ಪದ್ಯ ೪೪: ಉತ್ತರನು ಸಾರಥಿಯನ್ನು ಯಾರೆಂದು ಊಹಿಸಿದನು?

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡಕು
ಮಾರರಾಯುಧತತಿಯ ನೀನೆಂತರಿವೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಸಾರಥಿ ನೀನಾದರು ಯಾರು? ಅರ್ಜುನನೋ, ನಕುಲನೋ, ವಾಯುಪುತ್ರನಾದ ಭೀಮನೋ, ವೀರ ಯುಧಿಷ್ಠಿರನೋ, ಸಹದೇವನೋ ಅಥವ ಅವರ ಬಾಂಧವನೋ, ಎಲೈ ಶೂರ,ನಾನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ತಿಳಿಸು, ಈ ಪಾಂಡವರ ಆಯುಧಗಳೆಲ್ಲವೂ ನಿನಗೆ ಹೇಗೆ ತಿಳಿದಿದೆ ಎಂದು ಕೇಳಿದನು.

ಅರ್ಥ:
ವೀರ: ಶೂರ; ಸುತ: ಮಗ; ಮಾರುತ: ವಾಯು; ಮೇಣ್: ಅಥವ; ಬಾಂಧವ: ಸಂಬಂಹಿಕ; ಧೀರ: ಶೂರ; ಹೇಳು: ತಿಳಿಸು; ಬೇಡು: ಯಾಚಿಸು; ಕಾರಣ: ನಿಮಿತ್ತ, ಹೇತು; ವಿಸ್ತರಿಸು: ವಿವರಣೆ; ಕುಮಾರ: ಮಕ್ಕಳು; ಆಯುಧ: ಶಸ್ತ್ರ; ತತಿ: ಗುಂಪು; ಅರಿ: ತಿಳಿ; ಹೇಳು: ತಿಳಿಸು;

ಪದವಿಂಗಡಣೆ:
ಆರು+ ನೀನ್+ಅರ್ಜುನನೊ +ನಕುಲನೊ
ಮಾರುತನ +ಸುತನೋ +ಯುಧಿಷ್ಠಿರ
ವೀರನೋ +ಸಹದೇವನೋ +ಮೇಣ್+ಅವರ +ಬಾಂಧವನೊ
ಧೀರ +ಹೇಳೈ +ಬೇಡಿಕೊಂಬೆನು
ಕಾರಣವ +ವಿಸ್ತರಿಸು +ಪಾಂಡ+ಕು
ಮಾರರ್+ಆಯುಧ+ತತಿಯ+ ನೀನೆಂತರಿವೆ+ ಹೇಳೆಂದ

ಅಚ್ಚರಿ:
(೧) ವೀರ, ಧೀರ; ಸುತ, ಕುಮಾರ – ಸಮನಾರ್ಥಕ ಪದ

ಪದ್ಯ ೫೩: ನಹುಷನು ಯಾವ ಪ್ರಶ್ನೆಗಳನ್ನು ಕೇಳಿದನು?

ಧೀರನಾವನು ದಿಟ್ಟನಾರು ವಿ
ಕಾರಿಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಹುಷನು ತನ್ನ ಪ್ರಶ್ನಮಾಲಿಕೆಯನ್ನು ಮುಂದುವರೆಸುತ್ತಾ, ಧೀರನಾರು, ದಿಟ್ಟನಾರು, ಯಾರು ವಿಕಾರಿ, ವಿನೀತನ ಗುಣವಾವುದು, ಆಚಾರ ಹೀನನಾರು, ಸುವ್ರತಿಯಾರು, ಯಾರು ದುಷ್ಟ, ಯಾರು ಕ್ರೂರಿ, ಯಾರು ಕಠಿಣರಾದವರು, ಯಾರು ಮುಕ್ತ ಇಹಪರಗಳೆರಡಕ್ಕೂ ಹೊರಗಿನವನಾರು ಎಂದು ನಹುಷನು ಕೇಳಿದನು.

ಅರ್ಥ:
ಧೀರ: ಶೂರ, ಪರಾಕ್ರಮಿ; ದಿಟ್ಟ: ಧೈರ್ಯಶಾಲಿ, ಸಾಹಸಿ, ಗಟ್ಟಿಗ; ವಿಕಾರ: ಮನಸ್ಸಿನ ವಿಕೃತಿ;ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ: ಕೆಟ್ಟ, ದುಷ್ಟ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಶಠ: ದುಷ್ಟ, ಧೂರ್ತ; ಕ್ರೂರ: ದುಷ್ಟ; ಕಷ್ಟ: ಕಠಿಣವಾದದ್ದು; ವಿಚಾರ: ಪರ್ಯಾಲೋಚನೆ, ವಿಮರ್ಶೆ, ವಿವೇಕ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ವಿದೂರ: ಪಡೆಯಲಸಾಧ್ಯವಾದ; ಇಹಪರ: ಈ ಲೋಕ ಮತ್ತು ಪರಲೋಕ; ಭೂಮೀಪಾಲ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಧೀರನಾವನು +ದಿಟ್ಟನಾರು +ವಿ
ಕಾರಿಯಾರು +ವಿನೀತನಾರ್
ಆಚಾರ +ಹೀನನದಾರು +ಸುವ್ರತಿ+ ಯಾರು +ಶಠನಾರು
ಕ್ರೂರನಾರ್+ಅತಿಕಷ್ಟನಾರು +ವಿ
ಚಾರಿಯಾರು +ವಿಮುಕ್ತನಾರು +ವಿ
ದೂರನಾರ್+ಇಹಪರಕೆ+ ಭೂಮೀಪಾಲ+ ಹೇಳೆಂದ

ಅಚ್ಚರಿ:
(೧) ಮನುಷ್ಯರ ಗುಣಗಳು – ವಿಕಾರಿ, ದಿಟ್ಟ, ಧೀರ, ಆಚಾರಹೀನ, ಸುವ್ರತಿ, ಶಠ, ಕ್ರೂರ, ಕಷ್ಟ, ವಿಚಾರಿ, ವಿಮುಕ್ತ, ವಿದೂರ

ಪದ್ಯ ೭೧: ಮಂತ್ರಿಯ ಲಕ್ಷಣಗಳೇನು?

ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನಾ
ಧಾರ ರಿಪು ಸಂಹಾರ ಚತುರೋಪಾಯ ಸಾಕಾರ
ಸಾರ ಮಂತ್ರವಿಚಾರ ಭುವನಾ
ಧಾರ ಸುಜನ ಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಮಂತ್ರಿಯಾದವನ ಲಕ್ಷಣವನ್ನು ನಾರದರು ವಿವರಿಸುತ್ತಾ, ರಾಜನಿಗೆ ಮಂತ್ರಿಯಾಗಿರುವವನು, ಶೂರ, ಧೀರ, ಉದಾರ, ಧರ್ಮವನ್ನು ಎತ್ತಿಹಿಡಿಯುವವನು, ಸಮಸ್ತವಿಚಾರಗಳನ್ನರಿತವನು, ಸಜ್ಜನರಿಗೆ ಆಧಾರವಾಗಿರುವವನು, ಶತ್ರುಗಳನ್ನು ಸಂಹರಿಸುವವನು, ಸಾಮ, ದಾನ, ಭೇದ, ದಂಡ ಗಳೆಂಬ ಚತುರೋಪಾಯವನ್ನು ಬಲ್ಲವನು, ಮಂತ್ರಾಲೋಚನೆಯಲ್ಲಿ ಸಾರವತ್ತಾದಉದನ್ನು ಬಲ್ಲವನು, ಸಜ್ಜನ ರಾಜನ ಕಾರ್ಯಗಳನ್ನು ಮಾಡಲೆಂದೇ ಇರುವ ಮಂತ್ರಿ ನಿನಗಿರುವವನೇ ಎಂದು ಪ್ರಶ್ನಿಸಿದರು.

ಅರ್ಥ:
ಶೂರ: ಕಲಿ,ವೀರ; ಧೀರ: ಧೈರ್ಯ; ಉದಾರ: ಧಾರಾಳ ಸ್ವಭಾವದ; ಧರ್ಮ: ನಿಯಮ; ಉದ್ಧಾರ:ಮೇಲಕ್ಕೆ ಎತ್ತುವುದು; ವಿವಿಧ: ಹಲವಾರು; ವಿಚಾರ:ವಿಮರ್ಶೆ; ಸುಜನ: ಒಳ್ಳೆಯ ಜನ; ರಿಪು: ವೈರಿ; ಸಂಹಾರ: ನಾಶ, ಕೊನೆ; ಚತುರೋಪಾಯ: ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಉಪಾಯಗಳು; ಉಪಾಯ:ಯುಕ್ತಿ; ಸಾಕಾರ:ಆಕೃತಿ; ಸಾರ:ತಿರುಳು; ಮಂತ್ರ:ವಿಚಾರ; ಭುವನ: ಭೂಮಿ; ಆಧಾರ:ಆಶ್ರಯ, ಅವಲಂಬನೆ; ಸ್ವಾಮಿ: ದೊರೆ; ಕಾರ್ಯ: ಕೆಲಸ; ಮಂತ್ರಿ: ಸಚಿವ; ರಾಯ: ರಾಜ;

ಪದವಿಂಗಡಣೆ:
ಶೂರ +ಧೀರನ್+ಉದಾರ +ಧರ್ಮ
ಉದ್ಧಾರ+ ವಿವಿಧ+ ವಿಚಾರ +ಸುಜನ
ಆಧಾರ +ರಿಪು +ಸಂಹಾರ +ಚತುರೋಪಾಯ +ಸಾಕಾರ
ಸಾರ +ಮಂತ್ರವಿಚಾರ +ಭುವನ
ಆಧಾರ +ಸುಜನ +ಸ್ವಾಮಿ +ಕಾರ್ಯಾ
ಗಾರನ್+ಎನಿಸುವ +ಮಂತ್ರಿಯುಂಟೇ +ರಾಯ +ನಿನಗೆಂದ

ಅಚ್ದರಿ:
(೧) ಆಧಾರ – ೩, ೫ ಸಾಲಿನ ಮೊದಲ ಪದ
(೨) “ರ” ಕಾರದಿಂದ ಕೊನೆಗೊಳ್ಳುವ ಪದ: ಶೂರ, ಧೀರ, ಉದಾರ, ಉದ್ಧಾರ, ವಿಚಾರ, ಆಧಾರ, ಸಂಹಾರ, ಸಾಕಾರ, ಸಾರ, ಕಾರ್ಯಾಗಾರ
(೩) ೨, ೫ ಸಾಲಿನ ೨, ೩ ಪದಗಳು ಒಂದೆ ಅಕ್ಷರದ್ದು, ವಿವಿಧ ವಿಚಾರ, ಸುಜನ ಸ್ವಾಮಿ