ಪದ್ಯ ೧೪: ಸೈನಿಕರ ನಡುವೆ ಯುದ್ಧವು ಹೇಗೆ ಮುಂದುವರೆಯಿತು?

ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು (ಶಲ್ಯ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭಟರೆಲ್ಲರೂ ಸಂಕೋಚವನ್ನು ಬಿಟ್ಟು ಶಕ್ತಿಮೀರಿ ಹಾಣಾಹಾಣಿ ಯುದ್ಧದಲ್ಲಿ ತೊಡಗಿದರು. ಆಯುಧಗಳು ತಾಕಿ ಖಣಿಖಟಿಲು ಸದ್ದು ಕೇಳಿ ಕಿಡಿಗಳುರುಳಿದವು. ಉಬ್ಬಣಗಳು ತಾಕಲಾಡಿದವು. ಭಲ್ಯ ಈಟಿಗಳಿಂದ ವೈರಿಗಳನ್ನು ಹಣಿದರು. ಬಿಲ್ಲಾಳುಗಳು, ಸೂತರು, ರಥಿಕರು ಸಮರೋದ್ಯೋಗದಲ್ಲಿ ನಿರತರಾದರು.

ಅರ್ಥ:
ಕೇಣ: ಹೊಟ್ಟೆಕಿಚ್ಚು; ಭಟ: ಸೈನಿಕ; ಹಾಣಾಹಾಣಿ: ಹಣೆ ಹಣೆಯ ಯುದ್ಧ; ಮಸಗು: ಹರಡು; ಕೆರಳು; ಖಣಿಖಟಿಲು: ಬಾಣದ ಶಬ್ದವನ್ನು ವಿವರಿಸುವ ಪದ; ಹೋಯ್ದ್: ಹೊಡೆ; ಬಿರು: ಬಿರುಸಾದುದು, ಗಟ್ಟಿಯಾದ;
ಕಿಡಿ: ಬೆಂಕಿ; ಹಿರಿ: ಹೆಚ್ಚು; ಉಬ್ಬಣ: ಚೂಪಾದ ಆಯುಧ; ಹೊಯ್ಲು: ಏಟು, ಹೊಡೆತ; ಹೂಣಿಕೆ: ಶಪಥ, ಪ್ರತಿಜ್ಞೆ; ಸಬಳ: ಈಟಿ, ಭರ್ಜಿ; ಸೂತ: ಸಾರಥಿ; ರಥಿಕ: ರಥದ ಮೇಲೆ ಕುಳಿತು ಯುದ್ಧ ಮಾಡುವವ; ಜಾಣತಿ: ಜಾನತನ; ಬಿಲ್ಲವರ: ಬಿಲ್ಲುಗಾರ; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲುಹು: ಬಲ, ಶಕ್ತಿ;

ಪದವಿಂಗಡಣೆ:
ಕೇಣವಿಲ್ಲದೆ +ಭಟರ +ಹಾಣಾ
ಹಾಣಿ +ಮಸಗಿತು +ಖಣಿಖಟಿಲ+ ಹೊ
ಯ್ದಾಣೆಗಳ+ ಬಿರು+ಕಿಡಿಯ +ಹಿರಿ+ಉಬ್ಬಣದ+ ಹೊಯ್ಲುಗಳ
ಹೂಣಿಕೆಯ +ಸಬಳಿಗರೊಳ್+ಇಮ್ಮೈ
ಗಾಣಿಕೆಯ +ಬಲು+ಸೂತ+ರಥಿಕರ
ಜಾಣತಿಯ +ಬಿಲ್ಲವರ+ ಧಾಳಾಧೂಳಿ +ಬಲುಹಾಯ್ತು

ಅಚ್ಚರಿ:
(೧) ಹಾಣಾಹಾಣಿ, ಖಣಿಖಟಿಲ, ಧಾಳಾಧೂಳಿ – ಪದಗಳ ಬಳಕೆ

ಪದ್ಯ ೨೬: ಧರ್ಮಜನು ಅರ್ಜುನನ ಒಣದೊಡ್ಡಸ್ತಿಕೆಯನ್ನು ನಿಲ್ಲಿಸಲು ಏಕೆ ಹೇಳಿದ?

ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರ ಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ (ಕರ್ಣ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಮ್ಮ ಸೈನ್ಯವೆಲ್ಲಾ ಕರ್ಣನನ್ನು ತಡೆದು ನನ್ನನ್ನು ಸುಟ್ಟುಗಟ್ಟಿ ಅವನೊಡನೆ ಘೋರತರವಾಗಿ ಯುದ್ಧಮಾಡಿತು. ನನ್ನ ಮೇಲೆ ಪ್ರೀತಿಯಿದಿದ್ದರೆ ಆಗ ನೀನು ಬಂದು ಕರ್ಣನನ್ನು ನಿಲ್ಲಿಸಿದೆಯಾ? ಕೇವಲ ಒಣದೊಡ್ಡಸ್ತಿಕೆಯನ್ನು ಹೇಳಿಕೊಳ್ಳಬೇಡ ಬಿಡು ಎಂದು ಧರ್ಮಜನು ಅರ್ಜುನನನ್ನು ಹಂಗಿಸಿದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲ: ಶಕ್ತಿ, ಸೈನ್ಯ; ಸುಳಿ: ಸುತ್ತು, ಆವರ್ತ; ಮಸಗು: ಹರಡು; ಕೆರಳು; ಮೈ: ತನು,ದೇಹ; ಬಳಸು: ಉಪಯೋಗಿಸು; ಕಾದು: ಹೋರಾಡು; ವೀರ: ಪರಾಕ್ರಮಿ; ಕೂಡೆ: ಜೊತೆ; ತೆಲೆ: ಶಿರ; ಒತ್ತು: ಚುಚ್ಚು, ತಿವಿ, ನೂಕು; ಒಲವು: ಪ್ರೀತಿ; ನಿಲಿಸು: ತಡೆ; ಬಂದು: ಆಗಮಿಸು; ಬಯಲ: ನಿರರ್ಥಕವಾದುದು; ಅಗ್ಗಳಿಕೆ: ಶ್ರೇಷ್ಠತೆ, ಹೊಗಳಿಕೆ; ಬಿಡು: ತ್ಯಜಿಸು; ಕೆದರು: ಹರಡು; ಮಾಣ್: ಬಿಡು; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಮಲೆತು +ಧಾಳಾಧೂಳಿಯಲಿ +ಬಲ
ಸುಳಿ +ಮಸಗಿ+ಎನ್ನೊಬ್ಬನನು +ಮೈ
ಬಳಸಿ +ಕಾದಿತು +ವೀರ +ಕರ್ಣನ +ಕೂಡೆ +ತಲೆಯೊತ್ತಿ
ಒಲವರವು+ ನಿನಗುಳ್ಳರ್+ಆಗಳೆ
ನಿಲಿಸಿದಾ +ನೀ +ಬಂದು +ಬಯಲ್
ಅಗ್ಗಳಿಕೆಯನೆ +ಬಿಡೆ +ಕೆದರುತಿಹೆ+ ಮಾಣೆಂದು +ನೃಪ +ನುಡಿದ

ಅಚ್ಚರಿ:
(೧) ಕೇವಲ ಹೊಗಳಿಕೆ ನಿಲ್ಲಿಸು ಎಂದು ಹೇಳುವ ಪರಿ – ಬಯಲಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ

ಪದ್ಯ ೨೮: ಕರ್ಣನು ಭೀಮನನ್ನು ಬಿಟ್ಟು ಯಾರ ಮುಂದೆ ಯುದ್ಧಕ್ಕೆ ನಿಂತನು?

ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ವೈರಿ ಸೈನ್ಯವು ನಾಶವಾಗುತ್ತಿರಲು, ಕೌರವರ ಸೈನ್ಯದ ಮೇಲೆ ಭೀಮನ ರೌದ್ರನರ್ತನವನ್ನು ಗಮನಿಸದೆ, ಕರ್ಣನು ಧರ್ಮಜನ ಕಡೆಗೆ ತನ್ನ ರಥವನ್ನು ತಿರುಗಿಸಿ ಧರ್ಮಜನೆದುರು ಬಂದು, ಯುದ್ಧಕ್ಕೆ ಅಂಜಬೇಡ, ನಿನ್ನ ಕೈಚಳಕವನ್ನು ತೋರಿಸು, ಶೂರನಾಗು ಎಂದು ಗರ್ಜಿಸುತ್ತಾ ರಣರಂಗದಲ್ಲಿ ವಿಪ್ಲವವನ್ನೆಬ್ಬಿಸಿದನು.

ಅರ್ಥ:
ಮುರಿ: ಸೀಳು; ಪಡಿಬಲ: ವೈರಿಸೈನ್ಯ; ಜರುಹು: ಜರುಗಿಸು; ಬಿರು: ಬಿರುಸಾದುದು; ಬಿರುಬು: ಆವೇಶ; ರಥ: ಬಂಡಿ; ನೂಕು: ತಳ್ಳು; ಸಮ್ಮುಖ: ಎದುರು; ಇರಿ: ಚುಚ್ಚು; ಅಂಜು: ಹೆದರು; ಕೈ: ಹಸ್ತ; ಮರೆ: ಜ್ಞಾಪಕದಿಂದ ದೂರವುಳಿ; ಕಲಿ: ಶೂರ; ಬೊಬ್ಬೆ: ಗರ್ಜಿಸು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿಯಾಗು; ತಾಗು: ಮುಟ್ಟು; ಕಲಿ: ಶೂರ;

ಪದವಿಂಗಡಣೆ:
ಮುರಿಯೆ +ಪಡಿಬಲವಾಕೆಯಲಿ +ಬಿಡೆ
ಜರೆದು +ಬಿಟ್ಟನು +ರಥವ +ಭೀಮನ
ಬಿರುಬ+ ಕೊಳ್ಳದೆ+ ನೂಕಿದನು +ಧರ್ಮಜನ +ಸಮ್ಮುಖಕೆ
ಇರಿತಕ್+ಅಂಜದಿರ್+ಅಂಜದಿರು +ಕೈ
ಮರೆಯದಿರು +ಕಲಿಯಾಗ್+ಎನುತ +ಬೊ
ಬ್ಬಿರಿದು +ಧಾಳಾಧೂಳಿಯಲಿ +ತಾಗಿದನು +ಕಲಿಕರ್ಣ

ಅಚ್ಚರಿ:
(೧) ಅಂಜದಿರು; ಧಾಳಾಧೂಳಿ – ಪದದ ಬಳಕೆ