ಪದ್ಯ ೧೬: ಧೃತರಾಷ್ಟ್ರನ ಅಂಧಪ್ರೀತಿ ಹೇಗಿತ್ತು?

ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನ ನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ (ಸಭಾ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಅಂಧಪ್ರೀತಿ ಹೆಚ್ಚಿತು, ಮಗನೇ ನಾನೇನು ಮಾಡಬೇಕು, ಪಾಂಡವರನ್ನು ಹಾಳುಮಾಡಲು ಯಾವ ಮಾರ್ಗವನ್ನು ಹುಡುಕಿರುವೆ? ದೈವದ ರೀತಿಯು ಕಠಿಣವಾದುದು, ಅದನ್ನು ಅನ್ಯಾಯದ ಮಾರ್ಗದಲ್ಲಿ ಮುರಿಯಲಾಗುವುದಿಲ್ಲ, ನಾನು ನಿನ್ನಿಂದ ಬೇರೆಯವನೇ? ದುಃಖಿಸಬೇಡ, ಮನಸ್ಸಿನಲ್ಲಿರುವುದನ್ನು ಹೇಳು ಎಂದು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಾಡು: ಕಾರ್ಯರೂಪಕ್ಕೆ ತರು; ಕೆಡಿಸು: ಹಾಳುಮಾಡು; ಹದ: ರೀತಿ; ಕಂಡೆ: ನೋಡಿ; ದೈವ: ಭಗವಂತ; ಅಧೀನ: ವಶ; ನಿಷ್ಠ: ಶ್ರದ್ಧೆಯುಳ್ಳವನು; ನಿಷ್ಠುರ: ಕಠಿಣ; ಮುರಿ: ಸೀಳು; ಅರಿ: ತಿಳಿ; ಅನ್ಯಾಯ: ಸರಿಯಲ್ಲದ; ತಂತ್ರ: ಕುಟಿಲ ರಾಜಕಾರಣ; ಅಭಿಮತ: ಅಭಿಪ್ರಾಯ; ಆನು: ನಾನು; ಹೊರಗೆ: ಬೇರೆ; ಕಂದ: ಮಗು; ನುಡಿ: ಮಾತಾದು; ದುಮ್ಮಾನ: ದುಃಖ,ದುಗುಡ; ಬೇಡ: ತಡೆ, ನಿಲ್ಲಿಸು; ಆಣೆ: ಪ್ರಮಾಣ; ಸಂತೈಸು: ಸಮಾಧಾನಪಡಿಸು; ಮಗ: ಸುತ;

ಪದವಿಂಗಡಣೆ:
ಏನು +ಮಾಡುವೆವ್+ಅವರ +ಕೆಡಿಸುವಡ್
ಏನು +ಹದನನು+ ಕಂಡೆ +ದೈವಾ
ಧೀನ +ನಿಷ್ಠರ +ಮುರಿವುದರಿದ್+ಅನ್ಯಾಯ +ತಂತ್ರದಲಿ
ಏನು +ನಿನ್+ಅಭಿಮತವು+ ನಿನ್ನೊಳಗ್
ಆನು +ಹೊರಗೇ +ಕಂದ +ನುಡಿ +ದು
ಮ್ಮಾನ +ಬೇಡ್+ಎನ್ನಾಣೆನುತ+ ಸಂತೈಸಿದನು+ ಮಗನ

ಅಚ್ಚರಿ:
(೧) ಮಗನಮೇಲೆ ಪೀತಿಯನ್ನು ತೋರುವ ಪರಿ – ಏನು ನಿನ್ನಭಿಮತವು ನಿನ್ನೊಳಗಾನು ಹೊರಗೇ ಕಂದ ನುಡಿ ದುಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ

ಪದ್ಯ ೨೧: ಶಲ್ಯನು ಕರ್ಣನಿಗೆ ಹೇಗೆ ಧೈರ್ಯ ತುಂಬಿದನು?

ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಯ್ಯೋ ಕರ್ಣ, ಛೇ, ನೀನೇನು ಮರುಳೇ, ಹುಚ್ಚನಂತೆ ಮನಸ್ಸನ್ನು ಕುಂದುಗೊಳಿಸಬೇಡ. ಸೋಲು ಗೆಲುವುಗಳು ದೈವಾಧೀನವಾಗಿರುವವು. ಒಂದು ಸೋಲಿನಿಂದ ನಿನ್ನ ಪರಾಕ್ರಮಕ್ಕೆ ಕುಂದುಂಟಾಗುವುದಿಲ್ಲ. ದೇವ ದಾನವರಲ್ಲಿ ಕಲಹವಾದಾಗ ಅನೇಕ ವೀರರಿದ್ದರೂ ಮಹಾಬಲಶಾಲಿಗಳೇ ದುರ್ಬಲಗಾರಿ ಸೋತರು. ಹೆದರಬೇಡ, ನಿನ್ನ ಬಿಲ್ಲನ್ನು ಹಿಡಿ ಎಂದು ಕರ್ಣನನ್ನು ಶಲ್ಯನು ಹುರಿದುಂಬಿಸಿದನು.

ಅರ್ಥ:
ಮರುಳ: ಮೂಢ; ರಾಧೇಯ: ಕರ್ಣ; ಫಡ: ಛೀ, ಮೂದಲಿಸುವ ಶಬ್ದ; ಮನ: ಮನಸ್ಸು; ಇಳುಹು: ಇಳಿಸು; ತಪ್ಪು:ಸುಳ್ಳಾಗು; ಸೋಲು: ಅಪಜಯ; ಗೆಲುವು: ಜಯ; ದೈವ: ಭಗವಂತ; ಅಧೀನ: ವಶ; ಆಳುತನ: ಪರಾಕ್ರಮ; ಕುಂದು: ಲೋಪ; ಹಲಬರು: ಅನೇಕ ಜನರು; ಅಮರ: ದೇವ; ಅಸುರ: ದಾನವ, ರಾಕ್ಷಸ; ಹೆಬ್ಬಲ: ಮಹಾಬಲಶಾಲಿ; ದುರ್ಬಲ: ನಿಶ್ಯಕ್ತ; ಮನ: ಮನಸ್ಸು; ಅಳುಕು: ಹೆದರು; ಹಿಡಿ: ತೆಗೆದುಕೋ; ಧನು: ಧನಸ್ಸು; ಅನುವಾಗು: ತಯಾರಾಗು, ಸಿದ್ಧನಾಗು;

ಪದವಿಂಗಡಣೆ:
ಎಲೆ +ಮರುಳೆ +ರಾಧೇಯ +ಫಡ +ಮನವ್
ಇಳುಹದಿರು +ತಪ್ಪೇನು +ಸೋಲವು
ಗೆಲವು+ ದೈವಾಧೀನ+ ನಿನ್+ಆಳ್ತನಕೆ +ಕುಂದೇನು
ಹಲಬರ್+ಅಮರ್+ಅಸುರರೊಳಗೆ+ ಹೆ
ಬ್ಬಲವೆ+ ದುರ್ಬಲವಾಯ್ತು +ನೀ +ಮನವ್
ಅಳುಕದಿರು+ ಹಿಡಿ+ ಧನುವನ್+ಅನುವಾಗ್+ಎಂದನಾ +ಶಲ್ಯ

ಅಚ್ಚರಿ:
(೧) ಹುರಿದುಂಬಿಸುವ ಪದಗಳು – ಮನವಿಳುಹದಿರು ತಪ್ಪೇನು ಸೋಲವು ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು; ನೀ ಮನವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ
(೨) ಸೋಲು, ಗೆಲುವು; ಹೆಬ್ಬಲ, ದುರ್ಬಲ; ಅಮರ, ಅಸುರ – ವಿರುದ್ಧ ಪದಗಳು

ಪದ್ಯ ೧೧೮: ಸನತ್ಸುಜಾತರು ಧೃತರಾಷ್ಟ್ರನಿಗೆ ಯಾವ ಎಚ್ಚರದ ನುಡಿಗಳನ್ನು ಹೇಳಿದರು?

