ಪದ್ಯ ೪೪: ಶಲ್ಯನ ಮೇಲಿನ ಆಕ್ರಮಣ ಹೇಗಿತ್ತು?

ಚೂರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳು ಜ
ಜ್ಝಾರರೇರಿತು ಸರಳ ಧಾರಾ
ಸರದಲಿ ದಕ್ಕಡರು ಬಿಲ್ಲವರಾಂತರರಿಭಟನ (ಶಲ್ಯ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಚುಚ್ಚುವ ಮುಖಸೂನಿಗೆಗಳನ್ನು ಕಟ್ಟಿದ ಕಮಾನುಗಳನ್ನುಳ್ಳ ಬಂಡಿಗಳು ಕೋಲಾಹಲಮಾಡುತ್ತಾ ಶಲ್ಯನನ್ನು ಮುತ್ತಿದವು. ವೀರರು ಬೊಬ್ಬೆಯಿಟ್ಟು ಮುಂದೆ ನುಗ್ಗಿದರು ಧೀರರಾದ ಬಿಲ್ಲುಗಾರರು ಶಲ್ಯನನ್ನು ಬಾಣಗಳಿಂದ ಹೊಡೆದರು.

ಅರ್ಥ:
ಚೂರಿಸು: ಚುಚ್ಚು; ಮೊಗ: ಮುಖ; ಸೂನಿಗೆ: ಒಂದು ಬಗೆಯ ಆಯುಧ; ಕೊಲ್ಲಾರಿ: ಬಂಡಿಯ ಬಿದಿರಿನ ಕಮಾನು; ಶರ: ಬಾಣ; ಬಂಡಿ: ರಥ; ಹೊಂದೇರು: ಚಿನ್ನದ ತೇರು; ಕವಿ: ಆವರಿಸು; ಕೋಲ: ಬಾಣ; ಕೋಲಾಹಲ: ಅವಾಂತರ; ತೋಹು: ಕಪಟ, ಮೋಸ; ಉಬ್ಬು: ಅಧಿಕ್ಯ; ಬೊಬ್ಬೆ: ಸುಟ್ಟ ಗಾಯ, ಗುಳ್ಳೆ; ಜಜ್ಝಾರ: ಪರಾಕ್ರಮಿ; ಸರಳ: ಬಾಣ; ಧಾರಾ: ವರ್ಷ; ದಕ್ಕಡ: ಸಮರ್ಥ, ಬಲಶಾಲಿ; ಬಿಲ್ಲು: ಚಾಪ; ಅರಿಭಟ: ವೈರಿಯ ಸೈನಿಕ;

ಪದವಿಂಗಡಣೆ:
ಚೂರಿಸುವ +ಮೊಗ+ಸೂನಿಗೆಯ +ಕೊ
ಲ್ಲಾರಿಗಳ +ಶರ+ಬಂಡಿಗಳ+ ಹೊಂ
ದೇರು +ಕವಿದುವು +ಕೋಲಕೋಲಾಹಲದ+ ತೋಹಿನಲಿ
ವೀರರ್+ಉಬ್ಬಿನ +ಬೊಬ್ಬೆಗಳು +ಜ
ಜ್ಝಾರರ್+ಏರಿತು +ಸರಳ +ಧಾರಾ
ಸರದಲಿ +ದಕ್ಕಡರು +ಬಿಲ್ಲವರಾಂತರ್+ಅರಿಭಟನ

ಅಚ್ಚರಿ:
(೧) ಕೋಲಕೋಲಾಹಲದ ತೋಹಿನಲಿ – ಕೋಲ ಪದದ ಬಳಕೆ

ಪದ್ಯ ೨೧: ದ್ರೋಣನು ಸೈನಿಕರಿಗೆ ಏನೆಂದು ಬೋಧಿಸಿದನು?

