ಪದ್ಯ ೯೦: ಕೌರವರ ಬಗ್ಗೆ ವಿದುರನು ಏನು ಹೇಳಿದ?

ಖಳರು ಕೌರವರಕ್ಷಧೂರ್ತರ
ತಿಲಕ ಶಕುನಿ ವಿಕಾರಿಯಾದು
ಶ್ಶಳೆಯ ಪತಿ ದೌರ್ಜನ್ಯ ಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ (ಸಭಾ ಪರ್ವ, ೧೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೌರವರು ಮಹಾದುಷ್ಟರು, ದಾಳದಿಂದ ವಂಚಿಸಿ ಪಗಡೆಯಾಟವನ್ನು ಗೆಲ್ಲುವ ಧೂರ್ತರ ಗುರು ಶಕುನಿ, ಕೌರವನ ತಂಗಿ ದುಶ್ಶಳೆಯ ಗಂಡ ಜಯದ್ರಥ ಕೆಟ್ಟವ, ಕರ್ಣನು ದೌರ್ಜನ್ಯಯಜ್ಞದಲ್ಲಿ ದೀಕ್ಷೆ ಪಡೆದವನು, ಭೀಷ್ಮ ದ್ರೋಣರ ವಿಧಾನಗಳಿಗೆ ಫಲ ದೊರಕುವುದಿಲ್ಲ. ನಿಮ್ಮ ದೊಡ್ಡಪ್ಪ ಕನ್ನಡಿಯಂತೆ, ಮಕ್ಕಳ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತಾನೆ. ಇದನ್ನು ನೋಡಿಕೊಂಡು ಆಲೋಚಿಸಿ, ತೀರ್ಮಾನಿಸಿ ಎಂದು ವಿದುರನು ಹೇಳಿದನು.

ಅರ್ಥ:
ಖಳ: ದುಷ್ಟ; ಅಕ್ಷ: ಪಗಡೆ ಆಟದ ದಾಳ; ಧೂರ್ತ: ದುರುಳ, ದುಷ್ಟ; ತಿಲಕ: ಶ್ರೇಷ್ಠ; ವಿಕಾರ: ರೂಪಾಂತರ; ಪತಿ: ಗಂಡ; ದೌರ್ಜನ್ಯ: ದುಷ್ಟತನ; ಮಖ: ಯಜ್ಞ; ದೀಕ್ಷಿತ: ದೀಕ್ಷೆ ಪಡೆದವ; ದೀಕ್ಷೆ: ಸಂಸ್ಕಾರ; ಉಳಿದ: ಮಿಕ್ಕ; ನಿಷ್ಫಲ: ಪ್ರಯೋಜನವಿಲ್ಲದ; ವಿಧಾನ: ನಿಯಮ, ಕಟ್ಟಳೆ; ಬೊಪ್ಪ: ತಂದೆ; ಬಳಕೆ: ಉಪಯೋಗ; ಕನ್ನಡಿ: ಮುಕುರ; ನೋಡು: ವೀಕ್ಷಿಸು;

ಪದವಿಂಗಡಣೆ:
ಖಳರು+ ಕೌರವರ್+ಅಕ್ಷ+ಧೂರ್ತರ
ತಿಲಕ+ ಶಕುನಿ+ ವಿಕಾರಿ+ಆ+ದು
ಶ್ಶಳೆಯ +ಪತಿ +ದೌರ್ಜನ್ಯ +ಮಖದೀಕ್ಷಿತನು+ ಕಲಿಕರ್ಣ
ಉಳಿದ +ಭೀಷ್ಮ+ದ್ರೋಣರೇ+ ನಿ
ಷ್ಫಲ +ವಿಧಾನರು +ನಿಮ್ಮ +ಬೊಪ್ಪನ
ಬಳಕೆ +ಕನ್ನಡಿ +ನೋಡಿಕೊಳಿ+ ನೀವೆಂದನಾ +ವಿದುರ

ಅಚ್ಚರಿ:
(೧) ಶಕುನಿಯನ್ನು ಕರೆದ ಬಗೆ – ಅಕ್ಷಧೂರ್ತರ ತಿಲಕ ಶಕುನಿ
(೨) ಕರ್ಣನನ್ನು ಕರೆದ ಬಗೆ – ದೌರ್ಜನ್ಯ ಮಖದೀಕ್ಷಿತನು ಕಲಿಕರ್ಣ
(೩) ದ್ರೋಣ ಭೀಷ್ಮರು – ಭೀಷ್ಮದ್ರೋಣರೇ ನಿಷ್ಫಲ ವಿಧಾನರು