ಪದ್ಯ ೧೫: ಯಾವ ಗುಣಗಿಳಿಂದ ನಾವು ಮುನ್ನಡೆಯಬೇಕು?

ಧನಮದವ ಸತ್ಕುಲಮದವ ಯೌ
ವನಮದವ ವಿದ್ಯಾಮದವ ಪರಿ
ಜನಮದವ ವೈಭವಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವುಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನು ಬ್ರಹ್ಮಚಾರಿಗೆ, ಧನಮದ, ಕುಲಮದ, ಯೌವನಮದ, ವಿದ್ಯಾಮದ, ಪರಿಜನಮದ, ವೈಭವಮದ, ನಾನು ಸದಾಚಾರಿಯೆಂಬ ಮದ ಇವುಗಳನ್ನು ಶ್ರವಣ, ಮನನ, ನಿಧಿಧ್ಯಾಸನಗಳಿಂದ ಗೆದ್ದು, ವಿದ್ಯೆ, ವಿನಯ, ಸುಶೀಲಗಳಿಂದ ನಡೆಯಬೇಕು ಎಂದು ಹೇಳಿದನು.

ಅರ್ಥ:
ಧನ: ಐಶ್ವರ್ಯ; ಮದ: ಅಹಂಕಾರ; ಕುಲ: ವಂಶ; ಸತ್ಕುಲ: ಒಳ್ಳೆಯ ವಂಶ; ಯೌವನ: ತಾರುಣ್ಯ; ವಿದ್ಯ: ಜ್ಞಾನ; ಪರಿಜನ: ಬಂಧುಬಳಗ; ವೈಭವ: ಶ್ರೇಷ್ಠತೆ, ಆಡಂಬರ; ಆಚಾರ: ಒಳ್ಳೆಯ ನಡತೆ; ಮನನ: ಧ್ಯಾನ; ಶ್ರವಣ: ಕೇಳು; ನಿಧಿಧ್ಯಾಸನ: ಏಕಾಗ್ರತೆ; ಒತ್ತು: ಆಕ್ರಮಿಸು, ಮುತ್ತು; ವಿನಯ: ಒಳ್ಳೆಯತನ, ಸೌಜನ್ಯ; ಸೌಶೀಲ್ಯ: ಒಳ್ಳೆಯ ನಡತೆ, ಸದಾಚಾರ; ನಡೆ: ಮುನ್ನಡೆ, ಚಲಿಸು; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಧನ+ಮದವ +ಸತ್ಕುಲ+ಮದವ +ಯೌ
ವನ+ಮದವ +ವಿದ್ಯಾ+ಮದವ+ ಪರಿ
ಜನ+ಮದವ+ ವೈಭವ+ಮದವನ್+ಆಚಾರಪದ +ಮದವ
ಮನನದಿಂ+ ಶ್ರವಣದಿ+ ನಿಧಿಧ್ಯಾ
ಸನದಿನ್+ಇವುಗಳನ್+ಒತ್ತಿ +ವಿದ್ಯಾ
ವಿನಯ +ಸೌಶೀಲ್ಯದಲಿ+ ನಡೆವುದು +ವಿಪ್ರ +ಕೇಳೆಂದ

ಅಚ್ಚರಿ:
(೧) ಮದವ – ೭ ಬಾರಿ ಪ್ರಯೋಗ
(೨) ಯಾವ ಮದವನ್ನು ಹೊರಗಿಡಬೇಕು – ಧನ, ಸತ್ಕುಲ, ಯೌವನ, ವಿದ್ಯ, ಪರಿಜನ, ವೈಭವ, ಆಚಾರಪದ

ಪದ್ಯ ೯೮: ವಿಕರ್ಣನು ದ್ರೌಪದಿಯ ಪ್ರಶ್ನೆಗೆ ಹೇಗೆ ಉತ್ತರಿಸಿದನು?

