ಪದ್ಯ ೧೬: ಧರ್ಮಜನು ಯಾರನ್ನು ಮತ್ತೆ ಕಳುಹಿಸಿದನು?

ಜಡಿಯಲೆರಡಳ್ಳೆಗಳು ಕೊರಳೈ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ (ಅರಣ್ಯ ಪರ್ವ, ೨೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎರಡು ಅಳ್ಳೆಗಳೂ ಜಡಿಯುವಂತೆ ಕೊರಳಿನವರೆಗೆ ನೀರನ್ನು ಕುಡಿದು, ಕಮಲದೆಲೆಯಲ್ಲಿ ಸಹೋದರರಿಗೆ ನೀರನ್ನು ತುಂಬಿಕೋಂಡು, ಹಿಂದಿರುಗಿ ದಡಕ್ಕೆ ಹತ್ತಿ ನಕುಲನು ಪರವಶನಾಗಿ ಮರಣಹೊಂದಿದನು. ನಕುಲನು ಬರುವುದು ತಡವಾಯಿತೆಂದು ಧರ್ಮಜನು ಸಹದೇವನನ್ನು ಕಳುಹಿಸಿದನು.

ಅರ್ಥ:
ಜಡಿ: ತುಂಬು; ಅಳ್ಳೆ: ಪಕ್ಕೆ; ಕೊರಳು: ಗಂಟಲು; ಕುಡಿ: ಪಾನಮಾಡು; ಉದಕ: ನೀರು; ಅಬುಜ: ತಾವರೆ; ಎಲೆ: ಪರ್ಣ; ಹಿಡಿದು: ಗ್ರಹಿಸು; ಅನಿಬರಿಗೆ: ಅಷ್ಟು ಜನರಿಗೆ; ಅಮಳ: ನಿರ್ಮಲ; ಜಲ: ನೀರು; ಮರಳಿ: ಹಿಂದಿರುಗು; ನಿಮಿಷ: ಕ್ಷಣಮಾತ್ರ; ತಡಿ: ದಡ; ಅಡರು: ಮೇಲಕ್ಕೆ ಹತ್ತು; ಧೊಪ್ಪನೆ: ಜೋರಾಗಿ; ಅವನಿ: ಭೂಮಿ; ಕೆಡೆ: ಬೀಳು, ಕುಸಿ; ಪರವಶ: ಮೂರ್ಛೆ; ತಡೆ: ತಡ, ವಿಳಂಬ; ಅಟ್ಟು: ಬೆನ್ನುಹತ್ತಿ ಹೋಗು; ನೃಪತಿ: ರಾಜ;

ಪದವಿಂಗಡಣೆ:
ಜಡಿಯಲ್+ಎರಡ್+ಅಳ್ಳೆಗಳು+ ಕೊರಳೈ
ಕುಡಿದನ್+ಉದಕವನ್+ಅಬುಜದ್+ಎಲೆಯಲಿ
ಹಿಡಿದನ್+ಅನಿಬರಿಗ್+ಅಮಳ +ಜಲವನು +ಮರಳಿ +ನಿಮಿಷದಲಿ
ತಡಿಯನ್+ಅಡರಿದು +ಧೊಪ್ಪನ್+ಅವನಿಗೆ
ಕೆಡೆದು +ಪರವಶನಾದನ್+ಇತ್ತಲು
ತಡೆದನ್+ಏಕೆಂದ್+ಅಟ್ಟಿದನು +ಸಹದೇವನನು +ನೃಪತಿ

ಅಚ್ಚರಿ:
(೧) ಉದಕ, ಜಲ – ಸಮನಾರ್ಥಕ ಪದ
(೨) ೨ನೇ ಸಾಲು ಒಂದೇ ಪದವಾಗಿರುವುದು – ಕುಡಿದನುದಕವನಬುಜದೆಲೆಯಲಿ

ಪದ್ಯ ೪೪: ಗೋಪಾಲಕರು ವಿರಾಟರಾಜನಿಗೆ ಏನೆಂದು ಹೇಳಿದರು?