ಉರವಣಿಸುವುದು ಕೊಂಡ ಹಜ್ಜೆಗೆ
ಮುರಿಯಲಾಗದು ಶಸ್ತ್ರ ಧಾರಾ
ಪರಮತೀರ್ಥಸ್ನಾನ ತೊಳೆವುದು ಭವದ ಕಲ್ಬಿಷವ
ಹರಣದಲಿ ಕಕ್ಕುಲಿತೆ ಬೇಡು
ದ್ಧರಿಸುವುದು ಸತ್ಕುಲತೆಯನು ಸಂ
ವರಿಸುವುದು ಸದ್ಗತಿಯನೆಂದನು ದ್ರೋಣ ನಿಜಬಲಕೆ (ದ್ರೋಣ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಸೈನ್ಯಕ್ಕೆ ವೇಗದಿಂದ ಯುದ್ಧಕ್ಕೆ ಮುಂದುವರಿದು ಇಟ್ಟ ಹೆಜ್ಜೆಯನ್ನು ಹಿಂದೆಗೆಯಬೇಡಿರಿ. ಆಯುಧಧಾರೆಯ ತೀರ್ಥಸ್ನಾನವು ಸಂಸಾರದ ಪಾಪವನ್ನು ತೊಳೆದು ಹಾಕುತ್ತದೆ. ಪ್ರಾಣದ ಮೇಲೆ ಅತಿಮೋಹವನ್ನು ಬಿಟ್ಟು, ನಿಮ್ಮ ಸತ್ಕುಲವನ್ನು ಉದ್ಧಾರ ಮಾಡಿರಿ, ಸದ್ಗತಿಯನ್ನು ಪಡೆಯಿರಿ ಎಂದು ಬೋಧಿಸಿದನು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಹಜ್ಜೆ: ಹೆಜ್ಜೆ, ಪಾದ; ಮುರಿ: ಸೀಳು; ಶಸ್ತ್ರ: ಆಯುಧ; ಧಾರೆ: ಪ್ರವಾಹ; ಪರಮ: ಶ್ರೇಷ್ಠ; ತೀರ್ಥ: ಪವಿತ್ರವಾದ ನೀರು; ಸ್ನಾನ: ಮಜ್ಜನ; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಭವ: ಇರುವಿಕೆ, ಅಸ್ತಿತ್ವ; ಕಿಲ್ಬಿಷ: ಪಾಪ; ಹರಣ: ಜೀವ, ಪ್ರಾಣ; ಕಕ್ಕುಲತೆ: ಆಸಕ್ತಿ, ಪ್ರೀತಿ; ಉದ್ಧರಿಸು: ಏಳಿಗೆ; ಕುಲ: ವಂಶ; ಸಂವರಿಸು: ಸಮಾಧಾನಗೊಳಿಸು, ಕಾಪಾಡು; ಸದ್ಗತಿ: ಮೋಕ್ಷ; ಬಲ: ಸೈನ್ಯ;

ಪದವಿಂಗಡಣೆ:
ಉರವಣಿಸುವುದು +ಕೊಂಡ +ಹಜ್ಜೆಗೆ
ಮುರಿಯಲಾಗದು +ಶಸ್ತ್ರ +ಧಾರಾ
ಪರಮತೀರ್ಥಸ್ನಾನ +ತೊಳೆವುದು +ಭವದ+ ಕಲ್ಬಿಷವ
ಹರಣದಲಿ +ಕಕ್ಕುಲಿತೆ +ಬೇಡ್
ಉದ್ಧರಿಸುವುದು +ಸತ್ಕುಲತೆಯನು +ಸಂ
ವರಿಸುವುದು +ಸದ್ಗತಿಯನೆಂದನು +ದ್ರೋಣ +ನಿಜಬಲಕೆ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸತ್ಕುಲತೆಯನು ಸಂವರಿಸುವುದು ಸದ್ಗತಿಯನೆಂದನು
(೨) ದ್ರೋಣರ ಹಿತನುಡಿ – ಶಸ್ತ್ರ ಧಾರಾ ಪರಮತೀರ್ಥಸ್ನಾನ ತೊಳೆವುದು ಭವದ ಕಲ್ಬಿಷವ

ಪದ್ಯ ೩೦: ಧರ್ಮಜನು ದುಃಖದಿಂದ ಯಾರ ಮೇಲೆ ಒರಗಿದನು?

