ಪದ್ಯ ೨೩: ದುರ್ಯೋಧನನನ್ನು ಧರ್ಮಜನು ಹೇಗೆ ಹಂಗಿಸಿದನು?

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ಕೊಳದಿಂದ ಮೇಲೆದ್ದು ಯುದ್ಧಮಾಡಲು ಬಾ, ಹಿಂದಿನ ದುಷ್ಕೀರ್ತಿಯನ್ನು ಕಳೆದುಕೋ, ಲೆಕ್ಕವಿಲ್ಲದಷ್ಟು ಬಂಧು ಬಾಂಧವರು ಅನೇಕ ಅಕ್ಷೋಹಿಣೀ ಸೈನ್ಯಗಳನ್ನು ಕೊಂದ ಅಪಕೀರ್ತಿಯ ಕೆಸರನ್ನು ತೊಳೆದುಕೋ, ಲೋಕದಲ್ಲಿ ಮಾನ್ಯನಾದವನು ದೀನನಾಗಬಾರದು, ಹುಚ್ಚಾ, ಆಯುಧವನ್ನು ಹಿಡಿ ಎಂದು ಕೌರವನನ್ನು ಧರ್ಮಜನು ಹಂಗಿಸಿದನು.

ಅರ್ಥ:
ಕೊಳ: ಸರಸಿ, ಸರೋವರ; ಬಿಡು: ತೊರೆ; ಕಾದು: ಹೋರಾಡು; ಹಿಂದಣ: ಹಿಂದೆ ನಡೆದ; ಹಳಿ: ದೂಷಿಸು, ನಿಂದಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಹೇರಾಳ: ಬಹಳ; ಬಾಂಧವ: ಬಂಧುಜನ; ಬಳಗ: ಗುಂಪು; ಭೂಮೀಶ್ವರ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಅಳಿ: ಸಾವು; ಕೀರ್ತಿ: ಯಶಸ್ಸು; ಕೆಸರು: ರಾಡಿ; ಭೂವಳಯ: ಭೂಮಿ; ಮಾನ್ಯ: ಪ್ರಸಿದ್ಧ; ದೈನ್ಯ: ದೀನತೆ, ಹೀನಸ್ಥಿತಿ; ವೃತ್ತಿ: ಕೆಲಸ; ಬಳಸು: ಸುತ್ತುವರಿ, ಸುತ್ತುಗಟ್ಟು; ಮರುಳ: ತಿಳಿಗೇಡಿ, ದಡ್ಡ; ಕೈದು: ಆಯುಧ;

ಪದವಿಂಗಡಣೆ:
ಕೊಳನ +ಬಿಡು +ಕಾದೇಳು +ಹಿಂದಣ
ಹಳಿವ +ತೊಳೆ +ಹೇರಾಳ +ಬಾಂಧವ
ಬಳಗ+ ಭೂಮೀಶ್ವರರ +ಬಹಳ+ಅಕ್ಷೋಹಿಣೀ+ದಳವ
ಅಳಿದ+ ಕೀರ್ತಿಯ +ಕೆಸರ +ತೊಳೆ +ಭೂ
ವಳಯ+ಮಾನ್ಯನು +ದೈನ್ಯ+ವೃತ್ತಿಯ
ಬಳಸುವರೆ +ಸುಡು +ಮರುಳೆ +ಕುರುಪತಿ +ಕೈದುಗೊಳ್ಳೆಂದ

ಅಚ್ಚರಿ:
(೧) ಹಿಂದಣ ಹಳಿವ ತೊಳೆ, ಅಳಿದ ಕೀರ್ತಿಯ ಕೆಸರ ತೊಳೆ – ತೊಳೆ ಪದದ ಬಳಕೆ
(೨) ಲೋಕ ನೀತಿ – ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