ಪದ್ಯ ೪೩: ದುರ್ಯೋಧನನು ಎಲ್ಲಿ ಮಲಗಿದನು?

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ (ಗದಾ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸೂರ್ಯನೇ ಮೊದಲಾದ ಸಮಸ್ತ ದೇವತೆಗಳಿಗೂ ನಮಸ್ಕರಿಸಿ, ಹೃದಯದಲ್ಲಿ ವರುಣನನ್ನು ಧ್ಯಾನಿಸುತ್ತಾ, ಸುತ್ತನಾಲ್ಕು ದಿಕ್ಕುಗಳನ್ನೂ ನೋಡಿ ಯಾರಿಗೂ ಕಾಣಿಸುತ್ತಿಲ್ಲವೆಂಬುದನ್ನು ನಿರ್ಧರಿಸಿಕೊಂಡು, ದುಷ್ಟಬುದ್ಧಿಯಾದ ಕೌರವನು ಪಾದ, ಮೊಣಕಾಲು, ಸೊಂಟ, ಹೃದಯ ಮುಖ ತಲೆಗಳ ಪರ್ಯಂತ ನೀರಲ್ಲಿ ಮುಳುಗಿ ಕೊಳದ ಮಧ್ಯದಲ್ಲಿ ಮಲಗಿದನು.

ಅರ್ಥ:
ದ್ಯುಮಣಿ: ಸೂರ್ಯ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಸುರರು: ದೇವತೆ; ನಮಿಸು: ವಂದಿಸು; ವರುಣ: ನೀರಿನ ಅಧಿದೇವತೆ; ಧ್ಯಾನ: ಮನನ; ಹೃತ್ಕಮಲ: ಹೃದಯ ಕಮಲ; ನೆಲೆಗೊಳಿಸು: ಸ್ಥಾಪಿಸು; ದೆಸೆ: ದಿಕ್ಕು; ಕುಮತಿ: ಕೆಟ್ಟ ಬುದ್ಧಿಯುಳ್ಳವ; ಇಳಿ: ಜಾರು; ಜಾನು: ಮಂಡಿ, ಮೊಳಕಾಲು; ಕಟಿ: ಸೊಂಟ, ನಡು; ಮುಖ: ಆನನ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಪರಿಯಂತ: ವರೆಗೆ, ತನಕ; ಜಲ: ನೀರು; ಕೊಳ: ಸರಸಿ; ಮಧ್ಯ: ನಡುವೆ; ಅರಸ: ರಾಜ; ಪವಡಿಸು: ಮಲಗು; ಅಮರಿ: ನೆಲತಂಗಡಿ;

ಪದವಿಂಗಡಣೆ:
ದ್ಯುಮಣಿ +ಮೊದಲಾದ್+ಅಖಿಳ+ ಸುರರಿಗೆ
ನಮಿಸಿ+ ವರುಣ+ಧ್ಯಾನವನು +ಹೃ
ತ್ಕಮಲದಲಿ +ನೆಲೆಗೊಳಿಸಿ+ ನಾಲುಕು +ದೆಸೆಯನ್+ಆರೈದು
ಕುಮತಿ+ಇಳಿದನು +ಜಾನು +ಕಟಿ +ಹೃ
ತ್ಕಮಲಗಳ +ಮುಖ +ಮೂರ್ಧ +ಪರಿಯಂತ್
ಅಮರಿದುದು +ಜಲ +ಕೊಳನ +ಮಧ್ಯದಲ್+ಅರಸ +ಪವಡಿಸಿದ

ಅಚ್ಚರಿ:
(೧) ಹೃತ್ಕಮಲ – ೩, ೫ ಸಾಲಿನ ಮೊದಲ ಪದ
(೨) ದುರ್ಯೋಧನನನ್ನು ಕುಮತಿ, ಅರಸ ಎಂದು ಕರೆದಿರುವುದು

ಪದ್ಯ ೩೨: ಅರ್ಜುನನು ಎದುರಾಳಿಯ ವಿಜಯದ ಭ್ರಮೆಯನ್ನು ಹೇಗೆ ಬಿಡಿಸಿದನು?

