ಪದ್ಯ ೩೬: ಯಾರ ಹೊಡೆತವು ಸೈನ್ಯವನ್ನು ಧೂಳಿಪಟ ಮಾಡಿತು?

ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು (ಗದಾ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನಮ್ಮ ಸೈನ್ಯದ ಪರಾಕ್ರಮವನ್ನು ಹೇಗೆ ವರ್ಣಿಸಲಿ, ಈ ಚತುರಂಗ ಸೈನ್ಯದ ಕಾಟವನ್ನು ಅತಿರಥರೂ ತಡೆಯಲಾರರು. ಆದರೆ ಈ ಪರಾಕ್ರಮವೆಲ್ಲವೂ ಕತ್ತಲ ಕಡಲಂತೆ, ಅರ್ಜುನನು ಅದರಲ್ಲಿ ಮುಳುಗಿದ ಸೂರ್ಯನಂತೆ, ಅವನ ಹೊಡೆತಕ್ಕೆ ಈ ಸೈನ್ಯವು ಧೂಳಿಪಟವಾಯಿತು.

ಅರ್ಥ:
ಜೀಯ: ಒಡೆಯ; ಬಲ: ಸೈನ್ಯ; ಆನೆ: ಗಜ; ವಿಕ್ರಮ: ಶೂರ, ಸಾಹಸ; ಅತಿರಥ: ಪರಾಕ್ರಮಿ; ನಿಲು: ನಿಲ್ಲು, ತಡೆ; ಕೆಲಬಲ: ಅಕ್ಕಪಕ್ಕ, ಎಡಬಲ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಪಹತಿ: ಹೊಡೆತ; ಭಾನು: ಸೂರ್ಯ; ಮಂಡಲ: ಜಗತ್ತು, ವರ್ತುಲಾಕಾರ; ಅಕಟ: ಅಯ್ಯೋ; ತಿಮಿರ: ಅಂಧಕಾರ; ಅಂಭೋನಿಧಿ: ಸಾಗರ; ಅಕ್ಕಾಡು: ನಷ್ಟವಾಗು; ನಿರಂತರ: ಯಾವಾಗಲು; ದಳ: ಸೈನ್ಯ; ಥಟ್ಟು: ಗುಂಪು; ಧೂಳಿ: ಮಣ್ಣಿನ ಪುಡಿ; ಧೂಳಿಪಟ: ನಾಶವಾಗುವಿಕೆ;

ಪದವಿಂಗಡಣೆ:
ಏನನೆಂಬೆನು+ ಜೀಯ +ಕುರುಬಲದ್
ಆನೆಗಳ+ ವಿಕ್ರಮವನ್+ಅತಿರಥರ್
ಏನ+ ನಿಲುವರು +ಕೆಲಬಲನ +ಚತುರಂಗದ್+ಉಪಹತಿಗೆ
ಭಾನುಮಂಡಲವ್+ಅಕಟ +ತಿಮಿರಾಂ
ಭೋನಿಧಿಯಲ್+ಅಕ್ಕಾಡಿತೆಂಬವೊಲ್
ಆ+ ನಿರಂತರ+ ದಳದ +ಥಟ್ಟಣೆ +ಧೂಳಿಪಟವಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುಮಂಡಲವಕಟ ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್
(೨) ಒಂದೇ ಪದವಾಗಿ ರಚನೆ – ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್

ಪದ್ಯ ೪೭: ಅರ್ಜುನನು ಮುಂದೆ ಯಾವ ನಗರದ ದಾಳಿಗೆ ಬಂದನು?

ಕಾಳ ದನುಜರು ಮೂರು ಕೋಟಿಯೊ
ಳಾಳುಳಿಯದಕ್ಕಾಡಿತಮರರ
ಸೂಳೆಯರ ಸೆರೆ ಬಿಟ್ಟುದರಿನಗರೋಪಕಂಠದಲಿ
ಧೂಳಿಪಟವಾಯಿತು ಹಿರಣ್ಯ ಪು
ರಾಲಯದ ನೆಲೆಗಟ್ಟು ಮರಳಿದು
ಕಾಲಕೇಯರ ಪುರಕೆ ಬಂದೆನು ರಾಯ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ದುಷ್ಟ ರಾಕ್ಷರಸರಾದ ನಿವಾತಕವಚರಲ್ಲಿದ್ದ ಮೂರು ಕೋಟಿಯಲ್ಲಿ ಒಬ್ಬನೂ ಉಳಿಯಲಿಲ್ಲ. ಅಪ್ಸರೆಯರ ಸೆರೆ ಬಿಟ್ಟಿತು ಅವರು ರಾಕ್ಷಸರ ಊರನ್ನು ಬಿಟ್ಟು ಹೊರಬಂದರು. ಹಿರಣ್ಯ ನಗರವು ಧೂಳೀಪಟವಾಯಿತು. ಅಣ್ಣಾ ನಾನು ಅಲ್ಲಿಂದ ಕಾಲಕೇಯರ ನಗರಕ್ಕೆ ಹೊರಟೆನು

