ಪದ್ಯ ೯೮: ಚಿತ್ರಸೇನನು ಯಾರ ಮನೆಗೆ ಬಂದನು?

ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ (ಅರಣ್ಯ ಪರ್ವ, ೮ ಸಂಧಿ, ೯೮ ಪದ್ಯ)

ತಾತ್ಪರ್ಯ:
ರಂಭೆ ಮೊದಲಾಗಿ ಇಷ್ಟು ಜನ ಅಪ್ಸರೆಯರಿದ್ದರೂ, ಅರ್ಜುನನಿಗೆ ಊರ್ವಶಿಯಲ್ಲಿ ಮನಸ್ಸು ನೆಟ್ಟಿತು, ಊರ್ವಶಿಯನ್ನು ರೆಪ್ಪೆ ಬಡಿಯದೆ ಒಂದೇ ದೃಷ್ಟಿಯಿಂದ ನೋಡುತ್ತಿದ್ದನು. ಇಂದ್ರನು ಚಿತ್ರಸೇನನಿಗೆ, ನೀನು ಹೋಗಿ ಊರ್ವಶಿಯನ್ನು ಕಳುಹಿಸು, ಎಂದು ಹೇಳಲು, ಚಿತ್ರಸೇನನು ಊರ್ವಶಿಯ ಮನೆಗೆ ಬಂದನು.

ಅರ್ಥ:
ಇನಿಬರು: ಇಷ್ಟುಜನ; ಆದಿ: ಮೊದಲಾದ; ಸೀಮಂತಿನಿ: ಹೆಂಗಸು, ಸ್ತ್ರೀ; ಮನ: ಮನಸ್ಸು; ಈಕ್ಷಿಸು: ನೋಡು; ಅನಿಮೇಷ: ಕಣ್ಣಿನ ರೆಪ್ಪೆ ಬಡಿಯದೆ; ದೃಷ್ಟಿ: ನೋಟ; ವನಿತೆ: ಹೆಂಗಸು; ಕಳುಹೇಳು: ಬರೆಮಾಡು; ಹಸಾದ: ಪ್ರಸಾದ; ದೇವಾಂಗನೆ: ಅಪ್ಸರೆ; ಭವನ: ಆಲಯ; ಬಂದು: ಆಗಮಿಸು; ಹರಿ: ಇಂದ್ರ; ನೇಮ: ಆಜ್ಞೆ;

ಪದವಿಂಗಡಣೆ:
ಇನಿಬರಿರೆ +ರಂಭಾದಿ +ಸೀಮಂ
ತಿನಿಯರೊಳಗ್+ಊರ್ವಶಿಯೊಳ್+ಆದುದು
ಮನ +ಧನಂಜಯನ್+ಈಕ್ಷಿಸಿದನ್+ಅನಿಮೇಷ +ದೃಷ್ಟಿಯಲಿ
ವನಿತೆಯನು +ಕಳುಹೇಳು +ನೀನೆಂದ್
ಎನೆ +ಹಸಾದವೆನುತ್ತ +ದೇವಾಂ
ಗನೆಯ +ಭವನಕೆ+ ಬಂದನ್+ಈತನು+ ಹರಿಯ +ನೇಮದಲಿ

ಅಚ್ಚರಿ:
(೧) ಸೀಮಂತಿನಿ, ವನಿತೆ, ಅಂಗನೆ – ಸಮನಾರ್ಥಕ ಪದ

ಪದ್ಯ ೧೭: ಕೃಷ್ಣನು ಯಾವ ಕಥೆಯನ್ನು ಹೇಳಲು ಪ್ರಾರಂಭಿಸಿದನು?

ನರಕಕಾತನ ನೂಕಿದರು ವಿ
ಸ್ತರಣವೆಂತೈ ಪಾರ್ಥ ಸತ್ಯದ
ಹುರುಳನರಿಯದೆ ಕಾಳುಗೆಡೆದರೆ ಕಾರ್ಯವೆಂತಹುದು
ಮರುಳೆ ಕೇಳದ್ಭುತವ ಹಿಂಸಾ
ಪರನಹರ್ನಿಶವಾ ದುರಾತ್ಮನ
ವರಿಸಿದರು ದೇವಾಂಗನೆಯರೀ ಕಥೆಯ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನ ಕಥೆಯ ವೃತ್ತಾಂತವನ್ನು ಹೇಳುತ್ತಾ, ಕೌಶಿಕನನ್ನು ನರಕಕ್ಕೆ ನೂಕಿದರು. ಅರ್ಜುನ ಸಾರವನ್ನರಿಯದೆ ಸತ್ಯವೆಂದು ದುಷ್ಕೃತವನ್ನು ಮಾಡಿದರೆ ಅದಕ್ಕೆ ನಿರ್ವಾಹವೇನು? ಅಯ್ಯೋ ಹುಚ್ಚನೇ, ಇನ್ನೊಂದು ಅದ್ಭುತವಾದ ಕಥೆಯನ್ನು ಕೇಳು, ಹಗಲೂ ರಾತ್ರಿ ಹಿಂಸಾಪರನಾಗಿದ್ದ ಒಬ್ಬ ದುರಾತ್ಮನನ್ನು ಅಪ್ಸರೆಯರು ವರಸಿ ಸ್ವರ್ಗಕ್ಕೆ ಹೋದನು.

ಅರ್ಥ:
ನರಕ: ಅಧೋಲೋಕ; ನೂಕು: ತಳ್ಳು; ವಿಸ್ತರಣ: ಬೆಳೆಸುವುದು; ಸತ್ಯ: ದಿಟ; ಹುರುಳ: ತಿರುಳು, ಸಾರ; ಅರಿ: ತಿಳಿ; ಕಾಳು: ಕೆಟ್ಟದ್ದು, ಕೀಳಾದುದು; ಕಾರ್ಯ: ಕೆಲಸ; ಮರುಳು: ಮೂಢ; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಹಿಂಸೆ: ನೋವು; ಅಹರ್ನಿಶ: ಬೆಳಗ್ಗೆ ಬಂದು ಸಂಜೆ; ದುರಾತ್ಮ: ದುಷ್ಟ; ವರಿಸು: ಆರಿಸು, ಆಯ್ಕೆ ಮಾಡು; ದೇವಾಂಗನೆ: ಅಪ್ಸರೆ; ಕೇಳು: ಆಲಿಸು;

ಪದವಿಂಗಡಣೆ:
ನರಕಕ್+ಆತನ +ನೂಕಿದರು +ವಿ
ಸ್ತರಣವೆಂತೈ +ಪಾರ್ಥ +ಸತ್ಯದ
ಹುರುಳನ್+ಅರಿಯದೆ +ಕಾಳುಗೆಡೆದರೆ+ ಕಾರ್ಯವೆಂತಹುದು
ಮರುಳೆ+ ಕೇಳ್+ಅದ್ಭುತವ +ಹಿಂಸಾ
ಪರನ್+ಅಹರ್ನಿಶವಾ +ದುರಾತ್ಮನ
ವರಿಸಿದರು +ದೇವಾಂಗನೆಯರ್+ಈ+ಕಥೆಯ +ಕೇಳೆಂದ

ಅಚ್ಚರಿ:
(೧) ಅಪ್ಸರೆಯರನ್ನು ದೇವಾಂಗನೆಯರು ಎಂದು ಕರೆದಿರುವುದು