ಪದ್ಯ ೪೦: ಊರ್ವಶಿಯು ಅರ್ಜುನನ್ನು ಏಕೆ ಶಪಿಸಿದಳು?

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ (ಅರಣ್ಯ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಾವು ನಿನಗೆ ಒಲಿದು ಬಂದಿರುವವಳು, ಸೌಂದರ್ಯದಿಂದ ಆಕರ್ಷಿಸಿ ನಮ್ಮನ್ನು ಮರುಗಿಸುವ ಶೂರ ನೀನು, ಇಂದ್ರನ ಪರಿವಾರದಲ್ಲಿ ಬಹಳ ಶ್ರೇಷ್ಠಳಾದವಳು ನಾನು ಸುಲಭದಲ್ಲಿ ಸಿಗುವವಳೇ? ನೀನು ದುರ್ಲಭನಲ್ಲವೇ? ಎಲೈ ನಪುಂಸಕ, ಈ ಗಂಡು ವೇಷ ನಿನಗೇಕೆ? ಇದೋ ನಿನಗೆ ಶಾಪಕೊಡುತ್ತೇನೆ ಹಿಡಿ ಎಂದು ಊರ್ವಶಿಯು ತನ್ನ ಹಸ್ತವನ್ನೆತ್ತಿದಳು.

ಅರ್ಥ:
ಒಲಿದು: ಪ್ರೀತಿಸಿ; ಬಂದು: ಆಗಮಿಸು; ಸೊಬಗು: ಅಂದ; ಮರುಗು: ಕರುಣೆತೋರು; ಮಿಂಡ: ವೀರ, ಶೂರ; ಸುಲಭ: ನಿರಾಯಾಸ; ದುರ್ಲಭ: ಪಡೆಯಲಸಾಧ್ಯ; ದೇವೇಂದ್ರ: ಇಂದ್ರ; ಕಟಕ: ಗುಂಪು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಗಂಡು: ಪುರುಷ; ವೇಷ: ತೋರಿಕೆಯ ರೂಪ, ಸೋಗು; ಸುಳಿವು: ಗುರುತು, ಕುರುಹು; ಸತಿ: ಹೆಣ್ಣು; ಕಳವಳ: ಗೊಂದಲ, ಭ್ರಾಂತಿ; ಕರ: ಹಸ್ತ; ಎತ್ತು: ಮೇಲಕ್ಕೆ ಮಾಡು; ಹಿಡಿ: ಗ್ರಹಿಸು; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಒಲಿದು+ ಬಂದವರ್+ಆವು +ಸೊಬಗಿನೊಳ್
ಒಲಿಸಿ +ಮರುಗಿಪ +ಮಿಂಡ +ನೀನ್+ಅತಿ
ಸುಲಭರಾವ್+ ದುರ್ಲಭನು+ ನೀ +ದೇವೇಂದ್ರ+ ಕಟಕದಲಿ
ಎಲೆ +ನಪುಂಸಕ+ ಗಂಡು +ವೇಷದ
ಸುಳಿವು+ ನಿನಗೇಕ್+ಎನುತ +ಸತಿ +ಕಳ
ವಳಿಸಿ +ಕರವೆತ್ತಿದಳು +ಹಿಡಿ+ ಹಿಡಿ+ ಶಾಪವಿದೆ+ಎನುತ

ಅಚ್ಚರಿ:
(೧) ಸುಲಭ, ದುರ್ಲಭ – ವಿರುದ್ಧ ಪದ/ಪ್ರಾಸ ಪದ
(೨) ಅರ್ಜುನನನ್ನು ಬಯ್ಯುವ ಪರಿ – ಎಲೆ ನಪುಂಸಕ ಗಂಡು ವೇಷದ ಸುಳಿವು ನಿನಗೇಕೆ

ಪದ್ಯ ೩೫: ಅರ್ಜುನನು ಕಿರಾತನನ್ನು ಯಾರೆಂದು ಪ್ರಶ್ನಿಸಿದನು?