ದ್ಯುಮಣಿಯೊದೆದರೆ ತರಹರಿಸುವುದೆ
ತಿಮಿರ ರಾಜನ ದೇಹವೀ ವಿ
ಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ
ಸಮತಳಿಸಿ ಶರವಳೆಯ ಕರೆದು
ದ್ಭ್ರಮಿ ಮಹಾರಥ ಭಟರ ವಿಜಯದ
ಮಮತೆಗಳ ಮಾಣಿಸಿದನಂದಮಳಾಸ್ತ್ರಬೋಧೆಯಲಿ (ದ್ರೋಣ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸೂರ್ಯನ ಹೊಡೆತವನ್ನು ಅಂಧಕಾರ ರಾಜನ ದೇಹವು ಸುಧಾರಿಸಿಕೊಳ್ಳಬಹುದೇ? ವಿಕ್ರಮ ದರಿದ್ರರಾದ ಇವರ ಹೊಡೆತಕ್ಕೆ ಅಳುಕಿದರೆ ಅವನು ಅರ್ಜುನನಾಗಬಲ್ಲನೇ ಅವರ ಬಾಣಗಳನ್ನು ಕತ್ತರಿಸಿ ಬಾಣಗಳ ಮಳೆಗರೆದು ಮಮಕಾರದ ಭ್ರಾಂತಿಯಿಂದಿದ್ದ ಇದಿರಾಳಿಗಳ ವಿಜಯದ ಭ್ರಮೆಗಳನ್ನು ಅಸ್ತ್ರಗಳ ಬೋಧೆಯಿಂದ ಬಿಡಿಸಿದನು.

ಅರ್ಥ:
ದ್ಯುಮಣಿ: ಸೂರ್ಯ; ಒದೆ: ಹೊಡೆ; ತರಹರಿಸು: ಕಳವಳಿಸು, ಸೈರಿಸು; ತಿಮಿರ: ಅಂಧಕಾರ; ರಾಜ: ನೃಪ; ದೇಹ: ತನು; ವಿಕ್ರಮ: ಶೂರ, ಸಾಹಸ; ದರಿದ್ರ; ಬಡವ, ಧನಹೀನ; ಅಳುಕು: ಹೆದರು; ಬಳಿಕ: ನಂತರ; ಸಮತಳ: ಸಮತಟ್ಟಾದ ಪ್ರದೇಶ; ಶರವಳೆ: ಬಾಣಗಳ ಮಳೆ; ಕರೆದು: ಬರೆಮಾಡು; ಭ್ರಮೆ: ಇದ್ದುದನ್ನು ಇದ್ದ ಹಾಗೆ ಗ್ರಹಿಸದೆ ಬೇರೆ ರೀತಿಯಲ್ಲಿ ಗ್ರಹಿಸುವುದು, ಭ್ರಾಂತಿ; ಮಹಾರಥ: ಪರಾಕ್ರಮಿ; ಭಟ: ಸೈನಿಕ; ವಿಜಯ: ಗೆಲುವು; ಮಮತೆ: ಪ್ರೀತಿ; ಮಾಣಿಸು: ನಿಲ್ಲಿಸು; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ, ಆಯುಧ; ಬೋಧೆ: ಉಪದೇಶ;

ಪದವಿಂಗಡಣೆ:
ದ್ಯುಮಣಿ+ಒದೆದರೆ +ತರಹರಿಸುವುದೆ
ತಿಮಿರ +ರಾಜನ +ದೇಹವ್+ಈ+ ವಿ
ಕ್ರಮ +ದರಿದ್ರರಿಗ್+ಅಳುಕಿದರೆ +ಬಳಿಕವ +ಧನಂಜಯನೆ
ಸಮತಳಿಸಿ +ಶರವಳೆಯ +ಕರೆದುದ್
ಭ್ರಮಿ +ಮಹಾರಥ +ಭಟರ +ವಿಜಯದ
ಮಮತೆಗಳ +ಮಾಣಿಸಿದನಂದ್+ಅಮಳಾಸ್ತ್ರ+ಬೋಧೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ದ್ಯುಮಣಿಯೊದೆದರೆ ತರಹರಿಸುವುದೆ ತಿಮಿರ ರಾಜನ ದೇಹವ್
(೨) ಅರ್ಜುನನ ಪರಾಕ್ರಮ – ವಿಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ

ಪದ್ಯ ೫: ಯುಧಿಷ್ಠಿರನು ಹೇಗೆ ತೋರಿದನು?