ತನ್ನ ಸೋತಾಗಲೆ ಮಹೀಪತಿ
ಯನ್ಯನಾದನು ಸತಿಗೆ ತನ್ನಿಂ
ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
ಅನ್ಯನನ್ಯಳ ಸೋತ ಗಡ ತಾ
ತನ್ನ ಧನವೆಂದರಸ ಶಕುನಿಯ
ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ (ಸಭಾ ಪರ್ವ, ೧೫ ಸಂಧಿ, ೯೮ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನನ್ನು ಯಾವಾಗ ಸೋತನೋ ಆಗಲೇ ಅವನು ತನ್ನ ಪತ್ನಿಗೆ ಬೇರೆಯವನಾದನು. ಮೊದಲು ಅವಳನ್ನು ಸೋತಿದ್ದರೆ ಆಗ ಅವಳು ಅವನ ಧನವಾಗುತ್ತಿದ್ದಳು, ಬೇರೆಯವನು ಬೇರೆಯವಳೊಬ್ಬನನ್ನು ಸೋತು, ಅವಳು ತನ್ನ ಧನವೆಂದು ಧರ್ಮರಾಯನು ಶಕುನಿಯ ತಿಳುವಳಿಕೆಗೆ ತಿಳಿಗೇಡಿಯಂತೆ ವರ್ತಿಸುತ್ತಿದ್ದಾನೆ ಎಂದು ವಿಕರ್ಣನು ಕೋಪಗೊಂಡು ದ್ರೌಪದಿಯ ಪ್ರಶ್ನೆಗೆ ಉತ್ತರವನ್ನಿತ್ತನು.

ಅರ್ಥ:
ಸೋತು: ಪರಾಭವ; ಮಹೀಪತಿ: ರಾಜ; ಮಹೀ: ಭೂಮಿ; ಅನ್ಯ: ಬೇರೆ; ಸತಿ: ಹೆಂಡತಿ; ಮುನ್ನ: ಮೊದಲು; ಧನ: ಐಶ್ವರ್ಯ; ಐಸಲೆ: ಅಲ್ಲವೇ; ವಿಚಾರ: ವಿಮರ್ಶೆ; ಗಡ: ಅಲ್ಲವೆ, ಆಶ್ಚರ್ಯ ಮುಂತಾದುವನ್ನು ಸೂಚಿಸುವ ಶಬ್ದ; ಅರಸ: ರಾಜ; ಬಿನ್ನಾಣ: ಗಾಢವಾದ ತಿಳುವಳಿಕೆ; ಬೆಳ್ಳಾದ: ಬೆಪ್ಪನಾದ; ಖತಿ: ಕೋಪ;

ಪದವಿಂಗಡಣೆ:
ತನ್ನ +ಸೋತಾಗಲೆ+ ಮಹೀಪತಿ
ಅನ್ಯನಾದನು+ ಸತಿಗೆ+ ತನ್ನಿಂ
ಮುನ್ನ+ ಸೋತರೆ +ತನ್ನ +ಧನವ್+ಐಸಲೆ+ ವಿಚಾರಿಸಲು
ಅನ್ಯನ್+ಅನ್ಯಳ +ಸೋತ +ಗಡ+ ತಾ
ತನ್ನ +ಧನವೆಂದ್+ಅರಸ+ ಶಕುನಿಯ
ಬಿನ್ನಣಕೆ +ಬೆಳ್ಳಾದನೆಂದು +ವಿಕರ್ಣ +ಖತಿಗೊಂಡ

ಅಚ್ಚರಿ:
(೧) ವಿಕರ್ಣನ ವಿಚಾರ – ತನ್ನಿಂ ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
(೨) ತನ್ನ, ಮುನ್ನ – ಪ್ರಾಸ ಪದ

ಪದ್ಯ ೮೯: ರಾಜನು ಯಾವ ಮಾರ್ಗದಿಂದ ವಿದ್ಯೆಯನ್ನುಗಳಿಸಬೇಕು?