ಬಸಿವ ನೆತ್ತರ ಗೋವರರಸಂ
ಗುಸಿರಲಾರದೆ ಧೊಪ್ಪನಡೆಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶು ಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ (ವಿರಾಟ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಸುಶರ್ಮನ ಸೈನ್ಯದವರ ದಾಳಿಗೆ ಒಳಪಟ್ಟ ಗೋಪಾಲರು ತಮ್ಮ ದೇಹದಿಂದ ಸುರಿಯುತ್ತಿರುವ ರಕ್ತಸಿಕ್ತ ದೇಹವನ್ನು ಲೆಕ್ಕಿಸದೆ ತಪ್ಪಿಸಿಕೊಂಡು ದೊರೆಯ ಮುಂದೆ ನಿಂತರು, ಕೆಲವರು ಅಲ್ಲಿ ಮಾತನಾಡದೆ ಪ್ರಾಣವನ್ನು ಬಿಟ್ಟರು, ಕೆಲವರು ಸ್ವಲ್ಪ ಸುಧಾರಿಸಿಕೊಂಡು, “ರಾಜ, ಭಾರಿಸೈನ್ಯವೊಂದು ಗೊಲ್ಲರನ್ನು ಕೊಚ್ಚಿ ಹಾಕಿದ್ದಾರೆ, ೬೦ ಸಾವಿರ ಗೋವುಗಳನ್ನು ಹಿಡಿದುಕೊಂಡು ಹೋದರು” ಎಂದು ತಮ್ಮ ಅಳಲನ್ನು ವಿರಾಟರಾಜನ ಬಳಿ ತೋಡಿಕೊಂಡರು.

ಅರ್ಥ:
ಬಸಿವ:ಸ್ರವಿಸು,ಜಿನುಗು; ನೆತ್ತರು: ರಕ್ತ; ಗೋವರು: ಗೋಪಾಲರು; ಅರಸ: ರಾಜ; ಉಸಿರು: ಶ್ವಾಸ, ಗಾಳಿ; ಧೊಪ್ಪ: ಜೋರಾಗಿ; ಅಸು: ಪ್ರಾಣ; ಕಳೆ: ಕಳಚು; ಕೆಲ: ಸ್ವಲ್ಪ; ಸಂತೈಸು: ಸಮಾಧಾನ ಪಡು; ಅಸಮ: ಬಹಳ; ಬಲ: ಸೈನ್ಯ; ಜೀಯ: ಒಡೆಯ; ಕುಸುರಿ: ಚೂರು; ಅರಿ: ತಿವಿ, ಕತ್ತರಿಸು; ಸಾವಿರ: ಸಹಸ್ರ; ಪಶು: ಪ್ರಾಣಿ, ದನ; ಸಮೂಹ: ಗುಂಪು; ಹಿಡಿದು: ಬಂಧಿಸು; ಭೂಪತಿ: ರಾಜ;

ಪದವಿಂಗಡಣೆ:
ಬಸಿವ+ ನೆತ್ತರ +ಗೋವರ್+ಅರಸಂಗ್
ಉಸಿರಲಾರದೆ+ ಧೊಪ್ಪನ್+ಅಡೆಗೆಡೆದ್
ಅಸುವ +ಕಳೆದರು +ಕೆಲರು+ ಕೆಲಬರು+ ತಮ್ಮ +ಸಂತೈಸಿ
ಅಸಮ+ ಬಲವದು +ಜೀಯ +ಗೋವರ
ಕುಸುರಿದ್+ಅರಿದರ್+ಅರುವತ್ತು+ ಸಾವಿರ
ಪಶು +ಸಮೂಹವ +ಹಿಡಿದರ್+ಎಂದರು +ಮತ್ಸ್ಯ+ಭೂಪತಿಗೆ

ಅಚ್ಚರಿ:
(೧) ‘ಕ’ ಕಾರದ ಜೋಡಿ ಪದ – ಕಳೆದರು ಕೆಲರು ಕೆಲಬರು
(೨) ಭಾಮಿನಿ ಷಡ್ಪತಿಯಲ್ಲಿ, ೨ ಪದ ಒಂದೆ ಕಾಗುಣಿತಾಕ್ಷರದಲ್ಲಿರುತ್ತದೆ, ಇಲ್ಲಿ ಶ/ಸ ವನ್ನು ಬಳಸಿರುವ ಉದಾಹರಣೆ- ಪಶು, ಶ/ಸ, ಳ/ಲ – ಬಳಸುವ ಕ್ರಮವಿದೆ
(೩) ಕೆಲರು, ಕೆಲಬರು – ಪದದ ಬಳಕೆ
(೪) ಅರಸ, ಭೂಪತಿ – ಸಮನಾರ್ಥಕ ಪದ – ೧, ೬ ಸಾಲಿನ ಕೊನೆಯ ಪದ