ತಮದ ಗಂಟಲನೊಡೆದು ಹಾಯ್ದ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದೊಳು
ವಿಮಲ ಬಹಳ ಕ್ಷತ್ರರಶ್ಮಿಗ
ಳಮಮ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನುದಾರ ತೇಜದಲಿ (ವಿರಾಟ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ಕತ್ತಲಿನ ಗಂಟಲನ್ನು ಸೀಳಿ ಹೊರ ಬರುವ ಸೂರ್ಯನಮ್ತೆ, ತಾನು ಜೀವನೆಂಬ ಭ್ರಾಂತಿಯನ್ನು ಕಳೆದುಕೊಂಡ ಆತ್ಮನಂತೆ, ಕ್ಷಾತ್ರ ತೇಜಸ್ಸು ದಿಕ್ಕು ದಿಕ್ಕುಗಳನ್ನು ಬೆಳಗುತ್ತಿರಲು, ಯುಧಿಷ್ಠಿರನು ಮಹಾತೇಜಸ್ಸಿನಿಂದ ಬೆಳಗಿದನು.

ಅರ್ಥ:
ತಮ: ಅಂಧಕಾರ; ಗಂಟಲು: ಕಂಠ; ಒಡೆ: ಸೀಳು; ಹಾಯ್ದು: ಹೋರಾಡು; ದ್ಯುಮಣಿ: ಸೂರ್ಯ; ಜೀವ: ಪ್ರಾಣ; ಭ್ರಮೆ: ಭ್ರಾಂತಿ, ಉನ್ಮಾದ; ಕವಚ: ಹೊದಿಕೆ; ಕಳೆ: ನಿವಾರಿಸು; ಹೊಳೆ: ಪ್ರಕಾಶಿಸು; ವಿಮಲ: ನಿರ್ಮಲ; ಬಹಳ: ತುಂಬ; ಕ್ಷತ್ರ: ಕ್ಷತ್ರಿಯ; ರಶ್ಮಿ: ಕಿರಣ; ಅಮಮ: ಅಬ್ಬಬ್ಬ; ದೆಸೆ: ದಿಕ್ಕು; ಬೆಳಗು: ಹೊಳೆ; ಉತ್ತಮ: ಶ್ರೇಷ್ಠ; ಎಸೆ: ತೋರು; ಉದಾರ: ಧಾರಾಳ, ಶ್ರೇಷ್ಠವಾದ; ತೇಜ: ಪ್ರಕಾಶ;

ಪದವಿಂಗಡಣೆ:
ತಮದ+ ಗಂಟಲನ್+ಒಡೆದು +ಹಾಯ್ದ
ದ್ಯುಮಣಿ +ಮಂಡಲದಂತೆ +ಜೀವ
ಭ್ರಮೆಯ +ಕವಚವ+ ಕಳೆದು +ಹೊಳೆಹೊಳೆವ+ಆತ್ಮನಂದದೊಳು
ವಿಮಲ +ಬಹಳ +ಕ್ಷತ್ರ+ರಶ್ಮಿಗಳ್
ಅಮಮ +ದೆಸೆಗಳ+ ಬೆಳಗೆ+ ರಾಜೋ
ತ್ತಮ +ಯುಧಿಷ್ಠಿರ +ದೇವನ್+ಎಸೆದನ್+ಉದಾರ +ತೇಜದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಮದ ಗಂಟಲನೊಡೆದು ಹಾಯ್ದದ್ಯುಮಣಿ ಮಂಡಲದಂತೆ; ಜೀವ
ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದೊಳು

ಪದ್ಯ ೯: ಸೂರ್ಯನು ಧರ್ಮಜನಿಗೆ ಯಾವ ವರವನ್ನು ನೀಡಿದನು?

