ಪದ್ಯ ೬೨: ಭೀಮನು ಕೌರವರ ದುಷ್ಕೃತ್ಯವನ್ನು ಹೇಗೆ ವಿವರಿಸಿದನು?

ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ (ಗದಾ ಪರ್ವ, ೧೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ದ್ರೌಪದಿಯು ತಾನು ರಜಸ್ವಲೆಯೆಂದು ದೈನ್ಯದಿಂದ ಹೇಳಿದರೂ ದ್ರೌಪದಿಯನ್ನು ರಾಜ ಸಭೆಗೆ ಎಳೆತಂದವರು ಹೆಚ್ಚಿನ ಸಜ್ಜನರು. ಸಭೆಯ ನಡುವೆ ಸೀರೆಯನ್ನು ಸುಲಿದವರು ಸುಲಿಸಿದವರು ಧಾರ್ಮಿಕರು, ನಾವು ದುಷ್ಟರು ನೀವು ಸಜ್ಜನರು, ತಾಯೇ ನಾವು ಮಾಡಿದ ತಪ್ಪನ್ನು ಸಹಿಸಿಕೋ ಎಂದು ಭೀಮನು ದ್ರೌಪದಿಯಲ್ಲಿ ಬೇಡಿದನು.

ಅರ್ಥ:
ಲಲನೆ: ಹೆಣ್ಣು; ಋತುಮತಿ: ಸ್ತ್ರೀಯರ ಮುಟ್ಟಿನ ಸಮಯ, ರಜಸ್ವ; ಸಭೆ: ದರಬಾರು; ಎಳೆ: ತನ್ನ ಕಡೆಗೆ ಸೆಳೆದುಕೊ, ಸೆಳೆ; ಅಧಿಕ: ಹೆಚ್ಚು; ಸಜ್ಜನ: ಒಳ್ಳೆಯ ನಡತೆಯುಳ್ಳವ; ಅಳಿ: ಸಣ್ಣದು; ಉಟ್ಟ: ಧರಿಸಿದ; ಸೀರೆ: ಬಟ್ಟೆ; ಊರು: ಪ್ರದೇಶ; ಮಧ್ಯ: ನಡುವೆ; ಸುಲಿಸು: ಬಿಚ್ಚು; ಧಾರ್ಮಿಕ: ಸಜ್ಜನ; ಖಳ: ದುಷ್ಟ; ಸುಜನ: ಒಳ್ಳೆಯವ; ಸ್ಖಲಿತ: ತಪ್ಪು, ಅಪರಾಧ; ಸೈರಿಸು: ತಾಳು, ಸಹಿಸು; ತಾಯೆ: ಮಾತೆ;

ಪದವಿಂಗಡಣೆ:
ಲಲನೆ +ಋತುಮತಿಯೆಂದಡೆಯು+ ಸಭೆ
ಗೆಳೆದು +ತಂದವರ್+ಅಧಿಕ+ಸಜ್ಜನರ್
ಅಳಿಕುಳಾಳಿಕೆಯುಟ್ಟ+ ಸೀರೆಯನ್+ಊರು+ಮಧ್ಯದಲಿ
ಸುಲಿಸಿದರು+ ಧಾರ್ಮಿಕರು +ತಾವೇ
ಖಳರು +ನೀವೇ +ಸುಜನರ್+ಎಮ್ಮೀ
ಸ್ಖಲಿತವನು +ನೀವಿನ್ನು +ಸೈರಿಸಿ +ತಾಯೆ +ನಮಗೆಂದ

ಅಚ್ಚರಿ:
(೧) ಕೌರವರ ಮಹಾಪರಾಧ – ಅಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ ಸುಲಿಸಿದರು
(೨) ಸಜ್ಜನ, ಧಾರ್ಮಿಕ, ಸುಜನ – ಸಾಮ್ಯಾರ್ಥ ಪದ

ಪದ್ಯ ೪೩: ಶಲ್ಯನು ಕರ್ಣನಿಗೆ ಯಾರನ್ನು ಕೊಲ್ಲಲು ಹೇಳಿದನು?

ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನು ನಕುಲ, ಸಹದೇವ, ಸಾತ್ಯಕಿ, ಯುಧಿಷ್ಠಿರರ ಮೇಲೆ ದಾಳಿ ಮಾಡುತ್ತಿದುದನ್ನು ನೋಡಿದ ಶಲ್ಯನು ಅಯ್ಯೋ, ಕರ್ಣ ಇವರೆಲ್ಲರೂ ನೀತಿವಂತರು, ಕುಟಿಲತೆಯನ್ನರಿಯದವರು, ಧರ್ಮಮಾರ್ಗದಲ್ಲಿ ನಡೆಯುವವರು, ಇವರನ್ನು ಕೊಲ್ಲಬೇಡ, ಭೀಮಾರ್ಜುನರಿಬ್ಬರೇ ನಮಗೆ ಬಾಧಕರು, ಅವರನ್ನು ಸಂಹರಿಸು ಎಂದು ಕರ್ಣನಿಗೆ ಶಲ್ಯನು ಹೇಳಿದನು

ಅರ್ಥ:
ಅಕಟಕಟ: ಅಯ್ಯೋ; ನರೇಶ: ರಾಜ; ಅಕುಟಿಲ: ಸಾತ್ವಿಕರು, ಕುಟಿಲತೆಯನ್ನರಿಯದವರು; ನಯ: ಶಾಸ್ತ್ರ, ಮೃದುತ್ವ; ಕೋವಿದ; ಪಂಡಿತ; ಧಾರ್ಮಿಕ: ಧರ್ಮ ಮಾರ್ಗಿಗಳು; ಕೊಲು: ಸಾಯಿಸು; ಅತಿ: ಬಹಳ; ಬಾಧಕ: ತೊಂದರೆ; ಸಂಹರಿಸು: ಸಾಯಿಸು;

ಪದವಿಂಗಡಣೆ:
ಅಕಟಕಟ +ರಾಧೇಯ +ಕೇಳ್+ ಈ
ನಕುಳನ್+ಈ+ ಸಹದೇವನ್+ಈ+ ಸಾ
ತ್ಯಕಿ +ನರೇಶ್ವರರ್+ಎನಿಸುವ್+ಈ+ ಕುಂತೀ+ಕುಮಾರಕರು
ಅಕುಟಿಲರು+ ನಯಕೋವಿದರು +ಧಾ
ರ್ಮಿಕರ+ ಕೊಲಬೇಡಿವರನ್+ಅತಿ+ ಬಾ
ಧಕರು +ಭೀಮಾರ್ಜುನರ +ಸಂಹರಿಸೆಂದನಾ +ಶಲ್ಯ

ಅಚ್ಚರಿ:
(೧) ಅಕುಟಿಲ, ನಯಕೋವಿದ, ಧಾರ್ಮಿಕ – ಗುಣಗಾನ ಪದಗಳು

ಪದ್ಯ ೨೪: ಉದ್ಯಾನವು ಹೇಗೆ ಕೃಷ್ಣನಿಗೆ ಸ್ವಾಗತವನೀಡಿತು?

