ಪದ್ಯ ೨೯: ಯಾರಿಗೆ ಮರಣ ತಪ್ಪದು?

ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳೆಂದ (ದ್ರೋಣ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪಾತಾಳದಲ್ಲಿರುವ ನಾಗಗಳು, ಭೂಮಿಯಲ್ಲಿರುವ ಮನುಷ್ಯರು, ಸ್ವರ್ಗದಲ್ಲಿರುವ ದೇವತೆಗಳು ಯಾರು ಇದನ್ನು ಮೀರಲಾರರು. ದೈವವು ಆದಿಯಲ್ಲಿ ಮೃತ್ಯುವನ್ನು ನಿರ್ಮಿಸಿತು. ಅರಸ, ಹಿರ್ಯ, ಧನಿಕ, ಬಡವ್ ಯಾರೇ ಆಗಲಿ ಹುಟ್ಟಿದ ಮೇಲೆ ಸಾಯಲೇಬೇಕು.

ಅರ್ಥ:
ಉರಗ: ಹಾವು; ನರ: ಮನುಷ್ಯ; ದಿವಿಜ: ದೇವತೆ; ಆದಿ: ಮುಂತಾದ; ಪರಿಹರ: ನಿವಾರಣೆ; ಪರುಠವ: ವಿಸ್ತಾರ, ಹರಹು; ಮುನ್ನ: ಮುಂಚೆ; ಆದಿ: ಮುಂಚೆ; ನಿರ್ಮಿಸು: ರಚಿಸು; ಮೃತ್ಯು: ಸಾವು; ಅರಸ: ರಾಜ; ಧನಿಕ: ಶ್ರೀಮಂತ; ಹಿರಿಯ: ದೊಡ್ಡವ; ಬಡವ: ದರಿದ್ರ; ಮರಣ: ಸಾವು; ಜನಿಸು: ಹುಟ್ಟು; ಬಳಿಕ: ನಂತರ; ಮಗ: ಪುತ್ರ; ಕೇಳು: ಆಲಿಸು;

ಪದವಿಂಗಡಣೆ:
ಉರಗ +ನರ +ದಿವಿಜಾದಿಗಳಿಗ್+ಇದು
ಪರಿಹರಿಸಲ್+ಅಳವಲ್ಲ+ ದೈವದ
ಪರುಠವಣೆ+ ಮುನ್ನಾದಿಯಲಿ+ ನಿರ್ಮಿಸಿತು+ ಮೃತ್ಯುವನು
ಅರಸನಾಗಲಿ+ ಧನಿಕನಾಗಲಿ
ಹಿರಿಯನಾಗಲಿ+ ಬಡವನಾಗಲಿ
ಮರಣ +ಜನಿಸಿದ+ ಬಳಿಕ+ ತಪ್ಪದು +ಮಗನೆ+ ಕೇಳೆಂದ

ಅಚ್ಚರಿ:
(೧) ಗೀತೆಯ ವಾಕ್ಯವನ್ನು ಹೇಳುವ ಪರಿ – ಮರಣ ಜನಿಸಿದ ಬಳಿಕ ತಪ್ಪದು

ಪದ್ಯ ೫೬: ಲೋಕಕ್ಕೆ ಸರ್ವಕ್ಕೂ ಯಾವುದು ಸಾಧನ?

ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತ ಸುಖಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಈ ಭೂಮಿಯಲ್ಲಿ ಹಣವುಳ್ಳವನು ಮಹಾತ್ಮನೆಂದು ಕರೆಸಿಕೊಳ್ಳುತ್ತಾನೆ, ಆತ ಏನನ್ನು ಬಯಸಿದರು ಅದು ಅವನ ಕೈಗೆ ಸಿಗುತ್ತದೆ, ಅದೇ ನಿರ್ಧನಿಕನು ಬಯಸಿದ ಬಯಕೆ ವ್ಯರ್ಥವಾಗುತ್ತದೆ. ಧನಿಕನಿಗೆ ಸುಖವು ದೊರಕುತ್ತದೆ. ಲೋಕದಲ್ಲಿ ಸರ್ವಕ್ಕೂ ಸಾಧನವು ಹಣವಲ್ಲದೆ ಬೇರಿಲ್ಲ ಎಂದು ಹಣದ ಪ್ರಾಮುಖ್ಯತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಧನ: ಹಣ, ಅರ್ಥ; ಮಹಾತ್ಮ: ಸತ್ಪುರುಷ, ಶ್ರೇಷ್ಠ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಕೈಸಾರುವುದು: ಕೈಗೆ ಸಿಗುವುದು; ನಿರ್ಧನಿಕ: ಬಡವ; ಬಯಸು: ಆಸೆಪಡು; ಬಯಲು:ವ್ಯರ್ಥವಾದುದು; ಧನಿಕ: ಹಣವಂತ, ಶ್ರೀಮಂತ; ಸಮಸ್ತ: ಎಲ್ಲಾ; ಸುಖ: ಸಂತೋಷ; ಸಂಜನಿಸು: ಹುಟ್ಟು; ಸರ್ವಕ್ಕೆ: ಎಲ್ಲಕ್ಕೂ; ಸಾಧನ:ಗುರಿಮುಟ್ಟುವ ಪ್ರಯತ್ನ; ಭುವನ: ಭೂಮಿ; ಅನ್ಯ: ಬೇರೆ;

ಪದವಿಂಗಡಣೆ:
ಧನವನುಳ್ಳ +ಮಹಾತ್ಮನ್+ಆವುದ
ನೆನೆದೊಡ್+ಅದು +ಕೈಸಾರುವುದು +ನಿ
ರ್ಧನಿಕ +ಬಯಸಿದ +ಬಯಕೆ +ಬಯಲಹುದಲ್ಲದೇ +ಬೇರೆ
ಧನಿಕನಂತೆ+ ಸಮಸ್ತ+ ಸುಖಸಂ
ಜನಿಸುವುದೆ +ಸರ್ವಕ್ಕೆ +ಸಾಧನ
ಧನವದಲ್ಲದೆ+ ಭುವನದೊಳಗ್+ಅನ್ಯತ್ರವಿಲ್ಲೆಂದ

ಅಚ್ಚರಿ:
(೧) ನುಡಿವಾಕ್ಯ ನೀಡುವ ಪದ್ಯ – ಸರ್ವಕ್ಕೆ ಸಾಧನ ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ
(೨) ಧನಿಕ, ನಿರ್ಧನಿಕ – ವಿರುದ್ಧ ಪದ
(೩) ಬಯಕೆ, ಬಯಸು – ಸಾಮ್ಯಾರ್ಥ ಪದಗಳು
(೪) ‘ಸ’ಕಾರದ ಪದಗಳ ಜೋಡಣೆ – ಸಮಸ್ತ ಸುಖಸಂಜನಿಸುವುದೆ ಸರ್ವಕ್ಕೆ ಸಾಧನ

ಪದ್ಯ ೧೧೫: ಯಾರ ಜನ್ಮ ನಿರರ್ಥಕ?

ಗರುವ ಮಾನ್ಯನು ಮಾನಿ ಸುದಯಾ
ಪರನು ಕಡುಶುಚಿ ಭೋಗಿ ರೂಪೋ
ತ್ತರನು ಧನಿಕನು ರಾಜಪೂಜ್ಯನು ಕೀರ್ತಿವಲ್ಲಭನು
ಗುರು ಜನಕೆ ಗುರು ವಿದ್ಯೆಯುಳ್ಳವ
ನರಸ ಕೇಳೈ ವಿದ್ಯೆಯಿಲ್ಲದ
ನರನು ನರಪಶುವವನ ಜನ್ಮ ನಿರರ್ಥ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೧೫ ಪದ್ಯ)

