಳಿಸು; ಕಾಲ: ಸಮಯ; ಮೀರು: ದಾಟು; ಪೌರಾತನ: ಪುರಾಣ, ಹಿಂದಿನಿಂದ; ಕೃತ: ಕಾರ್ಯ; ಧ್ರುವ: ಶಾಶ್ವತವಾದ; ಮೃತ್ಯು: ಮರಣ; ಗೆಲುವು: ಜಯಿಸು;

ಪದವಿಂಗಡಣೆ:
ನಿನಗೆ ಬಂದ್+ಆಪತ್ತಿನಂತಿರಲ್
ಅನಿತು +ಬಂದುದು +ಕಂಪನೆಂಬ್
ಆತನನು +ಸಂತೈಸಲ್ಕೆ +ನಾರದನ್+ಅವನಿಗ್+ಐತಂದು
ಜನಪತಿಯ +ಹಿಡಿದ್+ಎತ್ತಿದನು +ಕಾ
ಲನನು +ಮೀರುವವರಾರು+ ಪೌರಾ
ತನ +ಕೃತ +ಧ್ರುವ+ಮೃತ್ಯುವನು +ಗೆಲುವಾತನಿಲ್ಲೆಂದ

ಅಚ್ಚರಿ:
(೧) ಚಿರಕಾಲ ಸತ್ಯದ ನುಡಿ – ಪೌರಾತನ ಕೃತ ಧ್ರುವಮೃತ್ಯುವನು ಗೆಲುವಾತನಿಲ್ಲೆಂದ

ಪದ್ಯ ೬೮: ಭೂಮಿಯಿಂದ ಸಪ್ತಋಷಿಮಂಡಲದ ದೂರವೆಷ್ಟು?

ವಿದಿತವಿಂತಿದು ಸಪ್ತಋಷಿಗಳ
ಸದನವದು ಹದಿನಾಲ್ಕು ಲಕ್ಷವು
ಮುದದಿ ನೆಲಸಿಹ ಧ್ರುವನುತಾ ಹದಿನೈದು ಲಕ್ಷದಲಿ
ಅದರ ಮೇಲಿಹ ವಿಷ್ಣು ಪದದಲಿ
ಸದಮಳಾತ್ಮಕ ಶಿಂಶುಮಾರನು
ಪದುಳದಲಿ ಸಕಲಕ್ಕೆ ಸಲೆಯಾಧಾರವಾಗಿಹನು (ಅರಣ್ಯ ಪರ್ವ, ೮ ಸಂಧಿ, ೬೮ ಪದ್ಯ)

ತಾತ್ಪರ್ಯ:
ಭೂಮಿಯಿಂದ ಸಪ್ತರ್ಷಿ ಮಂಡಲಕ್ಕೆ ಹದಿನಾಲ್ಕು ಲಕ್ಷ ಯೋಜನ, ಧೃವನಿಗೆ ಹದಿನೈದು ಲಕ್ಷ, ಅದರ ಮೇಲೆ ಆಕಾಶದಲ್ಲಿ ನಿರ್ಮಲನಾದ ಶಿಂಶುಮಾರನು ಎಲ್ಲಕ್ಕೂ ಆಧಾರವಾಗಿದ್ದಾನೆ.

ಅರ್ಥ:
ವಿದಿತ: ಪ್ರಸಿದ್ಧವಾದುದು, ಎಲ್ಲರಿಗೂ ತಿಳಿದುದು; ಸಪ್ತಋಷಿ: ಅಗಸ್ತ್ಯ, ಅತ್ರಿ, ಭಾರಧ್ವಾಜ, ಗೌತಮ, ಜಮದಗ್ನಿ, ವಶಿಷ್ಠ, ವಿಶ್ವಾಮಿತ್ರ ಗಳೆಂಬ ಹೆಸರುಳ್ಳ ನಕ್ಷತ್ರದ ಗುಂಪು; ಮುದ: ಸಂತಸ; ಸದಮಳ: ನಿರ್ಮಲ; ಪದುಳ: ಒಳಿತು, ಸುಖ; ಸಕಲ: ಎಲ್ಲ; ಸಲೆ: ಒಂದೇ ಸಮನೆ, ವಿಸ್ತೀರ್ಣ; ಆಧಾರ: ಆಶ್ರಯ, ಅವಲಂಬನೆ;

