ಪದ್ಯ ೧೨: ಭೂತವು ಪಾಂಡವರ ವನಕ್ಕೆ ಹೇಗೆ ಆಗಮಿಸಿತು?

ಎಂದು ನೇಮಿಸೆ ಭೂತ ಭುಗಿ ಭುಗಿ
ಲೆಂದು ಧಗ ಧಗಿಸುತ್ತಲುರಿ ಭುಗಿ
ಲೆಂದು ಕರ್ಬೊಗೆ ತುಡುಕಲಬುಜ ಭವಾಂಡಮಂಡಲವ
ನಿಂದು ನೋಡುತ ಕೆಲ ಬಲನ ನೋ
ರಂದದಿಂದವೆ ಪಾಂಡುಪುತ್ರರ
ನಂದಗೆಡಿಸುವ ಭರದೊಳೈದಿತು ಘೋರ ಕಾನನಕೆ (ಅರಣ್ಯ ಪರ್ವ, ೨೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕನಕನ ನೇಮವನ್ನು ಸ್ವೀಕರಿಸಿ ಭೂತವು ವನಕ್ಕೆ ಹೊರಟಿತು ಆದರಿಂದ ಧಗಧಗಿಸುವ ಉರಿ, ಭುಗಿಲ್ಭುಗಿಲೆಂದು ಸುತ್ತಲೂ ಹಬ್ಬುತ್ತಿತ್ತು. ಕಪ್ಪು ಹೊಗೆಯು ಬ್ರಹ್ಮಾಂಡವನ್ನೇ ವ್ಯಾಪಿಸುತ್ತಿತ್ತು. ಅದು ಅಲ್ಲಲ್ಲಿ ನಿಮ್ತು ಸುತ್ತಲೂ ನೋಡುತ್ತಾ ಪಾಂಡವರನ್ನು ಹತ್ಯೆ ಮಾಡಲೆಂದು ಕಾಡಿಗೆ ಹೊರಟಿತು.

ಅರ್ಥ:
ನೇಮಿಸು: ಅಪ್ಪಣೆ ಮಾಡು; ಭೂತ: ದೆವ್ವ; ಭುಗಿಲು: ಭುಗಿಲ್ ಎಂಬ ಶಬ್ದ; ಧಗ: ಬೆಂಕಿಯ ತೀವ್ರತೆಯನ್ನು ಹೇಳುವ ಶಬ್ದ; ಉರಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ತುಡುಕು: ಹೋರಾಡು, ಸೆಣಸು; ಅಬುಜ: ತಾವರೆ; ಭವಾಂಡ: ಬ್ರಹ್ಮಾಂಡ, ಪ್ರಪಂಚ; ಮಂಡಲ: ಜಗತ್ತು, ನಾಡಿನ ಒಂದು ಭಾಗ; ನಿಂದು: ನಿಲ್ಲು; ನೋಡು: ವೀಕ್ಷಿಸು; ಕೆಲ: ಸ್ವಲ್ಪ, ಪಕ್ಕ, ಮಗ್ಗುಲು; ಅಂದ: ಚೆಲುವು, ಸುಂದರ; ಕೆಡಿಸು: ಹಾಳುಮಾಡು; ಭರ:ವೇಗ; ಐದು: ಬಂದು ಸೇರು; ಘೋರ: ಉಗ್ರವಾದ; ಕಾನನ: ಕಾಡು; ಓರಂದ: ಒಂದೇ ಸಮಾನ;

ಪದವಿಂಗಡಣೆ:
ಎಂದು +ನೇಮಿಸೆ +ಭೂತ +ಭುಗಿ +ಭುಗಿ
ಲೆಂದು +ಧಗ +ಧಗಿಸುತ್ತಲ್+ಉರಿ +ಭುಗಿ
ಲೆಂದು +ಕರ್ಬೊಗೆ +ತುಡುಕಲ್+ಅಬುಜ +ಭವಾಂಡ+ಮಂಡಲವ
ನಿಂದು +ನೋಡುತ+ ಕೆಲ+ ಬಲನನ್
ಓರಂದದಿಂದವೆ+ ಪಾಂಡುಪುತ್ರರನ್
ಅಂದಗೆಡಿಸುವ +ಭರದೊಳೈದಿತು+ ಘೋರ +ಕಾನನಕೆ

ಅಚ್ಚರಿ:
(೧) ಭುಗಿ ಭುಗಿ, ಧಗ ದಗ – ಜೋಡಿ ಪದಗಳು

ಪದ್ಯ ೨೭: ಉರಿಯುವ ಶಬ್ದವನ್ನು ವರ್ಣಿಸುವುದು ಹೇಗೆ?

