ಪದ್ಯ ೫೦: ಭೀಮನು ಯಕ್ಷಸೈನಿಕರಿಗೆ ಹೇಗೆ ಉತ್ತರಿಸಿದನು?

ಬೇಡಲರಿಯೆವು ಬೇಡುವರ ಕೂ
ಡಾಡುವವರಾವಲ್ಲ ಕದನವ
ಬೇಡಬಲ್ಲೆವು ಕರೆಯಿಕೊಡಲಾಪರೆ ಧನೇಶ್ವರನ
ಬೇಡುವುದು ಗದೆ ನಿಮ್ಮ ವಕ್ಷವ
ತೋಡಿ ನೆತ್ತರುಗೊಳದೊಳೋಕುಳಿ
ಯಾಡುವುದನೆಂದನಿಲಸುತ ತೂಗಿದನು ನಿಜಗದೆಯ (ಅರಣ್ಯ ಪರ್ವ, ೧೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ನಮಗೆ ಬೇಡುವುದು ತಿಳಿದಿಲ್ಲ, ಬೇಡುವವರ ಜೊತೆಯಲ್ಲಿರುವುದೂ ನಮಗೆ ಗೊತ್ತಿಲ್ಲ. ಕುಬೇರನನ್ನು ಕರೆಯಿರಿ, ಅವನೊಡನೆ ಯುದ್ಧವನ್ನು ಬೇಡಬಲ್ಲೆವು, ನಮ್ಮ ಗದೆಯು ನಿಮ್ಮ ಎದೆಯನ್ನು ಬಗೆದು ಆ ರಕ್ತದ ಕೊಳದ ಓಕುಳಿಯಲ್ಲಿ ಈಜಾಡುತ್ತೇನೆ ಎಂದು ಬೇಡುತ್ತದೆ ಎಂದು ತನ್ನ ಗದೆಯನ್ನು ತಿರುವುತ್ತಾ ಹೇಳಿದನು.

ಅರ್ಥ:
ಬೇಡು: ಕೇಳು; ಅರಿ: ತಿಳಿ; ಕೂಡ: ಜೊತೆ; ಆಡುವವ: ಜೋತೆಯಲ್ಲಿ ಸೇರು; ಕದನ: ಯುದ್ಧ; ಬಲ್ಲೆವು: ತಿಳಿವೆವು; ಕರೆ: ಬರೆಮಾಡು; ಧನೇಶ್ವರ: ಕುಬೇರ; ಗದೆ: ಮುದ್ಗರ; ವಕ್ಷ: ಎದೆ; ತೋಡು: ಚುಚ್ಚು, ತಿವಿ; ನೆತ್ತರು: ರಕ್ತ; ಓಕುಳಿ: ಬಣ್ಣದ ನೀರು; ಅನಿಲಸುತ: ವಾಯುಪುತ್ರ (ಭೀಮ); ತೂಗು: ಅಲ್ಲಾಡಿಸು; ನಿಜ: ತನ್ನ; ಕೊಳ: ಹೊಂಡ;

ಪದವಿಂಗಡಣೆ:
ಬೇಡಲ್+ಅರಿಯೆವು +ಬೇಡುವರ+ ಕೂಡ್
ಆಡುವವರಾವಲ್ಲ+ ಕದನವ
ಬೇಡಬಲ್ಲೆವು +ಕರೆಯಿಕೊಡಲಾಪರೆ +ಧನೇಶ್ವರನ
ಬೇಡುವುದು +ಗದೆ +ನಿಮ್ಮ +ವಕ್ಷವ
ತೋಡಿ +ನೆತ್ತರು+ಕೊಳದೊಳ್+ಓಕುಳಿ
ಆಡುವುದನ್+ಎಂದ್+ಅನಿಲಸುತ+ ತೂಗಿದನು +ನಿಜಗದೆಯ

ಅಚ್ಚರಿ:
(೧) ಬೇಡ, ಬೇಡು ಪದದ ಬಳಕೆ
(೨) ಭೀಮನ ಪರಾಕ್ರಮದ ಮಾತು – ಬೇಡುವುದು ಗದೆ ನಿಮ್ಮ ವಕ್ಷವ ತೋಡಿ ನೆತ್ತರುಗೊಳದೊಳೋಕುಳಿಯಾಡುವುದನೆಂದನಿಲಸುತ ತೂಗಿದನು ನಿಜಗದೆಯ

ಪದ್ಯ ೪: ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ನೋಡಲು ಯಾರು ಬಂದರು?