ಅರ್ಥ:
ಕಾಳ: ಕತ್ತಲೆ; ದನುಜ: ರಾಕ್ಷಸ; ಉಳಿ: ಬದುಕಿರು; ಅಮರ: ದೇವತೆ; ಅಮರಸೂಳೆ: ಅಪ್ಸರೆ; ಸೆರೆ: ಬಂಧನ್; ಬಿಟ್ಟು: ತೊರೆ; ಅರಿ: ವೈರಿ; ನಗರ: ಊರು; ಉಪಕಂಠ: ಹತ್ತಿರ; ಧೂಳಿಪಟ: ನಾಶವಾಗುವಿಕೆ; ಪುರ: ಊರು; ನೆಲೆ: ಸ್ಥಾನ; ಮರಳು: ಹಿಂದಿರುಗು; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಾಳ +ದನುಜರು +ಮೂರು +ಕೋಟಿಯೊ
ಳಾಳ್+ಉಳಿಯದಕ್ಕಾಡಿತ್+ಅಮರರ
ಸೂಳೆಯರ +ಸೆರೆ +ಬಿಟ್ಟುದ್+ಅರಿ+ನಗರೋಪಕಂಠದಲಿ
ಧೂಳಿಪಟವಾಯಿತು +ಹಿರಣ್ಯ+ ಪು
ರಾಲಯದ +ನೆಲೆಗಟ್ಟು +ಮರಳಿದು
ಕಾಲಕೇಯರ +ಪುರಕೆ+ ಬಂದೆನು +ರಾಯ +ಕೇಳೆಂದ

ಅಚ್ಚರಿ:
(೧) ನಾಶವಾಯಿತು ಎಂದು ಹೇಳಲು – ಧೂಳಿಪಟವಾಯಿತು ಹಿರಣ್ಯ ಪುರಾಲಯದ ನೆಲೆಗಟ್ಟು

ಪದ್ಯ ೧೫: ಭೀಮನು ಹೇಗೆ ಸೈನಿಕರನ್ನು ಕೊಂದನು?

ಆಳ ಮೇಳೆಯ ಮುರಿದುದೀ ಸಾ
ಯಾಳು ಸತ್ತುದು ಹಲವು ಪಡಿಬಲ
ದಾಳು ಕೂಡದ ಮುನ್ನ ಕೊಂದನು ಕೋಟಿ ಸಂಖ್ಯೆಗಳ
ಮೇಲೆ ಮೇಲೊಡಗವಿವ ಸಮರಥ
ಜಾಲವನು ಮುರಿಯೆಚ್ಚು ನಿಮಿಷಕೆ
ಧೂಳಿಪಟ ಮಾಡಿದನು ಕರ್ಣನ ಮನ್ನಣೆಯ ಭಟರ (ಕರ್ಣ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಯೋಧರ ಗಂಟಳನ್ನು ಕಡಿದನು, ಸಾಯುವವರು ಸತ್ತರು, ಬೆಂಬಲವಾಗಿ ಬರುವ ಸೈನ್ಯವು ಕೂದಿಕೊಳ್ಳುವ ಮೊದಲೇ ಲೆಕ್ಕವಿಲ್ಲದಷ್ಟು ವೈರಿಗಳನ್ನು ಭೀಮನು ಕೊಂದನು. ಮೇಲೆ ಮೇಲೆ ಬಂದು ಕವಿಯುವ ಕರ್ಣನ ಮನ್ನಣೆಯ ಸೈನಿಕರನ್ನೂ ಸಮರಥರನ್ನೂ ಧೂಳಿಪಟ ಮಾಡಿದನು.

ಅರ್ಥ:
ಆಳ: ಸೈನಿಕರ್; ಮೇಳೆ: ಗಂಟಲು ಮಣಿ; ಮುರಿ: ಸೀಳು; ಸಾವು: ಮರಣ; ಸತ್ತುದು: ಸತ್ತರು; ಹಲವು: ಬಹಳ; ಪಡಿಬಲ: ಶತ್ರುಸೈನ್ಯ; ಕೂಡು: ಸೇರು; ಮುನ್ನ: ಮೊದಲು; ಕೊಂದನು: ಸಾಯಿಸಿದ; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಮೇಲೆ: ನಂತರ; ಒಡಗವಿ: ತಕ್ಷಣವೆ ಮುತ್ತಿಗೆ ಹಾಕು; ಸಮರಥ: ಮಹಾವೀರ, ಶ್ರೇಷ್ಠ; ಜಾಲ: ಸಮೂಹ, ಕಪಟ; ಮುರಿ: ಸೀಳು; ಎಚ್ಚು: ಹೊಡೆ; ಧೂಳಿಪಟ: ಪುಡಿ, ಚೂರು; ಮನ್ನಣೆ:ಗೌರವ; ಭಟ: ಸೈನಿಕ;

