ಪದ್ಯ ೭: ಭೀಮನ ರಥವನ್ನು ಯಾರು ಆವರಿಸಿದರು?

ಹರೆದ ಬಲ ಹುರಿಗಟ್ಟಿ ಖತಿಯಲಿ
ದೊರೆಯ ಕೂಡೊದಗಿದುದು ಬೀರುವ
ಬಿರುದುಗಹಳೆಯ ದನಿಯ ಘಾಯದ ಭೂರಿ ಭೇರಿಗಳ
ಮೊರೆವ ಬಹುವಿಧ ವಾದ್ಯ ರಭಸದ
ಧರಧುರದ ಕೆಂಧೂಳಿಯಲಿ ಮೋ
ಹರಿಸಿ ಮುಸುಕಿತು ಭೀಮಸೇನನ ರಥದ ಬಳಸಿನಲಿ (ಕರ್ಣ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಓಡಿಹೋಗಿದ್ದ ಕುರುಸೇನೆಯು ಒಂದಾಗಿ ದೊರೆಯೊಡನೆ ಒದಗಿ ಬಂತು. ಬಿರುದುಗಹಳೆಗಳ ಸದ್ದು ಬಡಿಯುವ ದೊಡ್ಡ ಭೇರಿಗಳು, ಮೊರೆಯುವ ವಾದ್ಯಗಳ ಕೋಲಾಹಲದೊಂದಿಗೆ ಸೈನ್ಯವು ನುಗ್ಗಲು ಕೆಂಧೂಳೆದ್ದಿತು. ಸೈನ್ಯವು ಭೀಮನ ರಥವನ್ನು ಆವರಿಸಿದವು.

ಅರ್ಥ:
ಹರೆ: ಹೊರಟುಹೋಗು, ಚೆದುರು; ಬಲ: ಸೈನ್ಯ; ಹುರಿಗಟ್ಟು: ಒಂದಾಗು; ಖತಿ: ಕೋಪ; ದೊರೆ: ರಾಜ; ಕೂಡು: ಜೋತೆ; ಒದಗು: ದೊರೆತುದು, ಉಂಟಾಗು; ಬೀರು: ಮೆರೆವ; ಬಿರುದು: ಗೌರವ ಸೂಚಕ ಹೆಸರು; ಕಹಳೆ: ಜೋರಾದ ಶಬ್ದ, ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ದನಿ: ಧ್ವನಿ, ಶಬ್ದ; ಘಾಯ: ಪೆಟ್ಟು; ಭೂರಿ: ಬಹಳ; ಭೇರಿ: ದುಂದುಭಿ, ಡಂಗುರ; ಮೊರೆ: ಧ್ವನಿ, ಝೇಂಕಾರ; ಬಹುವಿಧ: ಬಹಳ ಬಗೆ; ವಾದ್ಯ: ಸಂಗೀತದ ಸಾಧನ; ರಭಸ: ವೇಗ; ಧರಧುರ: ಆರ್ಭಟ, ಕೋಲಾ ಹಲ; ಕೆಂಧೂಳಿ: ಕೆಂಪಾದ ಧೂಳು; ಮೋಹರ: ಯುದ್ಧ; ಮುಸುಕು: ಹೊದಿಕೆ; ರಥ: ಬಂಡಿ; ಬಳಸು: ಆವರಿಸು, ಸುತ್ತುವರಿ;

ಪದವಿಂಗಡಣೆ:
ಹರೆದ +ಬಲ +ಹುರಿಗಟ್ಟಿ+ ಖತಿಯಲಿ
ದೊರೆಯ +ಕೂಡ್+ಒದಗಿದುದು +ಬೀರುವ
ಬಿರುದು+ಕಹಳೆಯ +ದನಿಯ +ಘಾಯದ +ಭೂರಿ +ಭೇರಿಗಳ
ಮೊರೆವ +ಬಹುವಿಧ+ ವಾದ್ಯ +ರಭಸದ
ಧರಧುರದ +ಕೆಂಧೂಳಿಯಲಿ +ಮೋ
ಹರಿಸಿ +ಮುಸುಕಿತು +ಭೀಮಸೇನನ +ರಥದ +ಬಳಸಿನಲಿ

ಅಚ್ಚರಿ:
(೧) ಸೈನ್ಯವು ಆವರಿಸಿದ ಬಗೆ: ಮೊರೆವ ಬಹುವಿಧ ವಾದ್ಯ ರಭಸದ ಧರಧುರದ ಕೆಂಧೂಳಿಯಲಿ ಮೋಹರಿಸಿ ಮುಸುಕಿತು ಭೀಮಸೇನನ ರಥದ ಬಳಸಿನಲಿ