ವರವ ಕೊಟ್ಟೆನು ನಿನಗೆ ಹೇಮದ
ಚರುಕವಿದೆ ವಿವಿಧಾನ್ನ ಪಾನೋ
ತ್ಕರದ ತವನಿಧಿ ನಿನ್ನ ವಧು ಬಾಣಸನ ಕರಣದಲಿ
ವಿರಚಿಸಲಿ ಬಳಿಕುಣಲಿ ಶತ ಸಾ
ವಿರವ ನಂತವು ನೀವು ಬಳಿಕಂ
ಬುರುಹಮುಖಿ ಮರುದಿವಸವೀಪರಿಯೆಂದನಾ ದ್ಯುಮಣಿ (ಅರಣ್ಯ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಧರ್ಮಜನ ಪ್ರಾರ್ಥನೆಗೆ ಮೆಚ್ಚಿ ಸೂರ್ಯನು ಪ್ರತ್ಯಕ್ಷನಾಗಿ, ಧರ್ಮಜ ನಿನಗೆ ವರವನ್ನು ಕೊಟ್ಟಿದ್ದೇನೆ, ಇದೋ ಈ ಪಾತ್ರೆಯು ಹವಿಸ್ಸಿಗೆ ಯೋಗ್ಯವಾದುದು, ಇದು ವಿವಿಧ ಅನ್ನಪಾನಗಳು ತೀರದ ನಿಧಿಯಾಗಿದೆ. ದ್ರೌಪದಿಯು ಇದರಿಂದ ಪಾಕಶಾಲೆಯಲ್ಲಿ ಬಯಸಿದ ಪಕ್ವಾನ್ನಗಳನ್ನು ಮಾಡಲಿ, ಆ ಮೇಲೆ ಲಕ್ಷವಲ್ಲ ಅನಂತ ಜನರು ಊಟ ಮಾಡಲಿ, ನಂತರ ನೀವು ಐವರು ಊಟ ಮಾಡಿರಿ, ನಂತರ ನಿಮ್ಮ ಪತ್ನಿಯು ಉಣ್ಣಲಿ, ಮರುದಿವಸ ಹೀಗೆಯೇ ಈ ಅಕ್ಷಯ ಪಾತ್ರೆಯಿಂದ ಆಹಾರವನ್ನು ಪಡೆಯಿರಿ ಎಂದು ವರವನ್ನು ನೀಡಿದನು.

ಅರ್ಥ:
ವರ: ಅನುಗ್ರಹ; ಕೊಡು: ನೀಡು; ಹೇಮ: ಚಿನ್ನ; ಚರುಕ: ಅಗ್ನಿಗೆ ಕೊಡುವ ಆಹುತಿ, ಹವಿಸ್ಸು; ವಿವಿಧ: ಹಲವಾರು; ಅನ್ನ: ಆಹಾರ; ಪಾನ: ಕುಡಿಯುವ ದ್ರವ; ಉತ್ಕರ: ರಾಶಿ; ತವನಿಧಿ: ಕೊನೆಯಾಗದ ಭಂಡಾರ; ವಧು: ಹೆಣ್ಣು; ಬಾಣಸ:ಅಡುಗೆ ಮನೆ; ಕರಣ: ಕೆಲಸ; ವಿರಚಿಸು: ಕಟ್ಟು, ನಿರ್ಮಿಸು; ಬಳಿಕ: ನಂತರ; ಉಣಲಿ: ಊಟ ಮಾಡಲಿ; ಶತ: ನೂರು; ಸಾವಿರ: ಸಹಸ್ರ; ನಂತರ: ಬಳಿಕ; ಅಂಬು: ನೀರು; ಅಂಬುರುಹ: ಕಮಲ; ಅಂಬುರುಹಮುಖಿ: ಕಮಲದಂದ ಮುಖವುಳ್ಳವಳು (ದ್ರೌಪದಿ); ಮರುದಿವನ: ಮಾರನೆಯ ದಿನ, ನಾಳೆ; ಈಪರಿ: ಇದೇ ರೀತಿ; ದ್ಯುಮಣಿ: ಸೂರ್ಯ;

ಪದವಿಂಗಡಣೆ:
ವರವ +ಕೊಟ್ಟೆನು +ನಿನಗೆ +ಹೇಮದ
ಚರುಕವಿದೆ+ ವಿವಿಧ+ಅನ್ನ +ಪಾನ
ಉತ್ಕರದ +ತವನಿಧಿ +ನಿನ್ನ +ವಧು +ಬಾಣಸನ +ಕರಣದಲಿ
ವಿರಚಿಸಲಿ+ ಬಳಿಕ್+ಉಣಲಿ +ಶತ +ಸಾ
ವಿರವ +ನಂತವು +ನೀವು +ಬಳಿಕ್
ಅಂಬುರುಹಮುಖಿ+ ಮರುದಿವಸವ್+ಈ+ಪರಿ+ಎಂದನಾ +ದ್ಯುಮಣಿ

ಅಚ್ಚರಿ:
(೧) ದ್ರೌಪದಿಯನ್ನು ವಧು, ಅಂಬುರುಹಮುಖಿ – ಎಂದು ಕರೆದಿರುವುದು

ಪದ್ಯ ೩೧: ಯಾರ್ಯಾರು ದೂರ ಸರಿದರು?

ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ (ಕರ್ಣ ಪರ್ವ, ೨೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸೂರ್ಯನು, ಕರ್ಣಭಾಸ್ಕರನೂ ಅಸ್ತಂಗತರಾದರು, ತನ್ನ ಮಿತ್ರನನ್ನು ಕಾಣದೆ ಕಮಲ ಬಾಡಿದರೆ, ತನ್ನ ಆಪ್ತಮಿತ್ರನನ್ನು ಕಳೆದುಕೊಂಡ ದುಃಖದಿಂದ ದುರ್ಯೋಧನನ ಮುಖಕಮಲವು ಮುದುಡಿತು. ಅಂಧಕಾರವು ಹೆಚ್ಚುತ್ತಿದ್ದಂತೆ, ಕೌರವನ ಶೋಕದ ಅಂಧಕಾರವೂ ಹೆಚ್ಚಿತು. ಬಿಸುಲು ಹಕ್ಕಿಗೆ ಸೂರ್ಯನ ಅಗಲಿಕೆಯಾದರೆ, ಕೌರವನಿಗೆ ವಿಜಯಲಕ್ಷ್ಮಿಯ ಅಗಲಿಕೆ ಸಂಭವಿಸಿತು.

ಅರ್ಥ:
ದ್ಯುಮಣಿ: ಸೂರ್ಯ; ಸಹಿತ: ಜೊತೆ; ಅಸ್ತಮಿಸು: ಕಾಣಲಾಗು, ಸಾವು; ಕಮಲ: ಅಂಬುಜ; ಕಮಲಿನಿ: ತಾವರೆಯ ಬಳ್ಳಿ, ಕಮಲಗಳ ಗುಂಪು; ಮುಖ: ಆನನ; ಮುದುಡು: ಬಾಡು, ಸೊರಗು; ತಿಮಿರ: ಅಂಧಕಾರ; ಹೆಚ್ಚು: ಅಧಿಕವಾಗು; ಶೋಕ: ದುಃಖ; ಅಮಳ: ನಿರ್ಮಲ; ಚಕ್ರಾಂಗ: ಚಕ್ರವಾಕ ಪಕ್ಷಿ, ಬಿಸಿಲು ಹಕ್ಕಿ; ಭೂಪೋತ್ತಮ: ರಾಜರಲ್ಲಿ ಉತ್ತಮನಾದವ; ವಿಜಯಾಂಗನೆ: ವಿಜಯಲಕ್ಷ್ಮೀ; ಅಗಲಿಕೆ: ದೂರಹೋಗು; ಸಮನಿಸು: ಘಟಿಸು; ಕೇಳು: ಆಲಿಸು; ಮಹೀಪಾಲ: ರಾಜ;

ಪದವಿಂಗಡಣೆ:
ದ್ಯುಮಣಿ+ ಕರ್ಣದ್ಯುಮಣಿ+ಸಹಿತ್
ಅಸ್ತಮಿಸೆ +ಕಮಲಿನಿ+ ಕೌರವನ ಮುಖ
ಕಮಲ+ ಬಾಡಿತು +ತಿಮಿರ+ ಹೆಚ್ಚಿತು+ ಶೋಕತಮದೊಡನೆ
ಅಮಳ +ಚಕ್ರಾಂಗಕ್ಕೆ+ ಭೂಪೋ
ತ್ತಮನ +ವಿಜಯಾಂಗನೆಗೆ+ ಅಗಲಿಕೆ
ಸಮನಿಸಿತು +ಕೇಳಯ್ಯ +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಅತ್ಯಂತ ಸುಂದರ ಪರಿಕಲ್ಪನೆಯ ಪದ್ಯ, ಎರಡು ವಿಷಯಗಳನ್ನು ಹೇಳುವ ಸಾಲುಗಳು
(೨) ಕರ್ಣನನ್ನು ಸೂರ್ಯನಿಗೆ ಹೋಲಿಸುವ ಪದ – ಕರ್ಣದ್ಯುಮಣಿ
(೩) ಮಹೀಪಾಲ, ಭೂಪ – ಸಮನಾರ್ಥಕ ಪದ
(೪) ಚಕ್ರಾಂಗ, ವಿಜಯಾಂಗ – ಪ್ರಾಸ ಪದ

ಪದ್ಯ ೨೧: ಕರ್ಣನು ಅಶ್ವತ್ಥಾಮನಿಗೆ ಏನೆಂದು ವಿನಂತಿಸಿದನು?