ಇನ್ನು ಹೇಳುವುದೇನೆನುತ ಕೈ
ಸನ್ನೆಯಲಿ ಮಾತಾಡಿ ಭೂಪತಿ
ಬೆನ್ನತೆತ್ತನು ಭೀಮಸೇನನ ವಿಪುಲ ವಕ್ಷದಲಿ
ತನ್ನ ಮರೆದನು ನಯನ ಧಾರಾ
ಭಿನ್ನ ಚಾರು ಕಪೋಲನಿರೆ ಸಂ
ಪನ್ನ ಶೋಕಾಗ್ನಿಯಲಿ ಬೆಂದುದು ಸಕಲ ಜನಹೃದಯ (ದ್ರೋಣ ಪರ್ವ, ೮ ಸಂಧಿ, ೩೦ ಪದ್ಯ
)

ತಾತ್ಪರ್ಯ:
ಧರ್ಮಜನು ವಿವರಿಸುತ್ತಾ, ಇನ್ನು ವಿವರಿಸಲು ಏನಿದೆ ಎಂದು ಕೈಸನ್ನೆ ಮಾಡಿ ಭೀಮನ ಎದೆಗೆ ಒರಗಿಕೊಂಡು ಮೂರ್ಛಿತನಾದನು. ಅವನ ಕೆನ್ನೆಗಳು ಕಂಬನಿಯಿಂದ ತೊಯ್ದಿದ್ದವು. ಅವನನ್ನು ಕಂಡು ಎಲ್ಲರೂ ಸಂಪೂರ್ಣ ಶೋಕಮಗ್ನರಾದರು.

ಅರ್ಥ:
ಹೇಳು: ತಿಳಿಸು; ಕೈ: ಹಸ್ತ; ಸನ್ನೆ: ಗುರುತು; ಮಾತು: ನುಡಿ; ಭೂಪತಿ: ರಾಜ; ಬೆನ್ನು: ಹಿಂಭಾಗ; ವಿಪುಲ: ಬಹಳ; ವಕ್ಷ: ಎದೆ, ಉರಸ್ಸು; ಮರೆ: ನೆನಪಿನಿಂದ ದೂರ ಮಾಡು; ನಯನ: ಕಣ್ಣು; ಧಾರಾ: ವರ್ಷ; ಭಿನ್ನ: ಚೂರು; ಕಪೋಲ: ಕೆನ್ನೆ; ಸಂಪನ್ನ: ಸಮೃದ್ಧವಾದ; ಶೋಕಾಗ್ನಿ: ದುಃಖದ ಬೆಂಕಿ; ಬೆಂದು: ಸುಡು; ಸಕಲ: ಎಲ್ಲಾ; ಹೃದಯ: ಎದೆ;

ಪದವಿಂಗಡಣೆ:
ಇನ್ನು +ಹೇಳುವುದೇನ್+ಎನುತ+ ಕೈ
ಸನ್ನೆಯಲಿ +ಮಾತಾಡಿ +ಭೂಪತಿ
ಬೆನ್ನತೆತ್ತನು +ಭೀಮಸೇನನ+ ವಿಪುಲ+ ವಕ್ಷದಲಿ
ತನ್ನ +ಮರೆದನು+ ನಯನ+ ಧಾರಾ
ಭಿನ್ನ+ ಚಾರು+ ಕಪೋಲನಿರೆ+ ಸಂ
ಪನ್ನ +ಶೋಕಾಗ್ನಿಯಲಿ +ಬೆಂದುದು +ಸಕಲ+ ಜನಹೃದಯ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭೂಪತಿ ಬೆನ್ನತೆತ್ತನು ಭೀಮಸೇನನ

ಪದ್ಯ ೫೫: ಅರ್ಜುನನು ಉತ್ತರನಿಗೆ ಏನನ್ನು ನೀಡಿದನು?

