ಪದ್ಯ ೧೩: ಕರ್ಣನನ್ನು ಕೊಲ್ಲಲು ಅರ್ಜುನನು ಯಾವ ಅಸ್ತ್ರವನ್ನು ಹೂಡಿದನು?

ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ (ಕರ್ಣ ಪರ್ವ, ೨೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನಿಗೆ ಕರ್ಣನ ಮೇಲೆ ಏಕಿಷ್ಟು ದ್ವೇಷ ಎಂದು ಚಿಂತಿಸುತ್ತಾ ಅರ್ಜುನನು ಘಾಸಿಯಾದನು. ಒಮ್ಮೆ ಕರುಣೆ ಇನ್ನೊಮ್ಮೆ ಕೋಪಗಳು ಮನಸ್ಸಿನಲ್ಲಿ ಹುಟ್ಟಿದವು. ಕರ್ಣನ ಮೇಲೆ ಇನ್ನೇಕೆ ಆಶೆ ಎನ್ನುತ್ತಾ ಅಂಜಲಿಕಾಸ್ತ್ರವನ್ನು ಹೂಡಿದನು. ಆ ಅಸ್ತ್ರವು ಹೊಗೆಯ ಹೊರಳಿಗಳು, ಕಿಡಿಯ ಪುಂಜಗಳನ್ನುಗುಳುತ್ತಾ ಮುಂದುವರಿಯಿತು. ಆ ಅಸ್ತ್ರವು ಅಮೋಘವಾದುದು, ಅದನ್ನು ಗೆದ್ದವರು ಯಾರೂ ಇಲ್ಲ.

ಅರ್ಥ:
ಈಸು: ಇಷ್ಟು; ದ್ವೇಷ; ಹಗೆ; ಮನ: ಮನಸ್ಸು; ಘಾಸಿ: ಹಿಂಸೆ, ಕಷ್ಟ; ಕರುಣ: ದಯೆ; ಕ್ರೋಧ: ಕೋಪ; ಉಪಟಳ: ತೊಂದರೆ, ಹಿಂಸೆ; ಆಸೆ: ಬಯಕೆ; ಸೆಳೆ: ಎಳೆ, ಹೊರತೆಗೆ; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿಯ ಚೂರು; ಹೊಗೆ: ಧೂಮ; ಹೊದರು: ಗುಂಪು, ಸಮೂಹ, ತೊಡಕು; ಮೀಸಲು: ಮುಡಿಪು, ಪ್ರತ್ಯೇಕತೆ; ಮಾರ್ಗಣ: ಬಾಣ;

ಪದವಿಂಗಡಣೆ:
ಈಸು+ ಕರ್ಣನ +ಮೇಲೆ +ಬಹಳ
ದ್ವೇಷವ್+ಏನೋ +ಎನುತ +ಮನದಲಿ
ಘಾಸಿಯಾದನು +ಪಾರ್ಥ +ಕರುಣ+ಕ್ರೋಧದ್+ಉಪಟಳಕೆ
ಆಸೆಯಿನ್ನೇಕೆನುತ +ಸೆಳೆದನು
ಸೂಸು+ಕಿಡಿಗಳ +ಹೊಗೆಯ +ಹೊದರಿನ
ಮೀಸಲ್+ಅಳಿದಾರ್+ಎಂಜಲಿಸದ್+ಅಂಜಳಿಕ ಮಾರ್ಗಣವ

ಅಚ್ಚರಿ:
(೧) ಅಂಜಳಿಕೆ ಬಾಣದ ವಿವರ – ಸೆಳೆದನು ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ

ಪದ್ಯ ೬೯: ರಾಜನು ತನ್ನ ಅಭ್ಯುದಯಕ್ಕೆ ಯಾವ ಗುಣಗಳನ್ನು ರೂಢಿಸಿಕೊಳ್ಳಬೇಕು?

ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಂ
ಹರಣ ಬಂಧು ದೇಷವತ್ಯಾಲೀಢ ವಾಕ್ಕಥನ
ಶರಣಜನ ದಂಡಿತ್ವವೆಂಬಿವ
ನರವರಿಸದಂಗೈಪ ಭೂಪನ
ಸಿರಿಗೆ ಮೂಡುಗು ಕೇಡು ನಿಮಿಷದೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ರಾಜನಾದವನು ಯಾವ ಗುಣವನ್ನು ಬೆಳಸಿಕೊಂಡರೆ ಅವನಿಗೆ ಸಿರಿಯು ಒಲಿಯುತ್ತದೆ ಎಂದು ವಿದುರ ತಿಳಿಸಿದ್ದಾರೆ. ಗುರುವನ್ನು ವಿರೋಧಿಸುವವ, ಬ್ರಾಹ್ಮಣರನ್ನು ಹೊಟ್ಟೆಕಿಚ್ಚಿನಿಂದ ನೋಡುವವ, ಗುಣಗಳನ್ನು ಕೊಲ್ಲುವವ, ಬಂಧುಗಳನ್ನು ದ್ವೇಷಿಸುವ, ಇನ್ನೊಬ್ಬರ ಮನಸ್ಸನ್ನು ಗಾಯಗೊಳಿಸುವ ಮಾತನಾಡುವ, ಆಶ್ರಿತರನ್ನು ಶಿಕ್ಷಿಸುವ, ಈ ಗುಣಗಳನ್ನು ರಾಜನಾದವನು ರೂಢಿಸಿಕೊಂಡರೆ ಅವನ್ ಐಶ್ವರ್ಯಕ್ಕೆ ಕ್ಷಣಮಾತ್ರದಲ್ಲಿ ಕೇಡುಂಟಾಗುತ್ತದೆ.

ಅರ್ಥ:
ಗುರು: ಆಚಾರ್ಯ; ವಿರೋಧ: ಎದುರು,ವೈರತ್ವ, ಹಗೆತನ; ಮಹಿ: ಭೂಮಿ; ಮಹೀಬುಧರು: ಬ್ರಾಹ್ಮಣರು; ಮತ್ಸರ:ಹೊಟ್ಟೆಕಿಚ್ಚು, ಈರ್ಷ್ಯೆ; ದೈವ: ಸುರ, ದೇವತೆ; ದ್ರೋಹ:ವಿಶ್ವಾಸಘಾತ, ವಂಚನೆ, ಮೋಸ; ಗುಣ:ನಡತೆ, ಸ್ವಭಾವ; ಸಂಹರಣ: ನಾಶ; ಬಂಧು: ಬಾಂಧವರು; ದ್ವೇಷ: ಹಗೆ; ಆಲೀಢ: ಆವರಿಸಿದ; ವಾಕ್: ಮಾತು, ವಾಣಿ; ಶರಣ:ಆಶ್ರಿತ; ದಂಡಿತ್ವ: ಹೊಡೆಯುವ, ದಂಡಿಸು, ಶಿಕ್ಷಿಸು; ಅರವರಿಸು: ವಿಚಾರಿಸು, ಕಡೆಗಣಿಸು; ಭೂಪ: ರಾಜ; ಸಿರಿ: ಐಶ್ವರ್ಯ; ಮೂಡು: ಹುಟ್ಟು; ಕೇಡು:ಆಪತ್ತು, ಕೆಡಕು; ನಿಮಿಷ: ಕ್ಷಣಮಾತ್ರ; ಅರಸ: ರಾಜ;

ಪದವಿಂಗಡಣೆ:
ಗುರು +ವಿರೋಧ +ಮಹೀಬುಧರ+ ಮ
ತ್ಸರವು+ ದೈವದ್ರೋಹ +ಗುಣ+ ಸಂ
ಹರಣ+ ಬಂಧು+ ದೇಷವ್+ಅತಿ+ಆಲೀಢ +ವಾಕ್ಕಥನ
ಶರಣಜನ+ ದಂಡಿತ್ವವ್+ಎಂಬ್+ಇವನ್
ಅರವರಿಸದಂಗೈಪ+ ಭೂಪ
ಸಿರಿಗೆ+ ಮೂಡುಗು+ ಕೇಡು+ ನಿಮಿಷದೊಳ್+ಅರಸ +ಕೇಳೆಂದ

