ಪದ್ಯ ೩೪: ಏಳರ ಮಹತ್ವವನ್ನರಿತವರು ಹೇಗೆ ಮುಕ್ತಿಯನ್ನು ಪಡೆಯುತ್ತಾರೆ?

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪದಂಗಾ
ವಳಿ ಮುನೀಶ್ವರರುಗಳ ಧಾತುಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ಮಾರ್ಗವನು (ಉದ್ಯೋಗ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಏಳರ ಸಂಖ್ಯೇತವನ್ನು ಉಪಮಾನವನ್ನಾಗಿಸಿ ಮುಕ್ತಿಗೆ ದಾರಿಯನ್ನು ಸನತ್ಸುಜಾತರು ಸೂಚಿಸಿದ್ದಾರೆ. ಲವಣ, ಕಬ್ಬಿನಹಾಲು (ಇಕ್ಷು), ಸುರಾ, ಸರ್ಪಿ, ದಧಿ, ಕ್ಷೀರ, ನೀರು ಇವುಗಳಿರುವ ಏಳು ಸಮುದ್ರಗಳು; ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ವಾರಾಹಿ, ವೈಷ್ಣವಿ, ಇಂದ್ರಾಣಿ, ಕೌಮಾರಿ, ಚಾಮುಂಡಾ; ಏಳು ವಾರಗಳಾದ ಭಾನು, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ; ಏಳು ಎತ್ತರದ ಪರ್ವತಗಳಾದ ಮಹೇಂದ್ರ, ಮಲಯ, ಸಹ್ಯ, ಶುಕ್ತಿಮತ್, ಋಕ್ಷ, ವಿಂಧ್ಯ, ಪಾರಿಯಾತ್ರ; ಸಪ್ತ ವಿಭಕ್ತಿಗಳು, ಸಪ್ತ ದ್ವೀಪಗಳಾದ ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ, ಪುಷ್ಕರ; ಸಪ್ತ ಋಷಿಗಳಾದ ಅತ್ರಿ, ವಸಿಷ್ಠ, ಕಾಶ್ಯಪ, ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ; ದೇಹದಲ್ಲಿನ ಏಳು ಧಾತುಗಳಾದ ರಸ, ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ಅಸ್ಥಿ, ಶುಕ್ರ, ಇವುಗಳ ಕಾಲದ ನಡೆ ರೀತಿಗಳನ್ನು ತಿಳಿದು ಯಾರು ಬಾಳುವರೋ ಅವರು ಮುಕ್ತಿಯ ಮಾರ್ಗಾವನ್ನು ಸೇರುತ್ತಾರೆ ಎಂದು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ, ಸಾಗರ; ಮಾತೃಕೆ: ಮಾತೆ, ತಾಯಿ; ವಾರ: ದಿನ; ಗಿರಿ: ಬೆಟ್ಟ; ಕುಲಗಿರಿ: ಎತ್ತರದ ಪರ್ವತಗಳು; ವಿಭಕ್ತಿ:ವ್ಯಾಕರಣದಲ್ಲಿ ಪ್ರಕೃತಿಗೆ ಪ್ರತ್ಯಯವು ಸೇರಿ ಸಿದ್ಧಿಸುವ ಅನ್ವಯ, ಏಳು ಎಂಬ ಸಂಕೇತ ಪದ; ದ್ವೀಪ: ಸಮುದ್ರದಿಂದ ಆವರಿಸಿದ ಭೂಭಾಗ; ಮುನೀಶ್ವರ: ಋಷಿ; ಧಾತು: ಮೂಲವಸ್ತು; ವೇದಿ:ಪಂಡಿತ, ವಿದ್ವಾಂಸ; ತಿಳಿ: ಅರಿತು; ಕಾಲ: ಸಮಯ; ಗತಿ: ಹರಿವು, ವೇಗ; ಗಮಕ: ಕ್ರಮ, ಅಣಿ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ನಿರ್ಮಳ: ನೆಮ್ಮದಿ, ನಿರಾಳ; ಎಡಹದೆ: ಬೀಳದೆ, ಮುಗ್ಗರಿಸದೆ; ಬೆರಸು: ಸೇರಿಸು; ಮುಕ್ತಿ: ಮೋಕ್ಷ, ಕೈವಲ್ಯ; ಮಾರ್ಗ: ದಾರಿ;

