ಪದ್ಯ ೨೧: ಅಭಿಮಂತ್ರಿತ ತೃಣವು ಶತ್ರುವನ್ನು ಹೇಗೆ ಮುತ್ತಿತು?

ಆ ಮಹಾಮಂತ್ರಾಭಿಮಂತ್ರಿತ
ಭೀಮವಿಕ್ರಮತೃಣವನಶ್ವ
ತ್ಥಾಮನಿಡೆ ಲೋಕತ್ರಯಕ್ಷೋಭಪ್ರಭಂಜನವ
ವ್ಯೋಮಕೇಶಲಲಾಟ ವಿಶ್ರುತ
ಧೂಮಕೇತುಶಿಖಾವಿಸಂಸ್ಥುಳ
ಧೂಮಚುಂಬಿತ ಖಚರಚಯ ಭೂರಿಸಿತು ರಿಪುನೃಪರ (ಗದಾ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮಹಾಮಂತ್ರದಿಂದ ಅಭಿಮಂತ್ರಿತವಾದ ಪ್ರಚಂಡಶಕ್ತಿಯ ಭಯಂಕರವಾದ ತೃಣವನ್ನು ಬಿಡಲು ಅದರಿಂದ ಮೂರು ಲೋಕಗಳೂ ಕ್ಷೋಭೆಗೊಳಗಾದವು. ಶಿವನ ಹಣೆಗಣ್ಣಿನ ಉರಿಯು ಧೂಮ ಚುಂಬಿತವಾಗಿ ಅನೇಕ ದೇವತೆಗಳೊಡನೆ ಶತ್ರುಗಳನ್ನು ಮುತ್ತಿತು.

ಅರ್ಥ:
ಮಹಾಮಂತ್ರ: ಶ್ರೇಷ್ಠವಾದ, ಹಿರಿದಾದ ಮಂತ್ರ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಭಿಮಂತ್ರ: ಮಂತ್ರಿಸಲ್ಪಟ್ಟ; ಭೀಮ: ಭಯಂಕರ; ವಿಕ್ರಮ: ಶೂರ, ಸಾಹಸ; ತೃಣ: ಹುಲ್ಲು; ಲೋಕ: ಜಗತ್ತು; ತ್ರಯ: ಮೂರು; ಕ್ಷೋಭೆ: ಅಲುಗಾಟ, ಕುಲುಕಾಟ; ಪ್ರಭಂಜನ: ಚೂರು ಮಾಡುವುದು; ವ್ಯೋಮ: ಆಕಾಶ, ಗಗನ; ಕೇಶ: ಕೂದಲು; ವ್ಯೋಮಕೇಶ: ಶಿವ; ಲಲಾಟ: ಹಣೆ; ವಿಶ್ರುತ: ಪ್ರಸಿದ್ಧನಾದವನು, ಕೀರ್ತಿವಂತ; ಧೂಮಕೇತು: ಉಲ್ಕೆ, ಬಾಲಚುಕ್ಕಿ; ಶಿಖೆ: ಜುಟ್ಟು; ಧೂಮ: ಹೊಗೆ; ಚುಂಬಿತ: ಮುತ್ತು; ಖಚರ: ಆಕಾಶದಲ್ಲಿ ಸಂಚರಿಸುವ, ಆಕಾಶಗಾಮಿಯಾದ; ಚಯ: ಗುಂಪು; ಭೂರಿ: ಹೆಚ್ಚು, ಅಧಿಕ; ರಿಪು: ವೈರಿ; ನೃಪ: ರಾಜ;

ಪದವಿಂಗಡಣೆ:
ಆ +ಮಹಾ+ಮಂತ್ರ+ಅಭಿಮಂತ್ರಿತ
ಭೀಮ+ವಿಕ್ರಮ+ತೃಣವನ್+ಅಶ್ವ
ತ್ಥಾಮನಿಡೆ +ಲೋಕತ್ರಯ+ಕ್ಷೋಭ+ಪ್ರಭಂಜನವ
ವ್ಯೋಮಕೇಶ+ಲಲಾಟ +ವಿಶ್ರುತ
ಧೂಮಕೇತು+ಶಿಖಾ+ವಿಸಂಸ್ಥುಳ
ಧೂಮಚುಂಬಿತ+ ಖಚರ+ಚಯ +ಭೂರಿಸಿತು +ರಿಪು+ನೃಪರ