ತಾತ್ಪರ್ಯ:
ವಿದ್ಯಾವಂತನಾದವನ ಲಕ್ಷಣಗಳನ್ನು ಇಲ್ಲಿ ತಿಳಿಸಿದ್ದಾರೆ. ವಿದ್ಯಾವಂತನಾದವನು ಶ್ರೇಷ್ಠನಾದವನು, ಸ್ವಾಭಿಮಾನಿಯು, ಇತರರಿಂದ ಮಾನ್ಯತೆ ಪಡೆದವನು, ಪರರನ್ನು ಗೌರವಿಸಬಲ್ಲವನು, ದಯಾಪರನು, ಅತಿಶುಚಿ, ಭೋಗಿ, ಉತ್ತಮ ರೂಪವುಳ್ಳವನು, ಹಣವಂತನು, ರಾಜರಿಂದ ಪೂಜಿತನಾದವನು, ಕೀರ್ತಿವಂತನೂ, ಗುರುಗಳಲ್ಲಿ ಗುರುವೆನಿಸಿಕೊಳ್ಳವನು ಆಗಿರುತ್ತಾನೆ, ಆದರೆ ವಿದ್ಯೆಯಿಲ್ಲದ ಮನುಷ್ಯನು ಪಶುವಿಗೆ ಸಮಾನನು ಅವನ ಜನ್ಮ ನಿರರ್ಥಕ ಎಂದು ವಿದುರ ಧೃತರಾಷ್ಟ್ರನಿಗೆ ತಿಳಿಸಿದ.

ಅರ್ಥ:
ಗರುವ:ಹಿರಿಯ, ಶ್ರೇಷ್ಠ; ಮಾನ್ಯ: ಗೌರವ, ಮನ್ನಣೆ, ಪೂಜ್ಯ; ಮಾನಿ: ಗೌರವಸ್ಥ, ಮಾನ್ಯವಂತ; ದಯೆ: ಅನುಕಂಪ, ಕೃಪೆ; ಕಡುಶುಚಿ: ಅತ್ಯಂತ ನಿರ್ಮಲ/ಶುಭ್ರ; ಭೋಗಿ: ಸುಖವನ್ನು ಅನುಭವಿಸುವವನು; ರೂಪ: ಚೆಲುವು, ಸೌಂದರ್ಯ; ಉತ್ತರ: ಅಧಿಕವಾದ ; ಧನಿಕ: ಹಣವಂತ; ರಾಜ: ಒಡೆಯ, ನೃಪ; ಪೂಜ್ಯನು: ಮಾನ್ಯನು; ಕೀರ್ತಿ: ಖ್ಯಾತಿ, ಯಶಸ್ಸು; ವಲ್ಲಭ:ಡೆಯ, ಪ್ರಭು; ಗುರು: ಆಚಾರ್ಯ; ಜನ: ಜನತೆ, ಮನುಷ್ಯ; ವಿದ್ಯೆ: ಜ್ಞಾನ, ತಿಳುವಳಿಕೆ; ಅರಸ: ರಾಜ; ಕೇಳು: ಆಲಿಸು; ನರ: ಮನುಷ್ಯ; ಪಶು: ಮೃಗ, ಪ್ರಾಣಿ; ಜನ್ಮ: ಹುಟ್ಟು; ನಿರರ್ಥ: ಪ್ರಯೋಜನವಿಲ್ಲ; ಕೇಳು: ಆಲಿಸು;

ಪದವಿಂಗಡಣೆ:
ಗರುವ+ ಮಾನ್ಯನು +ಮಾನಿ +ಸುದಯಾ
ಪರನು +ಕಡುಶುಚಿ +ಭೋಗಿ +ರೂಪೋ
ತ್ತರನು +ಧನಿಕನು +ರಾಜಪೂಜ್ಯನು +ಕೀರ್ತಿವಲ್ಲಭನು
ಗುರು +ಜನಕೆ +ಗುರು +ವಿದ್ಯೆಯುಳ್ಳವನ್
ಅರಸ +ಕೇಳೈ +ವಿದ್ಯೆಯಿಲ್ಲದ
ನರನು +ನರ+ಪಶುವವ್+ಅವನ+ ಜನ್ಮ +ನಿರರ್ಥ +ಕೇಳೆಂದ

ಅಚ್ಚರಿ:
(೧) ಗರು, ಗುರು – ಪದಗಳ ಬಳಕೆ, ೧, ೪ ಸಾಲಿನ ಮೊದಲ ಪದ
(೨) ವಿದ್ಯಾವಂತನ ಲಕ್ಷಣಗಳು – ಮಾನ್ಯನು, ಮಾನಿ, ಸುದಯಾಪರನು, ಕಡುಶುಚಿ, ಭೋಗಿ, ರೂಪೋತ್ತಮ, ಧನಿಕ, ರಾಜಪೂಜ್ಯ, ಕೀರ್ತಿವಲ್ಲಭ, ಗುರು