ಪದ್ಯ ೪೪: ಭೀಷ್ಮನು ಧೃತರಾಷ್ಟ್ರನಿಗೆ ಯಾರನ್ನು ಸಂತೈಸಲು ಹೇಳಿದನು?

ಆಹಹ ಭೂತ ಕ್ಷೋಭವಿದು ನಿ
ರ್ದಹಿಸುವುದು ಕುರುಕುಲವ ನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದೆಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆನಡೆಯೆಂದನಾ ಭೀಷ್ಮ (ಸಭಾ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಪಂಚಭೂತಗಳಲ್ಲಿ ಉಂಟಾದ ಈ ಕೋಲಾಹಲವು ಕುರುಕುಲವನ್ನೇ ಸುಟ್ಟು ಬೂದಿ ಮಾಡುತ್ತದೆ, ದ್ರೌಪದಿಯು ದೇವತೆಗಳಿಗೆ ಮೊರೆಯಿಟ್ಟುದುದರಿಂದ ದೇವತೆಗಳು ಈ ಉತ್ಪಾತಗಳನ್ನುಂಟುಮಾಡುತ್ತಿದ್ದಾರೆ. ನಿನ್ನ ದುಷ್ಟ ಮಕ್ಕಳನ್ನು ದುಷ್ಕೃತ್ಯಮಾಡಲು ಬಿಟ್ಟು ನೀನು ಮೌನದಿಂದಿರುವುದು ಸರಿಯಲ್ಲ. ದ್ರೌಪದಿಯನ್ನು ಸಂತೈಸು ಬಾ, ನಡೆ ಎಂದು ಭೀಷ್ಮನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅಹಹ: ಓಹೋ!; ಭೂತ: ದೆವ್ವ, ಪಿಶಾಚಿ, ಪಂಚಭೂತ; ಕ್ಷೋಭೆ: ಉದ್ವೇಗ; ದಹಿಸು: ಸುಡು; ಅಕಟ: ಅಯ್ಯೋ; ಮಹಿಳೆ: ಹೆಣ್ಣು; ಒರಲು: ಗೋಳು, ಕೂಗು; ಅಮರ: ದೇವ, ಸುರರು; ನಿಕರ: ಗುಂಪು; ದೈವ: ಭಗವಂತ; ಕೃತ: ಮಾಡಿದ; ಕುಹಕಿ: ಕಪಟಿ; ಮಕ್ಕಳು: ಪುತ್ರರು; ಮೌನ: ಸದ್ದಿಲ್ಲದ ಸ್ಥಿತಿ; ಸಂತೈಸು: ಸಮಾಧಾನ ಪಡಿಸು; ನಡೆ: ಚಲಿಸು, ಮುಂದೆ ಹೋಗು;

ಪದವಿಂಗಡಣೆ:
ಆಹಹ +ಭೂತ +ಕ್ಷೋಭವಿದು +ನಿ
ರ್ದಹಿಸುವುದು +ಕುರುಕುಲವನ್ + ಅಕಟ
ಈ+ಮಹಿಳೆ+ಒರಲಿದಳ್+ಅಮರ+ ನಿಕರಕೆ +ದೈವ+ಕೃತವಿದ್+ಎಲೆ
ಕುಹಕಿ+ ಮಕ್ಕಳನಿಕ್ಕಿ+ ಮೌನದೊಳ್
ಇಹರೆ+ ಬಾ +ಧೃತರಾಷ್ಟ್ರ +ಪಾಂಡವ
ಮಹಿಳೆಯನು +ಸಂತೈಸು +ನಡೆನಡೆ+ಎಂದನಾ +ಭೀಷ್ಮ

ಅಚ್ಚರಿ:
(೧) ದ್ರೌಪದಿಯನ್ನು ಮಹಿಳೆ ಎಂದು ಕರೆದಿರುವುದು
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಕುಹಕಿ ಮಕ್ಕಳನಿಕ್ಕಿ ಮೌನದೊಳಿಹ

ಪದ್ಯ ೧೮: ಯುಧಿಷ್ಠಿರನು ಧೌಮ್ಯನಿಗೆ ಏನೆಂದು ಹೇಳಿದ?

ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತವುಪಭೋಗವೆನಗೆಂದ (ಸಭಾ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೌಮ್ಯನು ಊರಿಗೆ ತೆರಳಿದ ಮೇಲೆ ಶಾಂತಿಕಾರ್ಯವನ್ನು ಮಾಡಿಸೋಣ ಎಂದುದಕ್ಕೆ, ಯುಧಿಷ್ಠಿರನು ಊರಿಗೆ ತೆರಳಿದ ಮೇಲೆ ಶಾಂತಿ ಕಾರ್ಯ ಮಾಡಿಸಿ ಏನು ಪ್ರಯೋಜನ. ಅಲ್ಲಿರುವಾಗ ನಾರದನು ನನ್ನ ಸ್ವಪ್ನಗಳ ವಿಷಯವನ್ನು ಕೇಳಿ ಇದು ನಿಮ್ಮ ಐಶ್ವರ್ಯನಾಶವನ್ನು ಸೂಚಿಸುತ್ತದೆ ಎಂದನು. ನಿನ್ನೆ ರಾತ್ರಿ ಕನಸಿನಲ್ಲಿ ಬೆಟ್ಟ ಅಡವಿಗಳಲ್ಲಿ ತಿರುಗಾಡಿದಂತೆ ಕನಸನ್ನು ಕಂಡೆ. ದೈವಚಿತ್ತದಿಂದ ಬಂದುದನ್ನು ಉಪಭೋಗಿಸೋಣ ಎಂದನು.

ಅರ್ಥ:
ಪುರ: ಊರು; ಒರೆ: ಹೇಳು; ಉತ್ಪಾತ: ಅಪಶಕುನ; ಪ್ರಬಂಧ: ವ್ಯವಸ್ಥೆ, ಏರ್ಪಾಡು; ಹೊರಿಗೆ: ಭಾರ, ಹೊರೆ; ಐಶ್ವರ್ಯ: ಸಂಪತ್ತು, ಸಿರಿ; ವಿಧ್ವಂಸಕ: ವಿನಾಶ; ಇರುಳು: ಕತ್ತಲೆ; ಸ್ವಪ್ನ: ಕನಸು; ಕಾನನ: ಅಡವಿ; ಗಿರಿ: ಬೆಟ್ಟ; ಪರಿಭ್ರಮಣೆ: ತಿರುಗು; ಚಿಂತೆ: ಯೋಚನೆ; ಭರಿತ: ಮುಳುಗು; ದೈವ: ಭಗವಂತ; ಕೃತ: ನಿರ್ಮಿಸಿದ; ಉಪಭೋಗ: ವಿಷಯಾನುಭವ;

ಪದವಿಂಗಡಣೆ:
ಪುರದೊಳ್+ಎಲ್ಲಿಯ +ಶಾಂತಿ +ನಾರದನ್
ಒರೆದನ್+ಉತ್ಪಾತ +ಪ್ರಬಂಧದ
ಹೊರಿಗೆಯನು +ನಿಮ್+ಐಶ್ವರಿಯ +ವಿಧ್ವಂಸಕರವೆಂದು
ಇರುಳು +ನಾನಾ +ಸ್ವಪ್ನ+ಕಾನನ
ಗಿರಿ+ ಪರಿಭ್ರಮಣೈಕ+ ಚಿಂತಾ
ಭರಿತನಾದೆನು+ ದೈವಕೃತವ್+ಉಪಭೋಗವೆನಗೆಂದ

ಅಚ್ಚರಿ:
(೧) ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವ ನುಡಿ – ದೈವಕೃತವುಪಭೋಗವೆನಗೆಂದ