ಕ್ಷಮಿಸುವುದು ಗುರುಸೂನು ರಣವನು
ನಿಮಿಷ ಚಿತ್ತೈಸುವುದು ಶೌರ್ಯ
ಭ್ರಮಿತರೀ ಪಾಂಚಾಲರನು ಬರಿಕೈದು ತೋರುವೆನು
ದ್ಯುಮಣಿ ಪರಿಯಂತೇಕೆ ರಶ್ಮಿಗೆ
ತಿಮಿರವಿದಿರೇ ನೀವು ನೋಟಕ
ರೆಮಗೆ ರಣ ದೆಖ್ಖಾಳವೆಂದನು ಕರ್ಣ ಗುರುಸುತಗೆ (ಕರ್ಣ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ದ್ರುಪದ ಸೈನ್ಯದ ಮುಂದೆ ಬಂದು ಅಶ್ವತ್ಥಾಮನಿಗೆ, “ಗುರು ಪುತ್ರನೇ, ನನ್ನನ್ನು ಕ್ಷಮಿಸು, ಒಂದು ನಿಮಿಷ ಯುದ್ಧವನ್ನು ನೋಡುತ್ತಿರು, ತಾವು ಶೂರರೆಂದು ಭ್ರಮಿಸಿರುವ ಈ ಪಾಂಚಾಲರನ್ನು ನಿರ್ನಾಮ ಮಾಡಿ ತೋರಿಸುತ್ತೇನೆ. ಬಿಸಿಲೇ ಕತ್ತಲನ್ನೋಡಿಸಬಲ್ಲದು, ಹೀಗಿರುವಾಗ ಸೂರ್ಯನೇಕೆ ಕತ್ತಲಿನೊಡನೆ ಹೋರಾಡಬೇಕು? ಈ ಯುದ್ಧವನ್ನು ನೋಟಕರಾಗಿ ನಿಂತು ನೋಡಿರಿ ಎಂದು ಹೇಳಿದನು.

ಅರ್ಥ:
ಕ್ಷಮೆ: ಸೈರಣೆ, ತಾಳ್ಮೆ; ಗುರು: ಆಚಾರ್ಯ: ಸೂನು: ಮಗ; ಗುರುಸೂನು: ಗುರುವಿನ ಮಗ (ಅಶ್ವತ್ಥಾಮ); ರಣ: ಕಾಳಗ; ನಿಮಿಷ: ಕ್ಷಣ; ಚಿತ್ತೈಸು: ಗಮನಿಸು; ಶೌರ್ಯ: ಪರಾಕ್ರಮ; ಭ್ರಮೆ: ಭ್ರಾಂತಿ; ಬರಿಕೈ: ಏನು ಇಲ್ಲದ ಸ್ಥಿತಿ; ತೋರು: ಗೋಚರ; ದ್ಯುಮಣಿ: ಸೂರ್ಯ; ಪರಿ: ಚಲಿಸು, ನಡೆ; ರಶ್ಮಿ: ಕಾಂತಿ, ಪ್ರಭೆ; ತಿಮಿರು: ಕತ್ತಲು; ನೋಟಕ: ಪ್ರೇಕ್ಷಕ; ಎಮಗೆ: ನನಗೆ; ರಣ: ಯುದ್ಧ; ದೆಖ್ಖಾಳ: ಗೊಂದಲ, ಗಲಭೆ;

ಪದವಿಂಗಡಣೆ:
ಕ್ಷಮಿಸುವುದು +ಗುರುಸೂನು +ರಣವನು
ನಿಮಿಷ +ಚಿತ್ತೈಸುವುದು +ಶೌರ್ಯ
ಭ್ರಮಿತರೀ+ ಪಾಂಚಾಲರನು +ಬರಿಕೈದು +ತೋರುವೆನು
ದ್ಯುಮಣಿ+ ಪರಿಯಂತೇಕೆ +ರಶ್ಮಿಗೆ
ತಿಮಿರವ್+ಇದಿರೇ +ನೀವು +ನೋಟಕರ್
ಎಮಗೆ +ರಣ +ದೆಖ್ಖಾಳವೆಂದನು +ಕರ್ಣ +ಗುರುಸುತಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ದ್ಯುಮಣಿ ಪರಿಯಂತೇಕೆ ರಶ್ಮಿಗೆ ತಿಮಿರವಿದಿರೇ
(೨) ಗುರುಸೂನು, ಗುರುಸುತ – ಸಮನಾರ್ಥಕ ಪದ

ಪದ್ಯ ೩೪: ಮೂರುಲೋಕಗಳೇಕೆ ತಲ್ಲಣಿಸಿದವು?

ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಅಮಿತ ರೋಷವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳೆಂದ (ಕರ್ಣ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವೃತ್ತಾಂತವನ್ನು ಹೇಳುತ್ತಾ, ಧರ್ಮರಾಯ್, ಸುಯೋಧನರ ಮಧ್ಯೆ ಯುದ್ಧವು ನಡೆಯುತ್ತಿರಲು, ಸೂರ್ಯನು ಪಶ್ಚಿಮ ಸಾಗರದ ಸಮೀಪ ಬಂದನು, ಇಬ್ಬರ ಕದನದ ಸಂಭ್ರಮ ಇಮ್ಮಡಿಯಾಯಿತು, ಮಿತಿಯಿಲ್ಲದ ರೋಷದಿಂದ ಬಿಟ್ಟ ಬಾಣಗಳು ಹೊರಸೂಸುವ ಕಿಡಿಗಳಿಂದ ಮೂರು ಲೋಕಗಳು ತಲ್ಲಣಿಸಿದವು ಎಂದು ಸಂಜಯನು ಹೇಳಿತ್ತಿದ್ದನು.

ಅರ್ಥ:
ದ್ಯುಮಣಿ: ಸೂರ್ಯ; ಪಡುವಣ: ಪಶ್ಚಿಮ; ಕಡಲು: ಸಮುದ್ರ; ಸಾರು:ಬಳಿ ಸೇರು, ಹತ್ತಿರಕ್ಕೆ ಬರು; ಸಮಯ: ಕಾಲ; ಉಭಯ: ಇಬ್ಬರ; ರಾಯ: ರಾಜ; ಸಮರ: ಯುದ್ಧ; ಸೌರಂಭ: ಸಂಭ್ರಮ, ಸಡಗರ; ಅತಿಶಯ: ಹೆಚ್ಚಳ; ಇಮ್ಮಡಿ: ಎರಡು ಪಟ್ಟು; ಅಡಿಗಡಿ: ಹೆಜ್ಜೆಹೆಜ್ಜೆ; ಅಮಿತ: ಬಹಳ; ರೋಷ: ಕೋಪ; ವಿಧೂತ: ತೊರೆದ; ಪಾಣಿ: ಹಸ್ತ; ಭ್ರಮಿತ: ಭ್ರಮೆಗೊಂಡ; ಶರ: ಬಾಣ; ತತಿ: ಗುಂಪು, ಸಾಲು; ವಿಸ್ಫುಲಿಂಗ: ಬೆಂಕಿಯ ಕಿಡಿ; ಭುವನ: ಭೂಮಿ; ತ್ರಯ: ಮೂರು; ಕಾದು: ಯುದ್ಧಮಾಡು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದ್ಯುಮಣಿ +ಪಡುವಣ +ಕಡಲ +ಸಾರುವ
ಸಮಯವಾಯಿತ್+ಉಭಯ+ರಾಯರ
ಸಮರ+ ಸೌರಂಭ+ಅತಿಶಯವ್+ಇಮ್ಮಡಿಸಿತ್+ಅಡಿಗಡಿಗೆ
ಅಮಿತ+ ರೋಷ+ವಿಧೂತ +ಪಾಣಿ
ಭ್ರಮಿತ +ಶರತತಿ+ ವಿಸ್ಫುಲಿಂಗ
ಭ್ರಮಿತ+ ಭುವನ+ತ್ರಯರು +ಕಾದಿದರ್+ಅರಸ+ ಕೇಳೆಂದ

ಅಚ್ಚರಿ:
(೧) ದಿನವಾಯಿತು ಎಂದು ಹೇಳಲು – ದ್ಯುಮಣಿ ಪಡುವಣ ಕಡಲ ಸಾರುವ ಸಮಯವಾಯಿತು
(೨) ರಾಯ, ಅರಸ – ಸಮನಾರ್ಥಕ ಪದ
(೩) ಪಾಣಿಭ್ರಮಿತ, ವಿಸ್ಫುಲಿಂಗ ಭ್ರಮಿತ – ಪದಗಳ ಪ್ರಯೋಗ

ಪದ್ಯ ೨೫: ಪಾಂಡವರು ಪಾಂಚಾಲನಗರದ ಮಾರ್ಗವನ್ನು ಹೇಗೆ ಕ್ರಮಿಸಿದರು?