ಅಚ್ಚರಿ:
(೧) ಉಪಮಾನದ ಪ್ರಯೋಗ – ವ್ಯೋಮಕೇಶಲಲಾಟ ವಿಶ್ರುತ ಧೂಮಕೇತುಶಿಖಾವಿಸಂಸ್ಥುಳ

ಪದ್ಯ ೩: ಕರ್ಣನ ಧ್ವಜವು ಬೀಳುವುದನ್ನು ನೋಡಿದವರಿಗೆ ಏನಾಯಿತು?

ಆ ಮಹಾಧ್ವಜ ದಂಡ ಪಾತದ
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ (ಕರ್ಣ ಪರ್ವ, ೨೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ನಾನು ಏನೆಂದು ಹೇಳಲಿ, ಅರ್ಜುನನ ಬಾಣಗಳಿಂದ ಕರ್ಣನ ಧ್ವಜದಂಡವು ಮುರಿಯಲು ಸೈನ್ಯದಲ್ಲಿ ಭಯವು ಆವರಿಸಿತು, ಹಾ ಮಹಾದೇವ, ಪರಾಕ್ರಮಿಗಳಾದ ಶಕುನಿ, ಅಶ್ವತ್ಥಾಮ, ಕೃಪಚಾರ್ಯ, ಕೃತವರ್ಮ ಮುಂತಾದವರು ಒಂದು ನಿಮಿಷ ಸ್ತಬ್ಧರಾಗಿ ನಿಂತರು.

ಅರ್ಥ:
ಧ್ವಜ: ಬಾವುಟ; ಮಹಾ: ದೊಡ್ಡ, ಶ್ರೇಷ್ಠ; ದಂಡ: ಕೋಲು; ಪಾತ: ಬೀಳುವುದು, ಪತನ; ಡಾಮರ: ಭಯಂಕರವಾದ; ದಳ: ಸೈನ್ಯ; ಅಳುಕು: ಹೆದರು; ಹೆದರು: ಭಯಪಡು; ಹೇಳು: ತಿಳಿಸು; ಮಹೀಪತಿ: ರಾಜ; ಮಹೀ: ಭೂಮಿ; ಪತಿ: ಒಡೆಯ; ಧೂಮ: ಹೊಗೆ; ಚುಂಬಿತ: ಮುತ್ತಿದ; ಚಿತ್ರ: ಬರೆದ ಆಕೃತಿ; ಸನಾಮ: ಪ್ರಸಿದ್ಧ ವ್ಯಕ್ತಿ; ಸೌಬಲ: ಶಕುನಿ; ಆದಿ: ಮುಂತಾದ; ನಿಮಿಷ: ಕ್ಷಣಮಾತ್ರ, ಕಾಲಪ್ರಮಾಣ;

ಪದವಿಂಗಡಣೆ:
ಆ+ ಮಹಾಧ್ವಜ +ದಂಡ +ಪಾತದ
ಡಾಮರದ+ ದಳವುಳಕೆ +ಹೆದರಿತು
ಹಾ+ ಮಹಾದೇವ್+ಏನ +ಹೇಳುವೆನೈ+ ಮಹೀಪತಿಯೆ
ಧೂಮಚುಂಬಿತ +ಚಿತ್ರದಂತೆ +ಸ
ನಾಮರಿದ್ದುದು+ ಸೌಬಲ+ಅಶ್ವ
ತ್ಥಾಮ +ಕೃಪ +ಕೃತವರ್ಮಕಾದಿಗಳ್+ಒಂದು +ನಿಮಿಷದಲಿ

ಅಚ್ಚರಿ:
(೧) ಸ್ತಬ್ಧರಾದರು ಎಂದು ಹೇಳಲು – ಧೂಮಚುಂಬಿತ ಚಿತ್ರದಂತೆ ಸನಾಮರಿದ್ದುದು