ಅರಸ ಕೇಳೈ ಮಾರ್ಗ ಮೂರಾ
ಗಿರುತಿಹುದು ಸಂಪೂರ್ಣಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕೊಡಬೇಕಾದ ಧನವನ್ನು ನೀಡಿ, ಗುರುಗಳ ಸೇವೆ ಮಾಡಿ ಅದರಿಂದ ವಿದ್ಯಾರ್ಜನೆ ಎನ್ನುವ ಮೂರು ಮಾರ್ಗಗಳು ವಿದ್ಯಾರ್ಜನೆಗೆ ಇವೆ. ಇವನ್ನು ಬಿಟ್ಟು ನಾಲ್ಕನೆಯ ದಾರಿ ಇಲ್ಲ. ರಾಜರು ಈ ಮೂರು ಮಾರ್ಗಗಳಿಂದಲೇ ವಿದ್ಯೆಯನ್ನು ಕಲಿಯಬೇಕು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಾರ್ಗ: ದಾರಿ; ಮೂರು: ತ್ರಿ, ತ್ರಯ; ಸಂಪೂರ್ಣ: ಎಲ್ಲಾ; ಧನ: ಐಶ್ವರ್ಯ; ಗುರು: ಆಚಾರ್ಯ; ಪರಿಚರ:ಸೇವಕ; ಪರಿಚರಿಯ: ಸೇವೆ; ಪರಿವರ್ತನೆ:ಬದಲಾವಣೆ; ಇನಿತು: ಸ್ವಲ್ಪ, ಈ ಸ್ಥಿತಿ; ತಿರುಗಿ: ಮತ್ತೆ; ಬಂದೊಡೆ: ಬಂದರೆ; ನಾಲ್ಕು: ಚತುರ್; ಮತ: ಅಭಿಪ್ರಾಯ; ದೊರಕು: ಸಿಕ್ಕು; ಅರಿ: ತಿಳಿ; ಕಲೆ: ವಿದ್ಯೆ, ಲಲಿತವಿದ್ಯೆ, ಕುಶಲವಿದ್ಯೆ, ಸೂಕ್ಷ್ಮ ಪರಿಮಾಣದ ವಸ್ತು; ಸಂವರಿಸು: ಸಜ್ಜು ಮಾಡು, ಕಾಪಾಡು; ನರ: ಮನುಷ್ಯ; ಉತ್ತಮ: ಶ್ರೇಷ್ಠ; ಅವನೀಪಾಲ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಮಾರ್ಗ +ಮೂರಾ
ಗಿರುತಿಹುದು +ಸಂಪೂರ್ಣ+ಧನ+ ಗುರು
ಪರಿಚರಿಯ+ ಪರಿವರ್ತನೆಗಳೆಂಬ್+ಇನಿತನ್+ಅತಿಗಳೆದು
ತಿರುಗಿ +ಬಂದೊಡೆ +ನಾಲ್ಕನೆಯ +ಮತ
ದೊರಕಲ್+ಅರಿವುದೆ +ಕಲೆಗಳನು +ಸಂ
ವರಿಸುವ +ನರೋತ್ತಮರಿಗ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಅರಸ, ಅವನೀಪಾಲ – ಸಮಾನಾರ್ಥಕ ಪದ
(೨) ಇನಿತನತಿ – ಪದದ ಬಳಕೆ

ಪದ್ಯ ೫೬: ಲೋಕಕ್ಕೆ ಸರ್ವಕ್ಕೂ ಯಾವುದು ಸಾಧನ?

ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತ ಸುಖಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಈ ಭೂಮಿಯಲ್ಲಿ ಹಣವುಳ್ಳವನು ಮಹಾತ್ಮನೆಂದು ಕರೆಸಿಕೊಳ್ಳುತ್ತಾನೆ, ಆತ ಏನನ್ನು ಬಯಸಿದರು ಅದು ಅವನ ಕೈಗೆ ಸಿಗುತ್ತದೆ, ಅದೇ ನಿರ್ಧನಿಕನು ಬಯಸಿದ ಬಯಕೆ ವ್ಯರ್ಥವಾಗುತ್ತದೆ. ಧನಿಕನಿಗೆ ಸುಖವು ದೊರಕುತ್ತದೆ. ಲೋಕದಲ್ಲಿ ಸರ್ವಕ್ಕೂ ಸಾಧನವು ಹಣವಲ್ಲದೆ ಬೇರಿಲ್ಲ ಎಂದು ಹಣದ ಪ್ರಾಮುಖ್ಯತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಧನ: ಹಣ, ಅರ್ಥ; ಮಹಾತ್ಮ: ಸತ್ಪುರುಷ, ಶ್ರೇಷ್ಠ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಕೈಸಾರುವುದು: ಕೈಗೆ ಸಿಗುವುದು; ನಿರ್ಧನಿಕ: ಬಡವ; ಬಯಸು: ಆಸೆಪಡು; ಬಯಲು:ವ್ಯರ್ಥವಾದುದು; ಧನಿಕ: ಹಣವಂತ, ಶ್ರೀಮಂತ; ಸಮಸ್ತ: ಎಲ್ಲಾ; ಸುಖ: ಸಂತೋಷ; ಸಂಜನಿಸು: ಹುಟ್ಟು; ಸರ್ವಕ್ಕೆ: ಎಲ್ಲಕ್ಕೂ; ಸಾಧನ:ಗುರಿಮುಟ್ಟುವ ಪ್ರಯತ್ನ; ಭುವನ: ಭೂಮಿ; ಅನ್ಯ: ಬೇರೆ;