ಹೊದರಿನಲಿ ಭುಗು ಭುಗಿಲು ಭುಗಿಲೆಂ
ದೊದೆದುದುರಿಯಂಬರವನೊಣಗಿದ
ಬಿದಿರ ಮೆಳೆಯಲಿ ಧಗ ಧಗಿಸಿ ಛಟಛಟನೆ ಛಟ ಛಟಸಿ
ಕದಲಿ ಖರ್ಜೂರಾದಿ ತರು ಜಾ
ಲದಲಿ ಸಿಮಿಸಿಮಿಸಿಮಿಸಿಮಾಯತ
ವೊದಗೆ ಗಹನೋದರದೊಳಗೆ ಘಾಡಿಸಿತು ಘನವಹ್ನಿ (ಆದಿ ಪರ್ವ, ೨೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಗ್ನಿಯು ಕಾಡಿನಲ್ಲೆಲ್ಲಾ ವ್ಯಾಪಿಸಲು ಆ ಉರಿಯುವ ಶಬ್ದವನ್ನು ವರ್ಣಿಸುವ ಪರಿ ಈ ಪದ್ಯದಲ್ಲಿದೆ. ಬೆಂಕಿಯು ಪೊದೆಗಳಲ್ಲಿ ಭುಗಿಭುಗಿಲೆಂಬ ಶಬ್ದದೊಡನೆ ಉರಿಯ ತೊಡಗಿ ಆ ಉರಿಯು ಆಕಾಶಕ್ಕೆ ಹಾರಿತು. ಬಿದಿರು ಗಿಡಗಳ ಗುಂಪುಗಳಲ್ಲಿ ಬೆಂಕಿಯು ಛಟ ಛಟನೆ ಧಗಧಗಿಸಿತು. ಬಾಳೆ, ಖರ್ಜೂರ ಮೊದಲಾದ ಮರಗಳು ಸಿಮಿಸಿಮಿಯೆಂದು ಸದ್ದು ಮಾಡುತ್ತಾ ಉರಿದವು. ಆ ಮಹಾಗ್ನಿಯು ದಟ್ಟವಾದ ಕಾಡಿನೊಳಕ್ಕೆ ಹೊಕ್ಕಿತು.

ಅರ್ಥ:
ಹೊದರು:ಪೊದೆ; ಅಂಬರ: ಆಗಸ; ಒಣಗಿದ: ಬಾಡಿದ; ಬಿದಿರು:ಬೊಂಬು; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು; ಕದಲಿ: ಬಾಳೆ; ತರು: ಮರ; ಜಾಲ: ಬಲೆ;ಆಯತ: ನೆಲೆ; ಗಹನ: ದಟ್ಟಣೆ; ಘಾಡಿಸು: ವ್ಯಾಪಿಸು; ಘನ:ಅಧಿಕ, ಮಹತ್ತ್ವ; ವಹ್ನಿ: ಅಗ್ನಿ;

ಪದವಿಂಗಡಣೆ:
ಹೊದರಿನಲಿ +ಭುಗು +ಭುಗಿಲು +ಭುಗಿಲೆಂದ್
ಒದೆದುದ್+ಉರಿ+ಆಂಬರವನ್+ಒಣಗಿದ
ಬಿದಿರ+ ಮೆಳೆಯಲಿ +ಧಗ +ಧಗಿಸಿ+ ಛಟಛಟನೆ+ ಛಟ +ಛಟಸಿ
ಕದಲಿ +ಖರ್ಜೂರಾದಿ +ತರು +ಜಾ
ಲದಲಿ +ಸಿಮಿ+ಸಿಮಿ+ಸಿಮಿ+ಸಿಮ+ಆಯತ
ವೊದಗೆ+ ಗಹನ+ಉದರ+ದೊಳಗೆ +ಘಾಡಿಸಿತು +ಘನವಹ್ನಿ

ಅಚ್ಚರಿ:
(೧) ಬೆಂಕಿಯು ಶಬ್ದಮಾಡುವ ರೀತಿ: ಭುಗು ಭುಗು, ಧಗ ಧಗ, ಛಟ ಛಟ, ಸಿಮಿ, ಸಿಮಿ
(೨) ಪೊದರದಲ್ಲಿ ಭುಗು ಭುಗು, ಬಿದಿರಿನಲ್ಲಿ ಛಟ ಛಟ, ಬಾಳೆಯಲ್ಲಿ ಸಿಮಿಸಿಮಿ ಎಂಬ ಶಬ್ದಗಳ ಕಲ್ಪನೆ
(೩) ಘಾಡಿಸಿತು ಘನವಹ್ನಿ – ಘ ಕಾರದ ಜೋಡಿ ಪದ