ಪದವಿಂಗಡಣೆ:
ಆಳ +ಮೇಳೆಯ +ಮುರಿದುದ್+ಈ+ ಸಾ
ಯಾಳು +ಸತ್ತುದು +ಹಲವು +ಪಡಿಬಲದ್
ಆಳು +ಕೂಡದ +ಮುನ್ನ +ಕೊಂದನು +ಕೋಟಿ +ಸಂಖ್ಯೆಗಳ
ಮೇಲೆ +ಮೇಲ್+ಒಡಗವಿವ +ಸಮರಥ
ಜಾಲವನು +ಮುರಿಯೆಚ್ಚು +ನಿಮಿಷಕೆ
ಧೂಳಿಪಟ +ಮಾಡಿದನು +ಕರ್ಣನ +ಮನ್ನಣೆಯ +ಭಟರ

ಅಚ್ಚರಿ:
(೧) ಆಳು – ೧-೩ ಸಾಲಿನ ಮೊದಲ ಪದ
(೨) ಮುರಿ, ಕೋಂದು, ಸತ್ತು, ಧೂಳಿಪಟ – ಯುದ್ಧವನ್ನು ವಿವರಿಸುವ ಪದ

ಪದ್ಯ ೨೨: ಉತ್ತರನ ಪೌರುಷದ ಮಾತು ಕೇಳುವವರಾರು?

ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರಾನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟಮಾಡಿ
ಗೆಲವ ತಹೆನೆಂದುತ್ತರನು ಕೋ
ಮಲೆಯರೆದುರಿಗೆ ಬಾಯ್ಗೆ ಬಂದುದ
ಗಳಹುತಿರ್ದನು ಬೇಕು ಬೇಡೆಂಬವರ ನಾಕಾಣೆ (ವಿರಾಟ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಉತ್ತರನು ಹೆಂಗಸರ ಮುಂದೆ ತನ್ನ ಪೌರುಷದ ಪ್ರತಾಪವನ್ನು ಕೊಚ್ಚಿಕೊಳ್ಳುತ್ತಾ, ಆ ದುಷ್ಟನಾದ ಕೌರವನನ್ನು ಸಂಹರಿಸುವೆನು, ಹಸ್ತಿನಾಪುರಕ್ಕೆ ಲಗ್ಗೆಹಾಕಿ ಅಲ್ಲೇ ಬೀಡು ಬಿಡುತ್ತೇನೆ, ಕೌರವನ ಸೇನೆಯನ್ನು ಧೂಳಿಪಟ ಮಾಡಿ ಗೆದ್ದು ಬರುತ್ತೇನೆ, ಎಂದು ಬಾಯಿಗೆ ಬಂದಹಾಗೆ ಹೇಳುತ್ತಿದ್ದನು, ಇದನ್ನು ಅಲ್ಲಿ ಯಾರು ಕೇಳುತ್ತಿದ್ದರೋ, ಕೇಳುತ್ತಿರಲ್ಲಿಲ್ಲವೋ ಗೊತ್ತಿಲ್ಲ ವೆಂದು ವೈಶಂಪಾಯನರು ಜಯಮೇಜಯ ರಾಜನಿಗೆ ಹೇಳಿದರು.

ಅರ್ಥ:
ಖಳ: ದುಷ್ಟ; ಮುರಿ: ಸೀಳು; ಠಾಣೆ: ನೆಲೆ, ಬೀಡು; ತೊಲಗು: ಹೊರಹಾಕು; ಸೇನೆ: ಸೈನ್ಯ, ದಂಡು; ಧೂಳಿಪಟ: ನಾಶವಾಗುವಿಕೆ; ಗೆಲುವು: ಜಯ; ತಹೆ: ತರುವೆ; ಕೋಮಲೆ: ಹೆಂಗಸರು; ಎದುರು: ಮುಂದೆ; ಗಳಹು: ಪ್ರಲಾಪಿಸು, ಹೇಳು; ಬೇಕು: ಅವಶ್ಯ; ಬೇಡ:ಅಪೇಕ್ಷೆಯಿಲ್ಲ; ಕಾಣೆ: ನೋಡು;

ಪದವಿಂಗಡಣೆ:
ಖಳನ+ ಮುರಿವೆನು +ಹಸ್ತಿನಾಪುರ
ದೊಳಗೆ +ಠಾಣಾಂತರವನ್+ಇಕ್ಕುವೆ
ತೊಲಗಿಸುವೆ +ಕೌರವನ +ಸೇನೆಯ +ಧೂಳಿಪಟಮಾಡಿ
ಗೆಲವ+ ತಹೆನೆಂದ್+ಉತ್ತರನು +ಕೋ
ಮಲೆಯರ್+ಎದುರಿಗೆ+ ಬಾಯ್ಗೆ +ಬಂದುದ
ಗಳಹುತಿರ್ದನು +ಬೇಕು+ ಬೇಡ+ಎಂಬವರ +ನಾಕಾಣೆ

ಅಚ್ಚರಿ:
(೧) ಬೇಕು ಬೇಡ – ವಿರುದ್ಧ ಪದಗಳು
(೨) ಮುರಿವೆನು, ತೊಲಗಿಸುವೆ, ಗೆಲುವ ತಹೆ, ಠಾಣಾಂತರವನಿಕ್ಕುವೆ – ಉತ್ತರನು ಮಾಡುವ ಕಾರ್ಯಗಳು