ಪದವಿಂಗಡಣೆ:
ಧನವನುಳ್ಳ +ಮಹಾತ್ಮನ್+ಆವುದ
ನೆನೆದೊಡ್+ಅದು +ಕೈಸಾರುವುದು +ನಿ
ರ್ಧನಿಕ +ಬಯಸಿದ +ಬಯಕೆ +ಬಯಲಹುದಲ್ಲದೇ +ಬೇರೆ
ಧನಿಕನಂತೆ+ ಸಮಸ್ತ+ ಸುಖಸಂ
ಜನಿಸುವುದೆ +ಸರ್ವಕ್ಕೆ +ಸಾಧನ
ಧನವದಲ್ಲದೆ+ ಭುವನದೊಳಗ್+ಅನ್ಯತ್ರವಿಲ್ಲೆಂದ

ಅಚ್ಚರಿ:
(೧) ನುಡಿವಾಕ್ಯ ನೀಡುವ ಪದ್ಯ – ಸರ್ವಕ್ಕೆ ಸಾಧನ ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ
(೨) ಧನಿಕ, ನಿರ್ಧನಿಕ – ವಿರುದ್ಧ ಪದ
(೩) ಬಯಕೆ, ಬಯಸು – ಸಾಮ್ಯಾರ್ಥ ಪದಗಳು
(೪) ‘ಸ’ಕಾರದ ಪದಗಳ ಜೋಡಣೆ – ಸಮಸ್ತ ಸುಖಸಂಜನಿಸುವುದೆ ಸರ್ವಕ್ಕೆ ಸಾಧನ

ಪದ್ಯ ೭೦: ಹಣದ ಮಹತ್ವವೇನು?

ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಲೈದದದರಿಂ
ಧನವೆ ಸಾಧನವರಸಿಗಾಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ (ಸಭಾ ಪರ್ವ, ೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಐಶ್ವರ್ಯ ಅಥವ ಹಣವಿದ್ದರೆ ಆಸ್ಥಾನ ವಿದ್ವಾಂಸರು, ಉತ್ತಮವಾದ ಕುದುರೆಗಳು, ಭೂಮಿ, ಗೌರವ, ರಾಣಿಯರು, ಸಮಸ್ತ ವಸ್ತುಗಳು ದೊರಕುತ್ತವೆ. ರಾಜನಿಗೆ ಹಣವೇ ಸಕಲ ಸಾಧನ, ಸಾಕಷ್ಟು ಹಣವಿದ್ದ ರಾಜನ ಎದುರಿಗೆ ಯಾರು ತಾನೆ ನಿಲ್ಲಬಲ್ಲರು.

ಅರ್ಥ:
ಧನ: ಐಶ್ವರ್ಯ, ಹಣ; ಪಂಡಿತ: ವಿದ್ವಾಂಸ; ಅಶ್ವ: ಕುದುರೆ; ತತಿ: ಗುಂಪು; ಧಾರುಣಿ: ಭೂಮಿ; ಮಾನ: ಗೌರವ; ಮೇಣ್: ಮತ್ತು; ಕಾಂತೆ: ಹೆಣ್ಣು; ಅಖಿಳ: ಸರ್ವ; ವಸ್ತು: ಪದಾರ್ಥ; ಸೇರು: ಮುಟ್ಟು, ಕೂಡು; ನೆನಹು: ಸ್ಮರಣೆ; ತೃಪ್ತಿ:ಸಮಾಧಾನ; ಸಾಧನ:ಸಾಧಿಸುವಿಕೆ; ಅರಸ: ರಾಜ; ಇದಿರು: ಅಭಿಮುಖ; ಧಾತ್ರಿಪತಿ: ರಾಜ; ಧಾತ್ರಿ: ಭೂಮಿ;

ಪದವಿಂಗಡಣೆ:
ಧನದಿ +ಪಂಡಿತರ್+ಅಶ್ವ+ತತಿ+ಯಾ
ಧನದಿ +ಧಾರುಣಿ +ಮಾನ +ಮೇಣ್+ಆ
ಧನದಿ +ಕಾಂತೆಯರ್+ಅಖಿಳ+ವಸ್ತುಗಳೈದೆ+ ಸೇರುವುದು
ನೆನಹು +ತೃಪ್ತಿಯೊಲ್+ಐದದ್+ಅದರಿಂ
ಧನವೆ+ ಸಾಧನವ್+ಅರಸಿಗ್+ಆ+ಧನವ್
ಅನಿತು +ದೊರಕೊಳಲ್+ಇದಿರದಾರೈ +ಧಾತ್ರಿ+ಪತಿಗಳಲಿ

