ಪದ್ಯ ೯೫: ಕುಂತಿ ಐರಾವತವನ್ನು ಹೇಗೆ ಪೂಜಿಸಿದಳು?

ಇಂದುಮುಖಿ ಹರುಷದಲಿ ತಾ ಹೊ
ನ್ನಂದಣದೆ ಬಳಿಕಿಳಿದು ನಲವಿನೊ
ಳಂದು ಮೈಯಿಕ್ಕಿದಳು ಕಾಣಿಕೆಯಿಕ್ಕಿ ಚರಣದಲಿ
ಚಂದನಸುಗಂಧಾಕ್ಷತೆಗಳರ
ವಿಂದಪುಷ್ಪದಿ ಧೂಪದೀಪಗ
ಳಿಂದ ನೈವೇದ್ಯಂಗಳಿಂ ಪೂಜಿಸಿದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಸಂತೋಷದಿಂದ ಐರಾವತವಿದ್ದೆಡೆಗೆ ಬಂದು ತನ್ನ ಚಿನ್ನದ ಪಲ್ಲಕ್ಕಿಯಿಂದ ಕೆಳಗಿಳಿದು, ಆನಂದದಿಂದ ಐರಾವತಕ್ಕೆ ನಮಸ್ಕರಿಸಿದಳು, ತಾನು ತಂದ ಕಾಣಿಕೆಯನ್ನು ಅದರ ಚರಣಗಳಲ್ಲಿ ಅರ್ಪಿಸಿ, ಗಂಧ, ಅಕ್ಷತೆ, ಧೂಪ, ದೀಪ, ಪುಷ್ಪಗಳಿಂದ ಪೂಜಿಸಿ, ನೈವೇದ್ಯವನ್ನು ಅರ್ಪಿಸಿದಳು.

ಅರ್ಥ:
ಇಂದುಮುಖಿ: ಸುಂದರಿ, ಚಂದ್ರನಂತ ಮುಖವುಳ್ಳವಳು; ಹರುಷ: ಸಂತೋಷ; ಹೊನ್ನಂದಣ: ಚಿನ್ನದ ಪಲ್ಲಕ್ಕಿ; ಇಳಿ: ಕೆಳಕ್ಕಿ ಬರು; ನಲಿವು:ಸಂತೋಷ, ಆನಂದ; ಮೈಯಿಕ್ಕು: ನಮಸ್ಕರಿಸು; ಕಾಣಿಕೆ: ಉಡುಗೊರೆ; ಚರಣ: ಪಾದ; ಚಂದನ: ಗಂಧ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರವಿಂದ: ಕಮಲ; ಪುಷ್ಪ: ಹೂವು; ಧೂಪ:ಸುವಾಸನೆಯ ಪುಡಿ; ದೀಪ: ದೀವಿಗೆ; ನೈವೇದ್ಯ: ದೇವರಿಗೆ ಸಮರ್ಪಿಸುವ ಆಹಾರ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಇಂದುಮುಖಿ +ಹರುಷದಲಿ+ ತಾ +ಹೊನ್ನ
ಅಂದಣದೆ+ ಬಳಿಕಿಳಿದು+ ನಲವಿನೊಳ್
ಅಂದು +ಮೈಯಿಕ್ಕಿದಳು +ಕಾಣಿಕೆಯಿಕ್ಕಿ +ಚರಣದಲಿ
ಚಂದನ+ಸುಗಂಧ+ಅಕ್ಷತೆಗಳ್+ಅರ
ವಿಂದ+ಪುಷ್ಪದಿ +ಧೂಪ+ದೀಪಗ
ಳಿಂದ +ನೈವೇದ್ಯಂಗಳಿಂ+ ಪೂಜಿಸಿದಳಾ+ ಕುಂತಿ

ಅಚ್ಚರಿ:
(೧) ಪೂಜಾಸಾಮಗ್ರಿಗಳ ಪದಗಳು – ಚಂದನಸುಗಂಧಾಕ್ಷತೆಗಳರವಿಂದಪುಷ್ಪದಿ ಧೂಪದೀಪ, ನೈವೇದ್ಯ
(೨) ಹರುಷ, ನಲಿವು – ಸಮನಾರ್ಥಕ ಪದ