ಪದ್ಯ ೩೩: ಅಶ್ವತ್ಥಾಮನು ಪಾಂಡವರನ್ನು ಅರಸಿ ಯಾರ ಅರಮನೆಗೆ ಬಂದನು?

ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ (ಗದಾ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಈ ಸದ್ದಿನಿಂದ ನಿದ್ದೆಯಲ್ಲಿ ಮಗ್ನರಾದವರು ಎದ್ದು ಗೊಂದಲಗೊಂಡು ಇವನು ಅಶ್ವತ್ಥಾಮನೇ ಎಂದು ತಿಳಿದರೂ ಸೃಂಜಯಾದಿಗಳು ಇವನ ಎದುರು ಹೋರಾಡಿ ಮಡಿದರು. ಆ ರಾತ್ರಿಯಲ್ಲಿ ರಕ್ತದ ಹೊನಲುಹರಿಸಿ ದ್ರೌಪದಿಯ ಭವನದಲ್ಲಿ ಪಾಂಡವರಿರಬಹುದೆಂದು ಹುಡುಕುತ್ತಾ ಹೋದನು.

ಅರ್ಥ:
ಗಜಬಜ: ಗೊಂದಲ; ನಿದ್ರೆ: ಶಯನ; ಮಜಡ: ದಡ್ಡ, ತಿಳಿಗೇಡಿ; ಭುಜಬಲ: ಪರಾಕ್ರಮ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಕಾಣು: ತೋರು; ರಜನಿ: ರಾತ್ರಿ; ರೌಕುಳ: ಅವ್ಯವಸ್ಥೆ, ಆಧಿಕ್ಯ; ಅಜಿತ: ಅಜೇಯ, ಸೋಲಿಲ್ಲದ; ಸಾಹಸ: ಪರಾಕ್ರಮ; ಆತ್ಮಜೆ: ಮಗಳು; ಭವನ: ಆಲಯ; ಹೊರೆ: ಹತ್ತಿರ, ಸಮೀಪ; ಬಂದು: ಆಗಮಿಸು; ಅರಸು: ಹುಡುಕು;

ಪದವಿಂಗಡಣೆ:
ಗಜಬಜವಿವ್+ಏನೆನುತ +ನಿದ್ರೆಯ
ಮಜಡರೊಳಲ್+ಒಳಗರಿದರ್+ಈತನ
ಭುಜಬಲಕೆ +ಮಲೆತವರ +ಕಾಣೆನು +ಸೃಂಜಯಾದಿಗಳ
ರಜನಿಯಲಿ +ರೌಕುಳವ +ಮಾಡಿದನ್
ಅಜಿತಸಾಹಸನ್+ಇತ್ತ+ ದ್ರುಪದಾ
ತ್ಮಜೆಯ +ಭವನದ +ಹೊರೆಗೆ +ಬಂದನು+ ಪಾಂಡವರನ್+ಅರಸಿ

ಅಚ್ಚರಿ:
(೧) ಅಶ್ವತ್ಥಾಮನನ್ನು ಅಜಿತಸಾಹಸ ಎಂದು ಕರೆದಿರುವುದು
(೨) ದ್ರೌಪದಿಯನ್ನು ದ್ರುಪದಾತ್ಮಜೆ ಎಂದು ಕರೆದಿರುವುದು
(೩) ಯುದ್ಧದ ತೀವ್ರತೆ – ರಜನಿಯಲಿ ರೌಕುಳವ ಮಾಡಿದನಜಿತಸಾಹಸನ್

ಪದ್ಯ ೧೫: ವ್ಯಾಸರು ಯಾವ ಮಂತ್ರ ಬೀಜವನ್ನು ಯುಧಿಷ್ಠಿರನಿಗೆ ಬೋಧಿಸಿದರು?

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರುಣದಲಿ ಕವಿಗೊಂಡ ಕಳವಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ಬೀಜ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ (ಅರಣ್ಯ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ವ್ಯಾಸರು ದ್ರೌಪದಿಯನ್ನು ಕರೆಸಿ ಆಕೆಯ ಮನಸ್ಸನ್ನು ಕವಿದಿದ್ದ ಗೊಂದಲವನ್ನು ಹೋಗಲಾಡಿಸಿದರು. ಅವಳ ಕಣ್ಣಿರಿನ ಚಿಲುಮೆಯನ್ನು ಶಾಂತಗೊಳಿಸಿದರು. ಯುಧಿಷ್ಠಿರನನ್ನು ಏಕಾಂತದಲ್ಲಿ ಅವನ ಪರ್ಣಕುಟೀರಕ್ಕೆ ಕರೆದೊಯ್ದು ಶಿವನಮಂತ್ರದ ಬೀಜಾಕ್ಷರವನ್ನು, ಮುದ್ರೆ, ಅಂಗನ್ಯಾಸ, ಕರನ್ಯಾಸಗಳ ಸಹಿತವಾಗಿ ಬೋಧಿಸಿದರು.

ಅರ್ಥ:
ಕರೆ: ಬರೆಮಾಡು; ಆತ್ಮಜೆ: ಮಗಳು; ಕಂಬನಿ: ಕಣ್ಣಿರು; ಒರತೆ:ಚಿಲುಮೆ; ಆರಲು: ಶಾಂತಗೊಳಿಸುವುದು, ಶಮಿಸು; ನುಡಿ: ಮಾತಾಡು; ಕರುಣ: ದಯೆ; ಕವಿ: ಆವರಿಸು; ಕಳವಳ: ಗೊಂದಲ; ವಿಭಾಡಿಸು: ಹೋಗಲಾಡಿಸು; ಧರಣಿಪತಿ: ರಾಜ; ಏಕಾಂತ: ಒಂಟಿಯಾದ; ಭವನ: ಆಲಯ; ಈಶ್ವರ: ಶಿವ; ಬೀಜ: ಕಾರಣ, ಹೇತು; ಮಂತ್ರಾಕ್ಷರ: ಇಷ್ಟ ದೇವತೆಯನ್ನು ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ಅಂಗ: ಅವಯವ; ಮುದ್ರೆ: ಚಿಹ್ನೆ; ಸಹಿತ: ಜೊತೆ;

ಪದವಿಂಗಡಣೆ:
ಕರೆಸಿ +ದ್ರುಪದ್+ಆತ್ಮಜೆಯ +ಕಂಬನಿ
ಒರತೆ+ಆರಲು+ ನುಡಿದನ್+ಆಕೆಯ
ಕರುಣದಲಿ+ ಕವಿಗೊಂಡ +ಕಳವಳವನು +ವಿಭಾಡಿಸಿದ
ಧರಣಿಪತಿಗ್+ಏಕಾಂತ +ಭವನದೊಳ್
ಒರೆದನ್+ಈಶ್ವರ +ಬೀಜ +ಮಂತ್ರಾ
ಕ್ಷರವನ್+ಅಂಗೋಪಾಂಗ +ಮುದ್ರಾ+ಶಕ್ತಿಗಳು +ಸಹಿತ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣದಲಿ ಕವಿಗೊಂಡ ಕಳವಳವನು
(೨) ದ್ರೌಪದಿಯನ್ನು ದ್ರುಪದಾತ್ಮಜೆ ಎಂದು ಕರೆದಿರುವುದು