ಪದ್ಯ ೬: ಅರ್ಜುನನು ಕೃಷ್ಣನಿಗೆ ಏನು ಹೇಳಿದನು?

ಎನಲು ಧಿಮ್ಮನೆ ಕೊಳದೊಳಗೆ ನಿಂ
ದನು ಮುಕುಂದನು ಸುರಪ ಸುತನಾ
ನನವ ನೋಡುತದೇನದೇನೆನೆ ಬಿಕ್ಕಿ ಬಿರಿದಳುತ
ತನಯನಳಿಯದೆ ಮಾಣ ಗಗನ
ಧ್ವನಿಯೊಳಾದುದು ವಾರ್ತೆ ಚಿತ್ತಕೆ
ಮೊನೆಯ ಸರಳೆನೆ ಮರುಳೆ ಬಾ ಎಂದೇರಿದನು ರಥವ (ದ್ರೋಣ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನು ಕರೆದೊಡನೆ ಕೃಷ್ಣನು ನೀರಿನಿಂದ ಧಿಮ್ಮನೆ ಮೇಲೆದ್ದು ನಿಂತು ಅರ್ಜುನನ ಮುಖವನ್ನು ನೋಡಿ, ಏನಾಯಿತು ಅದೇನು ಎಂದು ಕೇಳಿದನು. ಅರ್ಜುನನು ಜೋರಾಗಿ ಅಳುತ್ತಾ ಆಕಾಶವಾಣಿಯಾಯಿತು, ಅಭಿಮನ್ಯುವು ಬದುಕಿಲ್ಲ. ಮನಸ್ಸಿಗೆ ಚೂಪಾದ ಬಾನ ನಟ್ಟಿದೆ ಎನ್ನಲು, ಕೃಷ್ಣನು ಹುಚ್ಚಾ ಬಾ ಎಂದು ರಥವನ್ನು ಹತ್ತಿದನು.

ಅರ್ಥ:
ಧಿಮ್ಮನೆ: ಕೂಡಲೆ; ಕೊಳ: ಸರೋವರ; ನಿಂದು: ನಿಲ್ಲು; ಸುರಪ: ಇಂದ್ರ; ಸುತ: ಮಗ; ಆನನ: ಮುಖ; ನೋಡು: ವೀಕ್ಷಿಸು; ಬಿಕ್ಕಿ: ಜೋರು, ಒಂದೇ ಸಮನೆ; ಬಿರಿ: ಒಡೆ, ಬಿರುಕುಂಟಾಗು; ಅಳು: ರೋದಿಸು, ದುಃಖಿಸು; ತನಯ: ಮಗ; ಅಳಿ: ಸಾವು; ಮಾಣ್: ಬಿಡು; ಗಗನ: ಆಗಸ; ಧ್ವನಿ: ಶಬ್ದ; ವಾರ್ತೆ: ವಿಚಾರ, ವಿಷಯ; ಚಿತ್ತ: ಮನಸ್ಸು; ಮೊನೆ: ಚೂಪು; ಸರಳು: ಬಾಣ; ಮರುಳ: ಹುಚ್ಚ; ಏರು: ಹತ್ತು; ರಥ: ಬಂಡಿ;

ಪದವಿಂಗಡಣೆ:
ಎನಲು+ ಧಿಮ್ಮನೆ +ಕೊಳದೊಳಗೆ +ನಿಂ
ದನು +ಮುಕುಂದನು +ಸುರಪ+ ಸುತನ್
ಆನನವ +ನೋಡುತ್+ಅದೇನ್+ಅದೇನ್+ಎನೆ +ಬಿಕ್ಕಿ +ಬಿರಿದಳುತ
ತನಯನ್+ಅಳಿಯದೆ +ಮಾಣ +ಗಗನ
ಧ್ವನಿಯೊಳ್+ಆದುದು +ವಾರ್ತೆ +ಚಿತ್ತಕೆ
ಮೊನೆಯ +ಸರಳೆನೆ +ಮರುಳೆ +ಬಾ +ಎಂದೇರಿದನು +ರಥವ

ಅಚ್ಚರಿ:
(೧) ಅರ್ಜುನನನ್ನು ಚಿತ್ರಿಸುವ ಪರಿ – ಧಿಮ್ಮನೆ ಕೊಳದೊಳಗೆ ನಿಂದನು; ಚಿತ್ತಕೆ ಮೊನೆಯ ಸರಳೆನೆ

ಪದ್ಯ ೨೬:ಭೀಮನನ್ನು ಯಾರು ತಡೆದರು?

