ಪದ್ಯ ೪೬: ಅರ್ಜುನನು ಯಾವುದನ್ನು ನೆನಪಿಸಲು ಹೇಳಿದನು?

ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೆ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ (ಗದಾ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ನುಡಿಯುತ್ತಾ, ಭೀಮನು ಪ್ರಾಣ ಸಹಿತನಾಗಲಿ, ವೈರಿಯ ತೊಡೆಯನ್ನು ಮುರಿವೆನೆಂಬುದೇ ಪ್ರತಿಜ್ಞೆಯಲ್ಲವೇ? ಸಭೆಯ ನಡುವೆ ಭೀಮನು ಶಪಥಮಾಡಲಿಲ್ಲವೇ? ಅದನ್ನು ಭೀಮನಿಗೆ ನೆನಪಿಸಿರಿ. ದ್ರೌಪದಿಗೆ ವಿಜಯಲಕ್ಷ್ಮಿಯು ಸವತಿಯಾಗುತ್ತಾಳೆ ಎಂದನು.

ಅರ್ಥ:
ಅನಿಲಸುತ: ಭೀಮ; ಸಪ್ರಾಣಿ: ಪ್ರಾಣ ಸಹಿತ; ರಿಪು: ವೈರಿ; ಜನಪ: ರಾಜ; ನೂರು: ಶತ; ಭಂಗ: ಮುರಿಯುವಿಕೆ; ಮುನ್ನಿನ: ಮುಂಚೆ; ಪ್ರತಿಜ್ಞೆ: ಶಪಥ, ಪಣ; ಸಭೆ: ಪರಿಷತ್ತು, ಗೋಷ್ಠಿ; ಮಧ್ಯ: ನಡುವೆ; ನೆನಸು: ಜ್ಞಾಪಿಸಿಕೋ; ಸಾಕು: ತಡೆ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಕುಮಾರಿ: ಪುತ್ರಿ; ಸವತಿ: ತನ್ನ ಗಂಡನ ಇನ್ನೊ ಬ್ಬಳು ಹೆಂಡತಿ, ಸಪತ್ನಿ;

ಪದವಿಂಗಡಣೆ:
ಅನಿಲಸುತ +ಸಪ್ರಾಣಿಸಲಿ +ರಿಪು
ಜನಪನ್+ಊರು+ವಿಭಂಗವೆ +ಮು
ನ್ನಿನ +ಪ್ರತಿಜ್ಞೆಯಲಾ +ಸಭಾಮಧ್ಯದಲಿ+ ಕುರುಪತಿಯ
ನೆನಸಿಕೊಡಿ +ಸಾಕಿನ್ನು+ ಬೇರೊಂದ್
ಅನುನಯವು +ತಾನೇನು +ವಿಜಯಾಂ
ಗನೆಗೆ +ದ್ರುಪದಕುಮಾರಿ +ತಪ್ಪದೆ+ ಸವತಿಯಹಳೆಂದ

ಅಚ್ಚರಿ:
(೧) ಗೆಲ್ಲಲಿ ಎಂದು ಹೇಳುವ ಪರಿ – ವಿಜಯಾಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ

ಪದ್ಯ ೪೪: ಧರ್ಮಜನು ಅರ್ಜುನನಿಗೆ ಯಾವ ಬಿನ್ನಹ ಮಾಡಿದನು?

ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕೆ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಅರ್ಜುನನೇ, ಭೀಮನು ಅಹಂಕಾರಿ, ಅವನೊಂದಿಗೆ ಹೊಂದಿಕೊಂಡು ಹೋಗು, ನಿನ್ನಲ್ಲಿ ಕರುಣೆಯಿದ್ದರೆ ನಕುಲ ಸಹದೇವರನ್ನು ಚೆನ್ನಾಗಿ ನೋಡಿಕೋ, ದ್ರುಪದನ ಮಗಳಾದ ದ್ರೌಪದಿಯನ್ನು ಬೇಸರವಾಗದಂತೆ ನೋಡಿಕೋ, ಈ ಪರಿವಾರವನ್ನು ಸಲಹಿ ಕಾಪಾಡು ಎಂದು ಹೇಳಿದನು.

ಅರ್ಥ:
ಸೇರು: ಜೊತೆಯಾಗು; ಅಹಂಕಾರ: ದರ್ಪ, ಗರ್ವ; ಕೊಂಡು: ತೆಗೆದು; ಕಾರಣಿಕ: ಗುರು, ವಿಮರ್ಶಕ; ಆರಯಿದು: ಆರೈಕೆ, ನೋಡಿಕೊಂಡು; ಸಲಹು: ಕಾಪಾಡು; ಕುಮಾರಿ: ಪುತ್ರಿ; ಬೇಸರ: ನೋವು; ಪರಿವಾರ: ಸಂಸಾರ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಕೇಳು: ಆಲಿಸು;

ಪದವಿಂಗಡಣೆ:
ಸೇರುವುದು +ಭೀಮನಲಿ +ಸ+ಅಹಂ
ಕಾರನ್+ಆತನ +ಕೊಂಡು +ನಡೆವುದು
ಕಾರಣಿಕೆ+ ನೀನಾದಡೀ +ಸಹದೇವ+ ನಕುಲರನು
ಆರಯಿದು+ ಸಲಹುವುದು+ ದ್ರುಪದ+ಕು
ಮಾರಿಯನು +ಬೇಸರಿಸದ್+ಈ+ ಪರಿ
ವಾರವನು +ಮನ್ನಿಸುವುದ್+ಅರ್ಜುನದೇವ +ಕೇಳೆಂದ

ಅಚ್ಚರಿ:
(೧) ಸೇರು, ಸಲಹು, ಮನ್ನಿಸು, ಬೇಸರಿಸದೆ, ನಡೆವುದು – ಧರ್ಮಜನು ಉಪದೇಶದ ಮಾತುಗಳು