ಪದ್ಯ ೬೬: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ಹೋಹೆಗೆಲ್ಲಿಯ ದರ್ಪ ಮನುಜನ
ಸಾಹಸವು ಬೇರೇನು ಯಂತ್ರದ
ಹಾಹೆ ಯಂತ್ರವನುಳಿದು ಚೇಷ್ಟಿಸಲರಿವುದೇ ಬೇರೆ
ದೇಹಿ ನೀ ನಾವೆಲ್ಲ ನಿನ್ನಯ
ದೇಹವಿದರೊಳಗೆಮಗೆ ಗರ್ವದ
ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು (ವಿರಾಟ ಪರ್ವ, ೧೧ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗೊಂಬೆಗೆಲ್ಲಿಂದ ದರ್ಪ ಬರುತ್ತದೆ? ಮನುಷ್ಯನ ಸಾಹಸ ಎನ್ನುವುದು ಬೇರೆಯಿದೆಯೇ? ಯಂತ್ರದ ಗೊಂಬೆಯು ಯಂತ್ರವನ್ನು ಬಿಟ್ಟು ತಾನೇ ಚಲಿಸಬಲ್ಲದೆ? ಕೃಷ್ಣ ನೀನು ದೇಹದಲ್ಲಿರುವವನು, ನಾವು ದೇಹಿಗಳು, ನಮಗೆ ಗರ್ವವು ಸಲ್ಲದೆಂದು ಯುಧಿಷ್ಠಿರನು ಬಿನ್ನವಿಸಿಕೊಂಡನು.

ಅರ್ಥ:
ಹೂಹೆ: ಹಸುಳೆ, ಶಿಶು; ದರ್ಪ: ಅಹಂಕಾರ; ಮನುಜ: ಮಾನವ; ಸಾಹಸ: ಪರಾಕ್ರಮ; ಬೇರೆ: ಅನ್ಯ; ಯಂತ್ರ: ಉಪಕರಣ; ಹಾಹೆ: ಗೊಂಬೆ, ಪುತ್ತಳಿ; ಉಳಿದು: ಮಿಕ್ಕಿ; ಚೇಷ್ಟೆ: ಕಾರ್ಯ; ಅರಿ: ತಿಳಿ; ದೇಹಿ: ನೀಡು; ದೇಹ: ತನು; ಗರ್ವ: ಅಹಂಕಾರ; ಗಾಹು: ಪ್ರಭಾವ, ಮೋಸ; ಸೂನು: ಮಗ; ಬಿನ್ನವಿಸು: ಹೇಳು;

ಪದವಿಂಗಡಣೆ:
ಹೋಹೆಗೆಲ್ಲಿಯ +ದರ್ಪ +ಮನುಜನ
ಸಾಹಸವು +ಬೇರೇನು +ಯಂತ್ರದ
ಹಾಹೆ +ಯಂತ್ರವನ್+ಉಳಿದು +ಚೇಷ್ಟಿಸಲ್+ ಅರಿವುದೇ+ ಬೇರೆ
ದೇಹಿ +ನೀ +ನಾವೆಲ್ಲ+ ನಿನ್ನಯ
ದೇಹವಿದರೊಳಗ್+ಎಮಗೆ+ ಗರ್ವದ
ಗಾಹಿದೆಲ್ಲಿಯದೆಂದು +ಬಿನ್ನವಿಸಿದನು+ ಯಮಸೂನು

ಅಚ್ಚರಿ:
(೧) ಹೋಹೆ, ಹಾಹೆ – ಪದಗಳ ಬಳಕೆ
(೨) ಕೃಷ್ಣನ ಹಿರಿಮೆ – ದೇಹಿ ನೀ ನಾವೆಲ್ಲ ನಿನ್ನಯ ದೇಹವಿದರೊಳಗೆಮಗೆ ಗರ್ವದ ಗಾಹಿದೆಲ್ಲಿಯದೆಂದು

ಪದ್ಯ ೨೦: ಭೀಮಾರ್ಜುನರು ಶಕುನಿಗೆ ಹೇಗೆ ಉತ್ತರಿಸಿದರು?