ಅಚ್ಚರಿ:
(೧) ಧನದಿ – ೧-೩ ಮತ್ತು ೫ ಸಾಲಿನ ಮೊದಲ ಪದ
(೨) ಧಾರುಣಿ, ಧಾತ್ರಿ – ಭೂಮಿಯ ಸಮನಾರ್ಥಕ ಪದ

ಪದ್ಯ ೪೯: ಯಾವ ನೀತಿಯಿಂದ ಇಹಪರಗಳೆರಡನ್ನು ಗೆಲ್ಲಬಹುದು?

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ ಜಯದಿಂ ಧರ್ಮ ಧರ್ಮಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ಕೇಳೆಂದ (ಸಭಾ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನ ಜೊತೆ ಅವರ ಮಾತನ್ನು ಮುಂದುವರಿಸುತ್ತಾ, ರಾಜ, “ನೀತಿಯಿಂದ ನಡೆಯುವ ರಾಜನು ಜನರ ಪ್ರೀತಿಗೆ ಪಾತ್ರನಾಗುತ್ತಾನೆ, ಅದರಿಂದ ಅವನು ಧನವಂತನಾಗುತ್ತಾನೆ, ಧನದಿಂದ ಸಾಧನ ಸಂಪತ್ತುಗಳು ಲಭ್ಯವಾಗುತ್ತದೆ, ಅದರಿಂದ ಜಯವು ಲಭಿಸುತ್ತದೆ, ಆ ಜಯದಿಂದ ಧರ್ಮಸಾಧನೆ, ಧರ್ಮಸಾಧನೆಯಿಂದ ದೇವತೆಗಳು ಸಂತೃತ್ಪರಾಗುತ್ತಾರೆ,
ಇಂತಹ ನೀತಿಯಿಂದ ರಾಜನು ಇಹಪರಗಳೆರಡರಲ್ಲೂ ಗೆಲ್ಲುತ್ತಾನೆ.

ಅರ್ಥ:
ನೀತಿ: ಮಾರ್ಗ; ಅರಸ: ರಾಜ; ಬಹಳ: ತುಂಬ; ಖ್ಯಾತ: ಪ್ರಸಿದ್ಧ; ರಾಗ: ಹಿಗ್ಗು, ಸಂತೋಷ; ವ್ರಾತ: ದೇಹಶ್ರಮ; ಧನ: ಐಶ್ವರ್ಯ; ಪರಿಕರ:ಪರಿ ಜನ, ಸಾಧನ ಸಂಪತ್ತು; ಜಯ: ಗೆಲುವು; ಧರ್ಮ: ನಿಯಮ, ಆಚಾರ; ಸಮೇತ: ಜೊತೆ; ಸುರ: ದೇವತೆ; ತುಷ್ಟಿ: ತೃಪ್ತಿ; ಇಹಪರ: ಲೋಕ ಮತ್ತು ಪರಲೋಕ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀತಿವಿಡಿದ್+ಅರಸಂಗೆ +ಬಹಳ
ಖ್ಯಾತವದು +ಜನರಾಗ +ರಾಗ
ವ್ರಾತದಿಂ +ಧನ +ಧನದಿ+ ಪರಿಕರ+ ಪರಿಕರದಿ+ ಜಯವು
ಆತ +ಜಯದಿಂ +ಧರ್ಮ +ಧರ್ಮ+ಸ
ಮೇತದಿಂ +ಸುರತುಷ್ಟಿ +ತುಷ್ಟಿಯ
ನೀತಿಯಿಂದ್+ಇಹಪರವ +ಗೆಲುವೈ +ರಾಯ +ಕೇಳೆಂದ

ಅಚ್ಚರಿ:
(೧) ನೀತಿ – ೧, ೬ ಸಾಲಿನ ಮೊದಲ ಪದ
(೨) ಜೋಡಿ ಪದಗಳು: ಜನರಾಗ ರಾಗ, ವ್ರಾತದಿಂ ಧನ ಧನದಿ, ಪರಿಕರ ಪರಿಕರದಿ, ಧರ್ಮ ಧರ್ಮಸ, ಸುರತುಷ್ಟಿ ತುಷ್ಟಿ;
(೩) ಅರಸ, ರಾಯ – ಸಮನಾರ್ಥಕ ಪದಗಳು

ಪದ್ಯ ೨೭: ದ್ರೋಣನು ಪರಶುರಾಮರಿಂದ ಎನನ್ನು ಪಡೆದನು?

ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನ ಮನೋರಂಜನವೆ ಬೇಹುದು ಶರವ ಕೊಡಿಯೆಂದ (ಆದಿ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರೆ, ಧನ ಎರಡು ಇಲ್ಲದೆ ಪರಮಮುನಿಗಳಾದ ದ್ರೋಣರಿಗೆ ಆತಿಥ್ಯ ಮಾಡಲು ಅಭಾಗ್ಯ ಎಂದು ಬೇಸರ ಪಟ್ಟ ಪರಶುರಾಮರು, ಧನ ವಿಲ್ಲದಿದ್ದರೂ, ನನ್ನ ಬಳಿ ಮಹತ್ತರವಾದ ಧನು ಮತ್ತು ದಿವ್ಯಶಕ್ತಿಯುಳ್ಳ ಬಾಣ ಗಳಿದೆ. ನಿನ್ನ ಮನಸ್ಸಿಗೆ ಯಾವುದು ಇಷ್ಟವೋ ಅದನ್ನು ಕೇಳು ಎಂದು ಹೇಳಲು, ದ್ರೋಣರು ನಸುನಕ್ಕು ಅತ್ಯಂತ ವಿನಮ್ರದಿಂದ ನನಗೆ ನಿಮ್ಮ ಕೃಪಾದೃಷ್ಟಿಯೆ ಸಾಕು. ಲೋಕದ ಜನರ ಮೆಚ್ಚುಗೆಗಾಗಿ ನನಗೆ ಆ ದಿವ್ಯಾಸ್ತ್ರವನ್ನು ಕೊಡಿ ಎಂದನು.

ಅರ್ಥ:
ಧನ: ಸಂಪತ್ತು, ಹಣ; ರಹಿತ: ಇಲ್ಲದಿರುವಿಕೆ; ಹೊತ್ತ: ಉಂಟಾಗು;
ಭಾರಿ: ತುಂಬಾ, ಮಹತ್ತರ; ಧನು: ಬಿಲ್ಲು; ದಿವ್ಯ: ಶ್ರೇಷ್ಠ; ಉತ್ತಮ;
ಶರ: ಬಾಣ; ಮನ: ಮನಸ್ಸು; ವರಿಸು: ಆರಿಸು, ಒಪ್ಪಿಕೊಳ್ಳು; ನಸು: ಸ್ವಲ್ಪ; ನಗು: ಮುಗುಳ್ನಗೆ
ಕೃಪ: ಕರುಣಾ; ಪರಿಯಾಪ್ತಿ: ಕೊನೆ; ಲೋಕ: ಜಗತ್ತು
ಜನ: ಮನುಷ್ಯರು; ಮನೋರಂಜನೆ: ಕುಷಿ, ಸಂತೋಷ; ಬೇಹುದು: ಬೇಕು
ಕೊಡಿ: ದಯಪಾಲಿಸಿ, ನೀಡಿ; ಲೋಕನ: ದೃಷ್ಟಿ

ಪದವಿಂಗಡನೆ:
ಧನರಹಿತ +ನಾ +ಹೊತ್ತ +ಭಾರಿಯ
ಧನುವಿದ್+ಒಂದಿದೆ +ದಿವ್ಯ+ಶರವಿದೆ
ಮನಕೆ+ ಬಂದುದ +ವರಿಸು +ನೀನ್+ಎನೆ +ದ್ರೋಣ +ನಸುನಗುತ
ಎನಗೆ +ನಿಮ್ಮಡಿಗಳ+ ಕೃಪಾಲೋ
ಕನವಲೇ +ಪರಿಯಾಪ್ತಿ +ಲೋಕದ
ಜನ +ಮನೋರಂಜನವೆ +ಬೇಹುದು+ ಶರವ +ಕೊಡಿಯೆಂದ

ಅಚ್ಚರಿ:
(೧) ಧನ, ಧನು – “ಧ” ಕಾರದ ಪದಗಳ ಪ್ರಯೋಗ
(೨) ಲೋಕನ, ಲೋಕದ – ಲೋ ಕಾರದ ಪದಗಳ ಪ್ರಯೋಗ
(೩) ನಾ, ಎನಗೆ – ನಾನು ಶಬಕ್ಕೆ ಪರ್ಯಾಯವಾಗಿ ಉಪಯೋಗಿಸಿರುವ ಪದಗಳು

ಪದ್ಯ ೬೬: ಅರಗಿನ ಮನೆ ಕಾರ್ಯಕ್ಕೆ ಯಾರನ್ನು ನೇಮಿಸಿದನು?

ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ಕೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿಕೊಟ್ಟು ಕಳುಹಿದನವನ ಗುಪ್ತದಲಿ (ಆದಿ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ತಂದೆಯ ಬೆಂಬಲ ಸಿಕ್ಕ ಮೇಲೆ, ದುರ್ಯೋಧನನು ತಂದೆಯನ್ನು ಬೀಳ್ಕೊಟ್ಟು, ತನ್ನ ಅರಮನೆಯ ಅತ್ಯಂತ ಆಪ್ತ ಸಚಿವರನಾದ ಪುರೋಚನನನ್ನು ಈ ಕಾರ್ಯಕ್ಕೆ ನೇಮಿಸಿ, ಮಾಡಬೇಕಾದ ಅತ್ಯಂತ ಘನ,ಭಯಂಕರವಾದ ರಾಜಕಾರ್ಯವನ್ನು ವಿವರಿಸಿ, ಅದಕ್ಕೆ ಅಗತ್ಯವಾದ ಧನವನ್ನು, ಸಾಧನಗಳನ್ನು ಜೋಡಿಸಿಕೊಟ್ಟು ಅತ್ಯಂತ ಗುಪ್ತ ರೀತಿಯಲ್ಲಿ ಕಳುಹಿಸಿದನು.

ಅರ್ಥ:
ಜನಕ: ತಂದೆ; ಜನಪ: ರಾಜ; ಅರಮನೆ: ಆಲಯ; ಸಚಿವ: ಮಂತ್ರಿ; ಅನುಪಮ: ಅಸಮಾನ; ವಿಶ್ವಾಸ: ನಂಬಿಕೆ, ಭರವಸೆ; ಸೂಚಕ: ಸುಳಿವು, ಸೂಚನೆ; ನೆನೆ: ಜ್ಞಾಪಿಸಿಕೊ; ಕಾರ್ಯ: ಕೆಲಸ; ಘನ: ಭಾರ; ಅರುಹಿ: ತಿಳಿಸಿ; ಸಮಗ್ರ: ಸಕಲ; ಧನ:ದುಡ್ಡು; ಸಾಧನ: ಸಾಮಗ್ರಿ, ಉಪಕರಣ; ಜೋಡಿಸು: ಹೊಂದಿಸು;

ಪದವಿಂಗಡನೆ:
ಜನಕನನು+ ಬೀಳ್ಕೊಂಡು +ಕೌರವ
ಜನಪ+ ತನ್ನ್+ಅರಮನೆಯ+ ಸಚಿವರೊಳ್
ಅನುಪಮಿತ +ವಿಶ್ವಾಸ+ ಸೂಚಕನನು+ ಪುರೋಚನನ
ನೆನೆದ +ಕೌರವ+ ರಾಜ+ಕಾರ್ಯದ
ಘನವನ್+ಅರುಹಿ+ ಸಮಗ್ರ+ ಧನ+ ಸಾ
ಧನವ +ಜೋಡಿಸಿ+ಕೊಟ್ಟು +ಕಳುಹಿದನ್+ಅವನ +ಗುಪ್ತದಲಿ

ಅಚ್ಚರಿ:
(೧) ಜನಕ, ಜನಪ – ‘ಜನ’ ಪದದಿಂದ ಕೂಡಿರುವ ೧, ೨ ಸಾಲಿನ ಮೊದಲ ಪದಗಳು
(೨) ಪುರೋಚನನ ವಿವರಣೆ: ಅನುಪಮ, ಅಮಿತ ವಿಶ್ವಾಸ, ಸೂಚಕ
(೩) ಘನವ, ಧನವ – “ನವ” ಪದದಿಂದ ಕೊನೆಗೊಳ್ಳುವ, ೫, ೬ ಸಾಲಿನ ಮೊದಲ ಪದಗಳು