ಅರುಹಬಾರದು ಮುಂದೆ ಬಹದಿನ
ಬಿರಿಸು ನೀನೆಚ್ಚೆತ್ತು ನಡೆ ಮೈ
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ
ಬರಿದಹುದು ಬ್ರಹ್ಮಾಂಡ ನೀನದ
ನರಿಯೆ ಮೇಲಣ ತಾಗು ಬಾಗಿನ
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೧೮ ಪದ್ಯ)

ತಾತ್ಪರ್ಯ:
ಮುಂದೆ ಬರುವ ದಿನ ತುಂಬ ಕಷ್ಟಕರವಾಗಿರುತ್ತದೆ. ಅದನ್ನು ಹೇಳಲು ಬರುವುದಿಲ್ಲ. ನೀನು ಎಚ್ಚರದಿಂದ ನಡೆದುಕೋ. ನಿನ್ನ ಮಕ್ಕಳ ವೈರದಿಂದ ಲೋಕವೇ ಬರಿದಾಗುತ್ತದೆ, ಇದನ್ನು ನೀನು ಅರಿತು ಮೈಮರೆಯದೇ ಎಚ್ಚರದಿಂದ ಹೆಜ್ಜೆಹಾಕು, ಮುಂದಾಗುವುದು ಏನೆಣ್ದು ದೈವಕ್ಕೆ ಅಧೀನವಾಗಿದೆ ಎಂದು ಸನತ್ಸುಜಾತರು ಧೃತರಾಷ್ಟ್ರನನ್ನು ಎಚ್ಚರಿಸಿದರು.

ಅರ್ಥ:
ಅರುಹು: ತಿಳಿಸು, ಹೇಳು; ಮುಂದೆ: ಮುಂಗಡ, ಬರುವ; ಬಿರುಸು: ಜೋರು; ಎಚ್ಚೆತ್ತು: ಗಮನವಿಟ್ಟು; ನಡೆ: ಹೆಜ್ಜೆ ಇಡು; ಮೈಮರೆ: ದೇಹದ ಅರಿವು ಇಲ್ಲವಾಗು; ಆತ್ಮಜ: ಮಗ; ವೈರ: ಹಗೆ; ಬಂಧ: ಬಂಧನ, ಪಾಶ, ಕಟ್ಟು; ಬರಿ: ವ್ಯರ್ಥ, ಸಾರವಿಲ್ಲದ; ಬ್ರಹ್ಮಾಂಡ: ಜಗತ್ತು; ಅರಿ: ತಿಳಿ; ಮೇಲಣ: ಒಟ್ಟಾಗಿ ಸೇರುವಿಕೆ; ತಾಗು: ಹೊಡೆತ, ಪೆಟ್ಟು, ಸೇರು; ಬಾಗು: ಬಗ್ಗು, ಮಣಿ; ಹೊರಿಗೆ:ಭಾರ, ಹೊರೆ;ದೈವ: ಭಗವಂತ; ಅಧೀನ: ಕೈಕೆಳಗಿರುವ, ವಶ; ಮುನಿ: ಋಷಿ;

ಪದವಿಂಗಡಣೆ:
ಅರುಹಬಾರದು +ಮುಂದೆ +ಬಹದಿನ
ಬಿರಿಸು +ನೀನ್+ಎಚ್ಚೆತ್ತು +ನಡೆ +ಮೈ
ಮರೆಯದಿರು+ ನಿನ್ನಾತ್ಮಜರ +ವೈರಾನು+ಬಂಧದಲಿ
ಬರಿದಹುದು +ಬ್ರಹ್ಮಾಂಡ +ನೀನದನ್
ಅರಿಯೆ +ಮೇಲಣ +ತಾಗು +ಬಾಗಿನ
ಹೊರಿಗೆ+ ದೈವಾಧೀನವಾಗಿಹುದ್+ಎಂದನಾ +ಮುನಿಪ

ಅಚ್ಚರಿ:
(೧) ‘ಬ’ಕಾರದ ಜೋಡಿ ಪದಗಳು – ಬಹದಿನ ಬಿರಿಸು; ಬಂಧದಲಿ ಬರಿದಹುದು ಬ್ರಹ್ಮಾಂಡ
(೨) ನೀನ್ ಪದದ ಬಳಕೆ – ನೀನ್, ನಿನ್ನಾತ್ಮ, ನೀನದನ್