ನಿನಗೆ ನಾ ಬೆರಗಾದೆ ನೀನಿಂ
ದೆನಗೆ ಮೆಚ್ಚಿದೆ ದೇವದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ
ಇನನೊ ಮೇಣ್ ದೇವೆಂದ್ರನೋ ಹರ
ತನುಜನೋ ಹರಿಯೋ ಮಹಾದೇ
ವನೊ ಕಿರಾತನೊನೀನೆನುತ ಮತ್ತೆರಗಿದನು ಶಿವನ (ಅರಣ್ಯ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅರ್ಜುನನು ಕಿರಾತ ವೇಷದಲ್ಲಿದ್ದ ಶಿವನನ್ನು ಕಂಡು, ನಾನು ನಿನ್ನನ್ನು ಕಂಡು ಬೆರಗಾದೆ, ನೀನು ನನ್ನನ್ನು ಮೆಚ್ಚಿದೆ, ದೇವತೆಗಳೂ ದಾನವರೂ ನನಗೆ ಸೋಲುತ್ತಾರೆ, ನೀನು ನನ್ನೊಡನೆ ಸರಿದಂಡಿಯಲ್ಲಿ ಹೋರಾಡುತ್ತಿರುವೆ, ನೀನು ಸೂರ್ಯನೋ, ದೇವೇಂದ್ರನೋ, ಷಣ್ಮುಖನೋ, ವಿಷ್ಣುವೋ, ಶಿವನೋ ಅಥವಾ ಸಾಮಾನ್ಯ ಬೇಡನೋ ಎಂದು ಹೇಳುತ್ತಾ ಅರ್ಜುನನು ಶಿವನ ಮೇಲೆ ಬಿದ್ದನು.

ಅರ್ಥ:
ಬೆರಗು: ಆಶ್ಚರ್ಯ; ಮೆಚ್ಚು: ಪ್ರಿಯ, ಸಮ್ಮತಿ; ದೇವ: ಸುರರು; ದಾನವ: ರಾಕ್ಷಸ; ಜನ: ಗುಂಪು, ಜನರು; ಪಾಡು: ಸ್ಥಿತಿ, ಅವಸ್ಥೆ; ಹಲ್ಲಣಿಸು: ಸಜ್ಜಾಗು; ಇನ: ಸೂರ್ಯ; ಮೇಣ್: ಅಥವ; ದೇವೇಂದ್ರ: ಇಂದ್ರ; ಹರತನುಜ: ಷಣ್ಮುಖ; ತನುಜ: ಮಗ; ಹರ: ಶಿವ; ಹರಿ: ವಿಷ್ಣು; ಮಹಾದೇವ: ಶಂಕರ; ಕಿರಾತ: ಬೇಡ; ಎರಗು: ಬೀಳು;

ಪದವಿಂಗಡಣೆ:
ನಿನಗೆ+ ನಾ +ಬೆರಗಾದೆ +ನೀನಿಂದ್
ಎನಗೆ +ಮೆಚ್ಚಿದೆ+ ದೇವ+ದಾನವ
ಜನವ್+ಎನಗೆ+ ಪಾಡಲ್ಲ+ ನೀ +ಹಲ್ಲಣಿಸಿದೈ+ ನಮ್ಮ
ಇನನೊ +ಮೇಣ್ +ದೇವೆಂದ್ರನೋ +ಹರ
ತನುಜನೋ +ಹರಿಯೋ+ ಮಹಾದೇ
ವನೊ+ ಕಿರಾತನೊ+ನೀನ್+ಎನುತ +ಮತ್ತೆರಗಿದನು +ಶಿವನ

ಅಚ್ಚರಿ:
(೧) ಕಿರಾತನನ್ನು ಹೋಲಿಸಿದ ಪರಿ – ಇನ, ದೇವೇಂದ್ರ, ಹರತನುಜ, ಹರಿ, ಮಹಾದೇವ
(೨) ಹರ, ಮಹಾದೇವ, ಶಿವ – ಶಂಕರನನ್ನು ಕರೆಯುವ ಪರಿ

ಪದ್ಯ ೧೭: ಅರ್ಜುನನು ಭೀಮನಿಗೆ ಏನು ಹೇಳಿದ – ೨?

