ಪದ್ಯ ೨೭: ದ್ರೌಪದಿಯು ದೇವತೆಗಳಲ್ಲಿ ಹೇಗೆ ಮೊರೆಯಿಟ್ಟಳು?

ಸೊಸೆಯಲಾ ದೇವೆಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ರ್ವ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ (ಸಭಾ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪರಮಾತ್ಮರಲ್ಲಿ ಮೊರೆಯಿಟ್ಟ ದ್ರೌಪದಿ ನಂತರ ತನ್ನ ಮಾವನಾದ ಇಂದ್ರನಲ್ಲಿ ಬೇಡಿದಳು. ಹೇ ಇಂದ್ರದೇವ ನಾನು ನಿನಗೆ ಸೊಸೆಯಲ್ಲವೇ, ಈ ಕಷ್ಟದಿಂದ ನನ್ನನ್ನು ಪಾರು ಮಾಡುವವರು ಯಾರು, ಅದು ನಿನ್ನ ಕೆಲಸವಲ್ಲವೇ? ಹೇ ವಾಯುದೇವ, ಮೂರುಲೋಕಗಳಲ್ಲಿರುವ ಜೀವರಲ್ಲಿ ಜೀವವಾಗಿರುವ ಉಸಿರು ನಿನ್ನ ಅಧೀನವಲ್ಲವೇ? ಈ ದುರಾಚಾರಿಗಳನ್ನು ನೀನು ಸೈರಿಸಬಹುದೇ? ಹೇ ವಾಯುದೇವ ಕರುಣಿಸು, ಹೇ ಅಶ್ವಿನೀ ದೇವತೆಗಳೇ ನೀವಾದರೂ ನನ್ನನ್ನು ಕಷ್ಟದಿಂದ ಪಾರುಮಾಡಬಹುದಲ್ಲವೇ ಎಂದು ದ್ರೌಪದಿಯು ದೇವತೆಗಳಲ್ಲಿ ಮೊರೆಯಿಟ್ಟಳು.

ಅರ್ಥ:
ಸೊಸೆ: ಮಗನ ಹೆಂಡತಿ; ದೇವೇಂದ್ರ; ಇಂದ್ರ; ಘಸಣಿ: ತೊಂದರೆ; ಹಿರಿಯ: ದೊಡ್ಡವ; ಮಾವ: ಗಂಡನ ತಂದೆ; ವಶ: ಅಧೀನ, ಅಂಕೆ; ತ್ರೈಜಗ: ಮೂರುಲೋಕ; ಜೀವ: ಉಸಿರು; ವಿಭ್ರಮಣ: ಅಲೆಯುವಿಕೆ; ಉಸುರು: ವಾಯು; ಅಧೀನ: ವಶ, ಕೈಕೆಳಗಿರುವ; ದುರ್ವ್ಯಸನ: ಕೆಟ್ಟ ಚಟವುಳ್ಳ; ಕೊಂಡಾಡು: ಹೊಗಳು, ಆದರಿಸು; ಕರುಣಿಸು: ದಯಪಾಲಿಸು; ಸಮೀರ: ವಾಯು; ಹಲುಬು: ಗೋಳಿಡು, ಬೇಡಿಕೋ; ಅಶ್ವಿನಿ: ದೇವತೆಗಳ ಒಂದು ಗುಂಪು;

ಪದವಿಂಗಡಣೆ:
ಸೊಸೆಯಲಾ +ದೇವೆಂದ್ರ+ಎನ್ನಯ
ಘಸಣಿ +ಯಾರದು +ಹಿರಿಯ +ಮಾವನ
ವಶವಲಾ +ತ್ರೈಜಗದ+ ಜೀವರ +ಜೀವ +ವಿಭ್ರಮಣ
ಉಸುರು +ನಿನ್+ಅಧೀನವ್+ಈ+ ದು
ರ್ವ್ಯಸನಿಗಳ +ಕೊಂಡಾಡುವರೆ +ಕರು
ಣಿಸು +ಸಮೀರಣ+ಎಂದು +ಹಲುಬಿದಳ್+ಅಶ್ವಿನೇಯರಿಗೆ

ಅಚ್ಚರಿ:
(೧) ವಾಯುದೇವನನ್ನು ಹೊಗಳುವ ಪರಿ – ಜಗದ ಜೀವರ ಜೀವ ವಿಭ್ರಮಣ ಉಸುರು ನಿನ್ನಾಧೀನವೀ