ವಿಕಟ ರಾಕ್ಷಸ ಯಕ್ಷ ಜನ ಗು
ಹ್ಯಕರು ಕಿನ್ನರಗಣಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಳ ಮಹಾವನಾಂತರವ (ಅರಣ್ಯ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ವಿಕಾರ ರೂಪದ ರಾಕ್ಷಸರು, ಯಕ್ಷರು, ಗುಹ್ಯಕರು, ಕಿನ್ನರರು, ಗಣಗಳೊಡನೆ ಕುಬೇರನು ಪುಷ್ಪಕ ವಿಮಾನದಲ್ಲಿ ಇಂದ್ರಕೀಲ ವನಕ್ಕೆ ಬಂದನು. ಯಮನು ಪಿತೃಗಣ ಧರ್ಮಾಧ್ಯಕ್ಷರ ಪರಿವಾರದೊಡನೆ ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ಕಾಣಲು ಬಂದನು.

ಅರ್ಥ:
ವಿಕಟ: ವಿಕಾರವಾದ, ಕುರೂಪಗೊಂಡ; ರಾಕ್ಷಸ: ದಾನವ; ಯಕ್ಷ: ದೇವತೆಗಳ ಒಂದು ವರ್ಗ; ಗುಹ್ಯಕ: ಯಕ್ಷ; ಕಿನ್ನರ: ಕಿಂಪುರುಷ, ಕುಬೇರನ ಪ್ರಜೆ; ಗಣ: ಗುಂಪು; ಸಹಿತ: ಜೊತೆ; ಪುಷ್ಪಕ: ವಿಮಾನದ ಹೆಸರು; ಧನೇಶ್ವರ: ಕುಬೇರ; ತಪೋವನ: ತಪಸ್ಸು ಮಾಡುವ ಕಾಡು; ಸಕಲ: ಎಲ್ಲಾ; ಪಿತೃ: ಪೂರ್ವಜ; ದೂತ: ರಾಯಭಾರಿ, ಸೇವಕ; ಪ್ರಕರ: ಗುಂಪು, ಸಮೂಹ; ಅಧ್ಯಕ್ಷ: ಒಡೆಯ; ಧರ್ಮ: ಧಾರಣೆ ಮಾಡಿದುದು; ಅಂತಕ: ಯಮ; ಬೆರಸು: ಸೇರು, ಕೂಡು; ಅಂತರ: ಸಮೀಪ; ವನ: ಕಾಡು; ಐತರು: ಬಂದು ಸೇರು;

ಪದವಿಂಗಡಣೆ:
ವಿಕಟ+ ರಾಕ್ಷಸ+ ಯಕ್ಷ +ಜನ +ಗು
ಹ್ಯಕರು +ಕಿನ್ನರ+ಗಣ+ಸಹಿತ+ ಪು
ಷ್ಪಕದಲ್+ಐತಂದನು +ಧನೇಶ್ವರನ್+ಆ+ ತಪೋವನಕೆ
ಸಕಲ+ ಪಿತೃ+ಗಣ+ಸಹಿತ +ದೂತ
ಪ್ರಕರ+ ಧರ್ಮಾಧ್ಯಕ್ಷರೊಡನ್+
ಅಂತಕನು +ಬೆರಸಿದನ್+ಇಂದ್ರಕೀಳ +ಮಹಾವನಾಂತರವ

ಅಚ್ಚರಿ:
(೧) ತಪೋವನ, ಮಹಾವನ – ಇಂದ್ರಕೀಲವನವನ್ನು ಕರೆದ ಪರಿ
(೨) ಧನೇಶ್ವರ, ಅಂತಕ – ಕುಬೇರ, ಯಮನನ್ನು ಕರೆದ ಪರಿ