ಪದವಿಂಗಡಣೆ:
ವಿದಿತವ್+ಇಂತಿದು +ಸಪ್ತ+ಋಷಿಗಳ
ಸದನವದು +ಹದಿನಾಲ್ಕು +ಲಕ್ಷವು
ಮುದದಿ +ನೆಲಸಿಹ+ ಧ್ರುವನು+ತಾ+ ಹದಿನೈದು +ಲಕ್ಷದಲಿ
ಅದರ +ಮೇಲಿಹ +ವಿಷ್ಣು +ಪದದಲಿ
ಸದಮಳಾತ್ಮಕ +ಶಿಂಶುಮಾರನು
ಪದುಳದಲಿ+ ಸಕಲಕ್ಕೆ +ಸಲೆ+ಆಧಾರವಾಗಿಹನು

ಅಚ್ಚರಿ:
(೧) ಸಪ್ತಋಷಿಮಂಡಲ, ಧ್ರುವ ನಕ್ಷತ್ರಗಳ ಬಗ್ಗೆ ತಿಳಿಸುವ ಪದ್ಯ

ಪದ್ಯ ೩೧: ನಕುಲನ ಮನಸ್ಸಿನ ನುಡಿ ಯಾವುದು?

ಆ ವಿಮಲಫಲ ನೆಗೆಯಲಾ ಸಹ
ದೇವನಗ್ರಜ ನುಡಿದ ತಪ್ಪದೆ
ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು
ಭಾವಿಸುವೊಡಧ್ರುವವು ತಾನೀ
ಜೀವವಂಬುಜಮಿತ್ರ ಶಶಿ ತಾ
ರಾವಳಿಗಳುಳ್ಳನ್ನಬರವಭಿಮಾನವಿರುತಿಹುದು (ಅರಣ್ಯ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಆ ಹಣ್ಣು ಇನ್ನೊಂದು ಮೊಳ ಮೇಲಕ್ಕೆ ಹೋಯಿತು. ನಂತರ ನಕುಲನು ಎದ್ದು ಕೃಷ್ಣನಿಗೆ ಹೇಳುತ್ತಾ, ಪ್ರಾಣವನ್ನು ತ್ಯಜಿಸಿಯಾದರೂ ಆತ್ಮ ಗೌರವವನ್ನು ರಕ್ಷಿಸಿಕೊಳ್ಳಬೇಕು, ಪ್ರಾಣವು ಅಶಾಶ್ವತ, ಮಾನವು ಸೂರ್ಯ ಚಂದ್ರರಿರುವವರೆಗೂ ಉಳಿಯುತ್ತದೆ ಎಂದನು.

ಅರ್ಥ:
ವಿಮಲ: ಶುದ್ಧ; ಫಲ: ಹಣ್ಣು; ನೆಗೆ: ಹಾರು; ಅಗ್ರಜ: ಹಿರಿಯ; ನುಡಿ: ಮಾತಾಡು; ತಪ್ಪದೆ:
ಖಂಡಿತ ಇಲ್ಲ; ಜೀವ: ಪ್ರಾಣ; ಧರೆ: ಭೂಮಿ; ಅಭಿಮಾನ: ಹೆಮ್ಮೆ; ರಕ್ಷಿಸು: ಕಾಪಾಡು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಂಬುಜ: ತಾವರೆ; ಮಿತ್ರ: ಸ್ನೇಹಿತ; ಅಂಬುಜಮಿತ್ರ: ಸೂರ್ಯ; ಶಶಿ: ಚಂದ್ರ; ತಾರಾವಳಿ: ನಕ್ಷತ್ರ; ಆವಳಿ: ಗುಂಪು;

ಪದವಿಂಗಡಣೆ:
ಆ +ವಿಮಲಫಲ+ ನೆಗೆಯಲ್+ಆ+ ಸಹ
ದೇವನ್+ಅಗ್ರಜ+ ನುಡಿದ +ತಪ್ಪದೆ
ಜೀವವಿತ್+ಈ+ ಧರೆಯಲ್+ಅಭಿಮಾನವನು +ರಕ್ಷಿಪುದು
ಭಾವಿಸುವೊಡಧ್ರುವವು +ತಾನೀ
ಜೀವವ್+ಅಂಬುಜಮಿತ್ರ +ಶಶಿ +ತಾ
ರಾವಳಿಗಳುಳ್ಳನ್ನಬರವ್+ಅಭಿಮಾನವ್+ಇರುತಿಹುದು

ಅಚ್ಚರಿ:
(೧) ನಕುಲನನ್ನು ಸಹದೇವನಗ್ರಜ; ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ನಕುಲನ ನುಡಿ – ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು

ಪದ್ಯ ೮: ವಂದಿ ಮಾಗಧರು ಹೇಗೆ ಹೊಗಳಿದರು?