ನಸು ಬಿರದ ಪರಿಪಕ್ವ ದಾಡಿಮ
ವಸರದೊಳಗರವಟ್ಟಿಗೆಯ ದರ
ಹಸಿತ ಪಂಕಜಗಳಿತ ಮಕರಂದದ ತಟಾಕದಲಿ
ರಸಭರಿತ ಖರ್ಜೂರ ಫಲ ಸಂ
ಪ್ರಸರ ಛತ್ರವನೆಸಗಿಯುಪವನ
ವೆಸೆದುದೈ ಧಾರ್ಮಿಕನವೊಲು ಯದುರಾಯನಿದಿರಿನಲಿ (ಉದ್ಯೋಗ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪೂರ್ಣವಾಗಿ ಹಣ್ಣಾಗಿ ಸ್ವಲ್ಪ ಸೀಳಿದ ದಾಳಿಂಬೆ ಹಣ್ಣುಗಳಿಂದ ಹರಡಿದ ಗಿಡಗಳು, ತಮ್ಮ ಬಾಯಾರಿಕೆಯನ್ನು ನಿವಾರಿಸಲು ಸ್ವಲ್ಪ ಅರಳಿದ ತಾವೆರಗಳಿಂದ ಹೊರಹೊಮ್ಮಿದ ರಸಗಳಿಂದ ಕೂಡಿದ ಜಲಾಶಯಗಳು, ಚೆನ್ನಾಗಿ ಹಣ್ಣಾದ ಖರ್ಜೂರದ ಹಣ್ಣುಗಳುಳ್ಳ ಮರಗಳು ಛತ್ರಿಯಂತೆ ಹರಡಿರಲು ಸೊಗಸಾದ ಉಪವನವು ಧಾರ್ಮಿಕನಾದ ಕೃಷ್ಣನ ಎದುರು ನೋಡಿತು.

ಅರ್ಥ:
ನಸು: ಕೊಂಚ, ಸ್ವಲ್ಪ, ಮಂದಹಾಸ; ಬಿರಿ: ಒಡೆ, ಸೀಳು; ಪರಿಪಕ್ವ: ಪೂರ್ಣವಾಗಿ ಹಣ್ಣಾದ, ಕಳಿತ; ದಾಡಿಮ: ದಾಳಿಂಬೆ; ಅರವಟ್ಟಿಗೆ: ದಾರಿಹೋಕರಿಗೆ ನೀರು ಪಾನಕ, ಆಹಾರ; ಪಸರು: ಹರಡು; ದರ: ಕೊಂಚ, ನಸು; ಹಸಿತ: ನಗೆ, ಹಾಸ; ಪಂಕಜ: ತಾವರೆ; ಮಕರಂದ: ಜೀನು; ತಟಾಕ: ಜಲಾಶಯ, ಕೆರೆ; ರಸ: ಸಾರ; ಭರಿತ: ತುಂಬಿದ; ಫಲ: ಹಣ್ಣು; ಸಂಪ್ರಸರ: ಹರಡುವುದು, ವಿಸ್ತಾರ; ಛತ್ರ: ಕೊಡೆ; ಎಸಗು: ಮಾಡು; ಉಪವನ: ಉದ್ಯಾನ; ಧಾರ್ಮಿಕ: ಧರ್ಮವನ್ನು ಆಚರಿಸುವವನು; ಇದಿರು: ಎದುರು;

ಪದವಿಂಗಡಣೆ:
ನಸು +ಬಿರದ +ಪರಿಪಕ್ವ +ದಾಡಿಮ
ಪಸರದೊಳಗ್+ಅರವಟ್ಟಿಗೆಯ +ದರ
ಹಸಿತ+ ಪಂಕಜಗಳಿತ+ ಮಕರಂದದ +ತಟಾಕದಲಿ
ರಸಭರಿತ+ ಖರ್ಜೂರ +ಫಲ +ಸಂ
ಪ್ರಸರ+ ಛತ್ರವನ್+ಎಸಗಿ+ಉಪವನವ್
ಎಸೆದುದೈ +ಧಾರ್ಮಿಕನವೊಲು +ಯದುರಾಯನ್+ಇದಿರಿನಲಿ

ಅಚ್ಚರಿ:
(೧) ಉದ್ಯಾನವನ್ನು ವರ್ಣಿಸುವ ಪದ್ಯ
(೨) ನಸು, ದರ; ಪರಿಪಕ್ವ, ರಸಭರಿತ – ಸಮನಾರ್ಥಕ ಪದ