ಸಳೆದಡಾಯುಧವುತ್ತರೀಯವ
ನಿಳುಹಿ ಮುಂಗೈಯಲಿ ವೃಕೋದರ
ಮೊಳಗುವನುವನು ಕಂಡು ಧಿಮ್ಮನೆ ಭೀಷ್ಮನಡಹಾಯ್ದು
ಸೆಳೆದುಕೊಂಡನು ಖಡುಗವನು ಭುಜ
ವಳೆಯದಿಂದವುಚಿದನು ತೋಟಿಯ
ತೊಳಸುಗರ ಹೊಯ್ಹೊಯ್ಯೆನುತ ಗರ್ಜಿಸಿದನಾ ಭೀಷ್ಮ (ಸಭಾ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನು ತನ್ನ ಉತ್ತರೀಯವನ್ನು ಕೆಳಗೆಕಟ್ಟಿಕೊಂಡು, ಕೈಯಲ್ಲಿ ಖಡ್ಗವನ್ನು ಹಿಡಿದು ಗರ್ಜಿಸುತ್ತಾ ಮುಂಬರುವುದನ್ನು ಕಂಡ ಭೀಷ್ಮನು ಭೀಮನ ಅಡ್ಡಬಂದರು. ಭೀಮನ ಕೈಯಲ್ಲಿದ್ದ ಕತ್ತಿಯನ್ನು ತನ್ನ ಕೈಗಳೆದುಕೊಂಡು, ಭೀಮನನ್ನು ಎರಡೂ ಕೈಗಳಿಂದ ಅವುಚಿ ಯುದ್ಧಕ್ಕೆ ಕಾಲ್ಕೆರೆಯುವವರನ್ನು ಹೊಯ್ಯಿರಿ ಎಂದು ಗರ್ಜಿಸಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಆಯುಧ: ಶಸ್ತ್ರ; ಉತ್ತರೀಯ: ಸೆರಗು, ಬಟ್ಟೆ; ಇಳುಹು:ಇಳಿಸು; ಮುಂಗೈ: ಹಸ್ತ; ವೃಕ: ತೋಳ; ಉದರ: ಹೊಟ್ಟೆ; ವೃಕೋದರ: ಭೀಮ; ಮೊಳಗು: ಧ್ವನಿ, ಸದ್ದು; ಅನುವು: ಅನುಕೂಲ; ಕಂಡು: ನೋಡಿ; ಧಿಮ್ಮನೆ: ಅನುಕರಣ ಶಬ್ದ; ಅಡಹಾಯ್ದು: ಅಡ್ಡ/ನಡುವೆ ಬಂದು; ಸೆಳೆ: ತೆಗೆ; ಖಡುಗ: ಕತ್ತಿ; ಭುಜ: ಬಾಹು; ಎಳೆ: ಸೆಳೆ ಅವುಚು: ತಬ್ಬಿಕೊಳ್ಳು; ತೋಟಿ: ಕಲಹ, ಜಗಳ; ತೊಳಸು: ಸುತ್ತಿ ತಿರುಗಿ, ಘರ್ಷಣೆ; ಹೊಯ್: ಅನುಕರಣ ಶಬ್ದ; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಸಳೆದಡ್+ಆಯುಧ+ಉತ್ತರೀಯವನ್
ಇಳುಹಿ +ಮುಂಗೈಯಲಿ +ವೃಕೋದರ
ಮೊಳಗುವ್+ಅನುವನು +ಕಂಡು +ಧಿಮ್ಮನೆ +ಭೀಷ್ಮನ್+ಅಡಹಾಯ್ದು
ಸೆಳೆದುಕೊಂಡನು +ಖಡುಗವನು +ಭುಜ
ವಳೆಯದಿಂದ್+ಅವುಚಿದನು +ತೋಟಿಯ
ತೊಳಸುಗರ +ಹೊಯ್+ಹೊಯ್+ಎನುತ+ ಗರ್ಜಿಸಿದನಾ+ ಭೀಷ್ಮ