ಕ್ಷಮೆಯೆ ಧನವೆಂದಿದ್ದೆವಿವಳಲಿ
ಮಮತೆಯನು ಮಾಡಿದೆವೆ ನಾವು
ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ
ರಮಣಿಯಾಡಿದ ಧರ್ಮ ಪದವಿದು
ಕುಮತಿಗಳ ಮತವಲ್ಲದಿದ್ದರೆ
ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ (ಸಭಾ ಪರ್ವ, ೧೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮ, ನಾವು ಕ್ಷಮೆಯೇ ಉತ್ತಮ ಧನವೆಂಬ ವಿಚಾರವುಳ್ಳವರು, ದ್ರೌಪದಿ ನಮ್ಮವಳು ಎಂಬ ಮಮಕಾರವನ್ನು ತೋರಿಸಲಿಲ್ಲ. ನಾವು ಮೀರಿನಿಂತರೆ ದೇವೇಂದ್ರನು ನಮಗೆ ತೃಣಕ್ಕೆ ಸಮಾನ, ಇನ್ನು ಈ ಕೌರವರ ಏನು ಮಹಾ! ದ್ರೌಪದಿಯು ಆಡಿದ ಮಾತು ಧರ್ಮ ಸಮ್ಮತವಾದ ನುಡಿ, ಇವರಿಗೆ ಒಪ್ಪಿಗೆಯಾಗದಿದ್ದರೇನು? ದ್ರೌಪದಿಯು ನಮಗೆ ದಾಸಿಯೇ ಎಂದು ಅರ್ಜುನನು ಭೀಮನಿಗೆ ಹೇಳಿದನು.

ಅರ್ಥ:
ಕ್ಷಮೆ: ಸೈರಣೆ, ತಾಳ್ಮೆ; ಧನ: ಐಶ್ವರ್ಯ; ಮಮತೆ: ಪ್ರೀತಿ, ವಾತ್ಸಲ್ಯ; ಭ್ರಮೆ: ಭ್ರಾಂತಿ, ಹುಚ್ಚು, ಉನ್ಮಾದ; ದೇವೇಂದ್ರ: ಇಂದ್ರ; ತೃಣ: ಹುಲ್ಲು; ಪಾಡು: ಸ್ಥಿತಿ, ಅವಸ್ಥೆ; ರಮಣಿ: ಸುಂದರಿ; ಪದ: ನುಡಿ; ಕುಮತಿ: ದುಷ್ಟಬುದ್ಧಿ; ಮತ: ವಿಚಾರ; ದಾಸಿ: ಸೇವಕಿ;

ಪದವಿಂಗಡಣೆ:
ಕ್ಷಮೆಯೆ +ಧನವೆಂದಿದ್ದೆವ್+ಇವಳಲಿ
ಮಮತೆಯನು +ಮಾಡಿದೆವೆ +ನಾವು
ಭ್ರಮಿಸುವರೆ +ದೇವೇಂದ್ರ +ತೃಣವ್+ಇವನಾವ +ಪಾಡೆಮಗೆ
ರಮಣಿ+ಆಡಿದ +ಧರ್ಮ +ಪದವಿದು
ಕುಮತಿಗಳ+ ಮತವಲ್ಲದಿದ್ದರೆ
ತಮಗೆ +ದಾಸಿಯೆ +ದ್ರುಪದನಂದನೆ+ಎಂದನಾ +ಪಾರ್ಥ

ಅಚ್ಚರಿ:
(೧) ಪಾಂಡವರ ಪರಾಕ್ರಮದ ಪರಿಚಯ – ನಾವು ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ

ಪದ್ಯ ೬೫: ಯಾವುವು ಸರ್ವಶ್ರೇಷ್ಠವಾದವು?

ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರ ಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನುಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಯಾವುದು ಶ್ರೇಷ್ಠ ಎಂದು ವಿದುರ ಇಲ್ಲಿ ವಿವರಿಸಿದ್ದಾರೆ. ಕಾಲದೊಳಗೆ ವಸಂತಕಾಲ ಶ್ರೇಷ್ಠವಾದುದು, ಹಾಗೆಯೆ ವಿದ್ಯೆಗಳಲ್ಲಿ ಕವಿತ್ವವು, ಕಾವ್ಯರಚನೆಯು ಶ್ರೇಷ್ಠ, ಆನೆಯ ವಿಹಾರದಲ್ಲಿ ಇಂದ್ರನು, ಸ್ನೇಹಿತರಲ್ಲಿ ಸರಸ್ವತಿಯು (ತಾನಾಡುವ ಮಾತುಗಳು), ದೇವತೆಗಳಲ್ಲಿ ಶಿವನು, ಧನುರ್ಧಾರಿಗಳಲ್ಲಿ ಮನ್ಮಥನು ಹಾಗೂ ಧನದಲ್ಲಿ ಅಭಿಮಾನವು, ಇವೇ ಸರ್ವಶ್ರೇಷ್ಠವಾದವುಗಳು ಎಂದು ವಿದುರ ತಿಳಿಸಿದ.

ಅರ್ಥ:
ಕಾಲ: ಸಮಯ, ಋತು; ವಸಂತ: ಒಂದು ಋತುವಿನ ಹೆಸರು, ಋತುಗಳ ರಾಜ; ವಿದ್ಯ: ಜ್ಞಾನ; ಜಾಲ: ಸಮೂಹ; ಕವಿತ್ವ: ಕಾವ್ಯ ರಚನೆ; ಗಜ: ಆನೆ; ವೈಹಾಳಿ: ವಿಹಾರ; ದೇವೇಂದ್ರ: ಇಂದ್ರ; ಮಿತ್ರ: ಸ್ನೇಹಿತ; ಶ್ರೇಣಿ: ಗುಂಪು, ಸಮೂಹ; ವಾಣಿ: ಸರಸ್ವತಿ; ಭಾಳ: ಹಣೆ, ಲಲಾಟ; ನೇತ್ರ: ನಯನ; ದೈವ: ಸುರ, ದೇವತೆ; ಬಿಲ್ಲು:ಧನುಸ್ಸು, ಚಾಪ; ಮನ್ಮಥ:ಕಾಮ, ಅನಂಗ; ಧನ: ಐಶ್ವರ್ಯ; ಅಭಿಮಾನ:ಹೆಮ್ಮೆ, ಅಹಂಕಾರ, ಆತ್ಮಗೌರವ;

ಪದವಿಂಗಡಣೆ:
ಕಾಲದೊಳಗೆ +ವಸಂತ+ ವಿದ್ಯಾ
ಜಾಲದೊಳಗೆ+ ಕವಿತ್ವ+ ಗಜ+ ವೈ
ಹಾಳಿಯಲಿ +ದೇವೇಂದ್ರ +ಮಿತ್ರ +ಶ್ರೇಣಿಯೊಳು +ವಾಣಿ
ಭಾಳನೇತ್ರನು+ ದೈವದಲಿ+ ಬಿ
ಲ್ಲಾಳಿನಲಿ+ ಮನುಮಥನು+ ಧನದಲಿ
ಹೇಳಲೇನ್+ಅಭಿಮಾನವೇ+ ಧನವೆಂದನಾ +ವಿದುರ

ಅಚ್ಚರಿ:
(೧) ಧನದಲಿ ಅಭಿಮಾನವೇ ಧನ – ಧನ ಪದದ ಬಳಕೆ
(೨) ವೈಹಾಳಿ, ಬಿಲ್ಲಾಳಿ; ಜಾಲ, ಕಾಲ – ಪ್ರಾಸ ಪದ