ಅಚ್ಚರಿ:
(೧) ವಿರೋಧ, ಮತ್ಸರ, ಸಂಹರಣ, ದ್ವೇಷ, ವಾಕ್ಕಥನ, ದಂಡಿತ್ವ, – ೬ ಬಗೆಯ ಗುಣಗಳನ್ನು ತ್ಯಜಿಸಬೇಕು
(೨) ಭೂಪ, ಅರಸ – ಸಮನಾರ್ಥಕ ಪದ

ಪದ್ಯ ೧೮: ಯಾರ ದೇಷದಿಂದ ಯಾವ ಹಾನಿಯಾಗುತ್ತದೆ?

ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಾಭಿವೃದ್ಧಿಯದು
ಅರಸಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವುವು ವಿಪ್ರವೈರಿಗೆ
ನಿರುತ ಬದ್ಧದ್ವೇಷ ಲೇಸಲ್ಲೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಲೆಕ್ಕಬರೆಯುವವನ (ಕರಣಿಕ) ದ್ವೇಷ ಮಾಡಿಕೊಂಡರೆ ಐಶ್ವರ್ಯಹಾನಿಯಾಗುತ್ತದೆ, ವೈದ್ಯ ದ್ವೇಷ ಮಾಡಿದರೆ ಆಯಸ್ಸು ಅಭಿವೃದ್ಧಿಯಾಗುವುದಿಲ್ಲ, ಹಾಗೆಯೇ ಬ್ರಾಹ್ಮಣರ ದ್ವೇಷ ಮಾಡಿದರೆ, ಆಯುಷ್ಯ ಮತ್ತು ಐಶ್ವರ್ಯ ಭಾಗ್ಯಗಳೆರಡೂ ಹಾನಿಯಾಗುತ್ತದೆ, ಆದುದರಿಂದ ಅತಂಹ ದ್ವೇಷ ಒಳ್ಳೆಯದಲ್ಲ.

ಅರ್ಥ:
ಕರಣಿಕ:ಲೆಕ್ಕಬರೆಯುವವನು, ಕುಲಕರ್ಣಿ; ಹಗೆ: ದ್ವೇಷ; ಐಶ್ವರ್ಯ: ಧನ, ಸಂಪತ್ತು; ಹಾನಿ: ನಾಶ; ಚಿಕಿತ್ಸ: ಆರೈಕೆ; ಆದರಿಸು: ಗೌರವಿಸು; ಆಯುಷ್ಯ: ಆಯಸ್ಸು; ಅಭಿವೃದ್ಧಿ: ಹೆಚ್ಚಳ; ಅರಸ: ರಾಜ; ಕೇಳು: ಆಲಿಸು; ಭಾಗ್ಯ: ಮಂಗಳ; ಕೆಡುವು: ನಾಶ; ವಿಪ್ರ: ಬ್ರಾಹ್ಮಣ; ವೈರಿ: ಶತ್ರು; ನಿರುತ: ದಿಟ, ಸತ್ಯ; ಬದ್ಧ: ಬಲಿಷ್ಠ; ಲೇಸು: ಒಳ್ಳೆಯದು;

ಪದವಿಂಗಡಣೆ:
ಕರಣಿಕನ +ಹಗೆಗೊಂಡವಂಗ್
ಐಶ್ವರಿಯ +ಹಾನಿ +ಚಿಕಿತ್ಸಕನನ್+
ಆದರಿಸದ್+ಆತಂಗ್+ಆಗದ್+ಆಯುಷ್ಯ+ಅಭಿವೃದ್ಧಿಯದು
ಅರಸ+ಕೇಳ್+ಆಯುಷ್ಯ +ಭಾಗ್ಯಗಳ್
ಎರಡು +ಕೆಡುವುವು +ವಿಪ್ರ+ವೈರಿಗೆ
ನಿರುತ +ಬದ್ಧದ್ವೇಷ+ ಲೇಸಲ್ಲ+ಎಂದನಾ+ ವಿದುರ

ಅಚ್ಚರಿ:
(೧) ಹಗೆ, ವೈರ, ದ್ವೇಷ – ಸಮನಾರ್ಥಕ ಪದ