ಒಸಗೆಯಾದುದು ನೆಲನ ದಿಕ್ಕಿನ
ಬೆಸುಗೆ ಬಿಡೆ ನಿಸ್ಸಾಳತತಿ ಗ
ರ್ಜಿಸಿದವುಬ್ಬಿದ ಬೊಬ್ಬೆ ಬಿಡಿಸಿತು ಧ್ರುವನ ಮಂಡಲವ
ಅಸಮಭುಜಬಲ ಪೂತುರೇ ಸಾ
ಹಸಿಕ ಮಝರೇ ಭಾಪು ಧಣುಧಣು
ವಿಷಮರಣನರಸಿಂಹ ಜಾಗೆಂದುದು ಭಟಸ್ತೋಮ (ಕರ್ಣ ಪರ್ವ, ೨೪ ಸಂಧಿ, ೮ ಪದ್ಯ)

ತಾತ್ಪರ್ಯ:
ಆಗ ಕೌರವ ಸೇನೆಗೆ ಸಂತೋಷವುಕ್ಕಿತು. ನೆಲಕ್ಕೂ ದಿಕ್ಕಿಗೂ ಇರುವ ಬೆಸುಗೆ ಬಿಡುವಂತೆ ರಣಭೇರಿಗಳು ಬೊಬ್ಬಿಯಿಟ್ಟವು. ಅಸಮ ಭುಜಬಲ ಪೂತುರೇ ಸಾಹಸಿಕ, ಭಲೇ, ಯುದ್ಧದಲ್ಲಿ ಶತ್ರುಗಳನ್ನ್ ತಗ್ಗಿಸಿದ ನರಸಿಂಹನೇ ಭಲೇ ಎಂದು ವಂದಿಮಾಗದಿರು ಕರ್ಣನನ್ನು ಹೊಗಳಿದರು.

ಅರ್ಥ:
ಒಸಗೆ: ಕಾಣಿಕೆ, ಉಡುಗೊರೆ; ನೆಲ: ಭೂಮಿ, ಲೋಕದ ಜನ; ದಿಕ್ಕು: ದಿಶೆ; ಬೆಸುಗೆ: ಒಂದಾಗುವುದು; ಬಿಡೆ: ತೊರೆ, ತ್ಯಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಸಮೂಹ, ಗುಂಪು; ಗರ್ಜಿಸು: ಆರ್ಭಟಿಸು; ಉಬ್ಬು: ಹಿಗ್ಗು, ಗರ್ವಿಸು; ಬಿಡಿಸು: ತೊರೆ; ಧ್ರುವ: ಸ್ಥಿರವಾದುದು; ಮಂಡಲ: ನಾಡಿನ ಒಂದು ಭಾಗ; ಅಸಮ: ಅಸದೃಶವಾದ; ಭುಜಬಲ: ಪರಾಕ್ರಮಿ, ಶೂರ; ಪೂತು: ಭಲೇ, ಭೇಷ್; ಸಾಹಸ: ಪರಾಕ್ರಮ, ಶೌರ್ಯ; ಮಝ, ಭಾಪು, ಧಣುಧಣು, ಜಾಗು:ಕೊಂಡಾಟದ ಒಂದು ಮಾತು; ವಿಷಮ: ಸಮವಾಗಿಲ್ಲದಿರುವುದು; ರಣ: ಯುದ್ಧ; ಭಟ: ಸೈನ್ಯ; ಸ್ತೋಮ: ಗುಂಪು;

ಪದವಿಂಗಡಣೆ:
ಒಸಗೆಯಾದುದು +ನೆಲನ +ದಿಕ್ಕಿನ
ಬೆಸುಗೆ +ಬಿಡೆ +ನಿಸ್ಸಾಳ+ ತತಿ+ ಗ
ರ್ಜಿಸಿದವ್+ಉಬ್ಬಿದ +ಬೊಬ್ಬೆ +ಬಿಡಿಸಿತು +ಧ್ರುವನ +ಮಂಡಲವ
ಅಸಮ+ಭುಜಬಲ +ಪೂತುರೇ +ಸಾ
ಹಸಿಕ+ ಮಝರೇ +ಭಾಪು +ಧಣುಧಣು
ವಿಷಮ+ರಣ+ನರಸಿಂಹ +ಜಾಗೆಂದುದು +ಭಟಸ್ತೋಮ

ಅಚ್ಚರಿ:
(೧) ಕರ್ಣನನ್ನು ಹೊಗಳಿದ ಬಗೆ – ವಿಷಮರಣನರಸಿಂಹ ಜಾಗೆಂದುದು ಭಟಸ್ತೋಮ
(೨) ಹೊಗಳಿಕೆಯ ಶಬ್ದ: ಪೂತುರೇ, ಮಝರೇ, ಭಾಪು, ಧಣುಧಣು