ಪದವಿಂಗಡಣೆ:
ಜಲಧಿ +ಮಾತೃಕೆ +ವಾರ +ಕುಲಗಿರಿ
ಗಳು+ ವಿಭಕ್ತಿ +ದ್ವೀಪದಂಗಾ
ವಳಿ +ಮುನೀಶ್ವರರುಗಳ +ಧಾತುಗಡಣದ+ ವೇದಿಗಳ
ತಿಳಿದು +ಕಾಲದ +ಗತಿಯ +ಗಮಕಂ
ಗಳನರಿದು +ನಡೆವವರುಗಳು +ನಿ
ರ್ಮಳದಲ್+ಎಡಹದೆ +ಬೆರೆಸಿಕೊಂಬರು +ಮುಕ್ತಿ +ಮಾರ್ಗವನು

ಅಚ್ಚರಿ:
(೧) ೭ನ್ನು ಸೂಚಿಸುವ ಪದಗಳ ಬಳಕೆ – ಜಲಧಿ, ಮಾತೃಕೆ, ವಾರ, ಕುಲಗಿರಿ, ವಿಭಕ್ತಿ, ದ್ವೀಪ, ಮುನೀಶ್ವರ, ಧಾತು

ಪದ್ಯ ೫೪: ಭದ್ರಾಶ್ವದ ನಂತರ ಯಾವ ಗಿರಿಯನ್ನು ಆಕ್ರಮಿಸಲು ಮುನ್ನಡೆದರು?

ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯಂ
ತರ ನಡೆದನೊಂಬತ್ತು ಸಾವಿರ ಯೋಜನಾಂತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕಂಡರು ಹತ್ತಿದರು ಹರುಷದಲಿ ಬೊಬ್ಬಿಡುತ (ಸಭಾ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭದ್ರಾಶ್ವಕದಲ್ಲಿ ಅಪೂರ್ವ ವಸ್ತುಗಳು ದೊರಕಿದವು. ಸಮುದ್ರದವರೆಗೂ ಒಂಬತ್ತು ಸಾವಿರ ಯೋಜನ ನಡೆದು, ಭದ್ರಾಶ್ವವನ್ನು ಬಿಟ್ಟು ನಡೆದು ಅಲ್ಲೊಂದು ಗಿರಿಯನ್ನು ಕಂಡು, ಅದನ್ನು ಗರ್ಜಿಸುತ್ತಾ ಹತ್ತಿದರು.

ಅರ್ಥ:
ದೊರಕಿತು: ಸಿಕ್ಕಿತು; ಅಪೂರ್ವ: ಅಪರೂಪವಾದ; ವಸ್ತು: ಸಾಮಗ್ರಿ; ಉತ್ಕರ: ರಾಶಿ, ಸಮೂಹ; ಸಮುದ್ರ: ಸಾಗರ; ದ್ವೀಪ: ನೀರಿನಿಂದ ಸುತ್ತುವರಿದ ಭೂಭಾಗ; ಪರಿಯಂತ: ಕೊನೆಯವರೆಗು; ಸಾವಿರ: ಸಹಸ್ರ; ಯೋಜನ: ಅಳೆಯುವ ಪ್ರಮಾಣ; ತಿರುಗು: ಸುತ್ತಾಡು; ಆಕರಿಸು: ಸಂಗ್ರಹಿಸು, ಹಿಡಿ; ಗಿರಿ: ಬೆಟ್ಟ; ಕಂಡು: ನೋಡು; ಹತ್ತು: ಮೇಲೇರು; ಹರುಷ: ಸಂತೋಷ; ಬೊಬ್ಬಿಡು: ಜೋರಾಗಿ ಕೂಗು;

ಪದವಿಂಗಡಣೆ:
ದೊರಕಿತ್+ಅಲ್ಲಿ+ ಅಪೂರ್ವ +ವಸ್ತು
ಉತ್ಕರ +ಸಮುದ್ರ+ದ್ವೀಪ +ಪರಿಯಂ
ತರ +ನಡೆದನ್+ಒಂಬತ್ತು+ ಸಾವಿರ+ ಯೋಜನ+ಅಂತರವ
ತಿರುಗಿದನು+ ಭದ್ರಾಶ್ವಕವನ್
ಆಕರಿಸಿ +ಬಡಗಲು +ನಡೆದರ್+ಅಲ್ಲಿಯ
ಗಿರಿಯ +ಕಂಡರು +ಹತ್ತಿದರು +ಹರುಷದಲಿ+ ಬೊಬ್ಬಿಡುತ

ಅಚ್ಚರಿ:
(೧) ೨, ೩ ಸಾಲಿನ ಮೊದಲ ಪದ – ತ್ಕರ, ತರ