ಗಮನಭರದಲಿ ಭಾರಿಯಧ್ವ
ಶ್ರಮವ ನೋಡದೆ ಭೂಮಿ ನಭದಲಿ
ತಮದ ಚಾವಡಿಯಿಕ್ಕಿದರೆ ಗತಿ ಚಾಪಲವ ಬಿಡದೆ
ದ್ಯುಮಣಿ ಕೈಸೆರೆಯಾಗಲಟವೀ
ಭ್ರಮಣದಲಿ ಬೆಳಗಡಗೆ ಭೂಪೋ
ತ್ತಮರು ಬಂದರು ಬಹಳಗಮನದೊಳರ್ಧರಾತ್ರಿಯಲಿ (ಆದಿ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ದಾರಿಯನ್ನು ಕ್ರಮಿಸುವ ಭರದಲ್ಲಿ, ಬಹಳವಾದ ಮಾರ್ಗ ಶ್ರಮವನ್ನು ಲೆಕ್ಕಿಸದೆ ಭೂಮಿ ಆಕಾಶಗಳಲ್ಲಿ ಕತ್ತಲು ಬೀಡು ಬಿಟ್ಟುದನ್ನು ಗಮನಿಸದೆ ಮುಂದುವರೆಯುವ ಚಾಪಲ್ಯದಿಂದ ಸೂರ್ಯನು ರಾತ್ರಿಗೆ ಶರಣಾದನು. ಪಾಂಡವರು ಆ ವೇಳೆಗೆ ಕಾಡುದಾರಿಯಲ್ಲಿದ್ದವರು, ಕತ್ತಲಿನಲ್ಲೇ ಅರ್ಧ ರಾತ್ರಿಯವರೆಗೂ ನಡೆದರು.

ಅರ್ಥ:
ಗಮನ: ನಡಗೆ, ನಡೆಯುವುದು; ಭರ:ವೇಗ; ಭಾರಿ: ತುಂಬ; ಅಧ್ವ: ಮಾರ್ಗ, ದಾರಿ; ಶ್ರಮ: ಆಯಾಸ, ದಣಿವು; ನೋಡು: ವೀಕ್ಷಿಸು; ಭೂಮಿ: ಪೃತ್ವಿ; ನಭ: ಆಗಸ; ತಮ: ಅಂಧಕಾರ; ಚಾವಡಿ: ಆಸ್ಥಾನ, ಕಟ್ಟೆ; ಗತಿ: ಸಂಚಾರ, ಮಾರ್ಗ; ಚಾಪಳ:ಚಂಚಲತೆ; ಬಿಡು: ತ್ಯಜಿಸು; ದ್ಯುಮಣಿ: ರವಿ, ಸೂರ್ಯ; ಕೈಸೆರೆ: ಬಂಧಿ; ಅಟವಿ: ಕಾಡು; ಭ್ರಮಣ: ಸಂಚಾರ, ತಿರುಗಾಟ; ಭೂಪ: ರಾಜ;

ಪದವಿಂಗಡನೆ:
ಗಮನ+ಭರದಲಿ +ಭಾರಿಯ್+ಅಧ್ವ
ಶ್ರಮವ+ ನೋಡದೆ+ ಭೂಮಿ +ನಭದಲಿ
ತಮದ+ ಚಾವಡಿ+ಯಿಕ್ಕಿದರೆ+ ಗತಿ+ ಚಾಪಲವ+ ಬಿಡದೆ
ದ್ಯುಮಣಿ +ಕೈಸೆರೆಯಾಗಲ್+ಅಟವೀ
ಭ್ರಮಣದಲಿ+ ಬೆಳಗಡಗೆ +ಭೂಪೋ
ತ್ತಮರು +ಬಂದರು +ಬಹಳ+ಗಮನದೊಳ್+ಅರ್ಧ+ರಾತ್ರಿಯಲಿ

ಅಚ್ಚರಿ:
(೧) ರಾತ್ರಿಯಾಗುವುದನ್ನು ಮನೋಹರವಾಗಿ ಚಿತ್ರಿಸಿರುವುದು
(೨) ಗಮನ – ೨ ಬಾರಿ ಪ್ರಯೋಗ, ೧, ೬ ಸಾಲು
(೩) ಗಮನ,ಭ್ರಮಣ – ಸಮಾನಾರ್ಥಕ ಪದ