ದೇಹಿಗೆರವೇ ದೇಹವೆಲವೋ
ದೇಹಿಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾಷಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ (ಸಭಾ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲವೋ ಶಕುನಿ, ದೇಹವು ದೇಹವನ್ನು ಧರಿಸಿರುವ ಜೀವವನ್ನು ಬಿಟ್ಟಿರುವುದೇ? ನಮ್ಮ ಅಣ್ಣನೇ ನಮಗೆ ಜೀವು ಅವನ ದೇಹಗಳು ನಾವು. ನಿನ್ನ ದುರ್ಮಂತ್ರದ ಮಾತು ಈ ನಮ್ಮ ನಿಲುವನ್ನು ತಿಳಿದೀತೇ? ನೀನು ಎಲ್ಲವನ್ನೂ ಕಪಟ ದೃಷ್ಟಿಯಿಂದ ನೋಡುವೆ. ಇನ್ನು ನಿನ್ನ ಭ್ರಮೆಯನ್ನು ಬಿಡು. ನಮ್ಮ ಮೇಲೆ ನಿನ್ನ ಪ್ರಯೋಗವೇನೂ ನಡೆಯುವುದಿಲ್ಲ ಎಂದು ಭೀಮಾರ್ಜುನರು ಶಕುನಿಯನ್ನು ಜರೆದರು.

ಅರ್ಥ:
ದೇಹ: ತನು, ಒಡಲು; ಎರವು: ಸಾಲು; ದೇಹಿ: ಶರೀರವನ್ನುಳ್ಳದ್ದು; ಭೂಪತಿ: ರಾಜ; ಪುತ್ರ: ಮಗ; ಒಳಗೆ: ಅಂತರ್ಯ; ಕುಮಂತ್ರ: ಕೆಟ್ಟ ವಿಚಾರ; ಭಾಷಿತ: ಹೇಳಿದ, ಪ್ರತಿಜ್ಞಮಾಡಿದ; ಊಹೆ: ಎಣಿಕೆ, ಅಂದಾಜು; ಕಪಟ: ಮೋಸ; ಅವಗಾಹ: ಮಗ್ನ, ಮುಳುಗು; ಸಾಕು: ತಡೆ; ಮೇಲಣ: ಮೇಲೆ ಹೇಳಿದ; ಗಾಹುಗತಕ: ಮೋಸ, ಭ್ರಾಂತಿ; ಜರೆ: ಬಯ್ಯು; ಸೌಬಲ: ಶಕುನಿ;

ಪದವಿಂಗಡಣೆ:
ದೇಹಿಗ್+ಎರವೇ+ ದೇಹವ್+ಎಲವೋ
ದೇಹಿಭೂಪತಿ +ಧರ್ಮಪುತ್ರನ
ದೇಹವಾವ್+ಇದರೊಳಗೆ +ನಿನ್ನ +ಕುಮಂತ್ರ+ಭಾಷಿತದ
ಊಹೆಗೊಂಬುದೆ +ಕಪಟದಿಂದ್+ಅವ
ಗಾಹಿಸುವೆ +ಸಾಕಿನ್ನು +ಮೇಲಣ+
ಗಾಹುಗತಕಗಳ್+ಎಮ್ಮೊಳ್+ಎಂದರು +ಜರೆದು +ಸೌಬಲನ

ಅಚ್ಚರಿ:
(೧) ದೇಹಿ, ದೇಹ – ೧-೩ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ದೇಹಿಗೆರವೇ ದೇಹ
(೩) ಶಕುನಿಯನ್ನು ಬಯ್ಯುವ ಪರಿ – ನಿನ್ನ ಕುಮಂತ್ರಭಾಷಿತದ ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