ಕವಚವಿದೆ ಕೊಳ್ ಬಾಣ ಧಾರಾ
ನಿವಹ ಶಸ್ತ್ರಸಂಭವಿನ್ನಾ
ಹವದೊಳಂಜದಿರೆನುತೆ ಕುಡಲುತ್ತರನು ದುಗುಡದೊಳು
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋ ಎನ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ (ವಿರಾಟ ಪರ್ವ, ೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅರ್ಜುನನು ಯುದ್ಧದಲ್ಲಿ ಶತ್ರುವಿನ ಬಾಣಗಳ ಸುರಿಮಳೆಯನ್ನು ತಡೆಹಿಡಿಯುವ ಕವಚವನ್ನು ತೆಗೆದುಕೋ, ಇನ್ನು ಮುಂದೆ ನಿನಗೆ ಯುದ್ಧದಲ್ಲಿ ಭಯವಿಲ್ಲವೆಂದು ಕವಚವನ್ನು ಕೊಟ್ಟನು. ಆಗ ಉತ್ತರನು ಯುದ್ಧವೆಂದರೇನೆಂದು ತಿಳಿಯದ ನನ್ನನ್ನುಉ ಕೊಂದವನು ನೀನೋ, ಭೀಷ್ಮನೋ ಹೇಳು ಎನಲು, ಅರ್ಜುನನು ನಕ್ಕು ಇದು ನನ್ನ ಅಪರಾದ, ಒಪ್ಪಿಕೊಂಡೆ ಎಂದನು.

ಅರ್ಥ:
ಕವಚ: ಹೊದಿಕೆ; ಕೊಳ್: ತೆಗೆದುಕೋ; ಬಾಣ: ಸರಳು; ಧಾರೆ: ಮಳೆ; ನಿವಹ: ಗುಂಪು; ಶಸ್ತ್ರ: ಆಯುಧ; ಸಂಭವ: ಹುಟ್ಟು, ಉತ್ಪತ್ತಿ; ಆಹವ: ಯುದ್ಧ; ಅಂಜು: ಹೆದರು; ಕುಡಲು: ನೀಡು; ದುಗುಡ: ದುಃಖ; ಬವರ: ಕಾಳಗ, ಯುದ್ಧ; ಆದಿ: ಮೊದಲು; ಅರಿ: ತಿಳಿ; ಕೊಂದು: ಸಾಯಿಸು; ನುಡಿ: ಮಾತು; ನಗು: ಸಂತಸ; ಅಪರಾಧ: ತಪ್ಪು;

ಪದವಿಂಗಡಣೆ:
ಕವಚವಿದೆ +ಕೊಳ್ +ಬಾಣ +ಧಾರಾ
ನಿವಹ+ ಶಸ್ತ್ರ+ಸಂಭವಿನ್
ಆಹವದೊಳ್+ಅಂಜದಿರೆನುತೆ+ ಕುಡಲ್+ಉತ್ತರನು +ದುಗುಡದೊಳು
ಬವರದ್+ಆದಿಯನ್+ಅರಿಯದನ +ಕೊಂ
ದವನು +ನೀನೋ +ಭೀಷ್ಮನೋ +ಎನಲ್
ಅವನ +ನುಡಿಗ್+ಅರ್ಜುನನು +ನಗುತ್+ಅಪರಾಧ+ಉಂಟೆಂದ

ಅಚ್ಚರಿ:
(೧) ಬವರ, ಆವಹ – ಸಮನಾರ್ಥಕ ಪದ