ಅಚ್ಚರಿ:
(೧) ಭೀಮನನ್ನು ತಡೆಯುವ ಬಗೆ – ಸೆಳೆದುಕೊಂಡನು ಖಡುಗವನು, ಸೆಳೆದುಕೊಂಡನು ಖಡುಗವನು
(೨) ಅನುಕರಣ ಶಬ್ದ – ಹೊಯ್, ಧಿಮ್ಮನೆ

ಪದ್ಯ ೨೩: ಶಲ್ಯನು ದುರ್ಯೋಧನನಿಗೆ ಯಾವುದರ ಅರಿವಿಲ್ಲ ಎಂದು ಜರಿದನು?

ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳು ಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ (ಕರ್ಣ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ನೀನು ನೀಚನನ್ನು ಕರೆತಂದು ಅವನಿಗೆ ರಾಜ್ಯದ ಪಟ್ಟವನ್ನು ಕಟ್ಟಿ ರಾಜರಿಗೆ ಸಮನೆಂದು ಪುರಸ್ಕರಿಸಿ, ಬಳಿಕ ಅವನ ನೀಚತನ ನಿನಗೆ ಬಂದಿದೆ. ಕೀಳು ಮೇಲು ಎನ್ನ್ವ ಅರಿವು ನಿನ್ನನ್ನು ಬಿಟ್ಟು ಹೋಗಿದೆ, ಸಾಕು ನಮಗಿನ್ನೇಕೆ ಶೂರತನ, ಹೀಗೆ ಹೇಳಿ ಶಲ್ಯನು ಖತಿಗೊಂಡು ಧಿಮ್ಮನೆ ನಿಂತನು.

ಅರ್ಥ:
ಖೂಳ: ದುಷ್ಟ; ಹಿಡಿ: ಬಂಧಿಸಿ; ಧರಣೀಪಾಲ: ರಾಜ; ಸರಿಮಾಡಿ: ಸಮಾನ; ರಾಜ್ಯ: ದೇಶ; ನಿಲಿಸು: ಸ್ಥಾಪಿಸು; ಬಳಿಕ: ನಂತರ; ಬಂದುದು: ತಿಳಿದು, ಗೊತ್ತುಮಾಡು; ಕೀಳು: ನೀಚ; ಮೇಲು: ಶ್ರೇಷ್ಠ; ಸೀಮೆ: ಎಲ್ಲೆ, ಗಡಿ; ಬೀಳುಕೊಂಡು: ತೊರೆದು; ಸಾಕು: ನಿಲ್ಲಿಸು; ಆಳುತನ: ಶೂರ, ದಿಟ್ಟ; ಧಿಮ್ಮನೆ: ಅನುಕರಣ ಶಬ್ದ; ನಿಂದು: ನಿಲ್ಲು;

ಪದವಿಂಗಡಣೆ:
ಖೂಳನನು +ಹಿಡಿತಂದು +ಧರಣೀ
ಪಾಲರಲಿ+ ಸರಿಮಾಡಿ +ರಾಜ್ಯದ
ಮೇಲೆ +ನಿಲಿಸಿದೆ +ಬಳಿಕ +ಬಂದುದು +ಖೂಳತನ+ ನಿನಗೆ
ಕೀಳು +ಮೇಲಿನ +ಸೀಮೆ +ನಿನ್ನಲಿ
ಬೀಳುಕೊಂಡುದು +ಸಾಕು +ನಮಗಿನ್
ಆಳುತನವೇಕ್+ಎನುತ +ಧಿಮ್ಮನೆ +ನಿಂದನಾ +ಶಲ್ಯ

ಅಚ್ಚರಿ:
(೧) ಕೀಳು, ಮೇಲು – ವಿರುದ್ಧ ಪದಗಳು